ಎಲ್ಟು ಮುತ್ತಾ ಚಿತ್ರ ಕೊಡಗು ಭಾಗದ ಹಿನ್ನೆಲೆಯಲ್ಲಿ ನಡೆಯುವ ಕತೆ. ಹೀಗಾಗಿ ಚಿತ್ರದ ಹಾಡುಗಳ ಆರಂಭದಲ್ಲಿ ಕೊಡವ ಭಾಷೆಯನ್ನೇ ಬಳಸಲಾಗಿದೆ. ನೇಟಿವಿಟಿ ಕಾರಣಕ್ಕೆ ಅಲ್ಲಿನ ಭಾಷೆಯನ್ನು ಬಳಸಲಾಗಿದೆ.
ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಎಲ್ಟು ಮುತ್ತಾ’ ಚಿತ್ರದ ಆಡಿಯೋ ಮತ್ತು ಟೀಸರ್ ಬಿಡುಗಡೆ ಆಗಿದೆ. ಸತ್ಯ ಎಸ್. ಶ್ರೀನಿವಾಸನ್ ನಿರ್ಮಿಸಿರುವ, ರಾ.ಸೂರ್ಯ ನಿರ್ದೇಶನದ, ಶೌರ್ಯ ಪ್ರತಾಪ್, ರಾ.ಸೂರ್ಯ, ಪ್ರಿಯಾಂಕ ಮಳಲಿ, ಕಾಕ್ರೋಚ್ ಸುಧಿ ಅಭಿನಯಿಸಿರುವ, ಪ್ರಸನ್ನ ಕೇಶವ ಸಂಗೀತ ಸಂಯೋಜನೆಯ ಚಿತ್ರವಿದು.
ಕೊಡಗಿನ ಕತೆ: ಇದು ಕೊಡಗು ಭಾಗದ ಹಿನ್ನೆಲೆಯಲ್ಲಿ ನಡೆಯುವ ಕತೆ. ಹೀಗಾಗಿ ಚಿತ್ರದ ಹಾಡುಗಳ ಆರಂಭದಲ್ಲಿ ಕೊಡವ ಭಾಷೆಯನ್ನೇ ಬಳಸಲಾಗಿದೆ. ನೇಟಿವಿಟಿ ಕಾರಣಕ್ಕೆ ಅಲ್ಲಿನ ಭಾಷೆಯನ್ನು ಬಳಸಲಾಗಿದೆ. ಸಾವು, ಅಂತ್ಯಸಂಸ್ಕಾರದ ಹೊತ್ತಿನಲ್ಲಿ ಡೊಳ್ಳು ಬಾರಿಸುವ ವ್ಯಕ್ತಿಯೊಬ್ಬನ ಸುತ್ತ ಕತೆ ಸಾಗುತ್ತದೆ. ‘ನಾನು ಈ ಸಮುದಾಯದ ಜನರನ್ನು ನೋಡಿದ್ದೇನೆ. ಕೆಲವರು ಬದುಕಿದ್ದಾರೆ. ಇನ್ನೂ ಕೆಲವರು ಈಗಿಲ್ಲ. ಅವರ ಜೀವನವನ್ನು ಹೇಳುವ ಪ್ರಯತ್ನವನ್ನು ಈ ಚಿತ್ರದ ಮೂಲಕ ಮಾಡಿದ್ದೇನೆ’ ಎಂದರು ರಾ ಸೂರ್ಯ. ಚಿತ್ರದ ನಾಯಕ ತುಂಬಾ ಮುಗ್ಧ. ತನ್ನತನಕ್ಕೆ ಧಕ್ಕೆಯಾದ್ರೆ ಏನಾಗುತ್ತದೆ ಎಂಬುದನ್ನು ನಾಯಕನ ಪಾತ್ರದಲ್ಲಿ ತೋರಿಸಲಾಗಿದೆ. ಹೀಗಾಗಿ ಆತನ ಪಾತ್ರದಲ್ಲಿ ನವಿಲಿನ ಮುಗ್ಧತೆ ಮತ್ತು ಕಾಳಿಂಗ ಸರ್ಪದ ಕ್ರೌರ್ಯ ಎರಡೂ ಇದೆ. ಈ ಎರಡನ್ನೂ ಮೆಟಫರ್ ಆಗಿ ಬಳಸಲಾಗಿದೆ.
ಕೊಡಗಿನ ಇಂಥದ್ದೊಂದು ಜನಾಂಗ ನನಗೆ ಗೊತ್ತಿರಲಿಲ್ಲ. ನಿರ್ದೇಶಕರು ಹೇಳಿದ ಮೇಲೆ ಗೊತ್ತಾಗಿದ್ದು. ಈ ಪಾತ್ರದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಸುಮಾರು 3 ದಿನಗಳ ಕಾಲ ಬೇಕಾಯಿತು. 4ನೇ ದಿನ ನಾನೇ ಪಾತ್ರವಾಗಿ ಹೋದೆ. ಸಿನಿಮಾಗಾಗಿ ಒಂದೂವರೆ ತಿಂಗಳ ಕಾಲ ಸತತ ಚಿತ್ರೀಕರಣ ಮಾಡಿದ್ದೇವೆ. ಬೆಂಗಳೂರಿಗೆ ವಾಪಸ್ ಆದ ನಂತರ ಆ ಗುಂಗಿನಿಂದ ಹೊರಬರುವುದಕ್ಕೆ ಸಾಧ್ಯವಾಗಲಿಲ್ಲ. ಚಿತ್ರದಿಂದ ತುಂಬಾನೇ ಕಲಿತಿದ್ದೇನೆ. ನನಗೆ ಇಂಥದ್ದೊಂದು ಅವಕಾಶ ಕೊಟ್ಟ ತಂಡದವರಿಗೆ ನಾನು ಆಭಾರಿ ಎಂದರು ಯುವ ನಟಿ ಪ್ರಿಯಾಂಕ ಮಳಲಿ. ಚಿತ್ರದ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ. ಇದೊಂದು ಹೊಸ ತಂಡ ಎಂದನಿಸುವುದಿಲ್ಲ. ಇವರ ಸಿನಿಮಾ ಪ್ರೀತಿ ನೋಡಿದರೆ, ಇವರು ಹೊಸಬರು ಎಂದನಿಸುವುದಿಲ್ಲ. ಕೆಲಸ ಮಾಡುತ್ತಾ ಮಾಡುತ್ತಾ ಸಾಕಷ್ಟು ಕಲಿತಿದ್ದಾರೆ ಎಂದು ತಮ್ಮ ನೆಗೆಟಿವ್ ಶೇಡ್ನ ಪಾತ್ರದ ಬಗ್ಗೆ ತಿಳಿಸಿದರು ನಟ ಕಾಕ್ರೋಜ್ ಸುಧೀ.
ರವಿ ಬಸ್ರೂರು ಸ್ಫೂರ್ತಿ: ಚಿತ್ರದ ಹಾಡುಗಳಲ್ಲಿ ‘ಕೆಜಿಎಫ್’ ಚಿತ್ರದ ಪ್ರಭಾವ ಎದ್ದು ಕಾಣುತ್ತದೆ. ‘ನನ್ನ ಗುರುಗಳು ರವಿ ಬಸ್ರೂರು. ನಾನು ಅವರಿಂದಲೂ ಸಂಗೀತ ಕಲಿತಿದ್ದೇನೆ. ಎಲ್ಟು ಮುತ್ತಾ ಹಿನ್ನೆಲೆ ಹಾಗೂ ಹಾಡುಗಳ ಸಂಗೀತಕ್ಕೆ ನನಗೆ ಅವರೇ ಸ್ಫೂರ್ತಿ’ ಎಂದು ಸಂಗೀತ ನಿರ್ದೇಶಕ ಪ್ರಸನ್ನ ಕೇಶವ ಹೇಳಿದ್ದಾರೆ. ಉಪ್ಪಿನ ಬೆಟಗೇರಿ ಶ್ರೀ ಕುಮಾರ ವಿರೂಪಾಕ್ಷ ಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಪೊಲೀಸ್ ಅಧಿಕಾರಿ ಅನಿಲ್ ಕಮಾರ್ ಭೂಮರಡಿ, ಹಿರಿಯ ವಕೀಲ ಪಾಂಡುರಂಗ ಎಚ್ ನೀರಳಕೇರಿ ಇದ್ದರು. ಜುಲೈ 16ಕ್ಕೆ ಟ್ರೇಲರ್, ಜುಲೈ ಕೊನೆ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಚಿತ್ರ ಬಿಡುಗಡೆ ಆಗಲಿದೆ. ಪವೀಂದ್ರ ಮುತ್ತಪ್ಪ ಚಿತ್ರದ ಸಹ ನಿರ್ಮಾಪಕರು.
