ಡಾ. ರಾಜ್ಕುಮಾರ್ ಅವರ ಸಿನಿಮಾಗಳು ಎಂದೆಂದಿಗೂ ಅಮರ. ಅವರು ಅಮೆರಿಕದ ಕೆಂಟಕಿ ರಾಜ್ಯದ ಅತ್ಯುನ್ನತ ಗೌರವ 'ಕೆಂಟಕಿ ಕರ್ನಲ್' ಪ್ರಶಸ್ತಿ ಪಡೆದ ಭಾರತದ ಏಕೈಕ ನಟರಾಗಿದ್ದಾರೆ. ಕಲೆ ಮತ್ತು ಸಮಾಜ ಸೇವೆಗೆ ನೀಡಿದ ಅಪಾರ ಕೊಡುಗೆಗಾಗಿ ಈ ಅಂತಾರಾಷ್ಟ್ರೀಯ ಮನ್ನಣೆ ಲಭಿಸಿದೆ.
ಬೆಂಗಳೂರು: ಕಾಲ ಎಷ್ಟೇ ಬದಲಾದರೂ, ಡಾ.ರಾಜ್ಕುಮಾರ್ಅವರ ಸಿನಿಮಾಗಳು ಮಾತ್ರ ಎವರ್ಗ್ರೀನ್. ಇಂದಿನ ಎಷ್ಟೋ ಸಿನಿಮಾಗಳು ರಿಲೀಸ್ ಆಗಿ ಒಂದಷ್ಟು ತಿಂಗಳೋ, ವರ್ಷನೋ ಹಿಟ್ ಲಿಸ್ಟ್ನಲ್ಲಿ ಇದ್ದರೂ, ಕೊನೆಗೆ ಜನ ಅದನ್ನು ಮರೆತು ಬಿಡುತ್ತಾರೆ. ಆದರೆ ಅಣ್ಣಾವ್ರ ಸಿನಿಮಾ ಮಾತ್ರ ಎಲ್ಲ ಕಾಲಕ್ಕೂ ತಕ್ಕಂಥದ್ದೇ ಆಗಿದೆ. ಅದು ಬ್ಲ್ಯಾಕ್ ಆ್ಯಂಡ್ ವೈಟ್ ಯುಗದಿಂದ ಹಿಡಿದು ಕಲರ್ ಯುಗದವರೆಗೂ ಆ ಸಿನಿಮಾದ ಹಾಡುಗಳು ಕೂಡ ಎವರ್ಗ್ರೀನ್. ಅರ್ಥವೇ ಇಲ್ಲದ ಇಂದಿನ ಸಿನಿಮಾ ಹಾಡುಗಳ ನಡುವೆ, ಡಾ.ರಾಜ್ ಅವರ ಸಿನಿಮಾಕ್ಕೆ ಇರುವ ಪ್ರಾಮುಖ್ಯತೆ ಅಂಥದ್ದು. ಅಷ್ಟಕ್ಕೂ ಡಾ.ರಾಜ್ಕುಮಾರ್ ಅವರು ಸಿನಿಮಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಅಂತಿಂಥದ್ದಲ್ಲ. ಇದೇ ಕಾರಣಕ್ಕೆ ಇವರಿಗೆ ಸಂದ ಗೌರವವೂ ಅಷ್ಟೇ.
ಬಹುತೇಕ ಮಂದಿಗೆ ತಿಳಿಯದ ಒಂದು ಅವಾರ್ಡ್ಗೆ ಡಾ.ರಾಜ್ಕುಮಾರ್ ಭಾಜನರಾಗಿದ್ದರು. ಈ ಅವಾರ್ಡ್ ಪಡೆದುಕೊಂಡಿರುವ ಭಾರತದ ಏಕೈಕ ನಟ ಇವರಾಗಿದ್ದಾರೆ. ಇದುವರೆಗೂ ಯಾರೂ ಈ ಪ್ರಶಸ್ತಿ ಪಡೆದುಕೊಂಡಿಲ್ಲ. ಅದೇ ಅಮೆರಿಕದ ಕೆಂಟಕಿ ರಾಜ್ಯದ ಅತ್ಯುನ್ನತ ಗೌರವವಾದ 'ಕೆಂಟಕಿ ಕರ್ನಲ್' (Kentucky Colonel) ಪ್ರಶಸ್ತಿ. 1985ರಲ್ಲಿ ಅಮೆರಿಕದ ಕೆಂಟಕಿ ರಾಜ್ಯದ ಅತ್ಯುನ್ನತ ಗೌರವವನ್ನು ಇವರಿಗೆ ನೀಡಲಾಯಿತು.
ಡಾ.ರಾಜ್ ಅವರು, ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಅಂದಿನ ಕೆಂಟಕಿ ಗವರ್ನರ್ ಮಾರ್ಥಾ ಲೇನ್ ಕಾಲಿನ್ಸ್ ಅವರು ಈ ಗೌರವವನ್ನು ನೀಡಿದರು.ಸಮಾಜ ಸೇವೆ, ಸಾರ್ವಜನಿಕ ಕೊಡುಗೆ ಮತ್ತು ವಿಶಿಷ್ಟ ಸಾಧನೆ ಗುರುತಿಸಿ ಕೆಂಟಕಿ ರಾಜ್ಯ ಸರ್ಕಾರ ನೀಡುವ ಗೌರವ ಪದವಿಯಾಗಿದೆ. ಕನ್ನಡ ಚಿತ್ರರಂಗ ಹಾಗೂ ಕಲೆಗೆ ಡಾ. ರಾಜ್ಕುಮಾರ್ ನೀಡಿದ ಅಪಾರ ಕೊಡುಗೆಗೆ ಸಂದ ಅಂತಾರಾಷ್ಟ್ರೀಯ ಮನ್ನಣೆ ಇದಾಗಿದೆ.
ಹಲವು ಮೊದಲಿಗರು
ಈ ಒಂದು ಪ್ರಶಸ್ತಿಯನ್ನ ಒಂದು ಸಮುದಾಯ, ರಾಜ್ಯ ಅಥವಾ ರಾಷ್ಟ್ರಕ್ಕೆ ಗಮನಾರ್ಹ ಸಾಧನೆ ಮತ್ತು ಅತ್ಯುತ್ತಮ ಸೇವೆಯನ್ನ ಸಲ್ಲಿಸಿ ಸಾಧನೆಗೈದಿರುವ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಅಷ್ಟಕ್ಕೂ ಡಾ.ರಾಜ್ ಅವರ ಹೆಸರಿನಲ್ಲಿ ಏಕೈಕ ನಟ ಎನ್ನುವ ಬಿರುದು ಹಲವು ರಂಗಗಳಲ್ಲಿ ಇದೆ. ವಿಶ್ವದಲ್ಲೇ ಅತಿಹೆಚ್ಚು ಪ್ರತಿಮೆಗಳನ್ನು ಹೊಂದಿರುವ ನಟ ಡಾ.ರಾಜ್. ಗೌರವ ಡಾಕ್ಟರೇಟ್ ಪಡೆದ ಮೊದಲ ನಟ ಇವರು. ಇತರೆ ಭಾಷೆಯಲ್ಲಿ ನಟಿಸದ ಮೊದಲ ನಟ ಎನ್ನುವ ಖ್ಯಾತಿಯೂ ಇವರಿಗೆ ಇದೆ. ಅತಿ ಹೆಚ್ಚು ದ್ವಿಪಾತ್ರ ಹಾಗೂ ತ್ರಿಪಾತ್ರಗಳಲ್ಲಿ ನಟಿಸಿದ ಪ್ರಥಮ ಕನ್ನಡಿಗ ಕೂಡ ಡಾ. ರಾಜ್. ಶ್ರೇಷ್ಠ ಸಿನಿ ಪುರಸ್ಕಾರ 'ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ' ಪಡೆದ ಮೊದಲ ಕನ್ನಡಿಗ ಇವರು.
















