ಯಾರಿಗೂ ಅರ್ಥವಾಗದ 'ಯುಐ' ಸಿನಿಮಾ ಕಥೆ ನಿಮ್ಮೊಳಗೂ ಉಂಟೇ; ಉಪೇಂದ್ರನ ಪ್ರಶ್ನೆ ವೈರಲ್!
ಉಪೇಂದ್ರ ಅವರ 'ಯುಐ' ಚಿತ್ರದ ಪ್ರೀರಿಲೀಸ್ ಈವೆಂಟ್‌ನಲ್ಲಿ ಚಿತ್ರದ ಕಥಾ ಹಿನ್ನೆಲೆ ಮತ್ತು ಅದರ ವಿಶಿಷ್ಟತೆಯ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರದಲ್ಲಿ ಹಳೆಯ, ವರ್ತಮಾನ ಮತ್ತು ಭವಿಷ್ಯದ ಕಥೆಗಳನ್ನು ಹೇಳಲಾಗಿದೆ ಎಂದು ಡಾಲಿ ಧನಂಜಯ್ ಅಭಿಪ್ರಾಯಪಟ್ಟಿದ್ದಾರೆ. ಬಿಡುಗಡೆಗೂ ಮುನ್ನವೇ 75000 ಟಿಕೆಟ್‌ಗಳು ಮಾರಾಟವಾಗಿವೆ.
ನನ್ನ ಚಿತ್ರ ಜೀವನದಲ್ಲಿ ಮೊದಲು ನಿರ್ದೇಶನ ಮಾಡಿದ 'ತರ್ಲೆ ನನ್ಮಗ', 'ಶ್' ಮತ್ತು 'ಓಂ' ಹೊರಗಿನಿಂದ ಹುಟ್ಟಿದ ಕತೆಗಳು. ಆಮೇಲೆ ಹೊರಗಿನಿಂದ ಕತೆ ಸಿಗುತ್ತಿರಲಿಲ್ಲ. ಅದಕ್ಕೆ ನನ್ನೊಳಗೆ ಹುಡುಕಲು ಶುರು ಮಾಡಿದೆ. ಆಗ ಒಳಗಿನಿಂದ ಸಿಕ್ಕಿದ ಕತೆಗಳೇ 'ಎ', 'ಉಪೇಂದ್ರ', 'ಉಪ್ಪಿ 2' ಮತ್ತು 'ಯುಐ'. ಇದನ್ನು ಮಾತನಾಡಿದ್ದು ಬೇರಾರೂ ಅಲ್ಲ, ಯುಐ ಚಿತ್ರದ ಪ್ರೀರಿಲೀಸ್ ಈವೆಂಟಲ್ಲಿ ಉಪೇಂದ್ರ ಅವರೇ ಮಾತನಾಡಿದ್ದಾರೆ.
ನನ್ನೊಳಗೆ ಹುಟ್ಟಿದ ಕತೆಗಳಲ್ಲಿ ನಾನು ಹುಡುಕುತ್ತಿರುವ ವಿಚಾರಗಳನ್ನು ಮಾತ್ರ ನಾನು ಹುಡುಕುತ್ತಿರುವುದಿಲ್ಲ. ಜೊತೆಗೆ ನೀವೂ ಹುಡುಕುತ್ತಾ ಇರುವುದನ್ನು ಹುಡುಕುತ್ತಿರುತ್ತೇನೆ. ಹಾಗಾಗಿ ಆ ಕತೆ ಪ್ರೇಕ್ಷಕರಿಗೂ ಕನೆಕ್ಟ್ ಆಗುತ್ತದೆ. ನನ್ನದೇ ಕತೆ ಅಲ್ವಾ ಅನ್ನಿಸುತ್ತದೆ. ನನ್ನ ಸಿನಿಮಾಗೆ ನಾನೇ ಏನೋ ಒಂದು ಹೆಸರಿಡಬಹುದು. ಆಗ ಅದೇ ಹೆಸರಾಗುತ್ತದೆ. ಅಲ್ಲಿಗೆ ಮುಗಿಯುತ್ತದೆ. ಆದರೆ ಹೆಸರಿನ ಜಾಗದಲ್ಲಿ ಸ್ಪೇಸ್ ಕೊಟ್ಟರೆ ನೀವು ನಿಮಗೆ ಬೇಕಾದ ಹೆಸರು ಇಟ್ಟುಕೊಳ್ಳಬಹುದು. ಯುಐ ಅಂತ ಹೆಸರಿಟ್ಟಾಗ ಒಬ್ಬೊಬ್ಬರು ಒಂದೊಂದು ವ್ಯಾಖ್ಯಾನ ಕೊಟ್ಟರು. ಪ್ರೇಕ್ಷಕರಲ್ಲಿ ಅಧ್ಭುತ ಪ್ರತಿಬೆ ಇದೆ. ಅವರು ಯಾವತ್ತೂ ಮೇಲೆ ಇರುತ್ತಾರೆ. ಹಾಗಾಗಿ ಅವರ ಪ್ರತಿಕ್ರಿಯೆಗಾಗಿ ನಾನು ಕಾಯುತ್ತಿದ್ದೇನೆ' ಎಂದು ಉಪೇಂದ್ರ ಹೇಳಿದರು.
ಇದೇ ವೇಳೆ ಅವರು, 'ನಂಗೆ ಪ್ರತೀ ಸಲ ಎಲ್ಲರೂ ಹೊಗಳುತ್ತಾರೆ. ಯಾರು ಯಾವಾಗ ಹೊಗಳಿದಾಗಲೂ ನನಗೆ ಮುಜುಗರ ಆಗುತ್ತದೆ. ಆಗ ಅವರನ್ನು ಅವರೇ ಹೊಗಳುತ್ತಿದ್ದಾರೆ ಅಂದುಕೊಂಡು ಸುಮ್ಮನಾಗುತ್ತೇನೆ' ಎಂದು ಹೇಳಿದರು.
ಉಪೇಂದ್ರಗೆ ಶುಭಾಶಯ ಕೋರಲು ಬಂದಿದ್ದ ಡಾಲಿ ಧನಂಜಯ, 'ಯುಐ ಪೋಸ್ಟರ್ ಬಂದಾಗ ಅದರಲ್ಲಿ ಆ್ಯಪಲ್, ಹಳೇ ಕಾಲದ ದೃಶ್ಯಗಳನ್ನು ನೋಡಿ ಹಳೇ ಕಾಲದ ಕತೆ ಹೇಳುತ್ತಿದ್ದಾರೆ ಅಂದುಕೊಂಡೆ. ಟ್ರೆಂಡಾಗತ್ತೆ ಅಂತ ಹಾಡು ಬಂದಾಗ ವರ್ತಮಾನದ ಕತೆ ಎಂದುಕೊಂಡೆ. ವಾರ್ನರ್ ನೋಡಿದರೆ ಭವಿಷ್ಯದ ಕತೆಯನ್ನು ಹೇಳಿದ್ದಾರೆ ಅಂತ ಗೊತ್ತಾಗತ್ತೆ. ಹಳೇ ಕಾಲದಿಂದ ಹಿಡಿದು ಭವಿಷ್ಯತ್ ಕಾಲದವರೆಗೆ ಎಲ್ಲಾ ಕತೆಯನ್ನು ಹೇಳಿದ್ದಾರೆ. ಉಪ್ಪಿ ಸರ್ ಸಿನಿಮಾ ಬಂದಾಗ ನಾವು ನಿರೀಕ್ಷೆ ಇಟ್ಟುಕೊಳ್ಳುವುದಿಲ್ಲ. ಬದಲಿಗೆ ನಾವೆಲ್ಲಾ ಒಂದೊಂದು ಕಲ್ಪನೆ ಮಾಡಿಕೊಂಡು ಹೋಗಿರುತ್ತೇವೆ. ಅವರು ಕಾಮನ್‌ಮ್ಯಾನ್‌ನನ್ನು ಎದ್ದೇಳು ಎದ್ದೇಳು ಅಂತ ಸಣ್ಣದಾಗಿ ಚಿವುಟುವ ಕೆಲಸ ಮಾಡುತ್ತಾರೆ. ಈ ಚಿತ್ರಕ್ಕಾಗಿ ಎಕ್ಸೈಟ್ ಆಗಿ ಕಾಯುತ್ತಿದ್ದೇನೆ' ಎಂದು ಹೇಳಿದರು.
ಇದನ್ನೂ ಓದಿ: UI ರಿವ್ಯೂ And ರೇಟಿಂಗ್ಸ್: ಉಪೇಂದ್ರನ ಯುಐ ಸಿನಿಮಾ 10 ವರ್ಷದ ನಂತರ ಅರ್ಥ ಆಗುತ್ತದೆ!
ದುನಿಯಾ ವಿಜಿ ಅವರು, 'ನಾವೆಲ್ಲಾ ಉಪೇಂದ್ರರನ್ನು ಫಾಲೋ ಮಾಡಿಕೊಂಡು ಬಂದವರು. ಹೊಸಬರಿಗೆ ಕನ್ನಡ ಇಂಡಸ್ಟ್ರಿಗೆ ಅವರು ಗಾಡ್‌ಫಾದರ್ ಇದ್ದಂತೆ. ನಿರ್ದೇಶಕನಾಗಿ, ಒಬ್ಬ ಅಭಿಮಾನಿಯಾಗಿ ನಾನು ಯುಐಗೆ ಕಾಯುತ್ತಿದ್ದೇನೆ' ಎಂದು ಹೇಳಿದರು. ಈ ಪ್ರೀ ಈವೆಂಟ್ ಕಾರ್ಯಕ್ರಮದಲ್ಲಿ ನಿರ್ಮಾಪಕರಾದ ನವೀನ್ ಮನೋಹರನ್, ಕೆ.ಪಿ. ಶ್ರೀಕಾಂತ್, ಲಹರಿ ವೇಲು, ರೀಷ್ಮಾ ನಾಣಯ್ಯ ಇದ್ದರು.
ಬಿಡುಗಡೆಗೂ ಮುನ್ನ 75000 ಟಿಕೆಟ್ ಮಾರಾಟ: 'ಯುಐ ಸಿನಿಮಾ ಬಿಡುಗಡೆಗೂ ಮುನ್ನವೇ 75000ಕ್ಕೂ ಟಿಕೆಟ್ ಮಾರಾಟವಾಗಿದೆ. ಇದನ್ನು ಸಾಧ್ಯವಾಗಿಸಿದ ಎಲ್ಲಾ ಕನ್ನಡಿಗರಿಗೆ ಧನ್ಯವಾದಗಳು. ಒಂದೊಳ್ಳೆಯ ಸಿನಿಮಾ ಮಾಡಿದ್ದೇವೆ. ಎಲ್ಲರೂ ಬಂದು ಸಿನಿಮಾ ನೋಡಿ' ಎಂದು ಹೇಳಿದರು.