ಇತ್ತೀಚೆಗೆ ಚಿತ್ರದ ಟ್ರೇಲರ್‌ ಬಿಡುಗಡೆ ಆಯಿತು. ಹಾರರ್‌ ಹಾಗೂ ಕಾಮಿಡಿ ನೆರಳಿನ ಈ ಕತೆಗೆ ಕುಂದಾಪುರದಲ್ಲಿ ನಡೆದ ನೈಜ ಘಟನೆಯೇ ಸ್ಫೂರ್ತಿ. ಚರಣ್‌ರಾಜ್‌ ನಿರ್ದೇಶ ಮಾಡಿರುವ ಈ ಚಿತ್ರದಲ್ಲಿ ಅಂಜನಾಗೌಡ ಹಾಗೂ ಇಶಾನಾ ನಾಯಕಿಯರು.

ಸಿನಿಮಾ ಬಿಡುಗಡೆ ಹಂತಕ್ಕೆ ಬಂದಿರುವ ಹೊತ್ತಿನಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು. ಹಿರಿಯ ನಿರ್ದೇಶಕ ಭಗವಾನ್‌ ಹಾಗೂ ಡಾ ವಿನಾಗೇಂದ್ರ ಪ್ರಸಾದ್‌ ಅಂದಿನ ಕಾರ್ಯಕ್ರಮದ ಮುಖ್ಯ ಅತಿಥಿಗಳು. ನಮ್ಮ ಫ್ಲಿಕ್ಸ್‌ನಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ. ‘ಆಸ್ಪತ್ರೆಯಲ್ಲಿ ನರ್ಸ್‌ ಆಗಿರುವ ಪಾತ್ರದ ಸುತ್ತ ಈ ಕತೆ ಸಾಗುತ್ತದೆ. ಮೆಡಿಕಲ್‌ ಮಾಫಿಯಾದ ಮತ್ತೊಂದು ಮುಖವನ್ನು ತೋರಿಸುವ ಸಿನಿಮಾ ಇದು’ ಎಂಬುದು ನಿರ್ದೇಶಕ ಚರಣ್‌ರಾಜ್‌ ವಿವರಣೆ.

'ಎವರು' ಕನ್ನಡ ರೀಮೇಕ್‌ನಲ್ಲಿ ಹರಿಪ್ರಿಯಾ!

ಚಿತ್ರದ ನಾಯಕ ನವೀನ್‌ ಅವರಿಗೆ ಇದು ಮೊದಲ ಸಿನಿಮಾ. ‘ನಮ್ಮ ತಂದೆ ಒಬ್ಬ ನಿರ್ದೇಶಕರು. ಆದರೆ ಭಗವಾನ್‌ ಅವರ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತಿ ಮಾಡಿಕೊಂಡ ಮೇಲೆಯೇ ಕ್ಯಾಮೆರಾ ಮುಂದೆ ನಿಂತೆ. ಡಾ ವಿ ನಾಗೇಂದ್ರಪ್ರಸಾದ್‌ ಸಂಗೀತ ಸಂಯೋಜನೆ ಮಾಡುವ ಜತೆಗೆ ಹಾಡುಗಳನ್ನೂ ಬರೆದಿದ್ದಾರೆ. ಇದು ನನಗೆ ಖುಷಿ ವಿಚಾರ’ ಎನ್ನುತ್ತಾರೆ ನವೀನ್‌.

ಮಜಾಟಾಕೀಸ್‌ ಪವನ್‌ ಈ ಚಿತ್ರದ ಮುಖ್ಯ ಪಾತ್ರಧಾರಿ. ಅವರು ಅಸ್ಪತ್ರೆಯ ಅಟೆಂಡರ್‌ ಪಾತ್ರ ಮಾಡುತ್ತಿದ್ದಾರೆ. ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಿದ ಹಿರಿಯ ನಿರ್ದೇಶಕ ಭಗವಾನ್‌ ಮಾತನಾಡಿ, ‘ನಮ್ಮ ತಿಪಟೂರು ರಘು ಪುತ್ರ ನಾಯಕನಾಗಿ ಚಿತ್ರರಂಗಕ್ಕೆ ಬರುತ್ತಿದ್ದಾನೆ. ಅವರಿಗೆ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕೊಡಲಿ’ ಎಂದರು.

ನಮ್ಮ ಫ್ಲಿಕ್ಸ್‌ ಓಟಿಟಿಯಲ್ಲಿ ಬಿಡುಗಡೆ

ನವೆಂಬರ್‌ 1ರಂದು ಕನ್ನಡ ರಾಜ್ಯೋತ್ಸವ ಅಂಗವಾಗಿ ನಮ್ಮ ಫ್ಲಿಕ್ಸ್‌ನಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ. ಆನ್‌ಲೈನ್‌ಮೂಲಕ 99 ರುಪಾಯಿಗಳನ್ನು ಪಾವತಿ ಮಾಡಿದರೆ ಓಟಿಪಿ ಮೂಲಕ ಬರುವ ನಂಬರ್‌ ಲಾಗಿನ್‌ ಆದರೆ ಸಿನಿಮಾ ನೋಡಬಹುದು.

‘ನಮ್ಮ ಫ್ಲಿಕ್ಸ್‌ನಲ್ಲಿ ಪ್ರಸಾರ ಆಗುತ್ತಿರುವ ಮೊದಲ ಕನ್ನಡ ಸಿನಿಮಾ. ಕನ್ನಡ ಚಿತ್ರಗಳು ಈ ಆ್ಯಪ್‌ ಅನ್ನು ಬಳಸಿಕೊಳ್ಳಬೇಕು’ ನಮ್ಮ ಫ್ಲಿಕ್ಸ್‌ನ ವಿಜಯ್‌ ಪ್ರಕಾಶ್‌ ಮನವಿ ಮಾಡಿಕೊಂಡರು.