ನಟೇಶ್ ಹೆಗ್ಡೆ ನಿರ್ದೇಶನದ ಪೆದ್ರೋ ಚಿತ್ರದ ಟ್ರೈಲರ್ ಬಿಡುಗಡೆ

‘ವಿದೇಶಿ ನೆಲದಲ್ಲಿ ಭೇಷ್ ಅನಿಸಿಕೊಂಡ ಕನ್ನಡ ಚಿತ್ರ ಪೆದ್ರೋವನ್ನು ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕಡೆಗಣಿಸಲಾಗಿದೆ’ ಎಂದು ಚಿತ್ರದ ನಿರ್ಮಾಪಕ ರಿಷಬ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

ನಟೇಶ್ ಹೆಗಡೆ ನಿರ್ದೇಶನದ ‘ಪೆದ್ರೋ’ ಚಿತ್ರದ ಟ್ರೈಲರ್ ಬಿಡುಗಡೆ ಬಳಿಕ ರಿಷಬ್ ಪತ್ರಕರ್ತರೊಂದಿಗೆ ಮಾತನಾಡಿದರು. ‘ಬೆಂಗಳೂರು ಸಿನಿಮೋತ್ಸವಕ್ಕೆ ಚಿತ್ರ ಕಳಿಸಿದ್ದೆವು. ಆದರೆ ಒಳ ರಾಜಕೀಯದಿಂದಾಗಿ ನಮ್ಮ ಚಿತ್ರವನ್ನು ಚಿತ್ರೋತ್ಸವಕ್ಕೆ ಆಯ್ಕೆ ಮಾಡಿಲ್ಲ. ಬೂಸಾನ್ ಅಂತಾರಾಷ್ಟ್ರೀಯ ಸಿನಿಮೋತ್ಸವ ಸೇರಿದಂತೆ ವಿದೇಶಿ ನೆಲದಲ್ಲಿ ಹಲವೆಡೆ ಪ್ರದರ್ಶನ ಕಂಡು ಪ್ರಶಸ್ತಿ ಪಡೆದ ಕನ್ನಡ ಚಿತ್ರಕ್ಕೆ ಕನ್ನಡ ನೆಲದಲ್ಲೇ ಅವಗಣನೆ ಮಾಡಲಾಗಿದೆ’ ಎಂದು ಅವರು ಆರೋಪಿಸಿದ್ದಾರೆ.

ಟ್ರೈಲರ್ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ, ‘ನಟೇಶ್ ಅವರ ‘ಕುರ್ಲಿ’ ಕಿರುಚಿತ್ರ ನೋಡಿ ಬೆರಗಾಗಿದ್ದೆ. ಈಗ ಹೊಸ ಸಿನಿಮಾ ಭಾಷೆಯನ್ನು ‘ಪೆದ್ರೋ’ ಚಿತ್ರದಲ್ಲಿ ಕಂಡೆ. ಇದರಲ್ಲಿ ಮೆಡಿಟೇಟಿವ್ ರಿದಂ ಇದೆ. ಇಲ್ಲಿರುವ ಸನ್ನಿವೇಶ, ಘಟನೆಗಳನ್ನು ಮೀರಿದ್ದೇನೋ ಪ್ರೇಕ್ಷಕನಿಗೆ ದಕ್ಕುತ್ತದೆ. ನಾನು ಮೆಚ್ಚಿದ ಅತ್ಯುತ್ತಮ 3 ಚಿತ್ರಗಳಲ್ಲಿ ಪೆದ್ರೋ ಸಹ ಒಂದು. ಕನ್ನಡ ಚಿತ್ರರಂಗ ಅಧೋಗತಿಳಿಯುತ್ತಿರುವ ಮೇಲೆತ್ತುವ ಪೆದ್ರೋನಂಥ ಚಿತ್ರಗಳು ಹೆಚ್ಚೆಚ್ಚು ಬರಬೇಕು’ ಎಂದರು.

ಚಿತ್ರದ ನಿರ್ದೇಶಕ ನಟೇಶ್ ಹೆಗಡೆ, ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ, ನಟ ಗೋಪಾಲ ಹೆಗಡೆ, ರಾಜಣ್ಣ, ಸೌಂಡ್ ಡಿಸೈನ್ ಮಾಡಿದ ಶ್ರೇಯಾಂಕ್ ಉಪಸ್ಥಿತರಿದ್ದರು. ರಿಷಬ್ ಶೆಟ್ಟಿ ಫಿಲಂಸ್ ಯೂಟ್ಯೂಬ್ ಚಾನಲ್‌ನಲ್ಲಿ ಟ್ರೈಲರ್ ಬಿಡುಗಡೆಯಾಗಿದೆ.

'ಪೆಡ್ರೋ' ಟೀಸರ್‌ ಬಿಡುಗಡೆ!

ನಿರ್ದೇಶಕರ ಮಾತುಗಳಿದು:

ಪೆಡ್ರೋ ಅಂದ್ರೆ ಯಾರು?

ನನ್ನ ಪ್ರಕಾರ ಆತ ನಮ್ಮ ಥರದವನೇ. ಅವನೊಬ್ಬ ಮಧ್ಯ ವಯಸ್ಸಿನ ಎಲೆಕ್ಟ್ರೀಷಿಯನ್‌. ಕ್ರಿಶ್ಚಿಯನ್‌ ಸಮುದಾಯಕ್ಕೆ ಸೇರಿದವನು. ಆ್ಯಕ್ಸೆಪ್ಟೆನ್ಸ್‌ಗೋಸ್ಕರ ಒದ್ದಾಡುವ ಮನುಷ್ಯ.

ಈ ಮನುಷ್ಯ ನಿಮಗೆಲ್ಲಿ ಸಿಕ್ಕಿದ?

ಚಿತ್ರದಲ್ಲಿ ಆತ್ಮಕತೆಗೆ ಹತ್ತಿರವಾಗುವ ಸಾಕಷ್ಟುಅಂಶಗಳಿವೆ. ಇಲ್ಲಿ ನನ್ನ ತಂದೆಯೇ ಎಲೆಕ್ಟ್ರಿಷಿಯನ್‌ ಆಗಿ ನಟಿಸುತ್ತಿದ್ದಾರೆ. ಅವರು ನಿಜ ಜೀವನದಲ್ಲೂ ಎಲೆಕ್ಟ್ರಿಷಿಯನ್‌ ಆಗಿದ್ದವರೇ. ಇದರಲ್ಲಿ ಬರುವ ಸಾಕಷ್ಟುಅಂಶಗಳು ನಮ್ಮ ಜೀವನದಲ್ಲಿ ಸಂಭವಿಸಿದವು. ಇದರ ಜೊತೆಗೆ ನಾವೀಗ ನೋಡುತ್ತಿರುವ ಹೊರಗಿನ ಜಗತ್ತೂ ಸೇರಿ ಪೆಡ್ರೋ ಪಾತ್ರ ಆಗಿರಬಹುದು.

ಪೆಡ್ರೋದಲ್ಲಿ ಬೇರೆ ಪಾತ್ರಗಳೇನಿವೆ?

ಪೆಡ್ರೋ ತಮ್ಮ ಬಸ್ತಾ್ಯವೊ, ಕೆಲ್ಸ ಕೊಟ್ಟಿರೋ ಹೆಗಡೆ, ಪೆಡ್ರೋ ತಮ್ಮನ ಹೆಂಡತಿ ಜ್ಯೂಲಿ, ಅವಳ ಮಗು ವಿನು ಇವಿಷ್ಟುಮುಖ್ಯಪಾತ್ರಗಳು. ರಾಜ್‌ ಬಿ ಶೆಟ್ಟಿ, ಮೇದಿನಿ ಕೆಳಮನೆ ಬಿಟ್ಟರೆ ಉಳಿದೆಲ್ಲ ನನ್ನೂರಿನ ಮಂದಿಯೇ ನಟಿಸಿದ್ದಾರೆ.

‘ಪೆಡ್ರೋ’ ಸಿನಿಮಾ ಬಗ್ಗೆ ನಮ್ಮ ಜನಕ್ಕೆ ಗೊತ್ತಾಗಿದ್ದು ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಮೇಲೆ. ಯಾಕೆ ಹೀಗಾಗುತ್ತೆ?

ಬೇರೆ ದಾರಿಯೇ ಇಲ್ಲ. ಸುಮ್ನೆ ನಾನು ಸಿನಿಮಾ ಮಾಡಿದ್ದೀನಿ ಅಂದ್ರೆ ಇಲ್ಲಿ ಯಾವ ಬೆಲೆಯೂ ಇಲ್ಲ. ಯಾರೋ ಹೇಳಬೇಕು ಒಳ್ಳೆ ಸಿನಿಮಾ ಅಂತ, ಆವಾಗ ನೋಡ್ತೀವಿ ಅಂತಾರೆ. ಚಿತ್ರದಲ್ಲಿ ಸ್ಟಾರ್‌ ಇಲ್ಲದಿದ್ದಾಗಲಂತೂ, ಹೊರಗಡೆ ಸಿನಿಮಾಕ್ಕೆ ಹೆಸರು ಬಂದಾಗ ಮಾತ್ರ ತಿರುಗಿ ನೋಡ್ತಾರೆ. ನೋಡೋಣ, ನಮ್ಗೂ ಒಳ್ಳೆ ಕಾಲ ಬರಬಹುದು.