ಸರಳವಾಗಿ ಹೇಳುವುದಾದರೆ ಪ್ಯಾರಗಾನ್‌ ಚಪ್ಪಲಿ ಹಾಕಿಕೊಂಡು ಓಡಾಡುವ ಶ್ರಮಜೀವಿ, ಅ‍ವಿದ್ಯಾವಂತ ಮುಗ್ಧ ಹುಡುಗನೊಬ್ಬ ಮಚ್ಚು ಎತ್ತಿಕೊಳ್ಳುವ ಕತೆಯಿದು. ಅವನು ಯಾಕೆ ಮಚ್ಚು ಎತ್ತಿಕೊಳ್ಳುತ್ತಾನೆ ಎಂಬಲ್ಲಿಂದ ಕತೆ ತಿರುವು ಪಡೆಯುತ್ತದೆ.

-ರಾಜೇಶ್ ಶೆಟ್ಟಿ

Add Asianetnews Kannada as a Preferred SourcegooglePreferred

ಪ್ರೇಮ್ ಗತವೈಭವಕ್ಕೆ ಮರಳಿದ್ದಾರೆ. ಅವರ ಟ್ರೇಡ್‌ಮಾರ್ಕ್‌ ಮಚ್ಚಿನ ಸಬ್ಜೆಕ್ಟ್‌ಗೆ ಹೊರಳಿದ್ದಾರೆ. ಹಳೆ ಬೆಂಗಳೂರಿನ ರೌಡಿಸಂ ವಸ್ತುವುಳ್ಳ ಕತೆ ಹೇಳುವುದರಲ್ಲಿ ಅವರು ಸಿದ್ಧಹಸ್ತರು. ಫ್ಯಾಮಿಲಿ ಸೆಂಟಿಮೆಂಟ್‌ ತಂದು ಕಣ್ಣು ಒದ್ದೆ ಮಾಡುವುದೂ ಅವರಿಗೆ ಗೊತ್ತು. ಇದೀಗ ಅವರದೇ ಹಳೆ ಮಚ್ಚಿನ ಕತೆಯನ್ನು ತಾಂತ್ರಿಕವಾಗಿ ಅದ್ದೂರಿಯಾಗಿ ಹೇಳಿದ್ದಾರೆ.

ಒಂದೊಂದು ಫ್ರೇಮ್‌ನಲ್ಲೂ ನೂರಾರು ಮಂದಿ ಕಾಣಿಸುತ್ತಾರೆ. ಗಮನ ಕೊಡುವುದಕ್ಕೂ ಆಗದಂತೆ ಹತ್ತಾರು ಸೆಟ್‌ಗಳನ್ನು ರೂಪಿಸಿದ್ದಾರೆ. ಕಲಾ ನಿರ್ದೇಶಕ ಮೋಹನ್ ಬಿ.ಕೆರೆ ಮತ್ತು ಛಾಯಾಗ್ರಾಹಕ ವಿಲಿಯಂ ಡೇವಿಡ್‌ ಎಪ್ಪತ್ತರ ದಶಕದ ಬೆಂಗಳೂರನ್ನು ಚಿತ್ರಕತೆಯ ತಪ್ಪುಗಳು ಮರೆಯಾಗುವಂತೆ ಸೊಗಸಾಗಿ ಚಿತ್ರಿಸಿದ್ದಾರೆ. ಜೊತೆಗೆ ಇದರ ತಾರಾಗಣ ಪ್ಲಸ್ಸು. ಸಾಕಷ್ಟು ಖರ್ಚು ಮಾಡಿರುವುದು ಸ್ಕ್ರೀನಲ್ಲಿ ಎದ್ದೆದ್ದು ಕಾಣುತ್ತದೆ.

ಪ್ರೇಮ್‌ ಇಲ್ಲಿ ಹಲವು ಹೊಸತುಗಳನ್ನು ಸಾಧಿಸಿದ್ದಾರೆ. ಬಹುಶಃ ವೃತ್ತಿ ಜೀವನದಲ್ಲಿ ಇದುವರೆಗೂ ರಕ್ತವನ್ನೇ ಕೈಗಂಟಿಸಿಕೊಳ್ಳದಿದ್ದ ರಮೇಶ್‌ ಅರವಿಂದ್‌ ಮುಖಕ್ಕೆ ರಕ್ತ ಎರಚಿದ್ದಾರೆ. ಪ್ರೇಮ ಪಾಠ ಹೇಳುತ್ತಿದ್ದ ರವಿಚಂದ್ರನ್‌ ಅವರ ಪಂಚೆ ಬೀಳಿಸಿದ್ದಾರೆ. ಸಂಜಯ್‌ ದತ್‌ರನ್ನು ಹುಲಿ ವೇಷ ಹಾಕಿ ಕುಣಿಸಿದ್ದಾರೆ.

ಸರಳವಾಗಿ ಹೇಳುವುದಾದರೆ ಪ್ಯಾರಗಾನ್‌ ಚಪ್ಪಲಿ ಹಾಕಿಕೊಂಡು ಓಡಾಡುವ ಶ್ರಮಜೀವಿ, ಅ‍ವಿದ್ಯಾವಂತ ಮುಗ್ಧ ಹುಡುಗನೊಬ್ಬ ಮಚ್ಚು ಎತ್ತಿಕೊಳ್ಳುವ ಕತೆಯಿದು. ಅವನು ಯಾಕೆ ಮಚ್ಚು ಎತ್ತಿಕೊಳ್ಳುತ್ತಾನೆ ಎಂಬಲ್ಲಿಂದ ಕತೆ ತಿರುವು ಪಡೆಯುತ್ತದೆ. ಮೊದಲಾರ್ಧ ಆ ಹುಡುಗನ ಪ್ರೇಮ, ದುಃಖ ಉಭಯ ಕುಶಲೋಪರಿ. ಇಲ್ಲೂ ಪ್ರೇಮ್ ಹೊಸತನ ಮೆರೆದಿದ್ದಾರೆ. ಎಲ್ಲರೂ ಪ್ರೇಮ ಪಿಸುಮಾತಿನಲ್ಲಿದೆ ಎಂಬಂತೆ ತೋರಿಸಿದರೆ, ಇವರು ಮಾತ್ರ ನಾಯಕಿ ಪಾತ್ರವನ್ನು, ಪ್ರೇಮವನ್ನು ಗಂಟೆ ಸದ್ದಿನಂತೆ ತೋರಿಸಿದ್ದಾರೆ.

ಚಿತ್ರ: ಕೆಡಿ

ನಿರ್ದೇಶನ: ಪ್ರೇಮ್‌
ತಾರಾಗಣ: ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ರವಿಚಂದ್ರನ್, ರಮೇಶ್‌ ಅರವಿಂದ್‌, ಸಂಜಯ್‌ ದತ್‌, ಶಿಲ್ಪಾ ಶೆಟ್ಟಿ
ರೇಟಿಂಗ್: 3.5

ದ್ವಿತೀಯಾರ್ಧದ ತುಂಬಾ ಬ್ರದರ್ ಸೆಂಟಿಮೆಂಟು, ಕೌಟುಂಬ ಪ್ರೇಮ, ಅನಿವಾರ್ಯ ಯುದ್ಧ, ರಣಭೀಕರ ಹೋರಾಟ, ಬಗೆ ಬಗೆ ಮಚ್ಚುಗಳು, ರಕ್ತದೋಕುಳಿ ಎಲ್ಲವೂ ಸೇರಿ ಛಕಛಕನೆ ಕತೆ ಮುಂದೆ ಸಾಗುತ್ತದೆ. ಕೊನೆಯ ಅರ್ಧ ಗಂಟೆಯಲ್ಲಿ ಅನೂಹ್ಯ ಟ್ವಿಸ್ಟ್‌ಗಳು, ಹೊಸ ಪಾತ್ರ ಪ್ರವೇಶ, ಪಾತ್ರ ಪರಿವರ್ತನೆ, ವಿಎಫ್‌ಎಕ್ಸ್‌, ಎಡಿಟಿಂಗ್‌ ಮೂಲಕ ಪ್ರೇಮ್‌ ರುದ್ರನರ್ತನ ಮಾಡಿದ್ದಾರೆ. ಅಷ್ಟರಮಟ್ಟಿಗೆ ಹಳೆಯ ಕಾಲದ ಕತೆಯ ಮೂಲಕ ಹೊಸ ತಾಂತ್ರಿಕ ಮಿಂಚು, ಬೆವರು, ರಕ್ತ ಎಲ್ಲಾ ಹರಿಸುತ್ತಾರೆ.

ರಗಡ್‌ ಸ್ಟಾರ್‌ ಧ್ರುವ ಸರ್ಜಾ ಮುಗ್ಧ ಹುಡುಗನ ಪಾತ್ರವನ್ನು ಜೀವಿಸಿದ್ದಾರೆ. ಸೊಗಸುಗಾರ ರಮೇಶ್‌ ಅರವಿಂದ್‌ ಇಷ್ಟವಾಗುವಂತೆ ನಟಿಸಿದ್ದಾರೆ. ರವಿಚಂದ್ರನ್‌ ಸ್ಕ್ರೀನ್ ಪ್ರೆಸೆನ್ಸ್‌ ಖುಷಿ ಕೊಡುತ್ತದೆ. ಸಂಜಯ್‌ ದತ್‌ ಕೊಂಚ ಬಳಲಿದಂತೆ ಕಾಣಿಸಿಕೊಂಡರೆ, ಶಿಲ್ಪಾ ಶೆಟ್ಟಿ ಪಾತ್ರ ಪವರ್‌ಫುಲ್‌. ಕೆಲವೇ ನಿಮಿಷಗಳ ಕಾಲ ಕಾಣಿಸಿಕೊಳ್ಳುವ ಕಾಲಭೈರವ ಸುದೀಪ್‌ ಅಭಿಮಾನಿಗಳ ಸಂಭ್ರಮಕ್ಕೆ ಕಾರಣರಾಗುತ್ತಾರೆ. ಯಾರಾದರೂ ಸರ್ಸೆ ಸೆರಗ ಹಾಡಿನ ಅಭಿಮಾನಿಗಳಿದ್ದರೆ, ಅವರಿಗೆ ವಿಷಾದ. ಆ ಹಾಡು ಸಿನಿಮಾದಲ್ಲಿಲ್ಲ. ಇಷ್ಟಕ್ಕೂ ಕೆಡಿ ಕತೆ ಏನು ಅಂತ ನೀವು ಕೇಳುವುದಾದರೆ, ಬೇರೆ ದಾರಿಯೇ ಇಲ್ಲ- ಎರಡನೇ ಭಾಗ ಬರುವುದಕ್ಕೆ ಕಾಯಬೇಕು.