ಡಾಲಿ ಧನಂಜಯ್ ಅವರ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಆಗಸ್ಟ್ 23ರಂದು ಜನ್ಮದಿನ ಆಚರಿಸಿಕೊಳ್ಳುತ್ತಿರುವ ನಟ, ಈ ಬಾರಿ ತಮ್ಮ ಅಭಿಮಾನಿಗಳ ಜೊತೆ ವಿಶೇಷವಾಗಿ ಬರ್ತ್‌ಡೇ ಸೆಲೆಬ್ರೇಟ್ ಮಾಡಲು ನಿರ್ಧರಿಸಿದ್ದಾರೆ.

ನಟ ರಾಕ್ಷಸ ಡಾಲಿ ಧನಂಜಯ್ ಅವರ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಆಗಸ್ಟ್ 23ರಂದು ಜನ್ಮದಿನ ಆಚರಿಸಿಕೊಳ್ಳುತ್ತಿರುವ ನಟ, ಈ ಬಾರಿ ತಮ್ಮ ಅಭಿಮಾನಿಗಳ ಜೊತೆ ವಿಶೇಷವಾಗಿ ಬರ್ತ್‌ಡೇ ಸೆಲೆಬ್ರೇಟ್ ಮಾಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಸ್ವತಃ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿರುವ ಡಾಲಿ, ಅಭಿಮಾನಿಗಳಿಗಾಗಿ ಬರೋಬ್ಬರಿ ನಾಲ್ಕು ಗಂಟೆ ಸಮಯ ಮೀಸಲಿಟ್ಟಿದ್ದಾರೆ.

ಆಗಸ್ಟ್ 23ರಂದು ಬನ್ನಿ ಸಿಗೋಣ..

ತಮ್ಮ ಹುಟ್ಟುಹಬ್ಬದಂದು ಬೆಂಗಳೂರಿನ ಜಯನಗರದಲ್ಲಿರುವ ಎಂಇಎಸ್ ಗ್ರೌಂಡ್‌ಗೆ ಬರುವುದಾಗಿ ಡಾಲಿ ಧನಂಜಯ್ ತಿಳಿಸಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಅಲ್ಲಿದ್ದು, ಅಭಿಮಾನಿಗಳನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ. ‘ನನ್ನ ಜನ್ಮದಿನದಂದು ನಿಮ್ಮನ್ನು ಮೀಟ್ ಆಗುತ್ತೇನೆ. ಬನ್ನಿ ಸಿಗೋಣ’ ಎಂಬ ಸಂದೇಶದ ಮೂಲಕ ಅಭಿಮಾನಿಗಳಿಗೆ ಆಹ್ವಾನ ನೀಡಿದ್ದಾರೆ. ಹೀಗಾಗಿ ಡಾಲಿ ಅಭಿಮಾನಿಗಳಿಗೆ ಈ ವರ್ಷದ ಬರ್ತ್‌ಡೇ ಮತ್ತಷ್ಟು ವಿಶೇಷವಾಗಲಿದೆ.

ಅಭಿಮಾನಿಗಳಿಗೆ ಡಾಲಿ ಮಾಡಿದ ಮನವಿ ಏನು?

ಅಭಿಮಾನಿಗಳನ್ನು ಭೇಟಿಯಾಗಲು ಸಿದ್ಧವಾಗಿರುವ ಡಾಲಿ, ಇದೇ ಸಂದರ್ಭದಲ್ಲಿ ಒಂದು ವಿಶೇಷ ಮನವಿಯನ್ನೂ ಮಾಡಿದ್ದಾರೆ. ತಮ್ಮನ್ನು ಭೇಟಿಯಾಗಲು ಬರುವವರು ಯಾವುದೇ ಉಡುಗೊರೆಗಳನ್ನು ತರಬಾರದು ಎಂದು ಕೇಳಿಕೊಂಡಿದ್ದಾರೆ. ಹಾರ, ಶಾಲು, ಕೇಕ್ ಸೇರಿದಂತೆ ಯಾವುದನ್ನೂ ತರಬೇಡಿ. ಅಭಿಮಾನಿಗಳು ಬಂದು ತಮ್ಮನ್ನು ಭೇಟಿ ಮಾಡಿದರೆ ಸಾಕು ಎಂಬ ರೀತಿಯಲ್ಲಿ ಡಾಲಿ ಮನವಿ ಮಾಡಿದ್ದಾರೆ. ಹೀಗಾಗಿ ಈ ಬಾರಿ ಅಭಿಮಾನಿಗಳ ಜೊತೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ನಟ ಮುಂದಾಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡ ಡಾಲಿ

ತಮ್ಮ ಹುಟ್ಟುಹಬ್ಬದ ಕಾರ್ಯಕ್ರಮದ ಕುರಿತ ಮಾಹಿತಿಯನ್ನು ಡಾಲಿ ಧನಂಜಯ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಿರುವ ಈ ವಿಡಿಯೋದಲ್ಲಿ ಆಗಸ್ಟ್ 23ರಂದು ಜಯನಗರದ ಎಂಇಎಸ್ ಗ್ರೌಂಡ್‌ಗೆ ಬರುವಂತೆ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಈ ವಿಡಿಯೋ ಇದೀಗ ಅಭಿಮಾನಿಗಳ ಗಮನ ಸೆಳೆದಿದ್ದು, ಡಾಲಿ ಅವರನ್ನು ನೇರವಾಗಿ ಭೇಟಿಯಾಗಲು ಫ್ಯಾನ್ಸ್ ಉತ್ಸುಕರಾಗಿದ್ದಾರೆ.

ಸಿನಿಮಾಗಳಲ್ಲಿ ಡಾಲಿ ಬ್ಯುಸಿ

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಡಾಲಿ ಧನಂಜಯ್ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ‘ಮದರ್ ಪ್ರಾಮಿಸ್’ ಈಗಾಗಲೇ ಬಿಡುಗಡೆಯಾಗಿದ್ದು, ‘ಅಣ್ಣಾ ಫ್ರಮ್ ಮೆಕ್ಸಿಕೋ’ ಹಾಗೂ ‘ಜೀಬ್ರಾ’ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ಅವರ ಮುಂದಿವೆ. ಇದರ ಜೊತೆಗೆ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಕೂಡ ನಿರೀಕ್ಷೆ ಮೂಡಿಸಿದೆ. ‘ಉತ್ತರಕಾಂಡ’ ಸಿನಿಮಾದ ಕೆಲಸಗಳು ನಡೆಯುತ್ತಿದ್ದು, ಚಿತ್ರದ ಚಿತ್ರೀಕರಣ ಇನ್ನೂ ಪೂರ್ಣಗೊಳ್ಳಬೇಕಿದೆ.

ನಿರ್ಮಾಪಕರಾಗಿಯೂ ಗುರುತಿಸಿಕೊಂಡಿರುವ ಡಾಲಿ ಧನಂಜಯ್, ತಮ್ಮ ನಿರ್ಮಾಣ ಸಂಸ್ಥೆಯ ‘ಹೆಗ್ಗಣ ಮುದ್ದು’ ಸಿನಿಮಾದ ಕೆಲಸದಲ್ಲೂ ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾ ಪೂರ್ಣಗೊಂಡ ಬಳಿಕ ನಿರ್ಮಾಣ ಕ್ಷೇತ್ರದಲ್ಲಿ ಸದ್ಯಕ್ಕೆ ವಿರಾಮ ತೆಗೆದುಕೊಳ್ಳುವ ಬಗ್ಗೆ ಅವರು ಈ ಹಿಂದೆ ಹೇಳಿಕೊಂಡಿದ್ದರು. ಒಟ್ಟಿನಲ್ಲಿ, ಸಿನಿಮಾ ಕೆಲಸಗಳ ನಡುವೆಯೇ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಕಳೆಯಲು ಡಾಲಿ ಧನಂಜಯ್ ಸಜ್ಜಾಗಿದ್ದಾರೆ. ಆಗಸ್ಟ್ 23ರಂದು ಜಯನಗರದ ಎಂಇಎಸ್ ಗ್ರೌಂಡ್‌ನಲ್ಲಿ ಡಾಲಿ ಮತ್ತು ಅಭಿಮಾನಿಗಳ ಭೇಟಿಗೆ ವೇದಿಕೆ ಸಿದ್ಧವಾಗಿದೆ.

View post on Instagram