ಚೇಸ್ ಟ್ರೈಲರ್‌ಗೆ ಫಿದಾ ಆದ ಸಿನಿಪ್ರಿಯರು!
ಬಿಡುಗಡೆಯ ಹೊಸ್ತಿಲಿನಲ್ಲಿ ಹೆಚ್ಚಾಯ್ತು ಚೇಸ್ ಟ್ರೈಲರ್‌ನ ಕಿಚ್ಚು
ಸದ್ಯ ಸಿನಿಪ್ರಿಯರ ಗಮನ ಸೆಳೆದು ಟೀಸರ್, ಹಾಡುಗಳ ಮೂಲಕ ಕ್ಷಣ ಕ್ಷಣಕ್ಕೂ ಚೇಸ್ ಮಾಡುವಂತೆ ಮಾಡಿದ್ದ ವಿಲೋಕ್ ಶೆಟ್ಟಿ ನಿರ್ದೇಶನದ ಚೇಸ್ ಚಿತ್ರ ಇದೇ ಹದಿನೈದನೇ ತಾರೀಕಿನಂದು ಬಿಡುಗಡೆಯಾಗಲು ಸಜ್ಜಾಗಿದೆ. ಇನ್ನೇನು ಬಿಡುಗಡೆಯ ಹೊಸ್ತಲಿನಲ್ಲಿರುವಾಗ ಚಿತ್ರದ ತುಣುಕು,ಟ್ರೈಲರ್, ಹೀಗೆ ಏನಾದರೊಂದು ಬಿಡುಗಡೆಗೊಳಿಸಿ ಚಿತ್ರದ ಮೇಲಿನ ಕ್ಯೂರಿಯಾಸಿಟಿಯನ್ನ ಹೆಚ್ಚಿಸುವ ಪ್ರಯತ್ನ ಚಿತ್ರತಂಡಗಳಿಂದ ನಡೆಯೋದು ಮಾಮೂಲಿ. ಆದ್ರೆ ಚೇಸ್ ಚಿತ್ರ ತೆರೆಗಾಣಲು ಕೇವಲ ಎರಡ್ಮೂರು ದಿನಗಳು ಬಾಕಿ ಇರುವಾಗಲೇ ಚಿತ್ರತಂಡ ಟ್ರೈಲರ್ ಒಂದನ್ನ ರಿಲೀಸ್ ಮಾಡಿ, ಬರೀ ಕ್ಯೂರಿಯಾಸಿಟಿ ಯಲ್ಲ, ಚಿತ್ರದ ಮೇಲಿನ ನಿರೀಕ್ಷೆಯನ್ನ ಹೆಚ್ಚಿಸಿದೆ.
ಈಗಾಗಲೇ ರಿಲೀಸ್ ಆಗಿದ್ದ ಟೀಸರ್ ನಿಂದಲೇ ಭರ್ಜರಿ ಕಂಟೆಂಟು ಈ ಸಿನಿಮಾದಲ್ಲಿದೆ ಎಂಬ ನಿಖರ ಸುಳಿವು ಬಿಟ್ಟುಕೊಟ್ಟಿದ್ದ ತಂಡ ಈಗ ರಿಲೀಸ್ ಮಾಡಿರುವ ಟ್ರೈಲರ್ ನಲ್ಲಿ ಇಷ್ಟು ದಿನ ಚಿತ್ರದ ಒಂದೇ ಒಂದು ಜಲಕ್ ಗಾಗಿ ಎದುರುನೋಡ್ತಿದ್ದವರಿಗೆ ಈ ಕಾಯುವಿಕೆ ಸಾರ್ಥಕವೆನಿಸಿದೆ. ಯಾಕಂದ್ರೆ ಚೇಸ್ ನ ಟ್ರೈಲರ್ ಗೊತ್ತಿಲ್ಲದ ಹಾಗೇ ನಮ್ಮನ್ನೇ ನಾವು ಚೇಸ್ ಮಾಡುವಂತೆ ಕಾಡುತ್ತದೆ. ಚೇಸ್ ಕ್ರೈಂ ಅಂಡ್ ಸಸ್ಪೆನ್ಸ್ ಥ್ರಿಲ್ಲರ್ ಕಥಾನಕವನ್ನೊಳಗೊಂಡಿರೋ ಚಿತ್ರ. ಪ್ರೀತಿ- ಪ್ರೇಮ, ಮರ್ಡರ್,ಮಿಸ್ಸಿಂಗ್, ಚೇಸಿಂಗ್, ಇನ್ಯಾವುದೋ ಜಾಲ ಹೀಗೆ ಹಲವು ಲೋಕಗಳ ಸುತ್ತ ತಿರುಗಿಸುತ್ತೆ.ಜೊತೆಗೆ ಕುತೂಹಲ ಹುಟ್ಟಿಸುವ ಚುರುಕು ಚುರುಕಾದ ಸಂಭಾಷಣೆಯಲ್ಲೇ ಗಮನ ಸೆಳೆಯುತ್ತೆ.
ಒಟ್ಟಾರೆ ಒಂದು ಮರ್ಡರ್ ಮಿಸ್ಟರಿ ಮತ್ತು ಅದರ ಸುತ್ತ ಬಿಚ್ಚಿಕೊಳ್ಳುವ ಚಿತ್ರವಿಚಿತ್ರ ಸನ್ನಿವೇಶಗಳು ಹಾಗೂ ಅತ್ಯಂತ ಚುರುಕಾದ ನಿರೂಪಣೆಯ ಈ ಟ್ರೈಲರ್ ಚೇಸ್ ಸಿನೆಮಾ ನೋಡುಗರನ್ನು ತುದಿ ಸೀಟಿಗೆ ತಂದು ಕೂರಿಸುವ ಲಕ್ಷಣಗಳೇ ಎದ್ದುಕಾಣ್ತಿವೆ. ಟ್ರೈಲರ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಮೆಚ್ಚುಗೆಯೂ ಕೇಳಿ ಬರುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಯುಎಫ್ಒ ಸಂಸ್ಥೆ ಯ ತೆಕ್ಕೆಗೆ ಚಿತ್ರದ ವಿತರಣಾ ಹಕ್ಕು ಸೇರಿದ್ದು ಹೊಸ ದಾಖಲೆಯೊಂದಿಗೆ ಕನ್ನಡ ಚಿತ್ರರಂಗಕ್ಕೊಂದು ಸಿಹಿ ಸುದ್ದಿ ಕೊಟ್ಟಿದ್ದ ಚೇಸ್ ಚಿತ್ರವೀಗ ಟ್ರೈಲರ್ ಮೂಲಕ ಸುದ್ದಿಯಾಗಿದೆ.
ಚೇಸ್ ವಿತರಣೆ ಹಕ್ಕು UFOಗೆ ಮಾರಾಟ; ಜುಲೈ 15ರಿಂದ ಶುರುವಾಗುತ್ತೆ ಚೇಸ್ ಆಟ!
ಸಿಂಪ್ಲಿ ಫನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರೋ ಈ ಚಿತ್ರವನ್ನು ಮನೋಹರ್ ಸುವರ್ಣ ನಿರ್ಮಾಣ ಮಾಡಿದ್ದಾರೆ. ತಾರಾಗಣದಲ್ಲಿರುವ ರಾಧಿಕಾ ನಾರಾಯಣ್, ಅವಿನಾಶ್ ನರಸಿಂಹರಾಜು, ರಾಜೇಶ್ ನಟರಂಗ, ಶೀತಲ್ ಶೆಟ್ಟಿ, ಸುಶಾಂತ್ ಪೂಜಾರಿ ಮುಂತಾದವರ ಪಾತ್ರಗಳೂ ಕೂಡಾ ಈ ಟ್ರೈಲರ್‌ನಲ್ಲಿ ತಮ್ಮ ಪಾತ್ರಗಳ ಸಣ್ಣ ಪರಿಚಯ ಮಾಡಿಕೊಟ್ಟಿವೆ. ಇದೇ ೧೫ರಂದು ಬಿಡುಗಡೆಗೊಳ್ಳಲು ತಯಾರಾಗಿ ನಿಂತಿರುವ ಚೇಸ್ ನಲ್ಲಿ ಹೊಸತನದೊಂದಿಗೆ, ಒಂದೊಳ್ಳೆ ಕಥೆಯನ್ನ ಪ್ರೇಕ್ಷಕರ ಎದುರಿಡಲು ನಿರ್ದೇಶಕ ವಿಲೋಕ್ ಶೆಟ್ಟಿ ತಯಾರಾಗಿದ್ದಾರೆ. ಚಿತ್ರ ರಿಲೀಸ್ ಗೂ ಮೊದಲೇ ಚೇಸ್ ಚಿತ್ರದ ಮೇಲೆ ಹುಟ್ಟಿಕೊಂಡಿರುವ ಈ ನಿರೀಕ್ಷೆ,ಭರವಸೆ ಗಳು ಟ್ರೈಲರ್ ಗೆ ಸಿಕ್ಕ ಪ್ರತಿಕ್ರಿಯೆ ಯಿಂದ ಚಿತ್ರತಂಡಕ್ಕೆ ಮೊದಲ ಗೆಲುವು ಸಿಕ್ಕಂತಾಗಿದೆ. ಆದ್ರೆ ಚಿತ್ರ ತೆರೆಕಂಡಾಗ ಪ್ರೇಕ್ಷಕ ಪ್ರಭುಗಳ ಒಪ್ಪಿಗೆಯ ಅಪ್ಪುಗೆ ನೋಡಲು ದಿನಗಣನೆ ಶುರುಮಾಡಿದೆ ಚೇಸ್ ತಂಡ.
ಈ ಚಿತ್ರವನ್ನು ಮನೋಹರ್ ಸುವರ್ಣ ನಿರ್ಮಾಣ ಮಾಡಿದ್ದಾರೆ. ಪ್ರಶಾಂತ್ ಶೆಟ್ಟಿ ಮತ್ತು ಪ್ರದೀಪ್ ಶೆಟ್ಟಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಶಿವ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅನಂತ್ ರಾಜ್ ಅರಸ್ ಛಾಯಾಗ್ರಹಣ, ಕಾರ್ತಿಕ್ ಆಚಾರ್ಯ ಹಿನ್ನೆಲೆ ಸಂಗೀತ ಮತ್ತು ಸಂಗೀತ ನಿರ್ದೇಶನ, ಶ್ರೀ ಕ್ರೇಜಿಮೈಂಡ್ಸ್ ಸಂಕಲನ, ಅವಿನಾಶ್ ಎಸ್ ದಿವಾಕರ್ ಕಲಾ ನಿರ್ದೇಶನ, ಸುನೀಲ್ ಕಟಾಬು ಉಪ ನಿರ್ದೇಶನ, ಡಿಫರೆಂಟ್ ಡ್ಯಾನಿ, ಚೇತನ್ ರಮ್ಶಿ ಡಿಸೋಜಾ ಮತ್ತು ವಿನೋದ್ ಸಾಹಸ ನಿರ್ದೇಶನ, ವಿಜಯ ರಾಣಿ ಮತ್ತು ಸುಶಾಂತ್ ಪೂಜಾರಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ರಾಧಿಕಾ ನಾರಾಯಣ್, ಅವಿನಾಶ್, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಸುಶಾಂತ್ ಪೂಜಾರಿ, ರಾಜೇಶ್ ನಟರಂಗ, ಅರವಿಂದ್ ರಾವ್, ಪ್ರಮೋದ್ ಶೆಟ್ಟಿ, ಅರವಿಂದ್ ಬೋಳಾರ್, ಶ್ವೇತಾ ಸಂಜೀವುಲು, ರೆಹಮಾನ್ ಹಾಸನ್, ವೀಣಾ ಸುಂದರ್, ಸುಧಾ ಬೆಳವಾಡಿ, ಉಷಾ ಭಂಡಾರಿ, ಸುಂದರ್, ಸತೀಶ್ ಸಿದ್ಧಾರ್ಥ ಮಾಧ್ಯಮಿಕ, ಪ್ರಿಯಾ ಶಟಮರ್ಶನ್ ಮುಂತಾದವರ ಬೃಹತ್ ತಾರಾಗಣವಿದೆ.