ಚೇಸ್ ವಿತರಣೆ ಹಕ್ಕು UFOಗೆ ಮಾರಾಟ; ಜುಲೈ 15ರಿಂದ ಶುರುವಾಗುತ್ತೆ ಚೇಸ್ ಆಟ!
ಭಾರತೀಯ ಚಿತ್ರರಂಗದಲ್ಲಿ ಮೂವಿ ಸ್ಟ್ರೀಮಿಂಗ್ ಹಾಗೂ ಡಿಸ್ಟ್ರಿಬ್ಯೂಷನ್ ನಲ್ಲಿ ತನ್ನದೇ ಒಂದು ಮಾರುಕಟ್ಟೆ ಸೃಷ್ಟಿಸಿರುವ ಯುಎಫ್ಒ ಸಂಸ್ಥೆ ಇದೀಗ ಚೇಸ್ ವಿತರಣೆ ಹಕ್ಕನ್ನು ಪಡೆದುಕೊಂಡಿದೆ
ವಿಲೋಕ್ ಶೆಟ್ಟಿ ಸಾರಥ್ಯದಲ್ಲಿ ಮೂಡಿಬಂದಿರುವ ಚೇಸ್ ಸಿನಿಮಾ ಬಿಡುಗಡೆಗೆ ತಯಾರಾಗಿ ನಿಂತಿದೆ. ಬಹಳ ವರ್ಷಗಳ ಕಾಲ ಶ್ರಮಪಟ್ಟು ಇಡೀ ಕಥೆಯನ್ನು ಚೆಂದವಾಗಿ ರೂಪಿಸಿ ಪ್ರೇಕ್ಷಕರಿಗೆ ಅರ್ಪಿಸಲು ಚಿತ್ರತಂಡ ಸಜ್ಜಾಗಿ ನಿಂತಿದೆ. ಕಥೆಯಲ್ಲಿ ಅಸಾಧಾರಣವಾದ ಅಂಶವನ್ನು ಹದವಾಗಿ ಬೆರೆಸಿ ಚಿತ್ರವನ್ನು ತಯಾರಾಗಿಸಲಾಗಿದೆ ಎಂಬ ವಿಷ್ಯ ಈಗಾಗಲೇ ಸ್ಯಾಂಡಲ್ ವುಡ್ ದಶದಿಕ್ಕುಗಳಲ್ಲಿಯೂ ಆವರಿಸಿದೆ. ಒಂದಷ್ಟು ವಿಶೇಷತೆಗಳಿಂದ ಚಿತ್ರಪ್ರೇಮಿಗಳನ್ನು ಆಕರ್ಷಿಸುತ್ತಿರುವ ಚೇಸ್ ಬಳಗದಿಂದ ತಾಜಾ ಸಮಾಚಾರವೊಂದು ರಿವೀಲ್ ಆಗಿದೆ. ಚೇಸ್ ಸಿನಿಮಾ ವಿತರಣೆ ಹಕ್ಕು ಯುಎಫ್ ಒ ಪಾಲಾಗಿದೆ.
ಭಾರತೀಯ ಚಿತ್ರರಂಗದಲ್ಲಿ ಮೂವಿ ಸ್ಟ್ರೀಮಿಂಗ್ ಹಾಗೂ ಡಿಸ್ಟ್ರಿಬ್ಯೂಷನ್ ನಲ್ಲಿ ತನ್ನದೇ ಒಂದು ಮಾರುಕಟ್ಟೆ ಸೃಷ್ಟಿಸಿರುವ ಯುಎಫ್ಒ ಸಂಸ್ಥೆ ಇದೀಗ ಚೇಸ್ ವಿತರಣೆ ಹಕ್ಕನ್ನು ಪಡೆದುಕೊಂಡಿದೆ. ಮೂವೀ ಸ್ಟ್ರೀಮಿಂಗ್ ನಲ್ಲಿ ಪಾರುಪತ್ಯ ಸ್ಥಾಪಿಸಿದ್ದ ಯುಎಫ್ ಒ ಇತ್ತೀಚಿನ ದಿನಗಳಲ್ಲಿ ಸಿನಿಮಾ ವಿತರಣಾ ವಲಯಕ್ಕೂ ದಾಪುಗಾಲಿಟ್ಟಿದೆ. ಇದೇ ಸಂಸ್ಥೆ ಈಗ ಕನ್ನಡ ಚಿತ್ರರಂಗಕ್ಕೂ ಅಡಿ ಇಟ್ಟಿದ್ದು, ಅದರ ಮೊದಲ ಭಾಗವೆಂಬಂತೆ ಯುಎಫ್ ಒ ಚೇಸ್ ಸಿನಿಮಾವನ್ನು ಭಾರತದಾದ್ಯಂತ ವಿತರಣೆ ಮಾಡುವ ರೈಟ್ಸ್ ತನ್ನದಾಗಿಸಿಕೊಂಡಿದೆ.
ಕೆಜಿಎಫ್ ಸರಣಿ ಸಿನಿಮಾ ಹಾಗೂ 777 ಚಾರ್ಲಿ ಚಿತ್ರದ ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚೇಸ್ ಗೆ ಉತ್ತಮ ಮನ್ನಣೆ ಸಿಕ್ಕಿದೆ. ಚೇಸ್ ನೋಡಿ ಯುಎಫ್ ಒ ಸಂಸ್ಥೆ ಅಧಿಕಾರಿಗಳು ಮೆಚ್ಚುಕೊಂಡಿದ್ದು, ವಿಶೇಷ ಬಗೆಯ ಕಥಾನಕ ಒಳಗೊಂಡಿರುವ ಚಿತ್ರದ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದು ಚೇಸ್ ಸಿನಿಮಾಗೆ ಸಿಕ್ಕಿರುವ ಮೊದಲ ಗೆಲುವು ಅನ್ನೋದು ಇಡೀ ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ. ಸಿಂಪ್ಲಿಫನ್ ಮೀಡಿಯಾ ನೆಟ್‌ವರ್ಕ್ ಬ್ಯಾನರ್‌ನಲ್ಲಿ ನಿರ್ಮಾಣಗೊಂಡಿರುವ ಚೇಸ್ ಸಿನಿಮಾದಲ್ಲಿ ರಾಧಿಕಾ ನಾರಾಯಣ್, ಅವಿನಾಶ್ ನರಸಿಂಹರಾಜು, ಶೀತಲ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಅರವಿಂದ ಬೋಳಾರ್, ರೆಹಮಾನ್ ಹಸನ್, ರಾಜೇಶ್ ನಟರಂಗ, ವೀಣಾ ಸುಂದರ್, ಸುಧಾ ಬೆಳವಾಡಿ, ಉಷಾ ಭಂಡಾರಿ, ಅರ್ಜುನ್ ಯೋಗಿ, ಅರವಿಂದ್ ರಾವ್, ಶ್ವೇತಾ ಸಂಜೀವುಲು ಮೊದಲಾದವರು ನಟಿಸಿದ್ದಾರೆ. ಮನೋಹರ ಸುವರ್ಣ, ಪ್ರಶಾಂತ್ ಶೆಟ್ಟಿ ಮತ್ತು ಪ್ರದೀಪ್ ಶೆಟ್ಟಿ ಚಿತ್ರದ ನಿರ್ಮಾಪಕರಾಗಿದ್ದು, ಅನಂತ ರಾಜ್ ಅರಸ್ ಛಾಯಾಗ್ರಹಣ, ಕಾರ್ತಿಕ್ ಆಚಾರ್ಯ ಸಂಗೀತ, ಡಾ.ಉಮೇಶ್ ಪಿಲಿಕುಡೇಲು ಸಾಹಿತ್ಯ ಚಿತ್ರಕ್ಕಿದೆ.