ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಅವರಿಗೆ ರಿಲೀಫ್ ಸಿಕ್ಕಿದೆ. ಪಟ್ಟಣಗೆರೆ ಶೆಡ್‌ನ ಸೆಕ್ಯೂರಿಟಿ ಗಾರ್ಡ್ ನರೇಂದ್ರ ಸಿಂಗ್ ಹಾಗೂ ಕಿರಣ್​ ಎನ್ನುವವರು ನ್ಯಾಯಾಲಯದಲ್ಲಿ ಪ್ರತಿಕೂಲ ಸಾಕ್ಷಿಯಾಗಿ ಬದಲಾಗಿದ್ದಾರೆ. ಘಟನೆ ಬಗ್ಗೆ ತಮಗೆ ಏನೂ ತಿಳಿದಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಪ್ರಾಸಿಕ್ಯೂಷನ್‌ಗೆ ಹಿನ್ನಡೆಯಾಗಿದೆ.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ತೂಗುದೀಪ ಅವರು ಜೈಲಿನಲ್ಲಿ ಇದ್ದು, ಅವರ ವಿಚಾರಣೆಯನ್ನು ಬೆಂಗಳೂರಿನ ಸೆಷನ್ಸ್‌ ಕೋರ್ಟ್‌ ನಡೆಸುತ್ತಿದೆ. ಈ ಪ್ರಕರಣದಲ್ಲಿ ಕೆಲವು ಪ್ರಮುಖ ಸಾಕ್ಷಿದಾರರನ್ನು ಕೋರ್ಟ್​ ವಿಚಾರಣೆಗೆ ನಡೆಸುತ್ತಿದೆ. ಪೊಲೀಸರು ತನಿಖೆ ನಡೆಸುವಾಗ, ಆರೋಪಿಗಳನ್ನು ನೋಡಿರುವುದಾಗಿ ಹೇಳಿದ್ದ ಸೆಕ್ಯುರಿಟಿ ಗಾರ್ಡ್​ ಸೇರಿದಂತೆ ಇಬ್ಬರು ಇದೀಗ ವಿಚಾರಣೆ ವೇಳೆ ಉಲ್ಟಾ ಹೊಡೆಯುವ ಮೂಲಕ ಪ್ರತಿಕೂಲ ಸಾಕ್ಷಿ (ಅರ್ಥಾತ್​ ತದ್ವಿರುದ್ಧ ಹೇಳಿಕೆ ನೀಡುವ ಮೂಲಕ ಉಲ್ಟಾ ಹೊಡೆದ ಸಾಕ್ಷಿ)ಯಾಗಿದ್ದಾರೆ. ಇದರಿಂದ ನಟ ದರ್ಶನ್​ ಅವರು ಸ್ವಲ್ಪ ಮಟ್ಟಿಗೆ ನಿರಾಳ ಆಗುವಂತಾಗಿದೆ.

ಪಟ್ಟಣಗೆರೆ ಶೆಡ್‌ನ ಸೆಕ್ಯೂರಿಟಿ ನರೇಂದ್ರ ಸಿಂಗ್ ಹಾಗೂ ಕಿರಣ್​ ಎನ್ನುವವರು ಪ್ರತಿಕೂಲ ಸಾಕ್ಷಿಯಾಗಿ ಮಾರ್ಪಟ್ಟಿದ್ದಾರೆ. ಈ ಮುನ್ನ ಶೆಡ್‌ನ ಸಿಬ್ಬಂದಿ ಪುನೀತ್, ನಟ ಯಶಸ್ ಸೂರ್ಯ ಹಾಗೂ ಮೃತ ರೇಣುಕಾಸ್ವಾಮಿ ಅವರ ತಾಯಿ ಕೂಡ ವಿಚಾರಣೆ ವೇಳೆ ಪ್ರತಿಕೂಲವಾಗಿ ವರ್ತಿಸಿದ್ದನ್ನು ಈ ಸಂದರ್ಭದಲ್ಲಿ ಕೋರ್ಟ್​ನಲ್ಲಿ ಪ್ರಸ್ತಾಪಿಸಲಾಯಿತು. ಈ ಹಿಂದೆ ಪೊಲೀಸ್​ ವಿಚಾರಣೆ ವೇಳೆ ನೀಡಿದ್ದ ಹೇಳಿಕೆಯ ವಿರುದ್ಧವಾಗಿ ಇಂದು ಹೇಳಿಕೆ ನೀಡಿದ್ದಾರೆ. ತಮಗೆ ಈ ಘಟನೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಆರೋಪಿಗಳನ್ನು ನೋಡಿಯೇ ಇಲ್ಲವೆನ್ನುವ ಮೂಲಕ ಯು-ಟರ್ನ್​ ಹೊಡೆದಿದ್ದಾರೆ. ಇದರಿಂದ ಸರ್ಕಾರಕ್ಕೆ ಅರ್ಥಾತ್​ ಪ್ರಾಸಿಕ್ಯೂಷನ್​ಗೆ ಸ್ವಲ್ಪ ಹಿನ್ನಡೆಯಾದಂತಾಗಿದ್ದು, ದರ್ಶನ್​ಗೆ ಪರವಾಗಿದೆ. ಸೆಕ್ಯೂರಿಟಿ ನರೇಂದ್ರ ಸಿಂಗ್​ ಅವರು, ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಆ ಸಂದರ್ಭದಲ್ಲಿ ಅವರೇ ಹೇಳಿದ್ದ ಕೆಲವು ಆರೋಪಿಗಳನ್ನು ಅವರಿಗೆ ತೋರಿಸಲಾಯಿತು. ಆಗ ಸಿಂಗ್​ ಅವರು, "ನಾನು ಇವರಲ್ಲಿ ಯಾರನ್ನೂ ನೋಡಿಯೇ ಇಲ್ಲ. ಆ ದಿನ ಶೆಡ್ ಆವರಣದಲ್ಲಿ ಏನಾಯಿತು ಎನ್ನೋದೇ ನನಗೆ ಗೊತ್ತಿಲ್ಲ. ಅಲ್ಲಿ ಗಲಾಟೆ ನಡೆದ ಬಗ್ಗೆಯೂ ನನಗೆ ಮಾಹಿತಿಯಿಲ್ಲ. ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ವಿನಯ್ ಮುಖ ಪರಿಚಯವಿದೆ. ಆತ ಕೆಂಪು ಬಣ್ಣದ ವಾಹನ ಬಳಸುತ್ತಿದ್ದ. ಅಷ್ಟು ಬಿಟ್ಟರೆ ನನಗೆ ಏನೂ ಗೊತ್ತೇ ಇಲ್ಲ ಎಂದರು.

ಜಾಣ ಉತ್ತರ ಕೊಟ್ಟ ಸೆಕ್ಯುರಿಟಿ ಗಾರ್ಡ್​

ಆಗ ಸರ್ಕಾರದ ಪರ ವಕೀಲರು, ರೇಣುಕಾಸ್ವಾಮಿ ಕೊಲೆ ನಡೆದ ದಿನದಂದು ಅದೇ ವಾಹನ ಶೆಡ್ ಪ್ರವೇಶಿಸಿತ್ತೇ ಎಂದು ಪ್ರಶ್ನಿಸಿದಾಗಲೂ, ಸಿಂಗ್​, "ಆ ವಿಚಾರ ನನಗೆ ನೆನಪಿಲ್ಲ" ಎಂದು ಜಾಣ ಉತ್ತರ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ, ಅವರನ್ನು ‘ಪ್ರತಿಕೂಲ ಸಾಕ್ಷಿ’ ಎಂದು ಘೋಷಿಸುವಂತೆ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಕೋರ್ಟ್​ಗೆ ಮನವಿ ಮಾಡಿಕೊಂಡರು.

ಸೆಕ್ಯುರಿಟಿ ನರೇಂದ್ರ ಸಿಂಗ್ ಅವರಿಗೆ ಕನ್ನಡ ಬರುವುದಿಲ್ಲ. ಅವರು ಹಿಂದಿ ಮಾತನಾಡುವ ಕಾರಣದಿಂದ ಭಾಷಾಂತರಕಾರರ ನೆರವಿನೊಂದಿಗೆ ಪಾಟೀಸವಾಲು ನಡೆಸಲು ಕಾಲಾವಕಾಶ ನೀಡಬೇಕೆಂದು ಸರ್ಕಾರದ ಪರ ವಕೀಲರು ಕೋರಿಕೊಂಡಾಗ, ದರ್ಶನ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ನರೇಂದ್ರ ಸಿಂಗ್ ಅವರ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿ ಆದೇಶಿಸಿದರು.

ಮುಂದೇನು?

ಸಾಮಾನ್ಯವಾಗಿ ಈ ರೀತಿ ಸಾಕ್ಷಿದಾರರು ಯು-ಟರ್ನ್​ ಹೊಡೆದಾಗ, ಅವರನ್ನು ಪ್ರತಿಕೂಲ ಸಾಕ್ಷಿ ಮಾಡುವಂತೆ ಸರ್ಕಾರದ ಪರ ವಕೀಲರು ಕೋರ್ಟ್​ ಅನ್ನು ಕೋರಿಕೊಳ್ಳುತ್ತಾರೆ. ಕೋರ್ಟ್​ ಆ ರೀತಿ ಆದೇಶ ಹೊರಡಿಸಿದರೆ, ಸರ್ಕಾರದ ಪರ ವಕೀಲರು ಈ ಸಾಕ್ಷಿಯನ್ನು ಪಾಟೀಸವಾಲು ಮಾಡಬಹುದಾಗಿದೆ. ಈ ಸಂದರ್ಭದಲ್ಲಿ ಉಲ್ಟಾ ಹೊಡೆದದ್ದು ಏಕೆ? ಆಗೊಂದು, ಈಗೊಂದು ಹೇಳಿಕೆ ನೀಡಿದ್ದು ಏಕೆ? ಇದರ ಹಿಂದಿನ ಉದ್ದೇಶವೇನು? ಯಾರದ್ದಾದರೂ ಒತ್ತಡ ಇದ್ಯಾ? ಹೀಗೆ ವಿವಿಧ ರೀತಿಯಲ್ಲಿ ಪ್ರಶ್ನಿಸಿ ಪ್ರತಿಕೂಲ ಸಾಕ್ಷಿದಾರರ ಬಾಯಿ ಬಿಡಿಸುತ್ತಾರೆ.