Bhavana Menon: 'ಜಾಕಿ' ಚಿತ್ರದ ಮೂಲಕ ಅಪಾರ ಜನಪ್ರಿಯತೆ ಪಡೆದ ನಟಿ ಭಾವನಾ ಮೆನನ್ ಅವರ ಪ್ರೇಮಕಥೆ ಸಿನಿಮಾವೊಂದರ ಕಥೆಯನ್ನೇ ನೆನಪಿಸುವಂತಿದೆ. ಪ್ರೀತಿಯಲ್ಲಿ ಸೋತಿದ್ದ ಇಬ್ಬರು ವ್ಯಕ್ತಿಗಳು ಸ್ನೇಹದ ಮೂಲಕ ಒಂದಾದರು.

ಕನ್ನಡದ 'ಜಾಕಿ' ಚಿತ್ರದ ಮೂಲಕ ಅಪಾರ ಜನಪ್ರಿಯತೆ ಪಡೆದ ನಟಿ ಭಾವನಾ ಮೆನನ್ ಅವರ ಪ್ರೇಮಕಥೆ ಸಿನಿಮಾವೊಂದರ ಕಥೆಯನ್ನೇ ನೆನಪಿಸುವಂತಿದೆ. ಪ್ರೀತಿಯಲ್ಲಿ ಸೋತಿದ್ದ ಇಬ್ಬರು ವ್ಯಕ್ತಿಗಳು ಸ್ನೇಹದ ಮೂಲಕ ಒಂದಾಗಿ, ಬಳಿಕ ಜೀವನ ಸಂಗಾತಿಗಳಾದ ಅಪರೂಪದ ಪಯಣವನ್ನು ಸ್ವತಃ ಭಾವನಾ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಭಾವನಾ ತಮ್ಮ ವೃತ್ತಿಜೀವನದ ಆರಂಭದಲ್ಲೇ ಪ್ರೀತಿಯಲ್ಲಿ ವೈಫಲ್ಯ ಅನುಭವಿಸಿದ್ದರು. ಆ ನೋವಿನಿಂದ ಹೊರಬರಲು ಪ್ರಯತ್ನಿಸುತ್ತಿದ್ದ ಸಮಯದಲ್ಲೇ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೇ ವೇಳೆ, ಕನ್ನಡದ 'ರೋಮಿಯೋ' ಚಿತ್ರದ ನಿರ್ಮಾಪಕ ನವೀನ್ ಅವರು ಚಿತ್ರದ ಕಥೆ ಹೇಳಲು ಭಾವನಾರನ್ನು ಸಂಪರ್ಕಿಸಿದರು. ನಿರ್ದೇಶಕ ಪಿ.ಸಿ. ಶೇಖರ್ ನಿರ್ದೇಶನದ ಈ ಚಿತ್ರದ ನಾಯಕಿಯಾಗಿ ಭಾವನಾರನ್ನು ಆಯ್ಕೆ ಮಾಡುವ ಉದ್ದೇಶದಿಂದ ನವೀನ್ ಕೇರಳಕ್ಕೆ ತೆರಳಿ ಕಥೆ ವಿವರಿಸಿದರು. ಕಥೆ ಕೇಳಿದ ಭಾವನಾ ಚಿತ್ರಕ್ಕೆ ಒಪ್ಪಿಗೆ ನೀಡಿದರು. ಆದರೆ ಆ ಭೇಟಿಯೇ ಅವರಿಬ್ಬರ ಬದುಕಿನಲ್ಲಿ ಹೊಸ ಅಧ್ಯಾಯಕ್ಕೆ ಕಾರಣವಾಗುತ್ತದೆ ಎಂಬುದು ಆಗ ಯಾರಿಗೂ ತಿಳಿದಿರಲಿಲ್ಲ.

ಆ ಸಮಯದಲ್ಲಿ ನವೀನ್ ಕೂಡ ವೈಯಕ್ತಿಕ ಜೀವನದಲ್ಲಿ ಪ್ರೀತಿಯಲ್ಲಿ ಸೋತ ನೋವಿನಿಂದ ಹೊರಬರಲು ಪ್ರಯತ್ನಿಸುತ್ತಿದ್ದರು. ಭಾವನಾ ಮತ್ತು ನವೀನ್ ಇಬ್ಬರೂ ಒಂದೇ ರೀತಿಯ ಭಾವನಾತ್ಮಕ ಪರಿಸ್ಥಿತಿಯನ್ನು ಎದುರಿಸುತ್ತಿದ್ದ ಕಾರಣ, ಅವರ ನಡುವೆ ಬೇಗನೆ ಆತ್ಮೀಯತೆ ಬೆಳೆದಿತು. ಮೊದಲಿಗೆ ಸ್ನೇಹಿತರಾಗಿದ್ದ ಅವರು, ಕಾಲಕ್ರಮೇಣ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಪ್ರೀತಿಯಲ್ಲಿ ಬಿದ್ದರು. ಈ ಪ್ರೇಮಕಥೆಯ ಬಗ್ಗೆ ಮಾತನಾಡಿದ ಭಾವನಾ, Behindwoods ಸಂದರ್ಶನದಲ್ಲಿ, ತಮ್ಮ ಸ್ನೇಹ ಹೇಗೆ ಪ್ರೀತಿಯಾಗಿ ಬದಲಾಯಿತು ಎಂಬುದನ್ನು ಮನಮುಟ್ಟುವಂತೆ ವಿವರಿಸಿದ್ದಾರೆ.

ಸರಳವಾಗಿ ವಿವಾಹ

ಸುಮಾರು ಆರು ವರ್ಷಗಳ ಕಾಲ ಡೇಟಿಂಗ್ ಮಾಡಿದ ಬಳಿಕ, 2017ರಲ್ಲಿ ಭಾವನಾ ಮತ್ತು ನವೀನ್ ನಿಶ್ಚಿತಾರ್ಥ ಮಾಡಿಕೊಂಡರು. ಬಳಿಕ 2018ರ ಜನವರಿ 22ರಂದು ಕೇರಳದ ತ್ರಿಶೂರ್‌ನ ತಿರುವಂಬಾಡಿ ಶ್ರೀಕೃಷ್ಣ ದೇವಸ್ಥಾನದಲ್ಲಿ ಕುಟುಂಬಸ್ಥರು ಮತ್ತು ಆತ್ಮೀಯರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾದರು. ಇದೀಗ ದಾಂಪತ್ಯ ಜೀವನದ ಎಂಟು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಈ ಜೋಡಿ, ಇತ್ತೀಚೆಗೆ ತಮ್ಮ ವಿವಾಹ ವಾರ್ಷಿಕೋತ್ಸವವನ್ನೂ ಆಚರಿಸಿಕೊಂಡಿದೆ.

ಅನೇಕ ಮಂದಿಗೆ ಪ್ರೇರಣೆ

ಇತ್ತೀಚಿನ ದಿನಗಳಲ್ಲಿ ಭಾವನಾ ಮತ್ತು ನವೀನ್ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ಕುರಿತು ಸ್ಪಷ್ಟನೆ ನೀಡಿದ ಭಾವನಾ, "ನಾವು ಪ್ರತಿದಿನವೂ ಸಾಮಾಜಿಕ ಜಾಲತಾಣಗಳಲ್ಲಿ ಒಟ್ಟಿನ ಫೋಟೋಗಳನ್ನು ಹಂಚಿಕೊಳ್ಳುವುದಿಲ್ಲ. ಅದರಿಂದಲೇ ನಮ್ಮ ನಡುವೆ ಸಮಸ್ಯೆ ಇದೆ ಅಥವಾ ವಿಚ್ಛೇದನವಾಗಿದೆ ಎಂದು ಊಹಿಸುವುದು ಸರಿಯಲ್ಲ," ಎಂದು ವದಂತಿಗಳಿಗೆ ತೆರೆ ಎಳೆದಿದ್ದಾರೆ. ಇನ್ನು ವೈಯಕ್ತಿಕ ಜೀವನದಲ್ಲಿ ಹಲವು ಸವಾಲುಗಳನ್ನು ಎದುರಿಸಿದ್ದರೂ, ಪರಸ್ಪರ ನಂಬಿಕೆ ಮತ್ತು ಅರ್ಥೈಸಿಕೊಳ್ಳುವಿಕೆಯ ಮೂಲಕ ತಮ್ಮ ದಾಂಪತ್ಯವನ್ನು ಸುಂದರವಾಗಿ ಕಟ್ಟಿಕೊಂಡಿರುವ ಭಾವನಾ ಮತ್ತು ನವೀನ್ ಅವರ ಪ್ರೇಮಕಥೆ ಇಂದು ಅನೇಕ ಮಂದಿಗೆ ಪ್ರೇರಣೆಯಾಗಿದೆ.