ಸ್ಯಾಂಡಲ್‌ವುಡ್‌ನಲ್ಲಿ ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರ ಬೆಂಬಲದ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಡಿಂಪಲ್ ಕ್ವೀನ್, ನಟಿ ರಚಿತಾ ರಾಮ್ ಈ ಬಾರಿ ತಮ್ಮ ಮನದಾಳದ ಬೇಸರವನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರ ಬೆಂಬಲದ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಡಿಂಪಲ್ ಕ್ವೀನ್, ನಟಿ ರಚಿತಾ ರಾಮ್ ಈ ಬಾರಿ ತಮ್ಮ ಮನದಾಳದ ಬೇಸರವನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ. 'ಅಯೋಗ್ಯ-2' ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಸಿನಿಮಾಗಳಿಗೂ ಮೊದಲ ಆದ್ಯತೆ ನೀಡುವಂತೆ ಪ್ರೇಕ್ಷಕರಲ್ಲಿ ಭಾವನಾತ್ಮಕ ಮನವಿ ಮಾಡಿದ್ದಾರೆ.

ಬೆಂಗಳೂರು ಮಲ್ಲೇಶ್ವರಂನ ಮಂತ್ರಿ ಸ್ಕ್ವೇರ್ ಮಾಲ್‌ನಲ್ಲಿ ನಡೆದ 'ಅಯೋಗ್ಯ-2' ಚಿತ್ರದ ಪ್ರೀ-ರಿಲೀಸ್ ಇವೆಂಟ್‌ಗೆ ಡಾರ್ಲಿಂಗ್ ಕೃಷ್ಣ, ನಾಗಭೂಷಣ್, ಅಭಿಷೇಕ್ ಅಂಬರೀಶ್, ರವಿಶಂಕರ್ ಸೇರಿದಂತೆ ಹಲವು ಕಲಾವಿದರು ಹಾಗೂ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು. ಅಭಿಮಾನಿಗಳ ಭರ್ಜರಿ ಬೆಂಬಲದ ನಡುವೆ ವೇದಿಕೆಗೆ ಬಂದ ರಚಿತಾ ರಾಮ್, ಕನ್ನಡ ಚಿತ್ರರಂಗದ ಇಂದಿನ ಪರಿಸ್ಥಿತಿಯ ಬಗ್ಗೆ ನೇರವಾಗಿ ಮಾತನಾಡಿದರು.

"ಏನ್ರೀ... ಕಂಟೆಂಟ್ ಅಂತೀರಾ? ನಮ್ಮ ಕನ್ನಡ ಸಿನಿಮಾಗಳಲ್ಲಿ ಕಂಟೆಂಟ್ ಇಲ್ಲವೇ? ಬೇರೆ ಭಾಷೆಯ ಸಿನಿಮಾಗಳನ್ನು ನೋಡಬೇಡಿ ಎಂದು ನಾವು ಹೇಳುವುದಿಲ್ಲ. ಆದರೆ ಕನ್ನಡ ಸಿನಿಮಾಗಳಿಗೂ ಮೊದಲ ಆದ್ಯತೆ ಕೊಡಿ. ನಮ್ಮ ಸಿನಿಮಾಗಳನ್ನು 'ದಯವಿಟ್ಟು ನೋಡಿ' ಎಂದು ಕೇಳಿಕೊಳ್ಳುವ ಪರಿಸ್ಥಿತಿ ಬಂದಿದೆ. ಆದರೆ ಇಂದು ನೀವು ಎರಡೂವರೆ ಗಂಟೆಗಳ ಕಾಲ ನಮ್ಮನ್ನು ನೋಡಲು ಕಾಯುತ್ತಿರುವುದನ್ನು ಕಂಡಾಗ ನಿಜವಾಗಿಯೂ ತುಂಬಾ ಸಂತೋಷವಾಗುತ್ತಿದೆ," ಎಂದು ರಚಿತಾ ರಾಮ್ ಭಾವುಕರಾಗಿ ಹೇಳಿದರು.

ಇದೇ ವೇಳೆ ಆಗಸ್ಟ್ 7ರಂದು ಬಿಡುಗಡೆಯಾಗಲಿರುವ 'ಅಯೋಗ್ಯ-2' ಚಿತ್ರವನ್ನು ಚಿತ್ರಮಂದಿರದಲ್ಲೇ ವೀಕ್ಷಿಸುವಂತೆ ಅವರು ಅಭಿಮಾನಿಗಳಲ್ಲಿ ಮನವಿ ಮಾಡಿದರು. "ನಮ್ಮ ಸಿನಿಮಾ ನೋಡ್ತೀರಲ್ಲವೇ?" ಎಂದು ಕೇಳಿದ ಅವರ ಮಾತುಗಳಿಗೆ ಅಭಿಮಾನಿಗಳು ಭರ್ಜರಿ ಚಪ್ಪಾಳೆ ತಟ್ಟಿ ಬೆಂಬಲ ಸೂಚಿಸಿದರು. ಸತೀಶ್ ನೀನಾಸಂ ನಾಯಕನಾಗಿ ನಟಿಸಿರುವ 'ಅಯೋಗ್ಯ-2' ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸುಮಾರು ಎಂಟು ವರ್ಷಗಳ ಹಿಂದೆ ಬಿಡುಗಡೆಯಾಗಿ ಯಶಸ್ಸು ಕಂಡ 'ಅಯೋಗ್ಯ' ಚಿತ್ರದ ಮುಂದುವರಿದ ಭಾಗವಾಗಿ ಈ ಸಿನಿಮಾ ಮೂಡಿಬಂದಿದ್ದು, ನಿರ್ದೇಶಕ ಮಹೇಶ್ ಕುಮಾರ್ ಮತ್ತೊಮ್ಮೆ ಆ ಕಥೆಯನ್ನು ಹೊಸ ಆಯಾಮದಲ್ಲಿ ತೆರೆಗೆ ತರುತ್ತಿದ್ದಾರೆ.

ಆಗಸ್ಟ್ 7ರಂದು ಬಿಡುಗಡೆ

ಇನ್ನು ಚಿತ್ರದ ಪ್ರಚಾರಕ್ಕೆ ಸ್ಯಾಂಡಲ್‌ವುಡ್‌ನ ಹಲವು ಕಲಾವಿದರು ಕೈಜೋಡಿಸಿದ್ದಾರೆ. ಡಾರ್ಲಿಂಗ್ ಕೃಷ್ಣ, ನಾಗಭೂಷಣ್, ಅಭಿಷೇಕ್ ಅಂಬರೀಶ್, ನಟಿ ಪ್ರಜ್ಞಾ ಸೇರಿದಂತೆ ಹಲವು ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಿ 'ಅಯೋಗ್ಯ-2' ತಂಡಕ್ಕೆ ಶುಭ ಹಾರೈಸಿದರು. ಆಗಸ್ಟ್ 7ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿರುವ 'ಅಯೋಗ್ಯ-2' ಈಗಾಗಲೇ ಹಾಡುಗಳ ಮೂಲಕ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದ್ದು, ರಚಿತಾ ರಾಮ್ ಅವರ ಈ ಭಾವನಾತ್ಮಕ ಮನವಿಯೂ ಚಿತ್ರದ ಬಗ್ಗೆ ಮತ್ತಷ್ಟು ಗಮನ ಸೆಳೆಯುವಂತೆ ಮಾಡಿದೆ.