Mahakavi Movie: ಹಿರಿಯ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದಲ್ಲಿ, ಬಹುಭಾಷಾ ನಟ ಕಿಶೋರ್ ಅಭಿನಯಿಸಿರುವ 'ಮಹಾಕವಿ' ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.
ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹೆಮ್ಮೆಯ ಕ್ಷಣ ಸಿಕ್ಕಿದೆ. ಹಿರಿಯ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದಲ್ಲಿ, ಬಹುಭಾಷಾ ನಟ ಕಿಶೋರ್ ಅಭಿನಯಿಸಿರುವ 'ಮಹಾಕವಿ' ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದು, ಪ್ರತಿಷ್ಠಿತ ಹಾಲಿವುಡ್ ಗೋಲ್ಡನ್ ಏಜ್ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ಸೆಮಿಫೈನಲ್‌ಗೆ ಆಯ್ಕೆಯಾಗಿದೆ. ಈ ಸಾಧನೆಯೊಂದಿಗೆ ಕನ್ನಡ ಸಿನಿಮಾವೊಂದು ಜಾಗತಿಕ ವೇದಿಕೆಯಲ್ಲಿ ಮತ್ತೊಮ್ಮೆ ತನ್ನ ಛಾಪು ಮೂಡಿಸಿದೆ.
ವಿಚಾರಧಾರೆಗೆ ಪ್ರಮುಖ ಸ್ಥಾನ
ಹತ್ತನೇ ಶತಮಾನದ ಕನ್ನಡದ ಆದಿಕವಿ ಪಂಪ ಅವರ ಸಾಹಿತ್ಯ ಮತ್ತು ಚಿಂತನೆಗಳನ್ನು ಆಧರಿಸಿ ನಿರ್ಮಿಸಲಾದ ಈ ಚಿತ್ರ, ಕೇವಲ ಜೀವನಚರಿತ್ರೆಯಲ್ಲ; ಅವರ ಸಾಮಾಜಿಕ ದೃಷ್ಟಿಕೋನ, ಸಮಾನತೆಯ ಸಂದೇಶ ಹಾಗೂ ಸೃಜನಶೀಲತೆಯ ಸ್ವಾತಂತ್ರ್ಯವನ್ನು ತೆರೆಗೆ ತರುವ ಪ್ರಯತ್ನವಾಗಿದೆ. ಜಾತಿ ವ್ಯವಸ್ಥೆಯನ್ನು ಪ್ರಶ್ನಿಸಿ, ಸಮಾನತೆಯ ಪರಿಕಲ್ಪನೆಯನ್ನು ಸಾಹಿತ್ಯದ ಮೂಲಕ ಪ್ರತಿಪಾದಿಸಿದ ಪಂಪ ಅವರ ವಿಚಾರಧಾರೆಗೆ ಚಿತ್ರದಲ್ಲಿ ಪ್ರಮುಖ ಸ್ಥಾನ ನೀಡಲಾಗಿದೆ.
ಸಮಕಾಲೀನ ಸಮಾಜಕ್ಕೂ ಪ್ರಸ್ತುತ
ರಾಜಾಶ್ರಯದಲ್ಲಿದ್ದರೂ ಸತ್ಯ ಮತ್ತು ಸೃಜನಶೀಲತೆಯ ಸ್ವಾತಂತ್ರ್ಯವನ್ನು ಕಾಪಾಡಿಕೊಂಡ ಕವಿಯ ವ್ಯಕ್ತಿತ್ವವನ್ನು, ಸಮಕಾಲೀನ ಸಮಾಜಕ್ಕೂ ಪ್ರಸ್ತುತವಾಗುವ ರೀತಿಯಲ್ಲಿ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಕಟ್ಟಿಕೊಟ್ಟಿದ್ದಾರೆ. ಅಧಿಕಾರದ ಎದುರು ಪ್ರತಿನಾಯಕತ್ವದ ಧ್ವನಿಯಾಗಿ ಪಂಪ ಅವರ ಚಿಂತನೆ ಹೇಗೆ ರೂಪುಗೊಂಡಿತು ಎಂಬುದನ್ನೂ ಚಿತ್ರ ಪರಿಣಾಮಕಾರಿಯಾಗಿ ಅನಾವರಣಗೊಳಿಸುತ್ತದೆ.
ಪಂಪ ಕವಿಯಾದ ಕಿಶೋರ್
ಚಿತ್ರದಲ್ಲಿ ಪಂಪ ಕವಿಯ ಪಾತ್ರವನ್ನು ನಟ ಕಿಶೋರ್ ನಿರ್ವಹಿಸಿದ್ದು, ಅವರ ಅಭಿನಯ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ಸುಂದರ್ ರಾಜ್, ಅನುಷಾ ರೈ, ಕುಮಾರ್ ಗೋವಿಂದ್, ಪ್ರಮೀಳಾ ಜೋಷಾಯ್, ಶೀಲಾ, ಆಕಾಂಕ್ಷ್ ಬರಗೂರು, ಸುಂದರ ರಾಜ ಅರಸು, ಹನುಮಂತೇಗೌಡ, ರಾಘವ್, ರಾಜಪ್ಪ ದಳವಾಯಿ, ಶಾಂತರಾಜ್, ಬಾಲಕೃಷ್ಣ ಬರಗೂರು ಹಾಗೂ ಚಲಪತಿ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಎರಡಕ್ಕೂ ಹೆಮ್ಮೆ
ಬೆಳಗಾವಿಯ ಪ್ರಭು ಯತ್ನಟ್ಟಿ ಅವರ ಪಿ.ಆರ್. ಅಸೋಸಿಯೇಟ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಿಸಿದೆ. ನಾಗರಾಜ ಆದವಾನಿ ಅವರ ಛಾಯಾಗ್ರಹಣ, ಶಮಿತಾ ಮಲ್ನಾಡ್ ಅವರ ಸಂಗೀತ, ತ್ರಿಭುವನ್ ಅವರ ನೃತ್ಯ ಸಂಯೋಜನೆ, ಹೊಸ್ಮನೆ ಮೂರ್ತಿ ಅವರ ಕಲಾ ವಿನ್ಯಾಸ ಹಾಗೂ ಸುರೇಶ್ ಅರಸು ಅವರ ಸಂಕಲನ ಚಿತ್ರಕ್ಕೆ ಮತ್ತಷ್ಟು ಮೆರುಗು ತಂದಿದೆ. ಚಿತ್ರಕಥೆ, ಸಂಭಾಷಣೆ, ಗೀತೆಗಳ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಬರಗೂರು ರಾಮಚಂದ್ರಪ್ಪ ಅವರೇ ನಿರ್ವಹಿಸಿದ್ದಾರೆ. ಕನ್ನಡ ಸಾಹಿತ್ಯದ ಶ್ರೇಷ್ಠ ಪರಂಪರೆಯನ್ನು ಜಾಗತಿಕ ವೇದಿಕೆಯಲ್ಲಿ ಪರಿಚಯಿಸುವ 'ಮಹಾಕವಿ'ಯ ಈ ಸಾಧನೆ, ಕನ್ನಡ ಸಿನಿಮಾ ಹಾಗೂ ಸಾಹಿತ್ಯ ಎರಡಕ್ಕೂ ಹೆಮ್ಮೆ ತರುವ ಬೆಳವಣಿಗೆಯಾಗಿದೆ.


