ರಾಜಧಾನಿ ಬೆಂಗಳೂರು ನಗರ ಗುರುವಾರ ಅಕ್ಷರಶಃ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಮಯವಾಗಿತ್ತು. ಒಂದು ಕಡೆ ಮೆಚ್ಚಿನ ನಟನ ಹುಟ್ಟುಹಬ್ಬ, ಮತ್ತೊಂದು ಕಡೆ ಬಹುವೆಚ್ಚದ ಅದ್ಧೂರಿ ಚಿತ್ರ ‘ಜೇಮ್ಸ್‌’ ಚಿತ್ರದ ಬಿಡುಗಡೆ ಸಂಭ್ರಮ.

ಬೆಂಗಳೂರು (ಮಾ.18): ರಾಜಧಾನಿ ಬೆಂಗಳೂರು (Bengaluru) ನಗರ ಗುರುವಾರ ಅಕ್ಷರಶಃ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಮಯವಾಗಿತ್ತು. ಒಂದು ಕಡೆ ಮೆಚ್ಚಿನ ನಟನ ಹುಟ್ಟುಹಬ್ಬ (Birthday), ಮತ್ತೊಂದು ಕಡೆ ಬಹುವೆಚ್ಚದ ಅದ್ಧೂರಿ ಚಿತ್ರ ‘ಜೇಮ್ಸ್‌’ (James) ಚಿತ್ರದ ಬಿಡುಗಡೆ ಸಂಭ್ರಮ. ಎರಡು ಸಂಭ್ರಮಗಳನ್ನು ಹಲವಾರು ಸಂಘಟನೆಗಳು, ಅಭಿಮಾನಿಗಳು (Fans) ವಿವಿಧ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸ್ಮರಣೀಯವಾಗಿ ಆಚರಿಸಿದರು. ನಗರದ ಆಟೋ ನಿಲ್ದಾಣ, ಪ್ರಮುಖ ವೃತ್ತ, ಬೀದಿ ಬೀದಿಯಲ್ಲೂ ಅಭಿಮಾನಿಗಳ ಆರಾಧ್ಯದೈವ ಅಪ್ಪು ಅವರ ಭಾವಚಿತ್ರ ಕಟೌಟ್‌, ಫ್ಲೆಕ್ಸ್‌ ಹಾಕಿ, ಹೂ, ವಿದ್ಯುತ್‌ ದೀಪಗಳಿಂದ ಅಲಂಕರಿಸಿ ಸಂಭ್ರಮಪಟ್ಟರು.

ದೇವಾಲಯದಲ್ಲಿ ನೆಚ್ಚಿನ ನಟನ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ರಕ್ತದಾನ ಶಿಬಿರ, ಅಂಗಾಗ ದಾನ ನೋಂದಣಿ, ಉಚಿತ ಆರೋಗ್ಯ ತಪಾಸಣೆ ಶಿಬಿರ, ಸಹಿ ಹಂಚಿಕೆ, ಅನ್ನದಾನ ಏರ್ಪಡಿಸಲಾಗಿತ್ತು. ಗುರುವಾರ ಮಧ್ಯರಾತ್ರಿ 12 ಆಗುತ್ತಿದ್ದಂತೆ ಅಭಿಮಾನಿಗಳು ಕೇಕ್‌ ಕತ್ತರಿಸಿ, ಪಟಾಕಿ ಸಿಡಿಸಿದರು. ಅಪ್ಪು ಭಾವಚಿತ್ರವಿರುವ ಕನ್ನಡ ಧ್ವಜವನ್ನು ಆಟೋ, ಲಾರಿ ಸೇರಿದಂತೆ ಇನ್ನಿತರೆ ವಾಹನಗಳಿಗೆ ಕಟ್ಟಿಕೊಂಡು ಸಂಭ್ರಮಿಸಿದರು. ನಗರದ ವೀರಭದ್ರೇಶ್ವರ ಚಿತ್ರಮಂದಿರದ ಮುಂದೆ ಸುಮಾರು ಒಂದು ಸಾವಿರ ಅಭಿಮಾನಿಗಳಿಗೆ ಚಿಕನ್‌ ಬಿರಿಯಾನಿ ಊಟದ ವ್ಯವಸ್ಥೆ ಮಾಡಲಾಗಿತ್ತು. 

ನವರಂಗ್‌ ಚಿತ್ರಮಂದಿರದಲ್ಲಿ ಪುನೀತ್‌ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ತೆಂಗಿನ ಕಾಯಿ ಒಡೆಯಲಾಯಿತು. ವೀರೇಶ್‌ ಚಿತ್ರಮಂದಿರವನ್ನು ಹೆಲಿಕಾಪ್ಟರ್‌ ಮೂಲಕ ಪ್ರದಕ್ಷಿಣೆ ಹಾಕಿ ನಮನ ಸಲ್ಲಿಸಲಾಯಿತು. ಅಭಿಮಾನಿ ಮಧು ಎಂಬುವರು ಜೇಮ್ಸ್‌ ಸಿನಿಮಾದಲ್ಲಿ ಪುನೀತ್‌ ರಾಜಕುಮಾರ್‌ ಧರಿಸಿರೋ ಮಾದರಿ ಮಿಲಿಟರಿ ಡ್ರೆಸ್‌ನಲ್ಲಿ ನವರಂಗ್‌ ಚಿತ್ರಮಂದಿರಕ್ಕೆ ಆಗಮಿಸಿ ಮಿಂಚಿದರು. ಕೋಲಾರ ಮೂಲದ ಯುವಕ ಗಂಗರಾಜು ತನ್ನ ಬೈಕ್‌ಗೆ ಕಂಠೀರವ ಸ್ಟುಡಿಯೋದಲ್ಲಿ ಪುನೀತ್‌ ಭಾವಚಿತ್ರ ಹಾಕಿ ವಿಶೇಷ ಪೂಜೆ ಸಲ್ಲಿಸಿದನು.

ಇಡೀ ಕುಟುಂಬ ಜೇಮ್ಸ್‌ ಫಸ್ಟ್‌ ಡೇ ಫಸ್ಟ್‌ ಶೋ ವೀಕ್ಷಿಸಿದೆ: ಅಶ್ವಿನಿ ಪುನೀತ್ ರಾಜ್‌ಕುಮಾರ್

ಕಮಲಾ ನಗರದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಬೆಳಗ್ಗೆ ಫಸ್ಟ್‌ ಶೋ ವೀಕ್ಷಣೆ ಮಾಡಿದ 1,500 ಪ್ರೇಕ್ಷಕರಿಗೆ ಟೀ-ಕಾಫಿ ವ್ಯವಸ್ಥೆ ಮಾಡಲಾಗಿತ್ತು. ಶೋ ಬಳಿಕ ಮಸಾಲೆ ದೋಸೆ, ಮಧ್ಯಾಹ್ನ ಬಿರಿಯಾನಿ ಊಟ, ಸಂಜೆ ಗೋಬಿ ಮಂಚೂರಿ ವಿತರಿಸಲಾಯಿತು. ರಾಕ್‌ಲೈನ್‌ ಮಾಲ್‌ನಲ್ಲಿ ಬಿರಿಯಾನಿ ವ್ಯವಸ್ಥೆ ಮಾಡಲಾಗಿತ್ತು. ಗರುಡಾ ಮಾಲ್‌ನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ಯುವ ಕಾಂಗ್ರೆಸ್‌ ಅಧ್ಯಕ್ಷ ಮೊಹಮದ್‌ ನಲಪಾಡ್‌ ಹಾಗೂ ಶಾಸಕ ಹ್ಯಾರೀಸ್‌ ಉಚಿತ ಚಿತ್ರ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದರು.

ಮಧ್ಯರಾತ್ರಿ ಕುಟುಂಬಸ್ಥರಿಂದ ಪುನೀತ್‌ ಹುಟ್ಟುಹಬ್ಬ ಆಚರಣೆ: ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್‌ ರಾಜ್‌ಕುಮಾರ್‌ ಸಮಾಧಿಗೆ ಗುರುವಾರ ಮಧ್ಯರಾತ್ರಿ 12ಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ ರಾಘವೇಂದ್ರ ರಾಜ್‌ಕುಮಾರ್‌ ಬೃಹತ್‌ ಕೇಕ್‌ ಕತ್ತರಿಸುವ ಮೂಲಕ ಅಭಿಮಾನಿಗಳ ಜೊತೆ ಪುನೀತ್‌ ಹುಟ್ಟುಹಬ್ಬವನ್ನು ಆಚರಿಸಿದರು. ರಾಘವೇಂದ್ರ ರಾಜ್‌ಕುಮಾರ್‌ ಕೇಕ್‌ ಅನ್ನು ಆಕಾಶಕ್ಕೆ ತೋರಿಸಿ, ‘ಹ್ಯಾಪಿ ಬರ್ತ್‌ಡೇ ಟು ಯೂ ಅಪ್ಪು’ ಎಂದು ಹೇಳಿದರು. ಅದನ್ನು ನೋಡಿ ಮಂಗಳ ರಾಘವೇಂದ್ರ ರಾಜ್‌ಕುಮಾರ್‌ ಕಣ್ಣೀರು ಹಾಕಿದರು. ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಭಾವುಕರಾಗಿ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಜೈಕಾರ ಕೂಗಿದರು.

ಮಧ್ಯರಾತ್ರಿಯಿಂದಲೇ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್‌ ಅವರ ಸಮಾಧಿಗೆ ಅಭಿಮಾನಿಗಳು ಹಾಗೂ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು. ಇಡೀ ದಿನ ಕಂಠೀರವ ಸ್ಟುಡಿಯೋದಲ್ಲಿ ಉತ್ಸವದ ವಾತಾವರಣ ಉಂಟಾಗಿತ್ತು. ಗುರುವಾರ ಬೆಳಗ್ಗೆ ಅಶ್ವಿನಿ ರಾಜ್‌ಕುಮಾರ್‌, ಮಾವ ಚಿನ್ನೇಗೌಡ, ಸಹೋದರಿ ಪೂರ್ಣಿಮಾ, ಲಕ್ಷ್ಮಿ, ಧೀರನ್‌ ರಾಮ್‌ಕುಮಾರ್‌ ಮತ್ತು ರಾಜ್‌ಕುಮಾರ್‌ ಕುಟುಂಬ ಪುನೀತ್‌ ಅವರ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿತು. ಪೂಜೆ ನಂತರ ಅಭಿಮಾನಿಗಳಿಗೆ ರಾಜ್‌ ಕುಟುಂಬದಿಂದ ಅನ್ನ ಸಂತರ್ಪಣೆ ನಡೆಯಿತು.

55 ಸಾವಿರ ಜನರಿಂದ ಅಪ್ಪು ಸಮಾಧಿ ದರ್ಶನ: ಗುರುವಾರ ಬೆಳಗ್ಗೆ 9ರಿಂದ ಕಂಠೀರವ ಸ್ಟುಡಿಯೋನಲ್ಲಿರುವ ಪುನೀತ್‌ ಅವರ ಸಮಾಧಿ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಬೆಳಗ್ಗೆಯಿಂದ ರಾತ್ರಿ ವರೆಗೆ ಸುಮಾರು 55 ಸಾವಿರ ಅಭಿಮಾನಿಗಳು ಪುನೀತ್‌ ರಾಜಕುಮಾರ್‌ ಸಮಾಧಿ ದರ್ಶನ ಪಡೆದರು. ಶುಕ್ರವಾರ ಮತ್ತೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

Shiva Rajkumar: ಫಿಲಂ ಸಿಟಿಗೆ ಅಪ್ಪು ಹೆಸರಿಟ್ಟರೆ ಸಂತೋಷ, ಒತ್ತಾಯ ಮಾಡಲ್ಲ

ತೆಂಗಿನಕಾಯಿ ವಿತರಣೆ: ಪುನೀತ್‌ ಜನ್ಮದಿನದ ಸ್ಮರಣಾರ್ಥವಾಗಿ ಸಮಾಧಿಗೆ 101 ತೆಂಗಿನಕಾಯಿ ಒಡೆಯಲು ಬೊಮ್ಮನಹಳ್ಳಿಯ ಮೋಹನ್‌ ಪ್ರಸಾದ್‌ ಆಗಮಿಸಿದ್ದರು. ಪೊಲೀಸರು ಕಾಯಿ ಒಡೆಯುವುದಕ್ಕೆ ಅವಕಾಶ ನೀಡದೇ ವಿತರಿಸುವಂತೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಸಮಾಧಿ ದರ್ಶನಕ್ಕೆ ಆಗಮಿಸಿದ ಅಭಿಮಾನಿಗಳುಗೆ ಮೋಹನ್‌ ಪ್ರಸಾದ್‌ ವಿತರಿಸಿದರು.

ಜಗಮಗಿಸುತ್ತಿದ್ದ ಥಿಯೇಟರ್‌ಗಳು: ಪುನೀತ್‌ ನಾಯಕನಾಗಿ ನಟಿಸಿರುವ ಜೇಮ್ಸ್‌ ಚಿತ್ರದ ಬಿಡುಗಡೆ ಸಂಭ್ರಮ ಕೂಡ ಜೋರಾಗಿ ನಡೆಯಿತು. ಬಹುತೇಕ ಚಿತ್ರಮಂದಿರಗಳಲ್ಲಿ ಅನ್ನ ಸಂತರ್ಪಣೆ ಹಾಗೂ ಸಿಹಿ ಹಂಚುವ ಮೂಲಕ ಅಭಿಮಾನಿಗಳು ಪುನೀತ್‌ ಹುಟ್ಟುಹಬ್ಬ ಆಚರಿಸಲಾಯಿತು. ಬೆಂಗಳೂರಿನ ವೀರೇಶ್‌, ಸಿದ್ದೇಶ್ವರ, ವೀರಭದ್ರೇಶ್ವರ, ಪ್ರಸನ್ನ, ಊರ್ವಶಿ, ಕಾಮಾಕ್ಯ, ತ್ರಿವೇಣಿ ಸೇರಿದಂತೆ ಬಹುತೇಕ ಏಕಪರದೆ ಚಿತ್ರಮಂದಿರಗಳು ಪುನೀತ್‌ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ವಿಶೇಷವಾಗಿ ಅಲಂಕಾರಗೊಂಡಿದ್ದವು.

ಲಘು ವಿಮಾನದಲ್ಲಿ ಪವರ್‌ಸ್ಟಾರ್‌: ಲಘು ವಿಮಾನದ ಮೂಲಕ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಲಾಯಿತು. ‘ಹ್ಯಾಪಿ ಬತ್‌ರ್‍ ಡೇ ಪವರ್‌ಸ್ಟಾರ್‌’ ಎನ್ನುವ ಬ್ಯಾನರ್‌ ಹೊತ್ತ ಲಘು ವಿಮಾನ ಬಾನಂಗಳದಲ್ಲಿ ಹಾರಾಡಿತು. ಬೆಳಗ್ಗೆ 9.30ಕ್ಕೆ ಮೊದಲು ಜಕ್ಕೂರು ವಿಮಾನ ನಿಲ್ದಾಣದಿಂದ ಹೊರಟ ಲಘು ವಿಮಾನ ಡಾ.ರಾಜ್‌ಕುಮಾರ್‌ ಪುಣ್ಯಭೂಮಿ ಮೇಲೆ 20 ನಿಮಿಷ, ನಂತರ ಒರಾಯನ್‌ ಮಾಲ್‌, ಸದಾಶಿವನಗರ, ಮಲ್ಲೇಶ್ವರಂ, ರಾಜಾಜಿ ನಗರ, ಮೆಜೆಸ್ಟಿಕ್‌ ಹಾಗೂ ಗಾಂಧಿ ನಗರದ ಸುತ್ತಮುತ್ತ ಸುಮಾರು 40 ನಿಮಿಷಗಳ ಕಾಲ ಹಾರಾಡಿತು. ನಂತರ ಸಂಜೆ 4ರ ಹೊತ್ತಿಗೆ ಕೆ.ಆರ್‌.ಮಾರುಕಟ್ಟೆ, ವಿವಿ ಪುರಂ, ಬನಶಂಕರಿ, ಮೈಸೂರು ರಸ್ತೆ, ಗೋಪಾಲನ್‌ ಮಾಲ್‌, ಜೆಪಿ ನಗರ, ಸಿಲ್‌್ಕ ಬೋರ್ಡ್‌, ಬೆಳ್ಳಂದೂರು, ದೊಮ್ಮಲೂರು, ಕೆ.ಆರ್‌.ಪುರಂ, ಬನಶಂಕರಿ, ಬಾಣಸವಾಡಿ, ಮಾನ್ಯತಾ ಟೆಕ್‌ ಪಾರ್ಕ್ ಪ್ರದೇಶಗಳಲ್ಲಿ ಹಾರಾಡಿ ಜಕ್ಕೂರು ವಿಮಾನ ನಿಲ್ದಾಣ ಸೇರಿತು.

Record Break ಮಾಡಿದ ಜೇಮ್ಸ್: ಮೊದಲ ದಿನವೇ 20 ಕೋಟಿ ಕಲೆಕ್ಷನ್‌..!

ಟೀ ಶರ್ಟ್‌ ಮಾರಾಟ: ಕಂಠೀರವ ಸ್ಟುಡಿಯೋ ಹಾಗೂ ಚಿತ್ರಮಂದಿರಗಳ ಮುಂದೆ ಪುನೀತ್‌ ರಾಜ್‌ಕುಮಾರ್‌ ಅವರ ಪ್ರತಿಮೆ ಹಾಗೂ ಭಾವಚಿತ್ರಗಳನ್ನು ಒಳಗೊಂಡ ಟೀ ಶರ್ಟ್‌ಗಳ ಮಾರಾಟ ಕೂಡ ಜೋರಾಗಿತ್ತು. ಪುನೀತ್‌ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ವಿಶೇಷವಾಗಿ ರೂಪಿಸಿದ್ದ ಟೀ ಶರ್ಟ್‌ಗಳನ್ನು ಅಭಿಮಾನಿಗಳು ಖರೀದಿಸಿ ಸಂಭ್ರಮಿಸಿದರು. ಪುನೀತ್‌ ಅವರ ಫೋಟೋಗಳೊಂದಿಗೆ ಬಿಜಾಪುರದಿಂದ ಮಕ್ಕಳ ತಂಡ ಬೆಂಗಳೂರಿನ ವೀರೇಶ್‌ ಚಿತ್ರಮಂದಿರಕ್ಕೆ ಆಗಮಿಸಿತ್ತು. ಇದೇ ಸಂದರ್ಭದಲ್ಲಿ ರಾಘವೇಂದ್ರ ರಾಜ್‌ಕುಮಾರ್‌ ಅವರು ಮಕ್ಕಳಿಗೆ ಗಿಡಗಳನ್ನು ವಿತರಿಸಿದರು. ಪುನೀತ್‌ ಅಭಿಮಾನಿಯೊಬ್ಬರು ಚಾಮರಾಜನಗರದಿಂದ ಸೈಕಲ್‌ನಲ್ಲಿ ಬಂದಿದ್ದು ವಿಶೇಷವಾಗಿತ್ತು.

ಶುಭ ಕೋರಿದ ತಾರೆಗಳು: ಕನ್ನಡ, ತೆಲುಗು, ತಮಿಳು ಸೇರಿದಂತೆ ಚಿತ್ರರಂಗದವರು ಪುನೀತ್‌ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ಕೋರಿದರು. ನಟರಾದ ಯಶ್‌, ಉಪೇಂದ್ರ, ರಮೇಶ್‌ ಅರವಿಂದ್‌, ರಕ್ಷಿತ್‌ ಶೆಟ್ಟಿ, ಪ್ರಕಾಶ್‌ ರೈ, ಅನೀಶ್‌, ನಿರ್ದೇಶಕರಾದ ಪ್ರಶಾಂತ್‌ ನೀಲ್‌, ಪ್ರೇಮ್‌, ಸಂತೋಷ್‌ ಆನಂದ್‌ರಾಮ್‌, ಅನೂಪ್‌ ಭಂಡಾರಿ, ಮಲಯಾಳಂನ ಮೋಹನ್‌ಲಾಲ್‌, ಸುರೇಶ್‌ ಗೋಪಿ, ತೆಲುಗಿನ ಚಿರಂಜೀವಿ, ವರುಣ್‌ ತೇಜ್‌, ನಿರ್ಮಾಪಕರಾದ ವಿಜಯ್‌ ಕಿರಗಂದೂರು, ಕೆ.ಪಿ.ಶ್ರೀಕಾಂತ್‌, ತೆಲುಗಿನ ಬಂಡ್ಲಗಣೇಶ್‌ ಹೀಗೆ ಹಲವರು ಪುನೀತ್‌ ಹುಟ್ಟುಹಬ್ಬಕ್ಕೆ ಹಾಗೂ ಜೇಮ್ಸ್‌ ಚಿತ್ರದ ಯಶಸ್ಸಿಗೆ ಶುಭ ಕೋರಿದರು.