ಬಹುಭಾಷಾ ನಟಿ ಬಿ.ಸರೋಜಾ ದೇವಿ ತಮ್ಮ 87ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಚಿತ್ರರಂಗದ ಗಣ್ಯರು, ಆತ್ಮೀಯರು, ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ಅವರ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಬೆಂಗಳೂರು (ಜು.14): ಬಹುಭಾಷಾ ನಟಿ ಬಿ.ಸರೋಜಾ ದೇವಿ ಸೋಮವಾರ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ತಮ್ 87ನೇ ವಯಸ್ಸಿನಲ್ಲಿ ಸಾವು ಕಂಡಿದ್ದಾರೆ. ಈಗಾಗಲೇ ಚಿತ್ರರಂಗದ ಗಣ್ಯರು, ಆತ್ಮೀಯರು, ರಾಜಕೀಯ ನಾಯಕರು ಅವರ ನಿವಾಸಕ್ಕೆ ಆಗಮಿಸಿ ಅಂತಿಮ ಬಾರಿಗೆ ಬಿ.ಸರೋಜಾ ದೇವಿ ಅವರನ್ನು ನೋಡಿಕೊಂಡು, ಅವರ ಜೊತೆ ಕಳೆದ ದಿನಗಳನ್ನು ಮೆಲುಕು ಹಾಕಿದ್ದಾರೆ.

ಮೃತ ದೇಹದ ಅಂತಿಮ ದರ್ಶನಕ್ಕೆ ಆಗಮಿಸಿದ್ದ ಬ್ರಹ್ಮಾಂಡ ಗುರೂಜಿ, 'ಇವತ್ತು ಸರೋಜಮ್ಮ ಹೋಗಿದ್ದು ಬೇಜಾರು, ಆದ್ರೆ ಸಂಕಷ್ಟಿ ದಿನ ಹೋಗಿದ್ದರಿಂದ ಖುಷಿಯಾಗಿದೆ' ಎಂದು ಹೇಳಿದ್ದಾರೆ.

ಅಮ್ಮ ಯಾವತ್ತು ನಗುನಗುತ್ತಾ ಇರುತ್ತಿದ್ದರು. ಎಲ್ಲರಿಗೂ ಸಹಾಯ ಮಾಡುತ್ತಿದ್ದರು. ಯಾರಿಗೂ ನೋವು ಉಂಟು ಮಾಡುವ ಕೆಲಸ ಮಾಡುತ್ತಿರಲಿಲ್ಲ. ಬೇರೆ ಕಡೆ ದೇವಸ್ಥಾನಕ್ಕೆ ಹೋಗೋವಾಗ ನನಗೆ ಕಾಲ್ ಮಾಡಿ ಕೇಳುತ್ತಿದ್ದರು. ಯಾವದಾದ್ರು ಪೂಜೆ ಮಾಡಬೇಕೂ ಅಂದ್ರೂ ನನ್ನ ಹತ್ತಿರ ಸಲಹೆ ಕೇಳುತ್ತಿದ್ದರು. 2 ತಿಂಗಳು ಹಿಂದೆ ಭೇಟಿ ಮಾಡಿದ್ದೆ. ಆರೋಗ್ಯದ ಬಗ್ಗೆ ವಿಚಾರಿಸಿದ್ದೆ . ಒಂದರೂವರೆ ತಿಂಗಳ ಹಿಂದೆ ಆರೋಗ್ಯ ಸರಿ ಇದ್ದಿರಲಿಲ್ಲ ಎಂದು ಹೇಳಿದ್ದಾರೆ.

ನಾನು ಕೆಲವೊಂದು ಸಿನೆಮಾಗಳಲ್ಲಿ ಅಭಿನಯ ಮಾಡುತ್ತಿದ್ದೆ. ನಾನು ಚಿಕ್ಕವನಿದ್ದಾಗ ಬಹು ಬೇಡಿಕೆಯ ಬಾಲಮಕಲಾವಿದನಾಗಿದ್ದೆ. ಅವರು ನನ್ನನ್ನು ಕೆಲವು ಸಿನಿಮಾಗಳಿಗೆ ರೆಫರ್‌ ಮಾಡಿದ್ದರು. ತಮಿಳು, ತೆಲಗು, ಕನ್ನಡ ಸಿನಿಮಾಗಳಲ್ಲಿ ನನ್ನ ಬಗ್ಗೆ ನಿರ್ದೇಶಕರಿಗೆ ಹೇಳುತ್ತಿದ್ದರು. ಊಟದ ವಿಷಯದಲ್ಲಿ ಅವರು ಅನ್ನಪೂರ್ಣೇಶ್ವರಿ. ಎಲ್ಲರಿಗೂ ತಾವೇ ಅಡುಗೆ ಮಾಡಿ ಸೆಟ್ ನಲ್ಲಿ ಊಟ ಬಡಿಸುತ್ತಿದ್ದರು. ಇವತ್ತು ಒಳ್ಳೆ ದಿನ, ಅವರು ಈ ದಿನ ಹೋಗಿದ್ದು ಒಳ್ಳೆಯದಾಯ್ತು. ಅಮ್ಮನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ.

ಹಿರಿಯ ನಟ ಶ್ರೀನಿವಾಸ ಮೂರ್ತಿ ಕೂಡ ಮಾತನಾಡಿದ್ದು, ಕನ್ನಡ ಚಿತ್ರ ಮಾತ್ರ ಅಲ್ಲ,ಭಾರತೀಯ ಚಿತ್ರರಂಗಕ್ಕೆ ದುಃಖದ ವಿಚಾರ. ಪಂಚಭಾಷೆ ತಾರೆ ಅಂತ ಹೆಸರು ಪಡೆದವರು. ಎಲ್ಲಾರ ಜೊತೆ ನಟಿಸಿದ್ದಾರೆ. ಹೀರೋಗೆ ಕೊಟ್ಟಷ್ಟೇ ಪ್ರಾಮುಖ್ಯತೆ ಇವರಿಗೂ ಇತ್ತು. ನನ್ನ ಪುಣ್ಯ ಅವರ ಜೊತೆ ಅವರ ಗಂಡನ ಪಾತ್ರ ಮಾಡಿದ್ದೆ. ಒಂದೂವರೆ ತಿಂಗಳ ಹಿಂದೆ ಮಾತನಾಡಿದ್ದೆ. ಅವರ ದಿನಚರಿ ಬಗ್ಗೆಯೂ ಹೇಳಿಕೊಂಡಿದ್ದರು. ಪೂಜೆ, ಸಿನಿಮಾ ನೋಡೋದು, ಕಲಾವಿದರಿಗೆ ಪ್ರೋತ್ಸಾಹ ಮಾಡುತ್ತಿದ್ದರು. ಕನ್ನಡದಷ್ಟೇ ಒಳ್ಳೇಯ ಪಾತ್ರಗಳನ್ನ ಬೇರೆ ಭಾಷೆಯಲ್ಲಿ ಮಾಡಿ ಸಾಧನೆ ಮಾಡಿದವರು. ಹುಟ್ಟಿದ ಮೇಲೆ ಸಾವು ಇರುತ್ತೆ. ಬೆಳಗ್ಗೆ ಪೂಜೆ ಮಾಡಿ ತಿಂಡಿ ಮಾಡಿದ ಕೂಡಲೇ ಸಾವಾಗಿದೆ. ಅವರನ್ನ ಕಳೆದುಕೊಂಡಿದ್ದೇವೆ ದುಃಖವಾಗಿದೆ‌ ಎಂದು ಹೇಳಿದ್ದಾರೆ.

ಸಂಗೀತ ನಿರ್ದೇಶಕ ಗುರುಕಿರಣ್ ಮಾತನಾಡಿ, ಕನ್ನಡ, ದಕ್ಷಿಣ ಭಾರತ ಕಂಡ ಅತ್ಯುತ್ತಮ ನಟಿ. ಅಂತಹ ಸ್ಟಾರ್ ಇನ್ನೂ ಸಿಗಲ್ಲ. ದಕ್ಷಿಣ ಭಾರತ ಆಳಿದವರು. ಹೀರೋ ಗಳು ಕೂಡ ಇವರ ಡೇಟ್ ಗಾಗಿ ಕಾಯುತ್ತಿದ್ದರು ಅಂತಹ ನಟಿ. ಇದು ತುಂಬಲಾರದ ನಷ್ಟ ಎಂದಿದ್ದಾರೆ.