ಬಹುಭಾಷಾ ನಟಿ ಡಾ. ಬಿ. ಸರೋಜಾದೇವಿಯವರ ಅಂತ್ಯಕ್ರಿಯೆ ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮದಲ್ಲಿ ನೆರವೇರಲಿದೆ. ತಮ್ಮ ತವರೂರಿನಲ್ಲಿ ಮಾವಿನ ತೋಟದ ಪಕ್ಕದಲ್ಲಿರುವ ತಾಯಿಯ ಸಮಾಧಿ ಪಕ್ಕದಲ್ಲಿಯೇ ಅಂತ್ಯಕ್ರಿಯೆ ನಡೆಸಲು ಕುಟುಂಬ ಚಿಂತನೆ ನಡೆಸಿದೆ.
ಬಹುಭಾಷಾ ನಟಿ ಡಾ. ಬಿ. ಸರೋಜಾದೇವಿಯವರ ನಿಧನ ಹಿನ್ನೆಲೆಯಲ್ಲಿ ಅವರ ತವರೂರಾದ ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲು ಸಿದ್ದತೆ ಮಾಡಲಾಗಿದೆ. ತೆಲುಗು ಹಾಗೂ ತಮಿಳು ಚಿತ್ರರಂಗದಿಂದ ಸೇರಿದಂತೆ ವಿವಿಧ ಭಾಷೆಗಳ ನಟ-ನಟಿಯರು ಭಾಗಿಯಾಗಲಿರುವ ಹಿನ್ನಲೆಯಲ್ಲಿ, ಗ್ರಾಮದ ಸುತ್ತಮುತ್ತ ವ್ಯಾಪಕ ಬಂದೋಬಸ್ತು ಹಾಗೂ ಕಟ್ಟುನಿಟ್ಟಿನ ವ್ಯವಸ್ಥೆಗಳ ಕೈಗೆತ್ತಿಕೊಳ್ಳಲಾಗಿದೆ.
ಸರೋಜಾದೇವಿ ಅವರ ಅಂತ್ಯಸಂಸ್ಕಾರಕ್ಕೆ ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮದಲ್ಲಿ ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಸರೋಜಾದೇವಿ ಅವರ ತಾಯಿ ರುದ್ರಮ್ಮ ಅವರ ಸಮಾಧಿ ಪಕ್ಕದಲ್ಲಿಯೇ ಅವರ ಅಂತ್ಯಕ್ರಿಯೆಯನ್ನು ನಡೆಸಲು ಕುಟುಂಬ ವರ್ಗ ತೀರ್ಮಾನಿಸಿದೆ. ಅಂತ್ಯಕ್ರಿಯೆ ನಡೆಯಲಿರುವ ಸ್ಥಳವನ್ನು ಜೆಸಿಬಿ ಯಂತ್ರದ ಮೂಲಕ ಸ್ವಚ್ಛಗೊಳಿಸಲಾಗುತ್ತಿದೆ.
ಒಕ್ಕಲಿಗ ಸಂಪ್ರದಾಯದಂತೆ ಈ ಅಂತ್ಯಕ್ರಿಯೆಯನ್ನು ನೆರವೇರಿಸಲು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸಜ್ಜಾಗಿದ್ದಾರೆ. ಸಿನಿಮಾರಂಗದ ಗಣ್ಯರು, ರಾಜಕೀಯ ನಾಯಕರು ಹಾಗೂ ವಿವಿಧ ಗಣ್ಯಾತಿಗಣ್ಯರ ಆಗಮನದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬ್ಯಾರಿಕೇಡ್ ವ್ಯವಸ್ಥೆ ಮತ್ತು ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಪ್ರತ್ಯೇಕವಾಗಿ ಕಲ್ಪಿಸಲಾಗುತ್ತಿದೆ.ಹುಟ್ಟೂರಿನ ಗ್ರಾಮಸ್ಥರು ಹಾಗೂ ಸ್ಥಳೀಯ ತಾಊಕು ಆಡಳಿತವು ಅಂತ್ಯಕ್ರಿಯೆಯ ಸಿದ್ಧತೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿವೆ. ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.
ಬಹುಭಾಷಾ ಚಿತ್ರರಂಗದಲ್ಲಿ ತಮ್ಮದೇ ಆದ ಗುರುತನ್ನು ಮಾಡಿಸಿಕೊಂಡಿದ್ದ ನಟಿ ಡಾ. ಬಿ. ಸರೋಜಾದೇವಿಯವರು ಮೂಲತಃ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮದವರು. ರುದ್ರಮ್ಮ ಮತ್ತು ಭೈರಪ್ಪ ದಂಪತಿಗಳ ಪುತ್ರಿಯಾಗಿರುವ ಸರೋಜಾದೇವಿಯವರ ತಂದೆ ಭೈರಪ್ಪ ಅವರು ಪೊಲೀಸ್ ಇಲಾಖೆಯಲ್ಲಿ ಮುಖ್ಯ ಪೇದೆಯಾಗಿ ಸೇವೆ ಸಲ್ಲಿಸಿದ್ದರು. ಸಿದ್ದಲಿಂಗಮ್ಮ ಮತ್ತು ಕಮಲಮ್ಮ ಎಂಬ ಇಬ್ಬರು ಹಿರಿಯ ಸಹೋದರಿಯರು ಇದ್ದಾರೆ. ಬಿ. ಸರೋಜಾದೇವಿಯವರು ದಂಪತಿಗಳ ಕಿರಿಯ ಪುತ್ರಿ.
ದಶವಾರ ಗ್ರಾಮದಲ್ಲಿ ಮನೆ ಮತ್ತು ಜಮೀನನ್ನು ಹೊಂದಿದ್ದ ಸರೋಜಾದೇವಿಯವರು, ಸುಮಾರು ಹತ್ತು ವರ್ಷ ವಯಸ್ಸು ಇರುವವರೆಗೆ ತಮ್ಮ ಬಾಲ್ಯವನ್ನು ಅದೇ ಗ್ರಾಮದಲ್ಲಿ ಕಳೆದಿದ್ದರು. ಬಳಿಕ ತಂದೆಯೊಂದಿಗೆ ಬೆಂಗಳೂರಿಗೆ ತೆರಳಿ, ಅಲ್ಲೇ ನೆಲೆಸಿದ್ದರು. ಆದರೂ, ತಮ್ಮ ತವರೂರನ್ನು ಮರೆಯದೇ, ಆಗಾಗ್ಗೆ ದಶವಾರ ಗ್ರಾಮಕ್ಕೆ ಬಂದು ಹೋಗುತ್ತಿದ್ದರು. ಕಳೆದ ಎರಡು-ಮೂರು ತಿಂಗಳ ಹಿಂದೆಯೂ ಅವರು ತಮ್ಮ ಊರಿಗೆ ಭೇಟಿ ನೀಡಿದ್ದರು.
ತಾಯಿ ಸಮಾಧಿ ಪಕ್ಕದಲ್ಲಿಯೇ ಅಂತ್ಯಕ್ರಿಯೆ ಸಾಧ್ಯತೆ
ಗ್ರಾಮದಲ್ಲಿ ತಮ್ಮ ಮಾವಿನತೋಟದ ಪಕ್ಕದಲ್ಲೇ ತಾಯಿ ರುದ್ರಮ್ಮ ಅವರ ಸಮಾಧಿ ಇರುವುದರಿಂದ, ಸರೋಜಾದೇವಿಯವರ ಅಂತ್ಯಕ್ರಿಯೆಯನ್ನೂ ಅದೇ ಸ್ಥಳದಲ್ಲಿ ನಡೆಸಲು ಕುಟುಂಬ ವರ್ಗ ಚಿಂತನೆ ನಡೆಸಿದೆ. ಸುಮಾರು ಮೂರು ಎಕರೆ ಜಮೀನನ್ನು ದಶವಾರದಲ್ಲಿ ಹೊಂದಿರುವ ಸರೋಜಾದೇವಿಯವರ ಸ್ವಂತ ಜಮೀನಿನಲ್ಲಿಯೇ ಅಂತಿಮ ಸಂಸ್ಕಾರ ನಡೆಯಲಿದೆ.
ಹುಟ್ಟೂರಿಗೆ ನೆರವು
ಹುಟ್ಟೂರಿಗೆ ಹಲವಾರು ರೀತಿಯಲ್ಲಿ ಸಹಾಯ ಮಾಡಿದ್ದ ನಟಿ, ಸ್ಥಳೀಯ ಶಾಲೆಗಳಿಗೆ ಕಟ್ಟಡ ನಿರ್ಮಾಣ, ವಿದ್ಯುತ್ ಸಂಪರ್ಕ ಕಲ್ಪನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ಭಾಗಿಯಾಗಿದ್ದರು. ಅವರು ನಿರ್ಮಿಸಿದ್ದ ಮೂರು ಶಾಲಾ ಕಟ್ಟಡಗಳು ಮತ್ತು ಫ್ರೌಡಶಾಲೆ ಇಂದು ಗ್ರಾಮಸ್ಥರ ನೆನಪಿನಲ್ಲಿ ಜೀವಂತವಾಗಿವೆ. ತಮ್ಮ ಮನೆ ಎದುರು ಗ್ರಾಮಸ್ಥರು ಶ್ರದ್ಧಾಂಜಲಿ ಸಲ್ಲಿಸುತ್ತಿರುವ ದೃಶ್ಯಗಳು ದಶವಾರದಲ್ಲಿ ಭಾವನಾತ್ಮಕ ವಾತಾವರಣ ಸೃಷ್ಟಿಸಿವೆ.
ಪೋಲೀಸ್ ಬಂದೋಬಸ್ತ್, ಗಣ್ಯರ ಆಗಮನದ ನಿರೀಕ್ಷೆ
ಅಂತ್ಯಕ್ರಿಯೆ ನಡೆಯಲಿರುವ ಪ್ರದೇಶವನ್ನು ರಾಮನಗರ ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀನಿವಾಸ್ ಗೌಡ ಪರಿಶೀಲನೆ ನಡೆಸಿದ್ದಾರೆ. ಪಾರ್ಕಿಂಗ್ ವ್ಯವಸ್ಥೆ, ಗಣ್ಯರ ಆಗಮನ, ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ. ಚನ್ನಪಟ್ಟಣ ಡಿಎಸ್ಪಿ ಗಿರಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತು ಹಾಗೂ ಸಾರ್ವಜನಿಕ ವ್ಯವಸ್ಥೆಯ ವ್ಯವಸ್ಥೆ ನಡೆಯುತ್ತಿದೆ.
