ಕನ್ನಡದ ಕಣ್ಮಣಿ ಪುನೀತ್ ರಾಜ್‍ಕುಮಾರ್ ಅವರ 50ನೇ ಹುಟ್ಟುಹಬ್ಬವನ್ನು ಇಂದು ಆಚರಿಸಲಾಗುತ್ತಿದೆ. ಅವರು ಅಗಲಿ ಮೂರೂವರೆ ವರ್ಷವಾದರೂ, ಅವರ ನೆನಪುಗಳು ಹಸಿರಾಗಿವೆ. ಅನುಶ್ರೀ ಅವರು ಪುನೀತ್ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ. ಡಾ.ರಾಜ್ ಸಮಾಧಿಯ ಬಳಿ ಪುನೀತ್ ಅವರು ಆಹಾರವನ್ನು ಪ್ರಸಾದವೆಂದು ಸ್ವೀಕರಿಸಿದ ಘಟನೆಯನ್ನು ಅವರು ಹಂಚಿಕೊಂಡಿದ್ದಾರೆ. ಪುನೀತ್ ಅವರ ಸಮಾಜಮುಖಿ ಕಾರ್ಯಗಳು ಮತ್ತು ಅಭಿಮಾನಿಗಳ ಮೇಲಿನ ಪ್ರೀತಿಯನ್ನು ಅನುಶ್ರೀ ಸ್ಮರಿಸಿದ್ದಾರೆ.

ಇಂದು ಕನ್ನಡದ ಕಣ್ಮಣಿ ಅಪ್ಪು ಅರ್ಥಾತ್​ ಪುನೀತ್​ ರಾಜ್​ ಅವರ 50ನೇ ಹುಟ್ಟುಹಬ್ಬದ ಸಂಭ್ರಮ. ಅರಳುವ ಮುನ್ನವೇ ಬಾಡಿದ ಈ ನಟನ ಬಗ್ಗೆ ಇನ್ನೂ ಅದೆಷ್ಟೋ ಮಂದಿ ಮರೆಯಲಾಗದ ನೆನಪಿನ ಬುತ್ತಿಗಳನ್ನು ಬಿಚ್ಚಿಡುತ್ತಲೇ ಇದ್ದಾರೆ. ಪುನೀತ್‌ ರಾಜ್‌ಕುಮಾರ್‌ ಅವರು ಎಲ್ಲರನ್ನೂ ಅಗಲಿ ಮೂರೂವರೆ ವರ್ಷಗಳಾದರೂ ಅವರ ನೆನಪು ಸದಾ ಹಸಿರು. ಹಲವಾರು ನಟರು ಮಾತ್ರವಲ್ಲದೇ ಗಾಯಕರು, ನಿರ್ದೇಶಕರು ಸೇರಿದಂತೆ ಸಾಮಾನ್ಯ ಜನರನ್ನೂ ಅವರು ಹುರಿದುಂಬಿಸುತ್ತಿದ್ದ ರೀತಿಯೇ ಚೆಂದ. ಇದೇ ಕಾರಣಕ್ಕೆ ಅವರು ಎಲ್ಲರನ್ನೂ ಅಗಲಿದರೂ ಅವರ ನೆನಪನ್ನು ಸಿನಿ ಕ್ಷೇತ್ರದವರು ಸೇರಿದಂತೆ ಎಲ್ಲರೂ ಮಾಡುತ್ತಲೇ ಇರುತ್ತಾರೆ. ಬದುಕಿದ್ದಾಗ ಇವರು ಮಾಡಿದ ಸಮಾಜಮುಖಿ ಕಾರ್ಯಗಳಿಗೆ ಲೆಕ್ಕವೇ ಇಲ್ಲ. ಹಲವರ ಪಾಲಿಗೆ ಬೆಳಕಾಗಿದ್ದ ಅಪ್ಪು, ಸಾವಿನಲ್ಲಿಯೂ ನಾಲ್ವರು ಅಂಧರ ಬಾಳಿಗೆ ಬೆಳಕಾಗಿ ಹೋದವರು. ಇವರ ನಿಧನದ ನಂತರ ಸಮಾಜಸೇವೆಯಲ್ಲಿ ತೊಡಗಿಸಿಕೊಂಡವರು ಹಲವರು. ಅಪ್ಪು ಅವರ ಹಾದಿಯನ್ನೇ ಹಿಡಿಯುತ್ತಿರುವ ಅವರ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. 

ಇದೀಗ ಅವರ ಅಪಾರ ಅಭಿಮಾನಿಗಳಲ್ಲಿ ಒಬ್ಬರಾಗಿರುವ ಆ್ಯಂಕರ್​ ಅನುಶ್ರೀ. ಅನುಶ್ರೀ ಅವರು ಇದಾಗಲೇ ಹಲವಾರು ಬಾರಿ ಪುನೀತ್​ ರಾಜ್​ ಅವರನ್ನು ನೆನಪಿಸಿಕೊಂಡಿದ್ದಾರೆ. ವಿವಿಧ ವೇದಿಕೆಗಳಲ್ಲಿ ಪುನೀತ್​ ರಾಜ್​ ಅವರನ್ನು ನೆನೆದು ಕಣ್ಣೀರಾಗಿದ್ದಾರೆ. ಅವರ ಜೊತೆಗಿನ ಒಡನಾಟವನ್ನು ಸ್ಮರಿಸಿಕೊಂಡಿದ್ದಾರೆ. ಇದೀಗ ಅವರು ಕುತೂಹಲದ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. ಇಂದು ಪುನೀತ್​ ರಾಜ್​ಕುಮಾರ್​ ಅವರ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅನುಶ್ರೀ ಅವರು, ಮಾಧ್ಯಮದ ಮುಂದೆ ಅಂದು ನಡೆದ ಕುತೂಹಲದ ಘಟನೆಯ ಮೆಲುಕು ಹಾಕಿದ್ದಾರೆ.

ಅಪ್ಪು ಎಂದು ಗೊತ್ತಾಗ್ದೇ ರಪರಪ ಅಂತ ಲಾಠಿ ಏಟು ಕೊಟ್ರಂತ ಪೊಲೀಸ್ರು! ಆ ಘಟನೆ ವಿವರಿಸಿದ್ದ ಪುನೀತ್​ ರಾಜ್​...

'ಕೆಲ ವರ್ಷಗಳ ಹಿಂದಿನ ಮಾತು. ಅಂದು ನಾನು ಅಪ್ಪಾಜಿ (ಡಾ.ರಾಜ್​ಕುಮಾರ್​) ಅವರ ಸಮಾಧಿಯ ಬಳಿ ಬಂದಿದ್ದೆ. ಅಂದು ಪುನೀತ್​ ರಾಜ್​ಕುಮಾರ್​ ಕೂಡ ಬಂದಿದ್ದರು. ಅಂದು ಅಪ್ಪಾಜಿ ಸ್ಮಾರಕದ ಬಳಿ ಯಾರೋ ಆಹಾರ ಇಟ್ಟು ಹೋಗಿದ್ದರು. ಅದು ಇಟ್ಟಿದ್ದು ಹಿಂದಿನ ದಿನವಾಗಿತ್ತು. ಅಪ್ಪು ಅವರು ಅದು ಯಾವಾಗ, ಯಾರು ಇಟ್ಟಿದ್ದರು ಎನ್ನುವ ಯೋಚನೆ ಮಾಡಲಿಲ್ಲ. ಅದನ್ನು ಪ್ರಸಾದ ಎಂದು ಸ್ವೀಕರಿಸಿದರು. ಅದನ್ನು ನೋಡಿ ಕಣ್ತುಂಬಿ ಬಂತು. ಇಂಥ ಗುಣ ಯಾರಿಗೂ ಬರಲ್ಲ. ಬದುಕಿದ್ದರೆ ಹೀಗೆಯೇ ಬದುಕಬೇಕು ಎಂದು ತಿಳಿದುಕೊಂಡ ದಿನವದು' ಎಂದಿದ್ದಾರೆ. 

ಇದೇ ಸಂದರ್ಭದಲ್ಲಿ ಪುನೀತ್​ ರಾಜ್​ಕುಮಾರ್​ ಮತ್ತು ತಮ್ಮ ನಡುವಿನ ಸ್ನೇಹದ ಬಗ್ಗೆಯೂ ಮಾತನಾಡಿರುವ ಅನುಶ್ರೀ ಅವರು, ಅವರ ಹುಟ್ಟುಹಬ್ಬದ ದಿನ ತುಂಬಾ ರಶ್​ ಇರುತ್ತೆ ಎಂದು ಹಿಂದಿನ ದಿನವೇ ಕೇಕ್​ ತೆಗೆದುಕೊಂಡು ಹೋಗ್ತಿದ್ದೆ. ಅವರು ಅದನ್ನು ತುಂಬಾ ಪ್ರೀತಿಯಿಂದ ಕಟ್​ ಮಾಡುತ್ತಿದ್ದರು. ಮನೆಗೆ ಯಾರೇ ಬಂದರೂ ಅವರನ್ನು ಗೇಟ್​ವರೆಗೆ ಬಿಟ್ಟು ಬರುತ್ತಿದ್ದರು. ಅಭಿಮಾನಿಗಳ ಬಗ್ಗೆ ಅವರಿಗೆ ಇದ್ದ ಪ್ರೀತಿ ಅಂಥದ್ದು. ಅದೇ ಗುಣದಿಂದ ಅವರು ಇಂದು ಅಜರಾಮರ ಆಗಿದ್ದಾರೆ ಎಂದರು. ಸೂರ್ಯ ಚಂದ್ರ ಇರುವವರೆಗೂ ಅಪ್ಪು ಹೆಸರು ಅಜರಾಮರ. ಇಂದು ಅವರ ಹುಟ್ಟುಹಬ್ಬದಲ್ಲಿ ಜಾತ್ರೆ ಸೇರಿದ್ದು ನೋಡಿದರೆ ಅವರು ಎಂಥ ವ್ಯಕ್ತಿ ಎನ್ನುವುದನ್ನು ತಿಳಿಯುತ್ತದೆ ಎಂದಿದ್ದಾರೆ. 

ನೋಡಲು ಚೆನ್ನಾಗಿಲ್ಲ, ಕಲರ್​ ಇಲ್ಲ ಎಂದು ತುಂಬಾ ಫೀಲಿಂಗ್​ ಇತ್ತು: ಮನದ ಮಾತು ಹೇಳಿದ್ದ ಅಪ್ಪು ವಿಡಿಯೋ ವೈರಲ್​!