ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಅಮೆರಿಕಾ ಅಮೆರಿಕಾ 2’ ಸಿನಿಮಾ 50 ದಿನಗಳನ್ನು ಪೂರೈಸಿದ್ದು, ಈ ಹಿನ್ನೆಲೆಯಲ್ಲಿ ಚಿತ್ರತಂಡ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜಿಸಿತ್ತು. ಈ ಸಂದರ್ಭದಲ್ಲಿ..

‘ನನಗೆ ಚಿತ್ರದ ಗಳಿಕೆ ಕುರಿತು ಮಾತನಾಡುವುದು ಇಷ್ಟವಿಲ್ಲದ ಸಂಗತಿ. ಆದರೆ ಈ ಚಿತ್ರಕ್ಕೆ ವಿದೇಶಗಳಿಂದಲೂ ಅನೇಕರು ಕರೆ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಮಂಡ್ಯ ರಮೇಶ್ ಅಭಿನಯವನ್ನು ಶ್ಲಾಘಿಸಿದ್ದಾರೆ. ಸಹೃದಯ ಪ್ರೇಕ್ಷಕರಿಂದ ಸಿಗುತ್ತಿರುವ ಈ ಪ್ರೀತಿಯೇ ನನಗೆ ಕೋಟಿ ರೂಪಾಯಿಗಳಿಗಿಂತಲೂ ಮಿಗಿಲಾದುದು’ ಎಂದು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದರು. ತಮ್ಮ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದ 50 ದಿನದ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು.

‘ನಾನು ನನಗಾಗಿಯೇ ಸಿನಿಮಾ ಮಾಡುತ್ತೇನೆ. ನನ್ನದೇ ಅಭಿರುಚಿ ಹೊಂದಿರುವ ಪ್ರೇಕ್ಷಕರಿದ್ದಾರೆ ಎಂಬ ವಿಶ್ವಾಸ ನನಗಿದೆ. ಇದು ಅಹಂಕಾರವಲ್ಲ, ತಾತ್ವಿಕ ನಂಬಿಕೆ. ಚಿತ್ರಕ್ಕೆ ಒಂದು ಹಂತದಲ್ಲಿ ನಿರ್ಮಾಪಕರು ಹಿಂದೆ ಸರಿದಾಗ ನಾನೇ ಆ ಜವಾಬ್ದಾರಿ ಹೊರಬೇಕಾಯಿತು. ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಹಲವು ಸಲಹೆಗಳು ಬಂದಿದ್ದವು. ಆದರೆ ಪ್ರೇಕ್ಷಕ ನಾಗತಿಹಳ್ಳಿ ಹೇಳಿದಂತೆಯೇ ಕಥೆಯನ್ನು ಅಂತ್ಯಗೊಳಿಸಿದೆ’ ಎಂದು ಅವರು ಹೇಳಿದ್ದಾರೆ.

ಅಭಿನಯಕ್ಕೆ ಮೆಚ್ಚುಗೆ

ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ನಟಿ ಶಾನ್ವಿ, ನಟ ಪೃಥ್ವಿ ಕಾರ್ಯಕ್ರಮದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಚಿತ್ರದ ಚಿತ್ರೀಕರಣದ ನೆನಪುಗಳು ಮತ್ತು ಪ್ರೇಕ್ಷಕರಿಂದ ದೊರೆತ ಪ್ರತಿಕ್ರಿಯೆಗಳ ಕುರಿತು ಹೇಳಿದರು. ಹಿರಿಯ ನಟ ಮಂಡ್ಯ ರಮೇಶ್ ಅವರ ಅಭಿನಯಕ್ಕೂ ಸಹ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರದ ಪಾತ್ರಗಳು ಹಾಗೂ ಕಲಾವಿದರ ನಟನೆಯ ಬಗ್ಗೆ ಪ್ರೇಕ್ಷಕರು ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು.

ಚಿತ್ರದ ನಾಯಕಿ ಶಾನ್ವಿ ಶ್ರೀವಾಸ್ತವ ತಾಂತ್ರಿಕ ವರ್ಗದವರಿಗೆ ನೆನಪಿನ ಕಾಣಿಕೆ ವಿತರಿಸಿದರು. ನಟ ಪೃಥ್ವಿ ಅಂಬಾರ್ ಹಾಗೂ ಮಂಡ್ಯ ರಮೇಶ್ ಚಿತ್ರೀಕರಣದ ಅನುಭವಗಳನ್ನು ಮೆಲುಕು ಹಾಕಿದರು. ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಎಂ.ಎನ್. ಅನುಚೇತ್, ಪ್ರಜಾವಾಣಿ ಸಂಪಾದಕ ರವೀಂದ್ರ ಭಟ್, ಚಿತ್ರದ ಕತೆಗಾರ್ತಿ ಸಹನಾ ವಿಜಯಕುಮಾರ್, ಬಿ.ಎಸ್. ಲಿಂಗದೇವರು, ಪಿ.ಶೇಷಾದ್ರಿ, ಕೃಷ್ಣೇಗೌಡ ಇದ್ದರು.