ಜನಪ್ರಿಯ ಹಾಸ್ಯನಟ ತುಕಾಲಿ ಸಂತೋಷ್ ಬಿಗ್ ಬಾಸ್ ನಂತರ ಬೆಂಗಳೂರಿನಲ್ಲಿ ಸ್ವಂತ ಮನೆ ಕಟ್ಟಿದ್ದಾರೆ. ತಮ್ಮ ಈ ಯಶಸ್ಸಿಗೆ ಹೆಂಡತಿ ಮಾನಸ ಅವರ ಬೆಂಬಲ ಮತ್ತು 12 ವರ್ಷಗಳ ಸತತ ಪರಿಶ್ರಮವೇ ಕಾರಣ ಎಂದಿದ್ದಾರೆ. ಜೊತೆಗೆ ಇವೆಂಟ್ ಮ್ಯಾನೇಜ್ಮೆಂಟ್ ಮತ್ತು ಸಿನಿಮಾಗಳಲ್ಲೂ ಅವರು ಬ್ಯುಸಿಯಾಗಿದ್ದಾರೆ.
ಬೆಂಗಳೂರು: ಸಣ್ಣಪುಟ್ಟ ಶೋಗಳ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ಇಂದು ಜನಪ್ರಿಯ ಹಾಸ್ಯನಟ ಆಗಿರುವ ತುಕಾಲಿ ಸಂತೋಷ್ ಸಖತ್ ಬ್ಯುಸಿ. ಬಿಗ್ ಬಾಸ್ ಬಳಿಕ ಬೆಂಗಳೂರಿನಲ್ಲಿ ಸ್ವಂತ ಮನೆ ಕಟ್ಟಿ, ಸಾಲು ಸಾಲು ಸಿನಿಮಾ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಇತ್ತೀಚೆಗೆ ನೀಡಿದ ಸಂದರ್ಶನ ಒಂದರಲ್ಲಿ ತುಕಾಲಿ ಸಂತು ಅವರು ಹೇಗೆ ತಮ್ಮ ಬದುಕು ಬದಲಾಯಿತು ಅನ್ನೋದ್ರ ಬಗ್ಗೆ ಮಾತನ್ನಾಡಿದ್ದಾರೆ.. ಅವರೇ ಹೇಳುವಂತೆ ನನ್ನ ಬದುಕಿಗೆ ಎಷ್ಟು ಬೇಕೋ ಅಷ್ಟುನ್ನು ದೇವರು ಕೊಟ್ಟಿದ್ದಾನೆ. ನನಗೆ ದುರಾಸೆ ಇಲ್ಲ. ದೊಡ್ಡ ಬಿಲ್ಡಿಂಗ್ ಮುಂದೆ ನಿಂತು ಅದನ್ನು ನಾನೇಕೆ ಕಟ್ಟಲಿಲ್ಲ ಎಂದು ಆಸೆ ಪಡಬಾರದು. ಭಗವಂತ ಕೊಟ್ಟಿದ್ದರಲ್ಲಿ ತೃಪ್ತಿ ಪಡಬೇಕು. ಇನ್ನೊಬ್ಬರ ಹತ್ರ ಹೋಗಿ ಕೈ ಕಟ್ಟಿ ನಿಂತುಕೊಳ್ಳಬಾರದು, ನಮ್ಮ ಜೀವನ ನಾವು ನೋಡಿಕೊಳ್ಳಬೇಕು ಎಂಬುದಷ್ಟೇ ನನ್ನ ಗುರಿ.
ಈ ನನ್ನ ಸಣ್ಣ ಯಶಸ್ಸು ಒಂದೇ ದಿನದಲ್ಲಿ ಸಿಕ್ಕಿದ್ದಲ್ಲ. ಇದು 12 ವರ್ಷಗಳ ಸುದೀರ್ಘ ಜರ್ನಿ. ಆರಂಭದಲ್ಲಿ ಸಂತು ಯಾರು ಅಂತಾನೇ ಗೊತ್ತಿರಲಿಲ್ಲ. ಇವತ್ತು ತುಕಾಲಿ ಸಂತು ಇಡೀ ಕರ್ನಾಟಕಕ್ಕೆ ಗೊತ್ತು ಅಂದ್ರೆ ಅದು ನನ್ನ ಶ್ರಮದ ಪ್ರತಿಫಲ. ಕಲರ್ಸ್ ಕನ್ನಡ ವಾಹಿನಿ ನಮಗೆ ಮೂರು ವರ್ಷಗಳ ಕಾಲ ಕೆಲಸ ಕೊಟ್ಟಿದೆ. ಬಿಗ್ ಬಾಸ್ ನನಗೂ ಮತ್ತು ನನ್ನ ಹೆಂಡತಿ ಮಾನಸಗೂ ಅವಕಾಶ ನೀಡಿತು. ಅದನ್ನು ನಾವು ಮರೆಯುವಂತಿಲ್ಲ ಎಂದರು.
ಬೆಂಗಳೂರಲ್ಲಿ ಮನೆ ಕಟ್ಟಿದ್ದು ಹೇಗೆ?
ಬೆಂಗಳೂರಿನಲ್ಲಿ ಒಂದು ಮನೆ ಮಾಡಬೇಕು ಎಂಬುದು ತಂದೆ-ತಾಯಿ, ಪತ್ನಿ ಹಾಗೂ ನನ್ನ ಕನಸಾಗಿತ್ತು. ನಾನು ತುಂಬಾನೇ ಸ್ವಾಭಿಮಾನಿ. ನನ್ನ ಮನೆ, ನಾನು ಮತ್ತು ನನ್ನ ಹೆಂಡತಿ ಇಬ್ಬರು ದುಡಿದು ಕಟ್ಟಿರೋದು. ನಮಗೆ ಯಾವುದೇ ಕೆಟ್ಟ ಅಭ್ಯಾಸಗಳಿಲ್ಲ. ಅವರ ಶ್ರಮ ಇದೆ, ನನ್ನ ಶ್ರಮ ಇದೆ. ನಿರಂತರವಾಗಿ ಕೆಲಸ ಇರೋದ್ರಿಂದ ಆ ದುಡ್ಡನ್ನೆಲ್ಲಾ ಕೂಡಿ ಇಟ್ಟು ಮನೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ತಮ್ಮ ಪತ್ನಿ ಮಾನಸ ಅವರ ಪರಿಶ್ರಮ ಕೊಂಡಾಡಿರುವ ಸಂತು.. ಈ ಎಲ್ಲಾ ಸಹಕಾರ ಆಗಿದ್ದು ನನ್ನ ಹೆಂಡತಿಯಿಂದಲೇ. ಆಕೆಯ ಸಪೋರ್ಟ್ ಇರೋದ್ರಿಂದಲೇ ಇಷ್ಟೆಲ್ಲಾ ನಡೆದಿರೋದು. ಬಿಗ್ ಬಾಸ್ ಮುಗಿದು 3-4 ವರ್ಷ ಆದ್ರೂ ಜನ ತುಕಾಲಿ ಸಂತು ಮತ್ತು ನನ್ನ ಹೆಂಡತಿಯನ್ನು ಕೈ ಬಿಟ್ಟಿಲ್ಲ. ಅವರೇ ಇವತ್ತು ನನಗೆ ಅನ್ನ ಹಾಕ್ತಾ ಇರೋದು. ದೇವರು ಎಲ್ಲಿಯವರೆಗೆ ಶಕ್ತಿ ಕೊಡುತ್ತಾನೋ ಅಲ್ಲಿಯವರೆಗೆ ಜನರನ್ನು ನಗಿಸುತ್ತಲೇ ಇರುತ್ತೇನೆ ಎಂದು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
ತುಕಾಲಿ ಸಂತು ಆದಾಯದ ಮೂಲಗಳೇನು?
ಕೇವಲ ಟಿವಿ ಶೋಗಳನ್ನು ನಂಬಿ ಕೂರದ ತುಕಾಲಿ ಸಂತು ಹಲವು ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ. ಸಂತು ತಮ್ಮದೇ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿದ್ದಾರೆ. ಸ್ಟೇಜ್ ಅರೇಂಜ್ಮೆಂಟ್ಸ್, ಜರ್ಮನ್ ಟೆಂಟ್ಗಳು, ಲೈಟಿಂಗ್ಸ್, ಟ್ರಸ್ ಲೈಟ್ಸ್, ಜನರೇಟರ್ ಸೇರಿದಂತೆ ಕಾರ್ಯಕ್ರಮಕ್ಕೆ ಬೇಕಾದ ವ್ಯವಸ್ಥೆಯನ್ನು ಇವರೇ ಮಾಡುತ್ತಾರೆ. ರಾಜ್ಯಾದ್ಯಂತ ವಿವಿಧ ಲೈವ್ ಕಾರ್ಯಕ್ರಮಗಳನ್ನ ನಡೆಸಿಕೊಡುತ್ತಾರೆ. ಪತ್ನಿ ಮಾನಸ ಅವರೊಂದಿಗೆ ಸೇರಿ ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ. ಕಿರುತೆರೆ ಜೊತೆಗೆ ಸ್ಯಾಂಡಲ್ವುಡ್ನಲ್ಲೂ ಸಂತು ಬ್ಯುಸಿ. 'ದರ್ಶನ' ಚಿತ್ರ ಮುಗಿಸಿದ್ದು, 'ಸೀತಾರಾಮ ರಾಜ್ಯ' ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ ದೊಡ್ಡ ಪತ್ತೇದಾರಿ ಸಿನಿಮಾವೊಂದರಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದು, ಮತ್ತೊಂದು ಹೊಸ ಪ್ರಾಜೆಕ್ಟ್ ಕೂಡ ಆರಂಭವಾಗಲಿದೆ.












