ಒಂದು ಕಾಲಕ್ಕೆ ಕನ್ನಡ ಸಿನೆಮಾ ಉದ್ಯಮ ಕರ್ನಾಟಕದಲ್ಲಿ ನೆಲೆಯೂರಲು ಒಂದು ರಕ್ಷಣೆಯ ವ್ಯವಸ್ಥೆಯಾಗಿ ಬೇಕಿದ್ದ ಡಬ್ಬಿಂಗ್‌ ತಡೆ ಕನ್ನಡ ಚಿತ್ರರಂಗ ಗಟ್ಟಿಯಾಗಿ ನೆಲೆಯೂರಲು ಪೂರಕವಾಯಿತು. ಆದರೆ ಬದಲಾದ ಕಾಲದಲ್ಲಿ ಜಾಗತೀಕರಣ, ತಂತ್ರಜ್ಞಾನದ ಕ್ರಾಂತಿ ಮತ್ತು ಅದರ ಬೆನ್ನಲ್ಲೇ ದೊಡ್ಡ ಪ್ರಮಾಣದ ವಲಸೆಯ ಹಿನ್ನೆಲೆಯಲ್ಲಿ ನಮ್ಮ ಊರುಗಳಲ್ಲಿ ಆಗುತ್ತಿರುವ ಜನಲಕ್ಷಣದ ಬದಲಾವಣೆ (ಡೆಮಾಗ್ರಫಿಕ್‌ ಚೇಂಜ್‌) ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ಡಬ್ಬಿಂಗ್‌ ಬಗ್ಗೆ ಅರವತ್ತು ವರ್ಷದ ಹಿಂದಿನ ನಿರ್ಧಾರಕ್ಕೆ ಅಂಟಿಕೊಳ್ಳುವುದು ಕನ್ನಡದ ಬೆಳವಣಿಗೆಯ ದೃಷ್ಟಿಯಿಂದ ಅಂತಹ ಸರಿಯಾದ ನಿರ್ಧಾರವಲ್ಲ ಅನ್ನುವುದು ಮನಗಾಣಬೇಕಿದೆ.

ಡಬ್ಬಿಂಗ್ ವಿರೋಧಿಸುತ್ತಿದ್ದ ಸುದೀಪ್ ದಿಢೀರನೇ ಪರ ನಿಂತಿದ್ಯಾಕೆ? 

ಕನ್ನಡದ ಸಾರ್ವಭೌಮತ್ವಕ್ಕೆ ಪೂರಕ

ಒಂದು ನುಡಿಯಾಡುವ ಸಮಾಜದಲ್ಲಿ ಅಲ್ಲಿನ ಭಾಷೆ ಅಲ್ಲಿನ ಜನರ ಆಡಳಿತ, ಕಲಿಕೆ, ಮನರಂಜನೆ, ಮಾರುಕಟ್ಟೆ, ಮಾಧ್ಯಮ ಮುಂತಾದ ಎಲ್ಲ ಮುಖ್ಯ ವಿಷಯಗಳ ಅಗತ್ಯಗಳನ್ನು ಪೂರೈಸುವಷ್ಟುಸಶಕ್ತವಾಗಿದ್ದರೆ ಆಗ ಆ ಭಾಷೆಗೆ ಅಲ್ಲಿ ಸಾರ್ವಭೌಮತ್ವ ಇದೆ ಎಂದು ಕರೆಯಬಹುದು. ಇದನ್ನೇ ಲ್ಯಾಂಗ್ವೇಜ್‌ ಪ್ಲಾನಿಂಗ್‌ ಇಲ್ಲವೇ ನುಡಿಹಮ್ಮುಗೆ ಅನ್ನುವ ಯೋಜನೆಯ ಮೂಲಕ ರೂಪಿಸಿಕೊಳ್ಳುವ ಕೆಲಸವನ್ನು ಪ್ರತಿಯೊಂದು ನುಡಿಸಮಾಜವೂ ಮಾಡುವುದನ್ನು ಗಮನಿಸಬಹುದು. ಈಗ ಕರ್ನಾಟಕದಲ್ಲಿ ಕನ್ನಡದ ಸಾರ್ವಭೌಮತ್ವ ಅಂದರೆ ಏನು? ಕನ್ನಡದಲ್ಲಿ ಆಡಳಿತ, ಕಲಿಕೆ, ಮಾರುಕಟ್ಟೆಯನ್ನು ಬಳಸುವ ಸಾಧ್ಯತೆ, ನ್ಯಾಯದಾನ, ಮಾಧ್ಯಮ, ಮನರಂಜನೆ ಹೀಗೆ ಕನ್ನಡಿಗರ ಎಲ್ಲ ಅಗತ್ಯಗಳನ್ನು ಕನ್ನಡವೇ ಪೂರೈಸುವಂತಾಗುವುದು. ಮನರಂಜನೆಯ ವಿಷಯಕ್ಕೆ ಬಂದರೆ ಜಾಗತೀಕರಣ, ತಂತ್ರಜ್ಞಾನದ ಕ್ರಾಂತಿ ವ್ಯಕ್ತಿಯೊಬ್ಬ ಮನರಂಜನೆಯನ್ನು ಪಡೆದುಕೊಳ್ಳುವ ಸಾಧ್ಯತೆಗಳನ್ನು ಇನ್ನಿಲ್ಲದಂತೆ ಹಿಗ್ಗಿಸಿವೆ. ಸ್ಯಾಟ್‌ಲೈಟ್‌ ಟಿವಿ, ಮೊಬೈಲ್‌, ಇಂಟರ್‌ನೆಟ್‌, ಅದರಲ್ಲಿ ಒಟಿಟಿ ವೇದಿಕೆಗಳು ಹೀಗೆ ಹಿಂದೆಂದೂ ಇಲ್ಲದಷ್ಟುಆಯ್ಕೆಗಳು ಸೃಷ್ಟಿಯಾಗಿವೆ. ಇದೆಲ್ಲವೂ ಕನ್ನಡ ಸಮಾಜದ ಒಳ ಬರುವಾಗ ಅವು ಕನ್ನಡದಲ್ಲಿ ಇದ್ದರೆ ಮಾತ್ರ ಆ ವ್ಯಕ್ತಿ ಕನ್ನಡದಲ್ಲೇ ಉಳಿಯುತ್ತಾನಲ್ಲವೇ? ಇಲ್ಲದಿದ್ದಲ್ಲಿ ತನಗೆ ಬೇಕಾದದ್ದನ್ನು ಹುಡುಕಿಕೊಂಡು ಸಿಕ್ಕುವ ಇನ್ನೊಂದು ಭಾಷೆಗೆ ವಲಸೆ ಹೋಗುತ್ತಾನಲ್ಲವೇ? ಹಾಗೇ ವಲಸೆ ಹೋಗುತ್ತಿದ್ದ ಪರಿಣಾಮವೇ ನಮ್ಮ ನಾಡಿನ ಮೂಲೆ ಮೂಲೆಯಲ್ಲಿ ಪರಭಾಷೆಯ ಸಿನೆಮಾಗಳು ರಾರಾಜಿಸಲು ಶುರುವಾಗಿದ್ದು.

ಕರ್ನಾಟಕದಲ್ಲಿ ನೆಲೆಸಿರುವ ಪರನುಡಿಯವರು ಕನ್ನಡ ಕಲಿಯಲು ಪೂರಕವಾದ ವಾತಾವರಣವೊಂದು ಸೃಷ್ಟಿಯಾಗದಿರುವಲ್ಲೂ ಇದರ ಪಾತ್ರವಿದೆ. ಇದು ಬದಲಾಗಲು ಡಬ್ಬಿಂಗ್‌ ಒಂದು ಸಾಧನವಾಗಿ ಬೇಕು ಅನ್ನುವ ಕೂಗಿನ ಕಾರಣಕ್ಕೆ ಆಗಿರುವ ಮಾರುಕಟ್ಟೆಯ ತಿದ್ದುಪಡಿ (ಮಾರ್ಕೆಟ್‌ ಕರೆಕ್ಷನ್‌)ಯಿಂದಾಗಿ ಕನ್ನಡದಲ್ಲಿ ಈಗ ಅನೇಕ ಕಾರ್ಟೂನ್‌ ವಾಹಿನಿಗಳು ಬರುತ್ತಿವೆ ಮತ್ತು ಮಕ್ಕಳ ಕಿವಿಯ ಮೇಲೆ ಕನ್ನಡ ಬೀಳುತ್ತಿದೆ. ಡಿಸ್ಕವರಿ ತರದ ಜ್ಞಾನವಾಹಿನಿ ಕನ್ನಡದಲ್ಲಿ ಶುರುವಾಗಿದೆ. ಕಾರ್ಯಕ್ರಮಗಳ ನಿರೂಪಣೆಗೆ ಕನ್ನಡದ ಕಲಾವಿದರನ್ನೇ ಆಯ್ದುಕೊಳ್ಳುತ್ತಿರುವ ಬೆಳವಣಿಗೆ ಆಗುತ್ತಿದೆ. ಸ್ಟಾರ್‌ ಸ್ಪೋಟ್ಸ್‌ರ್‍ ಕನ್ನಡ ಶುರುವಾದ ಮೇಲೆ ಕ್ರಿಕೆಟ್‌ ಕಾಮೆಂಟರಿಗೆ ಅರ್ಥವಾಗದ ಭಾಷೆಯನ್ನು ಅವಲಂಬಿಸುವ ಅಗತ್ಯ ಬೀಳುತ್ತಿಲ್ಲ. ಇನ್ನೊಂದೆಡೆ ಟಿವಿಯಲ್ಲೂ ಪರನುಡಿಯ ಅನೇಕ ಒಳ್ಳೆಯ ಸಿನೆಮಾ ಮತ್ತು ಕಾರ್ಯಕ್ರಮಗಳು ಕನ್ನಡದಲ್ಲಿ ದೊರೆಯುತ್ತಿದೆ. ಮಹಾಭಾರತವನ್ನು, ಅಲ್ಲಾದ್ದೀನ್‌ ತರದ ಕಾರ್ಯಕ್ರಮವನ್ನು ಮೊದಲ ಬಾರಿ ಕನ್ನಡದಲ್ಲಿ ನೋಡಲು ಸಾಧ್ಯವಾಗುತ್ತಿದೆ. ಮಾಲ್ಗುಡಿ ಡೇಸ್‌ನಂತಹ ಕನ್ನಡಿಗರೇ ನಟಿಸಿ, ನಿರ್ದೇಶಿಸಿ, ಜಗತ್ತಿನ ಐವತ್ತು ಭಾಷೆಯ ಜನ ಅವರದೇ ನುಡಿಯಲ್ಲಿ ನೋಡಿದ್ದ ಕನ್ನಡದ ಕತೆ ಕೊನೆಗೂ ಕನ್ನಡದಲ್ಲಿ ನೋಡಲು ದೊರೆಯುತ್ತಿದೆ. ಹೀಗೆ ಕನ್ನಡದ ನೋಡುಗನ ಮುಂದೆ ಒಳ್ಳೆಯ ಆಯ್ಕೆಯನ್ನು ಒದಗಿಸುತ್ತಿದೆ.

ಡಬ್‌ ಆಗಿ ಬಂದದ್ದನ್ನೆಲ್ಲ ನೋಡುಗ ಒಪ್ಪಿಕೊಳ್ಳುತ್ತಾನೆ ಅಂತಲೂ ಏನಿಲ್ಲ. ಅವನಿಗೆ ಇಷ್ಟವಾದದ್ದನ್ನು ನೋಡುತ್ತಾನೆ, ಬೇಡದ್ದನ್ನು ತಿರಸ್ಕರಿಸುತ್ತಾನೆ. ಯಾವುದೇ ಹೊಸ ಉದ್ಯಮದಂತೆ ಅದು ತನ್ನ ಸ್ಥಾನವನ್ನು ಕಂಡುಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತೆ. ಹಾಗೆ ನೋಡಿದರೆ ದಕ್ಷಿಣ ಭಾರತದಲ್ಲಿ ಕನ್ನಡದ ನೋಡುಗನಷ್ಟುಬುದ್ಧಿವಂತ ಇನ್ನೊಬ್ಬನಿಲ್ಲ ಅನ್ನುವ ಮಾತು ಯಾವತ್ತೂ ಕೇಳುತ್ತಿರುತ್ತೇವೆ. ಆದ್ದರಿಂದ ನೋಡುಗನ ಬುದ್ಧಿವಂತಿಕೆಯನ್ನು ನಂಬಿ, ಅವನ ಮುಂದೆ ಹಲವು ಆಯ್ಕೆಗಳನ್ನು ಕನ್ನಡದಲ್ಲೇ ಇರಿಸುವುದು ಮತ್ತು ಆ ಮೂಲಕ ಆತ ಹೆಚ್ಚು ಹೆಚ್ಚು ಕನ್ನಡಕ್ಕೆ ಅಂಟಿಕೊಳ್ಳುವಂತೆ ಮಾಡುವುದು ಒಳ್ಳೆಯದು. ಯಾವಾಗ ಕನ್ನಡದಲ್ಲೊಂದು ಸೆರೆಯಾದ ನೋಡುಗ ವಲಯವಿರುತ್ತೋ (ಕ್ಯಾಪ್ಟಿವ್‌ ಆಡಿಯನ್ಸ್‌) ಆಗ ಅದರ ಮಾರುಕಟ್ಟೆಯ ಸಾಧ್ಯತೆಗಳು ಹಿಗ್ಗುತ್ತವೆ.

ಡಬ್ಬಿಂಗ್‌ ಬಗ್ಗೆ ಸ್ಪಷ್ಟ ಅಭಿಪ್ರಾಯ ಹೊರಹಾಕಿದ ಅನಂತ್‌ ನಾಗ್

ಡಬ್ಬಿಂಗ್‌ ಬಂದಿರುವ ಈ ಹೊತ್ತಲ್ಲಿ ಡಬ್ಬಿಂಗ್‌ ಮೂಲಕ ಪ್ರಪಂಚದ ಒಳ್ಳೆಯ ಜ್ಞಾನ, ಮನರಂಜನೆಯನ್ನು ಕನ್ನಡಕ್ಕೆ ತರಲು ಬೇಕಿರುವ ಉದ್ಯಮವೊಂದನ್ನು ಕಟ್ಟಿಕೊಳ್ಳುವುದು, ಜೊತೆಯಲ್ಲೇ ಸ್ಪರ್ಧೆಗೆ ತೆರೆದುಕೊಂಡು ಕನ್ನಡದಲ್ಲೂ ಸ್ವಂತಿಕೆ ಇರುವ ಅದ್ಭುತವಾದ ಕಂಟೆಂಟ್‌ ಹೆಚ್ಚಿಸುತ್ತ ಹೋದರೆ ಇನ್ನೊಂದು ಹತ್ತು ವರ್ಷದಲ್ಲಿ ಮನರಂಜನೆಯ ವಿಷಯದಲ್ಲಿ ಕನ್ನಡದ ಮಾರುಕಟ್ಟೆಸಾಧ್ಯತೆಯೂ ದೊಡ್ಡದಾಗುತ್ತೆ. ನಿಧಾನಕ್ಕೆ ಇತರೆ ಭಾಷೆಗಳಲ್ಲಿರುವಂತೆಯೇ ಒಟ್ಟಾರೆ ಮನರಂಜನೆಯ ಒಂದು ಸಣ್ಣ ಭಾಗವಾಗಿ ಡಬ್ಬಿಂಗ್‌ ಕಾರ್ಯಕ್ರಮಗಳು ಉಳಿದುಕೊಳ್ಳುತ್ತವೆ. ನಿಜ ಹೇಳಬೇಕು ಅಂದರೆ ಡಬ್ಬಿಂಗ್‌ ಬಗ್ಗೆ ಇಷ್ಟೊಂದು ವರ್ಷ ಹೀಗೆ ವಿವಾದವೆದ್ದಿದ್ದೇ ಒಂದು ಆಶ್ಚರ್ಯ. ಒಂದು ನಡುವಿನ ಹಾದಿಯನ್ನು ಎಂದೋ ಕಂಡುಕೊಳ್ಳಬಹುದಾಗಿತ್ತು. ಈಗಲಾದರೂ ಸಿನೆಮಾ ಮತ್ತು ಟಿವಿ ಉದ್ಯಮ, ಟಿವಿ ವಾಹಿನಿಗಳು ಎಲ್ಲರೂ ಸೇರಿ ಒಂದು ನಡುವಿನ ದಾರಿ ಕಂಡುಕೊಂಡು, ನೋಡುಗನ ಆಯ್ಕೆಯನ್ನೇ ಕೇಂದ್ರವಾಗಿಟ್ಟುಕೊಂಡು ಅದರ ಸುತ್ತ ಒಂದು ಉದ್ಯಮವಾಗಿ ಬೆಳೆಯಲು ಬೇಕಿರುವ ಪ್ರತಿಭೆ, ತಾಂತ್ರಿಕತೆ, ಪ್ರಚಾರ ಮುಂತಾದ ಎಲ್ಲ ವ್ಯವಸ್ಥೆಗಳನ್ನು ಕಟ್ಟುವತ್ತ ಗಮನ ಹರಿಸಿದರೆ ಕನ್ನಡವೂ, ಉದ್ಯಮವೂ ಎರಡು ಬೆಳೆಯುತ್ತೆ.