ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆಯುತ್ತಿರುವ ಏ.26ರ ಲೋಕಸಭಾ ಚುನಾವಣೆಯ ಮತದಾನದಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಶೇ.100 ವೆಬ್ ಕಾಸ್ಟಿಂಗ್ ಮತ್ತು ಡಬಲ್ ಸೆಕ್ಯೂರಿಟಿ ವ್ಯವಸ್ಥೆ ಮಾಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.

ಬೆಂಗಳೂರು (ಏ.24): ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಏ.26ರಂದು ಬೆಳಗ್ಗೆಯಿಂದ ಸಂಜೆವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎಲ್ಲ ಮತಗಟ್ಟೆಗಳಲ್ಲಿಯೂ ಶೇ.100 ವೆಬ್‌ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ರಾಜ್ಯ ಮುಖ್ಯ ಚುನವಣಾ ಅಧಿಕಾರಿ ಮನೋಜ್‌ ಕುಮಾರ್ ಮೀನಾ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ನಡೆಯುತ್ತಿರುವ ಮೊದಲ ಹಂತದ ಮತದಾನದ ಸಿದ್ಧತೆಯ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎಲ್ಲಾ ಮತಗಟ್ಟೆಯಲ್ಲಿ ಶೇ.100ರಷ್ಟು ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಇಡೀ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಅನ್ವಯವಾಗುವಂತೆ ಡಬಲ್ ಸೆಕ್ಯೂರಿಟಿ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಬರೋಬ್ಬರಿ 7 ಪ್ಯಾರಾ ಮಿಲಿಟರಿ ಕಂಪನಿ ನಿಯೋಜನೆ ಮಾಡಿಕೊಳ್ಳಲಾಗಿದೆ. ಸ್ಥಳೀಯ ಚುನಾವಣಾಧಿಕಾರಿಗಳ ಕೋರಿಕೆಯಂತೆ ಹೆಚ್ಚು ಭದ್ರತೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯಾದ್ಯಂತ ಒಂದು ವಾರ ಒಣ ಹವೆ; ಮಳೆ ಆಸೆಯಲ್ಲಿದ್ದವರಿಗೆ ಭಾರಿ ನಿರಾಸೆ

ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ: ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆಯುವ ಮತದಾನದ ವೇಳೆ ಎಲ್ಲ ಮತ ಹಾಕಿದ ಮತದಾರರ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿಯನ್ನು (ಚುನಾವಣಾ ನೀತಿ ಸಂಹಿತೆ 1961 ರ ನಿಯಮ 49K ಪ್ರಕಾರ) ಹಚ್ಚಲಾಗುತ್ತದೆ ಎಂದು ಚುನಾವಣಾಧಿಕಾರಿ ತಿಳಿಸಿದರು.

ಮತ ಚಲಾಯಿಸಲು ಚುನಾವಣಾ ಗುರುತಿನ ಚೀಟಿ ಇಲ್ಲವಾದಲ್ಲಿ ಪರ್ಯಾಯ ದಾಖಲೆಗಳು:
ಭಾರತ ಚುನಾವಣಾ ಆಯೋಗವು ಅನುಮೋದಿಸಿರುವಂತೆ ಮತದಾರರು ತಮ್ಮ ಮತ ಚಲಾಯಿಸುವ ಮೊದಲು ಮತದಾನ ಕೇಂದ್ರಗಳಲ್ಲಿ ಅವರ ಗುರುತಿಗಾಗಿ ಮತದಾರರ ಗುರುತಿನ ಚೀಟಿ ಅಥವಾ ಈ ಕೆಳಗಿನ ಯಾವುದಾದರೊಂದು ಪರ್ಯಾಯ ಫೋಟೋ ಗುರುತಿನ ದಾಖಲೆಯನ್ನು ತೋರಿಸುವ ಮೂಲಕ ಮತದಾನ ಮಾಡಬಹುದಾಗಿದೆ.

  • ಆಧಾರ್ ಕಾರ್ಡ್
  • MNREGA ಜಾಬ್ ಕಾರ್ಡ್
  • ಬ್ಯಾಂಕ್/ಪೋಸ್ಟ್ ಆಫೀಸ್ ನೀಡಿದ ಭಾವಚಿತ್ರವಿರುವ ಪಾಸ್‌ಬುಕ್‌ಗಳು,
  • ಕಾರ್ಮಿಕ ಸಚಿವಾಲಯದ ಯೋಜನೆಯ ಅಡಿಯಲ್ಲಿ ನೀಡಲಾದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್,
  • ಚಾಲನಾ ಪರವಾನಗಿ
  • ಪ್ಯಾನ್ ಕಾರ್ಡ್
  • NPR ಅಡಿಯಲ್ಲಿ RGI ನೀಡಿದ ಸ್ಮಾರ್ಟ್ ಕಾರ್ಡ್,
  • ಭಾರತೀಯ ಪಾಸ್‌ಪೋರ್ಟ್
  • ಭಾವಚಿತ್ರ ಹೊಂದಿರುವ ಪಿಂಚಣಿಯ ದಾಖಲೆ
  • ಕೇಂದ್ರ / ರಾಜ್ಯ ಸರ್ಕಾರ / ಪಿಎಸ್‌ಯು / ಪಬ್ಲಿಕ್ ಲಿಮಿಟೆಡ್ ಕಂಪನಿಗಳು ಉದ್ಯೋಗಿಗಳಿಗೆ ನೀಡಿದ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು
  • MPಗಳು/MLAಗಳು/MLC ಗಳಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿಗಳು
  • ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಭಾರತ ಸರ್ಕಾರ ನೀಡಿರುವ ವಿಶಿಷ್ಟ ಅಂಗವೈಕಲ್ಯ ID (UDID) ಕಾರ್ಡ್.