ಡಾ.ರಾಜ್ ಬರೀ ನಟನೆಂದರೆ ಅಲ್ಲವೇ ಅಲ್ಲ, ಕನ್ನಡಿಗನ ಮನಸ್ಸಿಗೆ ಹಿಡಿದ ಧೀಶಕ್ತಿ

Dr Rajakumar ಬದುಕಿದ್ದರೆ ಇಂದಿಗೆ 95 ವರ್ಷಗಳು ತುಂಬುತ್ತಿತ್ತು. ಎಂದೆಂದಿಗೂ ಮರೆಯದ ಮಾಣಿಕ್ಯನೆಂದರೆ ಕರ್ನಾಟಕ ನಟ ಸಾರ್ವಭೌಮ ಅಣ್ಣಾವ್ರು. ಅವರು ಸ್ಮರಣೆಯಲ್ಲಿ ಅವರು ಹಾಡಿರುವ ಹಾಡುಗಳು ಹಾಗೂ ಚಿತ್ರಗಳ ಅವಲೋಕನವಿದು.

Remembering Dr Rajakumar veteran kannada actor on his 95th birthday with movies

'ಬಾಳುವಂತ ಹೂವೇ… ಬಾಡುವಾಸೆ ಏಕೆ' ಹಾಡು ಕೇಳಿದಾಗ ಭರವಸೆ ಸಿಕ್ಕಿದ್ದು ಸುಳ್ಳಲ್ಲ. 'ಬಾನಿಗೊಂದು ಎಲ್ಲೆ ಎಲ್ಲಿದೆ?, ನಿನ್ನಾಸೆಗೆಲ್ಲಿ ಕೊನೆ ಇದೆ?!' ಹಾಡು ಕೇಳಿದಾಗ ಸಂಯಮ ಸಿಕ್ಕದ್ದು ಸುಳ್ಳಲ್ಲ, 'ಏನೆಂದು ನಾ ಹೇಳಲಿ?…ಮಾನವನಾಸೆಗೆ ಕೊನೆ ಎಲ್ಲಿ !?' ಹಾಡನ್ನು ಕೇಳಿದಾಗ ವಸ್ತುಸ್ಥಿತಿಯ ಕುರಿತು ಮರುಕ ಹುಟ್ಟಿದ್ದೂ ಸುಳ್ಳಲ್ಲ. 'ಹಾಲಲ್ಲಾದರು ಹಾಕು, ನೀರಲ್ಲಾದರೂ ಹಾಕು ರಾಘವೇಂದ್ರ,' ಹಾಡು ಕೇಳಿದಾಗ ಹಾತಾಶ ಮನಸ್ಸಿಗೆ ಸಾಂತ್ವನ ಸಿಕ್ಕಿದ್ದು ಸುಳ್ಳಲ್ಲ. 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಎಂದು ಹಾಡಿದಾಗ ಭಾಷೆಯ ಕುರಿತು ಧನ್ಯತೆ ಮೂಡಿದ್ದು ಸುಳ್ಳಲ್ಲ. ಕರ್ನಾಟಕದ ನಟ ಸಾರ್ವಭೌಮ ಡಾ.ರಾಜ್‌ಕುಮಾರ್ ನಟನೆಂದರೆ ಅದಲ್ಲವೇ ಅಲ್ಲ, ಸದಾ ಕನ್ನಡಿಗನ ಮನಸ್ಸಿಗೆ ಕನ್ನಡಿ ಹಿಡಿದ ಧೀಶಕ್ತಿ.       

ಇಂಥ ಭಾರತೀಯ ಮಹಾನ್ ನಟ ಇಂದು ಇದ್ದಿದ್ದರೆ 95 ವರ್ಷ ತುಂಬುತ್ತಿತ್ತು. ಕಾಡುಗಳ್ಳ ವೀರಪ್ಪನ್ ಅವರಿಂದ ಅಪಹರಣವಾಗಿ, ಕಾಡಿನಲ್ಲಿ ನೂರಾರು ದಿನಗಳು ಕಾಲ ಕಳೆಯದೇ ಹೋಗಿದ್ದಿದ್ದರೆ ಬಹುಶಃ ಶತಾಯುಷಿಗಳಾಗುತ್ತಿದ್ದರೋ ಏನೋ. ಹಾಗಿತ್ತು ಅವರ ಜೀವನಶೈಲಿ. ಯೋಗ ಸಾಧನೆ. ಆದರೆ ವಿಧಿಯಾಟವೇ ಬೇರೆ ಇತ್ತು ಬಿಡಿ. 

ಪಾತ್ರಕ್ಕೆ ಜೀವ ತುಂಬುವ ಕಲೆ ಕರಗತ
ಡಾ. ರಾಜ್ ಎಂಥದ್ದೇ ಪಾತ್ರವಾದರೂ ಸರಿ ಜೀವ ತುಂಬುವ ಪರಿ ಇತ್ತಲ್ಲ, ಅದು ಬೇರೆ ಯಾರಿಗೂ ಅಷ್ಟು ಸುಲಭವಲ್ಲ. ಪೌರಾಣಿಕ ಪಾತ್ರವಿರಲಿ, ದಾರಿ ತಪ್ಪಿದ ಮಗನಂಥ ಚಿತ್ರದಲ್ಲಿ ನಟಿಸಿದ ಕಳ್ಳನ ಪಾತ್ರವಾದರೂ ಸರಿ. ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ... ಅಂತ ಹಾಕಿದ ಹೆಜ್ಜೆ ಇಂದಿಗೂ ಮರೆಯಲು ಸಾಧ್ಯವಿಲ್ಲ. ಅಷ್ಟೇ ಅಲ್ಲ ಭಾರತದಲ್ಲಿ ಹಾಸು ಹೊಕ್ಕಾಗಿರುವ ಜಾತಿ ಪದ್ಧತಿ ಬಗ್ಗೆ ಒಂದಿಷ್ಟು ಜನರನ್ನು ಚಿಂತಿಸುವಂತೆ ಮಾಡಿದ ಸಾರ್ಥಕತೆ ಈ ಹಾಡಿಗಿದೆ. ಅಷ್ಟೇ ಬಂಗಾರದ ಮನುಷ್ಯನಂಥ ಸಿನಿಮಾ ನೋಡಿ ಅದೆಷ್ಟು ಜನರು ಮಣ್ಣಿಗೆ ಮರಳಿದರೋ, ಯಾರಿಗ್ಗೊತ್ತು? 

ಹಾಡಿರುವ ಅರ್ಥಪೂರ್ಣ ಹಾಡಿಗೂ ಜೀವ ತುಂಬಿದ ಅಣ್ಣಾವ್ರ ಹಾಡುಗಳು ಎಂದೆಂದಿಗೂ ಪ್ರಸ್ತುತ. ಮನಸ್ಸಿಗೆ ಮುದ ನೀಡುವ, ಸೋತ ಮನಸ್ಸಿಗೆ ಸಾಂತ್ವಾನ ಹೇಳುವ, ಭಕ್ತಿಯಲ್ಲಿ ಮಿಂದೇಳಿಸುವ ಸಾಮರ್ಥ್ಯ ಕರುನಾಡ ಗಾಯಕ ಅಣ್ಣಾವ್ರಿಗಿತ್ತು. ಇವತ್ತಿಗೂ ಅವರ ಧ್ವನಿಯಲ್ಲಿನ ಹಾಡುಗಳನ್ನು ಕೇಳಿದರೆ ಮನಸ್ಸಿಗೆ ಏನೋ ಮುದ ಸಿಗುತ್ತದೆ. ಮತ್ತೆ ಕೇಳಬೇಕೆಂದು ಮನಸ್ತು ಹಾತೊರೆಯುತ್ತದೆ. ಜೀವನದಲ್ಲಿ ಭರವಸೆ ಮೂಡುತ್ತದೆ. ಆ ಧ್ವನಿಗೆ ಎಲ್ಲರನ್ನೂ ಸೆಳೆಯುವ ಆಯಸ್ಕಾಂತಿಯ ಶಕ್ತಿ ಇದೆ. 

ಎಲ್ಲದಕ್ಕಿಂತ ಹೆಚ್ಚಾಗಿ ನಡೆ, ನುಡಿ ಹಾಗು ಅಭಿನಯವನ್ನು ಡಾ.ರಾಜ್‌ಕುಮಾರ್ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದ ಪರಿ. ಅಭಿಮಾನಿಗಳನ್ನು ದೇವರೆಂದೇ ಭಾವಿಸುತ್ತಿದ್ದ ಈ ನಟ ಸಾರ್ವಭೌಮ, ಯಾವತ್ತೂ ಅಭಿಮಾನಿಗಳನ್ನು ಅದೇ ರೀತಿ ನೋಡಿಕೊಂಡಿದ್ದರು. ಪ್ರತೀ ಸಂದರ್ಭದಲ್ಲೂ ಹಾಗೆಯೇ ಸಂಭೋದಿಸುತ್ತಿದ್ದರು.  

ತಮ್ಮ ಜೀವನದ ಕಡೆ ಕಡೆಗೆ ನಟಿಸಿದ ಆಕಸ್ಮಿಕ, ಜೀವನಚೈತ್ರದಂಥ ಈಗಿನ ಕಾಲದ ಕಥೆಯಿದ್ದ ಚಿತ್ರಗಳಾಗಲಿ, ಅಥವಾ ಅವರ ವೃತ್ತಿ ಜೀವನದ ಆರಂಭದಲ್ಲಿ ನಟಿಸಿದ ಬೇಡರ ಕಣ್ಣಪ್ಪ, ಸತ್ಯ ಹರಿಶ್ಚಂದ್ರ, ಭಕ್ತ ಪ್ರಹ್ಲಾದ, ಬಭ್ರುವಾಹನದಂಥ ಪೌರಾಣಿಕ ಪಾತ್ರಗಳ ನಟನೆಯಾಗಲಿ, ದಾರಿ ತಪ್ಪದ ಮಗ, ನಾನು ಕಳ್ಳ ಸೇರಿ ಹತ್ತು ಹಲವು ಚಿತ್ರಗಳಲ್ಲಿ ದ್ವಿ ಪಾತ್ರಗಳಲ್ಲಿ ನಟಿಸಿ, ಖಳನಟನ ಪಾತ್ರಕ್ಕೂ ತಾವು ಸೈ ಎಂದು ಪ್ರೂವ್ ಮಾಡಿರುವ ಚಿತ್ರಗಳೇ ಆಗಲಿ, ಡಾ.ರಾಜ್‌ಕುಮಾರ್ ಅಭಿನಯನಕ್ಕೆ ಸರಿ ಸಾಟಿಯೇ ಇಲ್ಲ, ಅವರು ಹಾಡಿರುವ ಹಾಡುಗಳು ಜೀವನಕ್ಕೆ ಸ್ಫೂತ್ರಿಯಾಗಬಲ್ಲವು. ಲಾಂಗ್ ಜರ್ನಿ ಮಾಡುವಾಗ ಅಣ್ಣಾವ್ರ ಹಾಡು ಕೇಳುತ್ತಾ ಪಯಣಿಸಿದರೆ, ದಾರಿ ಸವೆದದ್ದೇ ಗೊತ್ತಾಗೋಲ್ಲ. 

ಒಟ್ಟಿನಲ್ಲಿ ಡಾ.ರಾಜ್ ಅಂದ್ರೆ ಕನ್ನಡದ ಅಸ್ಮಿತೆ. ಎಂದೆಂದಿಗೂ ಮರೆಯದ ಮಾಣಿಕ್ಯ. ಸ್ಪೂರ್ತಿ, ಕನ್ನಡಿಗರ ಶಕ್ತಿ. ಎಷ್ಟೇ ತಲೆಮಾರು ಕಳೆದರೂ ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆಯುವ ಏಕೈಕ ನಟ. 

Latest Videos
Follow Us:
Download App:
  • android
  • ios