ಹಿಜಾಬ್ ಧರಿಸಿರುವ ಮಹಿಳೆಯನ್ನು ಭಾರತದ ಪ್ರಧಾನಿಯಾಗಿ ನೋಡಲು ಬಯಸುವೆ ಎಂದು ವಿವಾದಿತ ಮುಸ್ಲಿಂ ನಾಯಕ, ಹೈದರಾಬಾದ್‌ ಲೋಕಸಭಾ ಕ್ಷೇತ್ರದಿಂದ ಮತ್ತೆ ಕಣಕ್ಕಿಳಿದಿರುವ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.

ಹೈದಾರಾಬಾದ್‌: ಹಿಜಾಬ್ ಧರಿಸಿರುವ ಮಹಿಳೆಯನ್ನು ಭಾರತದ ಪ್ರಧಾನಿಯಾಗಿ ನೋಡಲು ಬಯಸುವೆ ಎಂದು ವಿವಾದಿತ ಮುಸ್ಲಿಂ ನಾಯಕ, ಹೈದರಾಬಾದ್‌ ಲೋಕಸಭಾ ಕ್ಷೇತ್ರದಿಂದ ಮತ್ತೆ ಕಣಕ್ಕಿಳಿದಿರುವ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ. ಈ ಮೂಲಕ ಮುಸ್ಲಿಂ ಮಹಿಳೆಯೊಬ್ಬರು ಭಾರತದ ಪ್ರಧಾನಿಯಾಗಬೇಕು ಎಂಬ ಆಸೆಯನ್ನು ಒವೈಸಿ ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ. ಅಲ್ ಇಂಡಿಯಾ ಮಜ್ಲಿಸ್ ಇತೆಹದುಲ್ ಮುಸ್ಲಿಮೀನ್ ( AIMIM)ಪಕ್ಷದ ಅಧ್ಯಕ್ಷರೂ ಆಗಿರುವ ಒವೈಸಿ, ಬಿಹಾರದ ಕಿಶನ್ ಗಂಜ್ ಲೋಕಸಭಾ ಕ್ಷೇತ್ರದಲ್ಲಿ ತನ್ನ ಎಐಎಂಐಎಂ ಪಕ್ಷದಿಂದ ಕಣಕ್ಕಿಳಿದಿರುವ ಅಭ್ಯರ್ಥಿ, ಅಖ್ತರುಲ್ ಇಮಾನ್ ಪರ ಚುನಾವಣಾ ಪ್ರಚಾರ ನಡೆಸಿದರು. 

ಪ್ರಸ್ತುತ ನಾಲ್ಕು ದಿನಗಳ ಬಿಹಾರ ಪ್ರವಾಸದಲ್ಲಿರುವ ಅಸಾದುದ್ದೀನ್ ಒವೈಸಿ, ಕಿಶನ್‌ ಗಂಜ್‌ನ ಅಭ್ಯರ್ಥಿ ಅಖ್ತರುಲ್ ಇಮಾನ್ ಪರ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಮತ ಯಾಚಿಸಿದರು. ಅಖ್ತರುಲ್ ಪರ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಎಐಎಂಐಎಂ ನಾಯಕ, ತಾನು ಹಿಜಾಬ್ ಧರಿಸಿರುವ ಮಹಿಳೆಯನ್ನು ಭಾರತದ ಪ್ರಧಾನಿಯಾಗಿ ನೋಡಲು ಬಯಸುವೆ ಎಂದು ಹೇಳಿದರು. 

23 ಕೋಟಿ ಆಸ್ತಿ ಇದ್ರು ಸ್ವಂತ ಕಾರಿಲ್ಲ, 2 ಲಕ್ಷದ ಗನ್ ಇದೆ: ಇಲ್ಲಿದೆ ಒವೈಸಿ ಪ್ರಾಪರ್ಟಿ ಡಿಟೇಲ್ಸ್

ರೌಟಾದಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ ಒವೈಸಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮುಸ್ಲಿಂ ಮಹಿಳೆಯರ ಹಿಜಾಬ್ ಧರಿಸುವ ಸ್ವಾತಂತ್ರ್ಯವನ್ನು ಬಿಜೆಪಿ ಕಿತ್ತುಕೊಳ್ಳಲು ಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, ಈ ಬಗ್ಗೆ ಹಾಲಿ ಕಿಶನ್ ಗಂಜ್ ಸಂಸದರಾಗಿರುವ ಕಾಂಗ್ರೆಸ್‌ನ ಮೊಹಮ್ಮದ್ ಜಾವೇದ್ ಮೌನವಾಗಿರುವುದೇಕೆ ಎಂದು ಪ್ರಶ್ನೆ ಮಾಡಿದರು. ಹಿಜಾಬ್ ವಿರೋಧಿಸುವ ಕ್ರಮವನ್ನು ಖಂಡಿಸಿದ ಅವರು ತಾವು ಹಿಜಾಬ್, ಮುಸುಕು ಹಾಗೂ ಚಾದರ ಧರಿಸುವ ಮುಸ್ಲಿಂ ಮಹಿಳೆಯರ ಹಕ್ಕನ್ನು ರಕ್ಷಿಸುವುದಾಗಿ ಹೇಳಿದರು. 

ಕಿಶನ್ ಗಂಜ್ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಹಾಲಿ ಸಂಸದ ಮೊಹಮ್ಮದ್ ಜಾವೇದ್ ಅವರಿಗೆ ಮತ್ತೆ ಟಿಕೆಟ್ ನೀಡಿದೆ. ಮತ್ತೊಂದೆಡೆ ಇಲ್ಲಿ ಎನ್‌ಡಿಎ ಮೈತ್ರಿಕೂಟವೂ ಜೆಡಿಯುನ ಮುಜಾಹಿದ್ ಅಲಂ ಅವರಿಗೆ ತನ್ನ ಬೆಂಬಲ ಘೋಷಣೆ ಮಾಡಿದೆ. ಹೀಗಾಗಿ ಕಿಶನ್‌ ಗಂಜ್‌ನಲ್ಲಿ ತ್ರಿಕೋನ ಸ್ಪರ್ಧೆ ಇದ್ದು, ಎಲ್ಲರೂ ತಮ್ಮ ಗೆಲುವಿಗಾಗಿ ಭರದ ಪ್ರಚಾರದಲ್ಲಿ ತೊಡಗಿದ್ದಾರೆ. 

BJP Hyderabad Candidate: ಓವೈಸಿ ವಿರುದ್ಧ ಹೋರಾಟಕ್ಕೆ ಮಾಧವಿ ಲತಾಗೆ ಮುಸ್ಲಿಂ ಹೆಣ್ಮಕ್ಕಳ ಬೆಂಬಲ!

ಇಲ್ಲಿ ಏಪ್ರಿಲ್ 26 ರಂದು 2ನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಕಿಶನ್ ಗಂಜ್ ಸೇರಿದಂತೆ ಬಿಹಾರದ ಇನ್ನು 4 ಲೋಕಸಭಾ ಕ್ಷೇತ್ರಗಳಾದ ಕತಿಹಾರ್, ಪುರ್ನಿಯಾ, ಭಗಲ್ಪುರ, ಬಂಕಾದಲ್ಲಿಯೂ ಏಪ್ರಿಲ್ 26 ರಂದು ಚುನಾವಣೆ ನಡೆಯಲಿದ್ದು, ಎಲ್ಲ 543 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಜೂನ್ 4 ರಂದು ನಡೆಯಲಿದೆ.