ಸುಧಾರಾಣಿಯ ಕ್ರಷ್‌ ಯಾರು? ಇಷ್ಟದ ಹಾಡು, ಸಿನಿಮಾ ಯಾವುದು? ಇವರ ಇನ್‌ಸ್ಪಿರೇಷನ್ ಯಾರು ಎಂಬೆಲ್ಲಾ ಪ್ರಶ್ನೆಗೆ ನಟಿ 90 ಸೆಕೆಂಡ್‌ ಚಾಲೆಂಜ್‌ನಲ್ಲಿ ಉತ್ತರಿಸಿದ್ದು ಹೀಗಿದೆ ನೋಡಿ..  

ವಯಸ್ಸು 51 ಆದರೂ ನಟಿ ಸುಧಾರಾಣಿ ಇನ್ನೂ 21ರ ಯುವತಿಯೇ. ಅದೇ ಚೆಲುವು, ಅದೇ ಮೈಮಾಟವನ್ನು ಮೆಂಟೇನ್​ ಮಾಡಿದ್ದಾರೆ ನಟಿ. ಅವರಿನ್ನೂ ಸಿಂಪಲ್​ ಬ್ಯೂಟಿ. ವಯಸ್ಸು ಎನ್ನುವುದು ಒಂದು ಸಂಖ್ಯೆಯಷ್ಟೇ ಎನ್ನುವುದು ಸುಧಾರಾಣಿ ಅವರಿಗೆ ನೋಡಿದರೆ ತಿಳಿಯುತ್ತದೆ. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು-ಶುಭಮಸ್ತುವಿನಲ್ಲಿ ಎಲ್ಲರ ಬಾಯಲ್ಲೂ ತುಳಸಿಯಮ್ಮಾನೇ ಆಗಿದ್ದಾರೆ. ರಿಯಲ್​ ಲೈಫ್​ನಲ್ಲಿ ಓರ್ವ ಮಗಳಿದ್ದರೆ, ಸೀರಿಯಲ್​ನಲ್ಲಿ ಮದುವೆಯಾದ ಮಕ್ಕಳ ಅಮ್ಮ. ಇನ್ನೇನು ಅಜ್ಜಿಯಾಗುವ ಕಾಲ. ತಮ್ಮ ಅದ್ಭುತ ನಟನೆಯಿಂದ ಮನಸೂರೆಗೊಳ್ಳುತ್ತಿದ್ದಾರೆ ನಟಿ ಸುಧಾರಾಣಿ. ಸದ್ಯ ಸೀರಿಯಲ್​ನಲ್ಲಿ ಗರ್ಭಿಣಿಯಾಗುವ ಮೂಲಕ ಬಹುದೊಡ್ಡ ಪ್ರೇಕ್ಷಕ ವರ್ಗದಿಂದ ನಟಿ ಅಸಮಾಧಾನಕ್ಕೂ ಗುರಿಯಾಗಿದ್ದಾರೆ. ಒಂದೊಳ್ಳೆ ಸಂದೇಶ ನೀಡುವ ಸಲುವಾಗಿ ಈ ಟ್ವಿಸ್ಟ್​ ಸೇರಿಸಲಾಗಿದೆ ಎನ್ನಲಾಗುತ್ತಿದ್ದರೂ ಹೆಚ್ಚಿನ ವೀಕ್ಷಕರಿಗೆ ಇದು ಇಷ್ಟವಾಗುತ್ತಿಲ್ಲ.

ಇವೆಲ್ಲಾ ತುಳಸಿಯ ಕಥೆಯಾದ್ರೆ, ರಿಯಲ್‌ ಲೈಫ್‌ನಲ್ಲಿ ಸುಧಾರಾಣಿ ಇಷ್ಟಪಡೋದು ಏನನ್ನು? 90 ಸೆಕೆಂಡ್‌ಗಳ ಚಾಲೆಂಜ್‌ನಲ್ಲಿ ನಟಿ ಇಷ್ಟಾನಿಷ್ಟ ಸೇರಿದಂತೆ ಕೆಲವೊಂದು ವಿಷಯಗಳನ್ನು ಶೇರ್‍‌ ಮಾಡಿಕೊಂಡಿದ್ದಾರೆ. ನಟಿ ಬೆಳಿಗ್ಗೆ ಎದ್ದಾಗ ಮಾಡುವ ಮೊದಲ ಕೆಲ್ಸ ಯಾವುದು ಎನ್ನುವ ಪ್ರಶ್ನೆಗೆ, ದೇವರ ಫೋಟೋ ನೋಡಿ ಕೈ ಮುಗಿಯೋದು ಎಂದಿದ್ದಾರೆ. ಸೆಲೆಬ್ರಿಟಿ ಕ್ರಷ್ ಯಾರು ಕೇಳಿದ್ರೆ ಸಹಜವಾಗಿ ಶಿವರಾಜ್‌ ಕುಮಾರ್‍‌ ಹೆಸರು ಹೇಳಿದ್ದಾರೆ. ಜೀವನದಲ್ಲಿ ಇನ್‌ಸ್ಪಿರೇಷನ್‌ ಯಾರು ಕೇಳಿದ ಪ್ರಶ್ನೆಗೆ ರತನ್‌ ಟಾಟಾ ಎಂದಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾಲಿವುಡ್‌ ನಟಿ ಮೆರಿಲ್ ಸ್ಟ್ರೀಪ್ ಇಷ್ಟ ಎಂದೂ, ಫೆವರೆಟ್‌ ಮೂವಿ ಫೇರ್‍‌ ಪ್ಲೇ ಎಂದೂ ಉತ್ತರಿಸಿದ್ದಾರೆ. ರೀಸೆಂಟ್‌ ಫೆವರೆಟ್‌ ಸಾಂಗ್‌ ಯಾವುದು ದ್ವಾಪರ ಎಂದಿದ್ದರೆ, ಎಲ್ಲೆಡೆ ಮರೆಯದೇ ತೆಗೆದುಕೊಂಡು ಹೋಗುವ ವಸ್ತು ಕನ್ನಡಕ ಎಂದಿದ್ದಾರೆ. ಶ್ರೀರಸ್ತು ಶುಭಮಸ್ತು ಮಾಧವ್‌ ಅವರ ಒಂದು ಕ್ಯಾರೆಕ್ಟರ್‍‌ ಅಳವಡಿಸಿಕೊಳ್ಳಬೇಕು ಎಂದರೆ ಅದು ಯಾವುದು ಎನ್ನುವ ಪ್ರಶ್ನೆಗೆ ನಟಿ, ಅದು ಅವರ ಕೂಲ್‌ನೆಸ್‌ ಎಂದಿದ್ದಾರೆ. ಶೂಟಿಂಗ್‌ ಸಮಯದಲ್ಲಿ ಅರ್ಜೆಂಟ್‌ ಅರ್ಜೆಂಟ್‌, ರೆಡಿ ರೆಡಿ ಅಂತಾ ಇರುತ್ತಾರೆ, ಆದರೆ ಅವರು ಮಾತ್ರ ಅದಕ್ಕೆ ಡಿಸ್ಟರ್ಬೇ ಆಗಲ್ಲ. ಕೂಲ್ ಆಗಿ ಕಾಮ್ ಆಗಿ ಇರ್ತಾರೆ. ನಾನು ಗಡಿಬಿಡಿ ಮಾಡ್ತೇನೆ. ಅವರ ಈ ಸ್ವಭಾವ ಇಷ್ಟ ಎಂದಿದ್ದಾರೆ. 

ಬೆಸ್ಟ್​ ಅತ್ತೆ ಪ್ರಶಸ್ತಿ ಪಡೆದ ಶ್ರೀರಸ್ತು ಶುಭಮಸ್ತು ತುಳಸಿ: ರಿಯಲ್​ ಮಗಳು ಅಮ್ಮನನ್ನು ನೋಡಿ ಹೇಳಿದ್ದೇನು?

 ಇನ್ನು ಸುಧಾರಾಣಿ ಅವರ ಕುರಿತು ಹೇಳುವುದಾದರೆ, ಈಕೆ ಭರತನಾಟ್ಯ ಕಲಾವಿದೆ ಕೂಡ ಹೌದು. ಭರತನಾಟ್ಯ ಮಾತ್ರವಲ್ಲದೇ ಕೂಚುಪುಡಿ ಕಲಾವಿದೆ ಕೂಡ. ಇವರು ಕನ್ನಡ ಚಿತ್ರರಂಗವಲ್ಲದೇ, ಮಲಯಾಳಂ, ತೆಲುಗು ಹಾಗೂ ತಮಿಳಿನಲ್ಲೂ ನಟಿಸಿದ್ದಾರೆ. 'ಕಿಲಾಡಿ ಕಿಟ್ಟು', 'ರಂಗನಾಯಕಿ' ಮುಂತಾದ ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿರುವ ಇವರು ಕೂಚಿಪುಡಿ ಹಾಗೂ ಭರತನಾಟ್ಯ ಕಲಾವಿದೆ. ತಮ್ಮ 13ನೇ ವಯಸ್ಸಿನಲ್ಲೇ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ನಟಿ ರಾಜ್ ನಿರ್ಮಾಣ ಸಂಸ್ಥೆಯ ಮೂಲಕವಾಗಿ ಶಿವರಾಜಕುಮಾರ್ ನಟನೆಯ 'ಆನಂದ್' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಮನ ಮೆಚ್ಚಿದ ಹುಡುಗಿ, ಆಸೆಗೊಬ್ಬ ಮೀಸೆಗೊಬ್ಬ, ಸಿರಿಗಂಧ, ಪಂಚಮವೇದ, ಮನೆದೇವ್ರು, ಅರಗಿಣಿ, ಸ್ವಾತಿ, ಅವನೇ ನನ್ನ ಗಂಡ, ಮೈಸೂರು ಮಲ್ಲಿಗೆ, ಮಿಡಿದ ಶೃತಿ, ಮಹಾಕ್ಷತ್ರಿಯ, ಅನುರಾಗ ಸಂಗಮ, ದೇವತಾ ಮನುಷ್ಯ, ಜೀವನ ಚೈತ್ರ, ಮನ ಮೆಚ್ಚಿದ ಹುಡುಗಿ, ಸಮರ, ಅಸೆಗೊಬ್ಬ ಮೀಸೆಗೊಬ್ಬ ಮುಂತಾದ ಹಲವಾರು ಯಶಸ್ವಿ ಚಿತ್ರಗಳಲ್ಲಿ ಸುಧಾರಾಣಿ ನಟಿಸಿದ್ದಾರೆ.

ಸುಧಾರಾಣಿ ಮತ್ತು ಗೋವರ್ಧನ್ ವಿವಾಹ 2000 ನೇ ಇಸವಿಯಲ್ಲಿ ನಡೆಯಿತು. 2001ರಲ್ಲಿ ಜನಿಸಿದ ಪುತ್ರಿ ನಿಧಿ ಜನಿಸಿದ್ದು, ಕಳೆದ ವರ್ಷವಷ್ಟೇ ಅವರ ಭರತನಾಟ್ಯ ರಂಗಪ್ರವೇಶ ಆಗಿದೆ. ಸುಧಾರಾಣಿಯವರು ತಮ್ಮ ಮುದ್ದಿನ ಮಗಳನ್ನು ಪ್ರೀತಿಯಿಂದ ಸುಬ್ಬಿ ಕುಟ್ಟಿ ಎನ್ನುತ್ತಾರೆ. ಸಂಗೀತ, ನೃತ್ಯದಲ್ಲಿ ಪ್ರವೀಣೇಯಾಗಿದ್ದಾರೆ. ಇದೀಗ ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ಸುಧಾರಾಣಿಯವರು ಮಗ ಅಭಿಗಾಗಿ ಡ್ರೈವಿಂಗ್​, ನೃತ್ಯ, ಇಂಗ್ಲಿಷ್​ ಎಲ್ಲಾ ಕಲಿತು ಸೀರಿಯಲ್​ ಪ್ರೇಮಿಗಳ ಮನಸ್ಸನ್ನು ಕದಿಯುತ್ತಿದ್ದಾರೆ. ಇವೆಲ್ಲಕ್ಕೂ ಭೇಷ್​ ಎಂದಿದ್ದ ಅಭಿಮಾನಿಗಳಿಗೆ ಗರ್ಭಿಣಿಯಾಗಿದ್ದು ಮಾತ್ರ ಸಹಿಸಿಕೊಳ್ಳಲು ಆಗ್ತಿಲ್ಲ. 

ಹಣವೇ ಸರ್ವಸ್ವ, ಇದೇ ಬದುಕು ಎನ್ನೋದೇ ಸತ್ಯ- ಮಕ್ಕಳಿಗೂ ಇದನ್ನೇ ಹೇಳಿಕೊಡಿ ಎಂದ ನಟಿ ನೀನಾ ಗುಪ್ತಾ!