ಚೌಕಿದಾರ್ ಚಿತ್ರಕ್ಕೆ ಬಂದ ಚೈತ್ರದ ಪ್ರೇಮಾಂಜಲಿ ನಟಿ ಶ್ವೇತಾ: ಜಗ್ಗೇಶ್ ಸ್ಟುಡಿಯೋಸ್ ಶುಭಾರಂಭ
ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶಿಸಿ, ಪೃಥ್ವಿ ಅಂಬಾರ್ ನಾಯಕನಾಗಿ ನಟಿಸುತ್ತಿರುವ ‘ಚೌಕಿದಾರ್’ ಚಿತ್ರಕ್ಕೆ ಶ್ವೇತಾ ಜತೆಯಾಗಿದ್ದಾರೆ. ಮತ್ತು ಕಳೆದ ನಾಲ್ಕು ದಶಕಗಳಿಂದ ಸ್ಯಾಂಡಲ್‌ವುಡ್‌ನಲ್ಲಿರುವ ನಟ ಜಗ್ಗೇಶ್ ಇದೀಗ ಹೊಸ ಸ್ಟುಡಿಯೋ ಆರಂಭಿಸಿದ್ದಾರೆ.
ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶಿಸಿ, ಪೃಥ್ವಿ ಅಂಬಾರ್ ನಾಯಕನಾಗಿ ನಟಿಸುತ್ತಿರುವ ‘ಚೌಕಿದಾರ್’ ಚಿತ್ರಕ್ಕೆ ಶ್ವೇತಾ ಜತೆಯಾಗಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಲು ಬಂದಿರುವ ಈ ಶ್ವೇತಾ, ಈ ಹಿಂದೆ ‘ಚೈತ್ರದ ಪ್ರೇಮಾಂಜಲಿ’, ‘ಕರ್ಪೂರದ ಗೊಂಬೆ’, ‘ಲಕ್ಷ್ಮಿ ಮಹಾಲಕ್ಷ್ಮಿ’ ಸೇರಿದಂತೆ ಹಲವು ಕನ್ನಡದ ಚಿತ್ರಗಳಲ್ಲಿ ನಚಿಸಿ ಜನಪ್ರಿಯತೆ ಪಡೆದುಕೊಂಡ ತಮಿಳು ನಟಿ. ‘ಕುಟುಂಬ’ ಇವರ ಕೊನೆಯ ಕನ್ನಡ ಚಿತ್ರವಾಗಿತ್ತು. ಈಗ ಮತ್ತೆ ‘ಚೌಕಿದಾರ್’ ಚಿತ್ರದ ಮೂಲಕ ಕನ್ನಡದ ಬೆಳ್ಳಿಪರದೆಗೆ ಆಗಮಿಸಿದ್ದಾರೆ ಶ್ವೇತಾ.
ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ವಿನೋದಿನಿ ಎಂದೇ ಗುರುತಿಸಿಕೊಂಡಿರುವ ಶ್ವೇತಾ. ಈ ಚಿತ್ರದಲ್ಲಿ ಪೃಥ್ವಿ ಅಂಬಾರ್ ಅವರಿಗೆ ನಾಯಕಿಯಾಗಿ ಧನ್ಯರಾಮ್ ಕುಮಾರ್ ನಟಿಸುತ್ತಿದ್ದಾರೆ. ಸಾಯಿ ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಚಿನ್ ಬಸ್ರೂರು ಸಂಗೀತ, ಸಿದ್ದು ಕಂಚನಹಳ್ಳಿ ಕ್ಯಾಮೆರಾ, ಪ್ರಮೋದ್ ಮರವಂತೆ, ಸಂತೋಷ್ ನಾಯಕ್, ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಚಿತ್ರಕ್ಕಿದೆ. ಬಹು ಭಾಷೆಯಲ್ಲಿಯೇ ಈ ಸಿನಿಮಾ ಮೂಡಿ ಬರುತ್ತಿದೆ. ಕಲ್ಲಹಳ್ಳಿ ಚಂದ್ರಶೇಖರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಜಗ್ಗೇಶ್ ಸ್ಟುಡಿಯೋಸ್ ಶುಭಾರಂಭ: ಕಳೆದ ನಾಲ್ಕು ದಶಕಗಳಿಂದ ಸ್ಯಾಂಡಲ್‌ವುಡ್‌ನಲ್ಲಿರುವ ನಟ ಜಗ್ಗೇಶ್ ಇದೀಗ ಹೊಸ ಸ್ಟುಡಿಯೋ ಆರಂಭಿಸಿದ್ದಾರೆ. ತನ್ನ ಹಾಗೂ ಪುತ್ರ ಯತಿರಾಜ್ ಅವರ ಬಹುಕಾಲದ ಕನಸು ನನಸಾಗಿರುವುದಕ್ಕೆ ಜಗ್ಗೇಶ್ ಹರ್ಷ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಜಗ್ಗೇಶ್ ಸಹೋದರ ಕೋಮಲ್ ನಟಿಸಿರುವ ‘ಯಲಾ ಕುನ್ನಿ’ ಸಿನಿಮಾದ ಕೆಲಸಗಳು ಈ ಸ್ಟುಡಿಯೋದಲ್ಲಾಗಿವೆ. ಜೊತೆಗೆ ಹಿಂದಿ ಹಾಗೂ ಮಲಯಾಳಂ ಸಿನಿಮಾಗಳ ವರ್ಕ್ ಇಲ್ಲಿ ನಡೆದಿದೆ.
ಕನ್ನಡಕ್ಕೆ ಬಂದ ಹೊಸ 'ಓಟಿಟಿ ಪ್ಲೇಯರ್': ಆ್ಯಪ್ ಬದಲಾಗಿ ವೆಬ್‌ಸೈಟ್‌ನಲ್ಲಿ ಸಿನಿಮಾ ನೋಡಿ!
‘ನಾನು ದುಡ್ಡಿಗಾಗಿ ಈ ಸ್ಟುಡಿಯೋ ನಿರ್ಮಾಣ ಮಾಡಲಿಲ್ಲ. ಕನ್ನಡ ಚಿತ್ರರಂಗಕ್ಕೆ ನನ್ನಿಂದಾದ ಸೇವೆ ನೀಡುವುದಕ್ಕೆ ಇದನ್ನು ಆರಂಭಿಸಿದ್ದೇನೆ. ಕೈಗೆಟಕುವ ದರ ಪಾವತಿಸಿ ಈ ಅತ್ಯಾಧುನಿಕ ಸ್ಟುಡಿಯೋದ ಪ್ರಯೋಜನ ಪಡೆಯಬಹುದು. ಚಿತ್ರೀಕರಣ ಮುಗಿದ ನಂತರ ಫೂಟೇಜ್ ತಂದು ಇಲ್ಲಿ ಕೊಟ್ಟರೆ CG ಬಿಟ್ಟು ಮಿಕ್ಕ ಎಲ್ಲ ಕೆಲಸಗಳು ಇಲ್ಲಿ ಆಗುತ್ತವೆ’ ಎಂದು ಜಗ್ಗೇಶ್ ಹೇಳಿದ್ದಾರೆ.