ನಟಿ ಅರ್ಚನಾ ಕೊಟ್ಟಿಗೆ ಕ್ರಿಕೆಟಿಗ ಶರತ್‌ರನ್ನು ವಿವಾಹವಾದರು. ಏಪ್ರಿಲ್ 23 ರಂದು ನಡೆದ ಮದುವೆಯಲ್ಲಿ ಕ್ರಿಕೆಟಿಗರು, ಚಿತ್ರನಟಿಯರು ಭಾಗವಹಿಸಿದ್ದರು. 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ', 'ಡಿಯರ್ ಸತ್ಯ' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಅರ್ಚನಾ, ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಶರತ್ ಜೊತೆ ಹೊಸ ಜೀವನ ಆರಂಭಿಸಿದ್ದಾರೆ.
ಚಂದನವನದಲ್ಲಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ (Hostel Hudugaru Bekagiddaare), ಡಿಯರ್ ಸತ್ಯಾ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿ ಮನ ಗೆದ್ದಿರುವ ಸುಂದರಿ ಅರ್ಚನಾ ಕೊಟ್ಟಿಗೆ ಕ್ರಿಕೆಟರ್ ಹಾಗೂ ಐಪಿಎಲ್ ಸ್ಟಾರ್ ಆಗಿರುವ ಶರತ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕರ್ನಾಟಕದ ವಿಕೆಟ್ಕೀಪರ್ ಮತ್ತು ಬ್ಯಾಟ್ಸಮನ್ ಆಗಿರುವ ಬಿಆರ್ ಶರತ್ (Sharath BR) ಜೊತೆ ಕೆಲ ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅರ್ಚನಾ ಕೊಟ್ಟಿಗೆ, ನಿನ್ನೆ ಆರತಕ್ಷತೆ ಕಾರ್ಯಕ್ರಮ ನಡೆದಿದ್ದು, ಇಂದು ಏಪ್ರಿಲ್ 23ರಂದು ಸಪ್ತಪದಿ ತುಳಿದಿದ್ದಾರೆ. ಅರ್ಚನಾ ಕೊಟ್ಟಿಗೆಗೆ ಶರತ್ ತಾಳಿ ಕಟ್ಟಿ, ಹಣೆಗೆ ಮುತ್ತಿಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮದುವೆಯಲ್ಲಿ ಕ್ರಿಕೇಟರ್ ಗಳು
ಬೆಂಗಳೂರಿನಲ್ಲಿ ಗುರುವಾರ ಅಂದ್ರೆ ಏಪ್ರಿಲ್ 24 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ಮ್ಯಾಚ್ ಇರೋದರಿಂದ, ಬೆಂಗಳೂರಿಗೆ ತಲುಪಿರುವ ಕ್ರಿಕೆಟರ್ ದೇವದತ್ ಪಡಿಕ್ಕಲ್ (Devadut Padikal) ಮದುವೆ ಸಮಾರಂಭದಲ್ಲಿ ಭಾಗಿಯಾಗಿ ನವದಂಪತಿಗಳಿಗೆ ಶುಭ ಕೋರಿದ್ದಾರೆ. ಅಷ್ಟೇ ಅಲ್ಲದೇ ಗುಜರಾತ್ ಟೈಟನ್ಸ್ ಆಟಗಾರ ಕನ್ನಡಿಗ ಪ್ರಸಿದ್ಧ್ ಕೃಷ್ಣ ಮತ್ತು ಪಂಜಾಬ್ ಪರ ಆಡುತ್ತಿರುವ ವೈಶಾಖ್ ವಿಜಯ್ ಕುಮಾರ್, ಆರ್‌ಸಿಬಿಯ ಆಟಗಾರ ಮನೋಜ್ ಬಂಡಾಗೆ ಹಾಗೂ ರಣಜಿ ತಂಡದ ಹಲವು ಕ್ರಿಕೆಟರ್ ಗಳು ಆಗಮಿಸಿ ಶುಭ ಕೋರಿದ್ದಾರೆ.
ಮಿಂಚಿದ ಸ್ಯಾಂಡಲ್ ವುಡ್ ನಟಿಯರು
ಆಪ್ತ ಸ್ನೇಹಿತೆಯ ಮದುವೆಯಲ್ಲಿ ಚಂದನವನದ ತಾರೆಯರು ಮಿಂಚಿದ್ದಾರ್ರೆ. ಆಶಿಕಾ ರಂಗನಾಥ್, ಖುಷಿ ರವಿ, ಅನುಷಾ ರಂಗನಾಥ್, ತೇಜಸ್ವಿನಿ ಶರ್ಮಾ, ರೋಶನಿ ಇವರೆಲ್ಲಾ ಆಪ್ತ ಸ್ನೇಹಿತೆಯರಾಗಿದ್ದು, ಮದುವೆ ಸಮಾರಂಭದಲ್ಲಿ ಮಿಂಚಿದ್ದಾರೆ. ವಧು ಅರ್ಚನಾ ಕೊಟ್ಟಿಗೆಗೆ ಮೇಕಪ್ ಮಾಡುವುದರಿಂದ ಹಿಡಿದು, ಆಕೆಯನ್ನು ಪರ್ಫೆಕ್ಟ್ ಆಗಿ ರೆಡಿ ಮಾಡುವವಲ್ಲಿವರೆಗೂ ಎಲ್ಲವನ್ನೂ ಈ ಸ್ನೇಹಿತೆಯರೇ ನೋಡಿಕೊಂಡಿದ್ದಾರೆ.
ರಿಸೆಪ್ಶನ್ ನಲ್ಲಿ ಭಾಗಿಯಾದ ತಾರೆಯರು
ನಿನ್ನೆ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ತಾರೆಯರಾದ ಸಪ್ತಮಿ ಗೌಡ, ಅಮೃತಾ ಐಯ್ಯಂಗಾರ್, ಸಾನ್ಯಾ ಐಯ್ಯರ್, ಆಶಿಕಾ ರಂಗನಾಥ್, ಅರ್ಚನಾ ಜೋಯಸ್, ನವೀನ್ ಶಂಕರ್, ಹಿತಾ ಚಂದ್ರಶೇಖರ್, ಸಾನ್ವಿ ಸುದೀಪ್, ರೋಶನಿ ಸೇರಿ ಹಲವಾರು ತಾರೆಯರು ಭಾಗಿಯಾಗಿದ್ದರು.
ಯಾವೆಲ್ಲಾ ಸಿನಿಮಾಗಳಲ್ಲಿ ನಟಿಸಿದ್ದಾರೆ ಅರ್ಚನಾ
ಅರ್ಚನಾ (Archana Kottige) ಕೊಟ್ಟಿಗೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ಅರಣ್ಯಕಾಂಡ, ವಾಸು ನಾನ್ ಪಕ್ಕಾ ಕಮರ್ಷಿಯಲ್, ಡಿಯರ್ ಸತ್ಯಾ, ಯೆಲ್ಲೋ ಗ್ಯಾಂಗ್ಸ್, ಹೊಂದಿಸಿ ಬರೆಯಿರಿ ಸೇರಿ ಹಲವಾರು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗನನ್ನೆ ಮದುವೆಯಾಗುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
