ಇತ್ತೀಚೆಗೆ ಸಾಲದ ಸುಳಿಯಲ್ಲಿ ಸಿಲುಕಿ ಸುದ್ದಿಯಲ್ಲಿದ್ದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ಇದೀಗ ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ತಮ್ಮ ಬಂಗಲೆಯನ್ನು ನಟ ರಿಷಬ್‌ ಶೆಟ್ಟಿಗೆ ಮಾರಾಟ ಮಾಡಿದ್ದಾರೆ.

 ಸುಮಾರು ಹತ್ತೂವರೆ ಕೋಟಿ ರು.ಗೆ ರಿಷಬ್‌ ಈ ಬಂಗಲೆ ಖರೀದಿಸಿದ್ದಾರೆ ಎನ್ನಲಾಗಿದೆ. ಕೊರೋನಾ ಲಾಕ್‌ಡೌನ್‌ ಆರಂಭಕ್ಕೂ ಮುನ್ನವೇ ದ್ವಾರಕೀಶ್‌ ಬಂಗಲೆ ರಿಷಬ್‌ ಹೆಸರಿನಲ್ಲಿ ರಿಜಿಸ್ಟರ್‌ ಆಗಿದೆ.

ಹನ್ನೆರಡು ಬಂಗ್ಲೆ ಮಾರಿದ ದ್ವಾರಕೀಶ್‌ ಈ ಸಲ ಮಾರಿಕೊಂಡದ್ದೇನು? 

ಈ ಹಿಂದೆ ವಿತರಕ ಜಯಣ್ಣ ಅವರಿಂದ ದ್ವಾರಕೀಶ್‌ ಪುತ್ರ ಯೋಗಿ ಹಣ ಪಡೆದು ಹಿಂತಿರುಗಿಸದ ಕಾರಣಕ್ಕೆ ಸುದ್ದಿಯಾಗಿದ್ದರು. ಈ ವೇಳೆ ಜಯಣ್ಣ ಕಡೆಯವರು ಮನೆಗೆ ಬಂದು ಗಲಾಟೆ ಎಬ್ಬಿಸಿದ್ದರು, ಹಲ್ಲೆ ಪ್ರಯತ್ನ ಮಾಡಿದ್ದರು ಎಂದೂ ದ್ವಾರಕೀಶ್‌ ಆಪಾದಿಸಿದ್ದರು. ಈ ಪ್ರಕರಣ ಇಡೀ ರಾಜ್ಯದ ಗಮನಸೆಳೆದಿತ್ತು.

ಮತ್ತೆ ಬರ್ತಿದ್ದಾರೆ 'ಗುರು ಶಿಷ್ಯರು'; ಶರಣ್ ಚಿತ್ರಕ್ಕೆ ದ್ವಾರಕೀಶ್ ಸಾಥ್!

ಸಾಲ ತೀರಿಸಲು ದ್ವಾರಕೀಶ್‌ ಎಚ್‌ಎಸ್‌ಆರ್‌ ಲೇಔಟ್‌ನ ತಮ್ಮ ಮನೆ ಮಾರಿದ್ದಾರೆ ಎನ್ನಲಾಗಿದೆ. ಹಿಂದೆ ಸ್ಯಾಂಡಲ್‌ವುಡ್‌ನಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ದ್ವಾರಕೀಶ್‌ ಈ ಬಂಗಲೆ ಖರೀದಿಸಿದ್ದರು. ಈ ಬಗ್ಗೆ ಕನ್ನಡಪ್ರಭದ ಜೊತೆಗೆ ಮಾತನಾಡಿದ ದ್ವಾರಕೀಶ್‌, ‘ಮನೆ ಮಾರಿದ್ದು ನಿಜ. ಹಿಂದೆಯೂ ಇದೇ ರೀತಿ ಮನೆಗಳನ್ನು ಮಾರಾಟ ಮಾಡಿದ್ದೆ. ಹಣ ಕೈಯಲ್ಲಿ ಚೆನ್ನಾಗಿ ಓಡಾಡ್ತಿದ್ದಾಗ ಮನೆ ಖರೀದಿ ಮಾಡುತ್ತಿದ್ದೆ. ಕಷ್ಟಬಂದಾಗ ಅದನ್ನು ಮಾರಾಟ ಮಾಡುತ್ತೇನೆ. ವ್ಯವಹಾರ ಅಂದಮೇಲೆ ಲಾಭ ನಷ್ಟಇದ್ದದ್ದೇ, ಅದಕ್ಕೆಲ್ಲ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದಿದ್ದಾರೆ.