ಹನ್ನೆರಡು ಮನೆ ಮಾರಿದ್ದೇನೆ, ಇರೋ ಇದೊಂದು ಮನೆ ಮಾರೋದೇನೂ ದೊಡ್ಡದಲ್ಲ ನಂಗೆ ಅಂತ ಮೊನ್ನೆ ಹೆಮ್ಮೆಯಿಂದಲೇ ಪತ್ರಕರ್ತರ ಎದುರು ಹೇಳಿಕೊಂಡರು ದ್ವಾರಕೀಶ್‌. ಸಿನಿಮಾ ಮಾಡಿ ಮನೆ ಮಾರುವುದು ಹೆಮ್ಮೆಯ ಸಂಗತಿಯೇನಲ್ಲ. ಅದರಲ್ಲೂ 12 ಮನೆಗಳನ್ನು ಮಾರಿದ ನಂತರವೂ ಸಿನಿಮಾ ಮಾಡುವುದು ಬುದ್ಧಿವಂತಿಕೆಯೂ ಅಲ್ಲ.

ನಾವು ಮುದುಕರು, ಮನೆಗೆ ನುಗ್ಗಿ ಗಲಾಟೆ ಮಾಡಿದ್ರು: ದ್ವಾರಕೀಶ್!

ಆದರೆ, ದ್ವಾರಕೀಶ್‌ ಬುದ್ಧಿವಂತರಲ್ಲ ಎಂದು ಭಾವಿಸಬಾರದು. ಅವರಿಗೆ ಯಾವಾಗ ಮನೆ ಮಾರಬೇಕು, ಯಾವಾಗ ಮಾರಬಾರದು ಅನ್ನುವುದು ಚೆನ್ನಾಗಿ ಗೊತ್ತು. ಅಷ್ಟೇ ಅಲ್ಲ, ಯಾವಾಗ ಜಗಳ ಆಡಬೇಕು, ಯಾವಾಗ ರಾಜಿ ಮಾಡಿಕೊಳ್ಳಬೇಕು ಅನ್ನುವುದೂ ಗೊತ್ತು ಎಂದು ವಿಷ್ಣುವರ್ಧನ್‌ ಹೇಳುತ್ತಿದ್ದರು. ಆ ಮಾತಿಗೆ ಚ್ಯುತಿ ಬಾರದಂತೆ ದ್ವಾರಕೀಶ್‌ ಕೂಡ ನಡೆದುಕೊಂಡು ಬಂದಿದ್ದಾರೆ.

ದ್ವಾರಕೀಶ್‌ ಅದೃಷ್ಟವಂತರು. ಇನ್ನೇನು ಅವರ ಕತೆ ಮುಗಿಯಿತು ಅಂತ ಚಿತ್ರರಂಗ ಭಾವಿಸುವ ಹೊತ್ತಿಗೆ ಅವರು ಯಾವುದೋ ಏಣಿ ಹತ್ತಿಕೊಂಡು ಬರುತ್ತಾರೆ. ಆಪ್ತಮಿತ್ರದಲ್ಲಿ ಅವರು ಅದನ್ನೇ ಮಾಡಿದ್ದು. ಆದರೆ ಅಂಥದ್ದು ಮತ್ತೆ ಮತ್ತೆ ಜರುಗುವುದಿಲ್ಲ ಎಂದು ಅವರಿಗೆ ಗೊತ್ತಾಗುವ ಹೊತ್ತಿಗೆ ತಡವಾಗಿತ್ತು.

ದ್ವಾರಕೀಶ್‌ ಬಗ್ಗೆ ಚಿತ್ರರಂಗಕ್ಕೆ ಯಾವ ಅಭಿಪ್ರಾಯವಿದೆ ಅಂತ ಹೇಳುವುದು ಕಷ್ಟ. ಮೊನ್ನೆ ಮೊನ್ನೆ ಅವರ ಮನೆಗೆ ಹೋಗಿ ಫೈನಾನ್ಶಿಯರ್‌ ಬೈದರು ಅನ್ನುವುದು ಸುದ್ದಿಯಾದಾಗ ಅವರ ಪರವಾಗಿ ಯಾರೂ ನಿಲ್ಲಲಿಲ್ಲ. ನಿರ್ಮಾಪಕರ ಸಂಘದವರೂ ದ್ವಾರಕೀಶ್‌ ನೆರವಿಗೆ ಬಂದದ್ದು ಸುದ್ದಿಯಾಗಲಿಲ್ಲ. ಅನೇಕರು ದ್ವಾರಕೀಶ್‌ಗೆ ಈ ವಯಸ್ಸಿನಲ್ಲಿ ಇದೆಲ್ಲ ಯಾಕೆ ಬೇಕಿತ್ತು ಅಂತ ಮಾತಾಡಿಕೊಂಡರು.

ದ್ವಾರಕೀಶ್ ಪುತ್ರನ ಕೋಟಿ ಸಾಲ; ಜಯಣ್ಣ ಸ್ಪಷ್ಟನೆ ನೀಡಿದ್ದು ಹೀಗೆ...!

ನಾವು ಇಬ್ಬರು ಮುದುಕರು ಮನೆಯಲ್ಲಿರುವಾಗ ಬಂದು ಗಲಾಟೆ ಮಾಡಿದರು ಅಂತ ದ್ವಾರಕೀಶ್‌ ಕಣ್ಣೀರು ಹಾಕಿದರು. ಕುಳ್ಳ ಕರ್ನಾಟಕವನ್ನು ಮೂರು ನಾಲ್ಕು ದಶಕಗಳ ಕಾಲ ನಗಿಸಿದವರು. ಅವರು ಅಳಬಾರದು ಅಂತ ಕೆಲವರಿಗಾದರೂ ಅನ್ನಿಸಿರಬಹುದು. ಆದರೆ ವ್ಯಾಪಾರದಲ್ಲಿ ಪಡೆದುಕೊಂಡ ಹಣ ವಾಪಸ್ಸು ಕೊಡುವುದು ಜವಾಬ್ದಾರಿ. ಕಣ್ಣೀರಿಗೆ ಸಾಲ ಬಿಡಿ, ಬಡ್ಡಿಯೂ ಕರಗುವುದಿಲ್ಲ.

ಆಯಷ್ಮಾನ್‌ ಭವ ಚಿತ್ರ ನೋಡಿದವರು ಅದು ಈ ಜಮಾನಕ್ಕಿಂತ ಮೂವತ್ತು ವರ್ಷ ಹಿಂದಿದೆ ಅಂದರು. ಎರಡನೆಯ ದಿನವೇ ಪ್ರೇಕ್ಷಕರು ಅತ್ತ ತಲೆ ಹಾಕಲಿಲ್ಲ. ದ್ವಾರಕೀಶ್‌ ಐಡಿಯಾಗಳು ಎಕ್ಸ್‌ಪೈರ್‌ ಆಗಿ ಬಹಳ ಕಾಲವಾಯಿತು ಅನ್ನುವುದು ಅವರಿಗೂ ಗೊತ್ತಿದೆ. ಆದರೂ ಒಂದು ಸಿನಿಮಾ ಮಾಡಿಯೇ ಸಿದ್ಧ, ಅಲ್ಲಿಗೆ ಐವತ್ತಾಗುತ್ತದೆ ಅಂತ ಎಂಬತ್ತಕ್ಕೆ ಎರಡೇ ವರ್ಷ ಬಾಕಿಯಿರುವ ಬಂಗ್ಲೆ ಶಾಮರಾವ್‌ ದ್ವಾರಕಾನಾಥ್‌ ಆಸೆಪಟ್ಟಿದ್ದರೇನೋ?

ಈಗಂತೂ ದ್ವಾರಕೀಶ್‌ ಸಾಲ ಕೊಟ್ಟವರ ಮೇಲೆಯೇ ಪೊಲೀಸು ಕಂಪ್ಲೇಂಟ್‌ ಕೊಟ್ಟಿದ್ದಾರೆ. ಕಾನೂನು ಪ್ರಕಾರ ಸಾಲ ವಸೂಲಿ ಮಾಡಲಿ, ಕೋರ್ಟು ಹೇಳಿದರೆ ಮನೆ ಮಾರುತ್ತೇನೆ ಅಂತ ಹೇಳುತ್ತಿದ್ದಾರೆ. ಚಿತ್ರರಂಗ ನಡೆಯುತ್ತಿರುವುದು ಬಾಯಿಮಾತಿನ ಮೇಲೆಯೇ ಹೊರತು, ಸಾಕ್ಷಿಸಬೂಬುಗಳನ್ನು ನಂಬಿ ಅಲ್ಲ ಅನ್ನುವುದು ದ್ವಾರಕೀಶ್‌ಗಿಂತ ಚೆನ್ನಾಗಿ ಬೇರೆ ಯಾರಿಗೆ ಗೊತ್ತಿರಲು ಸಾಧ್ಯ?

ಇಷ್ಟುದಿನ ದ್ವಾರಕೀಶ್‌ ಮನೆ ಮಾರುತ್ತಿದ್ದರು. ಈ ಘಟನೆಯಲ್ಲಿ ಮಾನವನ್ನೂ ಹರಾಜು ಹಾಕಿಕೊಂಡಿದ್ದಾರೆ, ಅದರ ಜೊತೆಗೆ ಅವರ ಕುರಿತು ಇದ್ದ ನಂಬಿಕೆಯನ್ನೂ ಮಾರಿಕೊಂಡಿದ್ದಾರೆ ಎಂದು ಗಾಂಧೀನಗರಕ್ಕೆ ಅನ್ನಿಸದೇ ಇರದು. ಹೀಗಾಗಿ ಐವತ್ತರ ನಂತರ ಮತ್ತೊಂದು ಚಿತ್ರ ಬರುತ್ತದೋ ಇಲ್ಲವೋ ಎಂಬುದನ್ನು ಹೇಳುವುದು ಕಷ್ಚ.