"ಕಾಂತಾರ: ಚಾಪ್ಟರ್ 1" ಪೂರ್ವಭಾಗ ೨೦೨೫ರ ಅಕ್ಟೋಬರ್ ೨ರಂದು ಬಿಡುಗಡೆಯಾಗಲಿದೆ. ಹೊಂಬಾಳೆ ಫಿಲಂಸ್ ದಿನಾಂಕ ದೃಢಪಡಿಸಿದ್ದು, ಯಾವುದೇ ಬದಲಾವಣೆ ಇಲ್ಲ ಎಂದಿದೆ. ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರ ಕದಂಬರ ಕಾಲದ ಕಥೆಯಾಗಿದ್ದು, ನಾಗ ಸಾಧುವಿನ ಪಾತ್ರದಲ್ಲಿ ರಿಷಬ್ ಮಿಂಚಲಿದ್ದಾರೆ. ಚಿತ್ರೀಕರಣ ಆರಂಭವಾಗಿದ್ದು, ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ್ದ ‘ಕಾಂತಾರ’ ಸಿನಿಮಾದ ಪೂರ್ವಭಾಗ ‘ಕಾಂತಾರ: ಚಾಪ್ಟರ್ 1’ 2025ರ ಅಕ್ಟೋಬರ್ 2ರಂದು ಗಾಂಧಿ ಜಯಂತಿಯಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಅಧಿಕೃತ ಹೇಳಿಕೆ ಬಿಡುಗಡೆ!
"ಕಾಂತಾರಾ ಚಾಪ್ಟರ್ 1" ಬಿಡುಗಡೆ ದಿನಾಂಕವನ್ನು ಅಕ್ಟೋಬರ್ 2, 2025 ಕ್ಕೆ ನಿಗದಿಪಡಿಸಲಾಗಿದೆ ಎಂದು ಹೊಂಬಾಳೆ ಫಿಲಂಸ್ ಈಗಾಗಲೇ ಘೋಷಿಸಿತ್ತು . ಆದರೆ ಇತ್ತೀಚೆಗೆ ಈ ದಿನಾಂಕದ ಬಗ್ಗೆ ಕೆಲವು ಊಹಾಪೋಹಗಳು ಹರಡಿದ್ದವು. ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿರುವ ಹೊಂಬಾಳೆ ಫಿಲಂಸ್ ಬಿಡುಗಡೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅಧಿಕೃತವಾಗಿ ಸ್ಪಷ್ಟ ಪಡಿಸಿದೆ.
ಯೋಜನೆಯಂತೆ ಎಲ್ಲವೂ ಸುಸೂತ್ರವಾಗಿ ಸಾಗುತ್ತಿದೆ. ಹಿಂದಿನ "ಕಾಂತಾರ" ಚಿತ್ರದ ಯಶಸ್ಸಿನ ನಂತರ "ಕಾಂತಾರ ಚಾಪ್ಟರ್ 1" ಸಹ ಪ್ರೇಕ್ಷಕರನ್ನು ಮತ್ತಷ್ಟು ಆಳವಾದ ಕಥೆ, ಸಂಸ್ಕೃತಿ ಮತ್ತು ದೈವಿಕ ಲೋಕಕ್ಕೆ ಕರೆದೊಯ್ಯಲಿದೆ. ನಿಮ್ಮ ಕಾತುರಕ್ಕೆ ತಕ್ಕಂತೆ ಚಿತ್ರವೂ ಅಂದುಕೊಂಡ ದಿನಾಂಕದಂದೆ ತೆರೆಗೆ ಬರಲಿದೆ ಎಂದು ಹೊಂಬಾಳೆ ಫಿಲಂಸ್ ತಿಳಿಸಿದೆ. ಆದರಿಂದ ಯಾವುದೇ ಅನಧಿಕೃತ ಮಾಹಿತಿಗಳಿಗೆ ಕಿವಿಗೊಡದೆ ಅಧಿಕೃತ ಪ್ರಕಟಣೆಗಳನ್ನಷ್ಟೆ ನಂಬಲು ಚಿತ್ರತಂಡ ಮನವಿ ಮಾಡಿದೆ.
ರಿಷಬ್ ಶೆಟ್ಟಿ ಕಥೆ ಬರೆದು, ನಿರ್ದೇಶನ ಮಾಡಿ, ನಾಯಕನಾಗಿ ಕಾಣಿಸಿಕೊಂಡಿರುವ ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಕಾಂತಾರದ ಈ ಪೂರ್ವಕಥೆಯು ಕದಂಬರ ಆಳ್ವಿಕೆಯ ಕಾಲದಲ್ಲಿ ನಡೆಯಲಿದ್ದು, ರಿಷಬ್ ಶೆಟ್ಟಿ ಅವರು ನಾಗ ಸಾಧುವಾಗಿ ಅತೀಂದ್ರಿಯ ಶಕ್ತಿಯೊಂದಿಗೆ ಮಿಂಚಲಿದ್ದಾರೆ.
ನವೆಂಬರ್ 2023ರಲ್ಲಿ ಚಿತ್ರೀಕರಣ ಆರಂಭವಾಗಿದ್ದು, ಕುಂದಾಪುರದಲ್ಲಿ ಕದಂಬ ಸಾಮ್ರಾಜ್ಯದ ವಿಶಿಷ್ಟ ಸೆಟ್‌ನಲ್ಲಿ ಶೂಟಿಂಗ್ ನಡೆದಿದೆ. ರಿಷಬ್ ಶೆಟ್ಟಿ ಕಲರಿಪಯಟ್ಟು, ಕುದುರೆ ಸವಾರಿ, ಕತ್ತಿಯುದ್ಧದ ತರಬೇತಿ ಪಡೆದಿದ್ದಾರೆ. ಅರವಿಂದ್ ಎಸ್. ಕಶ್ಯಪ್‌ರ ಛಾಯಾಗ್ರಹಣ, ಬಿ. ಅಜನೀಶ್ ಲೋಕನಾಥ್‌ರ ಸಂಗೀತ, ಪ್ರತೀಕ್ ಶೆಟ್ಟಿಯವರ ಸಂಕಲನ ಈ ಸಿನಿಮಾಕ್ಕೆ ಮೆರಗು ತಂದಿದೆ. ಕನ್ನಡದ ಜೊತೆಗೆ ತೆಲುಗು, ಹಿಂದಿ, ತಮಿಳು, ಮಲಯಾಳಂ, ಬೆಂಗಾಲಿ ಮತ್ತು ಇಂಗ್ಲಿಷ್‌ನಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.
‘ಕಾಂತಾರ’ ಸಿನಿಮಾದ ಮೊದಲ ಭಾಗದ ಭವ್ಯ ಬಿಡುಗಡೆ!
ಕಾಂತಾರ ಸೂಪರ್ ಡೂಪರ್ ಹಿಟ್!
‘ಕಾಂತಾರ’ ಸಿನಿಮಾವು ಸೆಪ್ಟೆಂಬರ್ 30, 2022 ರಂದು ಕರ್ನಾಟಕದಾದ್ಯಂತ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಕಾಂತಾರ ಸಿನಿಮಾವು ಕರಾವಳಿ ಕರ್ನಾಟಕದ ಕೆರಾಡಿಯಲ್ಲಿ ಶೂಟಿಂಗ್ ಆಗಿದೆ. ಕಂಬಳ ಮತ್ತು ಭೂತ ಕೋಲ ಸಂಪ್ರದಾಯಗಳನ್ನು ಅದ್ಭುತವಾಗಿ ತೋರಿಸಲಾಗಿತ್ತು.
ಈ ಸಿನಿಮಾವು ಮಾನವ ಮತ್ತು ಪ್ರಕೃತಿಯ ನಡುವಿನ ಸಂಘರ್ಷವನ್ನು ತೋರಿಸುವ ಒಂದು ದಂತಕಥೆಯಾಗಿದೆ. ರಿಷಬ್ ಶೆಟ್ಟಿ ಕಂಬಳ ಚಾಂಪಿಯನ್ ಶಿವನಾಗಿ, ಕಿಶೋರ್ ಅರಣ್ಯಾಧಿಕಾರಿ ಮುರಳಿಯಾಗಿ ನಟಿಸಿದ್ದರು. ಸಪ್ತಮಿ ಗೌಡ ಅವರು ನಾಯಕಿಯಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅರವಿಂದ್ ಎಸ್. ಕಶ್ಯಪ್‌ರ ಛಾಯಾಗ್ರಹಣ, ಬಿ. ಅಜನೀಶ್ ಲೋಕನಾಥ್‌ರ ಸಂಗೀತ ಮತ್ತು ವಿಕ್ರಮ್ ಮೋರ್‌ರ ಕ್ರಿಯಾತ್ಮಕ ದೃಶ್ಯಗಳು ಚಿತ್ರಕ್ಕೆ ಜೀವ ತುಂಬಿತ್ತು. 16 ಕೋಟಿ ರೂಪಾಯಿ ಬಂಡವಾಳದಲ್ಲಿ ನಿರ್ಮಿತವಾದ ಈ ಸಿನಿಮಾವು ಮೊದಲ ವಾರದಲ್ಲೇ 38-50 ಕೋಟಿ ರೂಪಾಯಿ ಗಳಿಕೆಯೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಸೃಷ್ಟಿಸಿತ್ತು. ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆಯಾಗಿತ್ತು. ಕಾಂತಾರವು ಕರ್ನಾಟಕದ ಸಾಂಸ್ಕೃತಿಕ ಸೊಗಡನ್ನು ಜಾಗತಿಕವಾಗಿ ಪರಿಚಯಿಸುವ ಒಂದು ಮಾಸ್ಟರ್‌ಪೀಸ್ ಎನಿಸಿದೆ.


