ʼಶಾಂತಿ ಕಾಂತ್ರಿʼ ಸಿನಿಮಾ ಟೈಮ್‌ನಲ್ಲಿ ವಿ ರವಿಚಂದ್ರನ್ ಅವರ ಸುತ್ತ ಸುತ್ತಿಕೊಂಡಿದ್ದ ವಿವಾದಕ್ಕೆ ನಟ ಡಾ ರಾಜ್‌ಕುಮಾರ್ ಅವರು ಪತ್ರ ಬರೆದು ತಣ್ಣಗಾಗಿಸಿದ್ದರು. ಈ ಪತ್ರ ಈಗ ವೈರಲ್ ಆಗ್ತಿದೆ.
ʼಶಾಂತಿ ಕಾಂತ್ರಿʼ ಸಿನಿಮಾ ರಿಲೀಸ್ ಟೈಮ್‌ನಲ್ಲಿ ನಟ ವಿ ರವಿಚಂದ್ರನ್ ಅವರು ಕನ್ನಡಿಗರ ಬಗ್ಗೆ ವಿರೋಧವಾಗಿ ಮಾತನಾಡಿದಾಗ ಡಾ ರಾಜ್‌ಕುಮಾರ್ ಅವರೇ ಸಹಾಯಕ್ಕೆ ಬಂದಿದ್ದರು ಎಂಬ ಪೋಸ್ಟ್ ವೈರಲ್ ಆಗ್ತಿದೆ. “ನಾನು ಏನೂ ಮಾತನಾಡದೆ, ಸುಮ್ಮನೆ ವಿವಾದ ಸೃಷ್ಟಿ ಮಾಡಿದ್ದರು. ಆಗ ನನ್ನ ತಂದೆಗೆ ಬೇಸರ ಆಗಿತ್ತು” ಎಂದು ವಿ ರವಿಚಂದ್ರನ್ ಅವರೇ ಸಂದರ್ಶನವೊಣದರಲ್ಲಿ ಹೇಳಿರುವ ಪೋಸ್ಟ್ ಕೂಡ ವೈರಲ್ ಆಗ್ತಿದೆ. ಈ ರೀತಿ ವಿವಾದ ಎದ್ದಾಗ ಡಾ ರಾಜ್‌ಕುಮಾರ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬರೆದ ಪತ್ರವೊಂದು ವೈರಲ್ ಆಗ್ತಿದೆ.
ಮಲ್ಲಿಕಾರ್ಜುನ್ ಮೇಟಿ ಅವರು ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ʼಶಾಂತಿ ಕಾಂತ್ರಿʼ ಸಿನಿಮಾ ಸಿನಿಮಾ ಕುರಿತ ವಿವಾದದ ಬಗ್ಗೆ ಮಾತನಾಡಿದ್ದಾರೆ.
ʼಶಾಂತಿ ಕಾಂತ್ರಿʼ ಸಿನಿಮಾ ಬಿಡುಗಡೆಯ ಕಾಲಕ್ಕೆ ರವಿಚಂದ್ರನ್ ಅವರು ಕನ್ನಡಿಗರಿಗೆ ಸಿನಿಮಾ ನೋಡಲು ಬರುವುದಿಲ್ಲ ಎಂದು ಒಂದು ಮಾತು ಆಡಿದ್ದರು. ಅದೇ ದೊಡ್ಡ ಸುದ್ದಿಯಾಗಿತ್ತು. ಆಗ ರವಿಚಂದ್ರನ್ ಅವರ ರಕ್ಷಣೆಗೆ ಬಂದವರು ರಾಜ್ ಅವರು. ಒಂದು ಪತ್ರಿಕಾ ಹೇಳಿಕೆಯನ್ನು ನೀಡಿ, ವಿವಾದವನ್ನು ತಣ್ಣಗಾಗಿಸಿದರು.
ನಟ ಡಾ ರಾಜ್‌ಕುಮಾರ್ ಪೋಸ್ಟ್ ಏನು?
ಕನ್ನಡ ಚಿತ್ರರಂಗದಲ್ಲಿ ಶ್ರೀ ಎನ್ ವೀರಾಸ್ವಾಮಿಯವರು ಹಿರಿಯ ವಿತರಕರು, ನಿರ್ಮಾಪಕರು,ಕನ್ನಡ ನೆಲದಲ್ಲೇ ಬೆಳೆದು ಸ್ಥಾನಮಾನಗಳಿಸಿದವರು. ಇದಕ್ಕೆ ಕನ್ನಡಿಗರ ಅಭಿಮಾನ, ಪ್ರೋತ್ಸಾಹಗಳೇ ಕಾರಣ. ಇವರ ಮಗನಾದ ಉದಯೋನ್ಮುಖ ನಟ ರವಿಚಂದ್ರನ್ ಕನ್ನಡದ ಬಗ್ಗೆ ಉಪೇಕ್ಷೆಯಿಂದ ಮಾತನಾಡಿದನೆಂಬ ವರದಿಯ ಪರಿಣಾಮವಾಗಿ ರಾಜ್ಯದ ನಾನಾ ಕಡೆ ಪ್ರತಿಭಟನೆಗಳಾಗುತ್ತಿವೆ. ನಮ್ಮ ನಡುವೆಯೇ ಬೆಳೆದ ಈ ತರುಣ ಕನ್ನಡಕ್ಕೆ ಅವಹೇಳನವಾಗುವಂಥ ಮಾತನಾಡಿರುವನೆಂದರೆ ನಂಬುವುದು ಕಷ್ಟ. ಆದರೆ ಯಾವುದೋ ಉದ್ವೇಗದ ಸಂದರ್ಭದಲ್ಲಿ ಹಾಗೆ ಹೇಳಿರುವುದು ನಿಜವೇ ಆಗಿದ್ದಲ್ಲಿ ಉದಾರಹೃದಯಿಗಳೂ, ಕ್ಷಮಾಶೀಲರೂ, ಸುಸಂಸ್ಕೃತರೂ ಆದ ಕನ್ನಡಿಗರು ಈ ಯುವಕನನ್ನು ಕ್ಷಮಿಸಿ. ಈಗಿನ ಹಗರಣವನ್ನು ಮುಕ್ತಾಯಗೊಳಿಸುವುದು ಕನ್ನಡ ಚಿತ್ರರಂಗದ ಹಿತದೃಷ್ಟಿಯಿಂದ ಒಳ್ಳೆಯದು. ಕನ್ನಡಿಗರು ಹೀಗೆ ಮಾಡುವರೆಂದು ನಂಬಿ ರವಿಚಂದ್ರನ್, ವೀರಾಸ್ವಾಮಿಯವರಿಗೆ ಶುಭವಾಗಲಿ ಎಂದು ಆಶಿಸುವ ಡಾ ರಾಜ್‌ಕುಮಾರ್.
“ಹಲವಾರು ವರ್ಷಗಳ ಹಿಂದೆ ರವಿಚಂದ್ರನ್‍ರವರು ಕನ್ನಡದ ಬಗ್ಗೆ ಹಗುರವಾಗಿ ಮಾತನಾಡಿದರೆಂದು ದೊಡ್ಡ ಪ್ರತಿಭಟನೆ ಪ್ರಾರಂಭವಾಗಿ ರವಿಚಂದ್ರನ್ ಅವರ ಚಲನಚಿತ್ರ ಭವಿಷ್ಯಕ್ಕೆ ಸಂಚಾಕಾರ ಒದಗಿತ್ತು. ಆ ಸಂದರ್ಭದಲ್ಲಿ ಅಣ್ಣಾವ್ರು ಕನ್ನಡಿಗರಿಗೆ ಒಂದು ಪತ್ರ ಬರೆದು ಕನ್ನಡಿಗರಲ್ಲಿ ಪ್ರತಿಭಟನೆಯನ್ನು ಕೈಬಿಡುವಂತೆ ಮನವಿ ಮಾಡಿಕೊಂಡರು ಅಣ್ಣಾವ್ರ ಮಾತಿಗೆ ಕನ್ನಡಿಗರು ಬೆಲೆ ಕೊಟ್ಟು ಪ್ರತಿಭಟನೆಯನ್ನು ನಿಲ್ಲಿಸಿದರು. ಆ ಒಂದು ಕೃತಜ್ಞತೆಯನ್ನು ರವಿಚಂದ್ರನ್ ಅವರು ಇಂದಿಗೂ ಅಣ್ಣಾವ್ರ ಕುಟುಂಬದ ಮೇಲೆ ಇರಿಸಿಕೊಂಡಿದ್ದಾರೆ” ಎಂದು ಗಂಗಾಧರ್ ಅವರು ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.
ವಿ ರವಿಚಂದ್ರನ್ ಹೇಳಿದ್ದೇನು?
“ಕನ್ನಡದ ಬಗ್ಗೆ ನಾನು ಮಾತನಾಡಿದೆ ಅಂತ ವಿವಾದ ಸೃಷ್ಟಿ ಆಯ್ತು, ಅದ್ಯಾಕೆ ಶುರು ಆಯ್ತು ಅಂತ ಗೊತ್ತಾಗಲಿಲ್ಲ. ಇವತ್ತಿಗೂ ನನಗೆ ಕಾರಣ ಗೊತ್ತಿಲ್ಲ. ನಾನು ಕನ್ನಡ ನಾಡಿನಲ್ಲಿ ಹುಟ್ಟಿ, ಬೆಳೆದಿದ್ದು. ನನಗೆ ಕನ್ನಡ ಎಲ್ಲವನ್ನೂ ಕೊಟ್ಟಿದೆ. ನನಗೆ ಪ್ರೇಮಲೋಕ ಟೈಮ್‌ನಲ್ಲಿ ಶ್ರೀದೇವಿ ಸಿನಿಮಾಕ್ಕೆ ಡೈರೆಕ್ಷನ್ ಮಾಡಿ ಅಂತ ಹೇಳಿದ್ದರು. ಬಾಲಿವುಡ್‌ನಿಂದಲೂ ಆಫರ್ ಬಂದರೂ ಕೂಡ ನಾನು ಇಲ್ಲಿಯೇ ಉಳಿದುಕೊಂಡಿದ್ದೇನೆ. ನಮ್ಮ ಮನೆಯಲ್ಲಿ ತಮಿಳು ಮಾತನಾಡಿದರೂ ಕೂಡ, ನಾವು ಎಲ್ಲಿಯೇ ಹೋದರೂ ಕನ್ನಡವನ್ನೇ ಮಾತಾಡ್ತೀನಿ” ಎಂದು ವಿ ರವಿಚಂದ್ರನ್ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
1991ರಲ್ಲಿ ʼಶಾಂತಿ ಕ್ರಾಂತಿʼ ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾಕ್ಕೆ ರವಿಚಂದ್ರನ್ ನಿರ್ದೇಶನ, ಹಂಸಲೇಖ ಸಂಗೀತ ಇತ್ತು.
