ಜನಾರ್ದನ ರೆಡ್ಡಿ ಪುತ್ರ ಕಿರೀಟಿ ನಟನೆಯ ಮೊದಲ ಸಿನಿಮಾ ಇಂದು ಅದ್ಧೂರಿಯಾಗಿ ರಿಲೀಸ್ ಆಗಿದ್ದು, ಈ ಹಿನ್ನೆಲೆಯಲ್ಲಿ ಕಿರೀಟಿ ತಮ್ಮ ಕನಸಿನ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಆರ್. ಕೇಶವಮೂರ್ತಿ
* ಮೊದಲ ಸಿನಿಮಾ ಬಿಡುಗಡೆ ಸಂಭ್ರಮ ಹೇಗಿದೆ?
ತುಂಬಾ ಖುಷಿಯಲ್ಲಿದ್ದೇನೆ. ಬಾಲ್ಯದಿಂದಲೂ ಕಾಣುತ್ತಿದ್ದ ಕನಸು ಈಗ ಈಡೇರುತ್ತಿದೆ. ಆದರೆ, ನನ್ನ ಕನಸಿನ ಮೊದಲ ಹೆಜ್ಜೆಗೆ ಜನ ಯಾವ ರೀತಿ ಸ್ಪಂದಿಸುತ್ತಾರೆ, ಸ್ವೀಕರಿಸುತ್ತಾರೆಂಬ ಕುತೂಹಲವೂ ಇದೆ ಎಂದರು ಕಿರೀಟಿ ರೆಡ್ಡಿ.
* ನೀವು ತೆರೆ ಮೇಲೆ ನೋಡಿದ ತಾರೆಗಳ ಜೊತೆಗೇ ತೆರೆ ಹಂಚಿಕೊಂಡಿದ್ದೀರಲ್ಲ?
ಇದೊಂದು ಅದ್ಭುತ ಅವಕಾಶ ಅಂದುಕೊಂಡಿದ್ದೇನೆ. ನಮ್ಮ ಚಿತ್ರದಲ್ಲಿ ನಟಿಸಿರುವ ಜೆನಿಲಿಯಾ ನಾಯಕಿಯಾಗಿ ಕಾಣಿಸಿಕೊಂಡಿದ್ದ ‘ಬೊಮ್ಮರಿಲ್ಲು’ ಸಿನಿಮಾ ಬಂದಾಗ ನಾನು ಇನ್ನೂ ಮಗು. ಈಗ ಅವರ ಜತೆಗೆ ನಟಿಸುತ್ತಿದ್ದೇನೆ. ಇನ್ನೂ ರವಿಚಂದ್ರನ್ ಅವರ ಬಗ್ಗೆ ಮಾತನಾಡುವಷ್ಟು ಅರ್ಹತೆ ಅಥವಾ ದೊಡ್ಡತನ ನನಗೆ ಇಲ್ಲ. ಅವರ ಜತೆ ಕಾಣಿಸಿಕೊಂಡಿದ್ದು ನನ್ನ ಪುಣ್ಯ.
* ಜೂನಿಯರ್ ಸಿನಿಮಾ ಯಾಕೆ ತುಂಬಾ ತಡವಾಗಿದ್ದು?
ಶೂಟಿಂಗ್ ಮಾಡುವಾಗ ನನ್ನ ಬೆನ್ನಿಗೆ ಆದ ಅಪಘಾತ ತಡ ಮಾಡಿತು. ಫೈಟ್ ಸೀನ್ ಮಾಡುವಾಗ ಬೆನ್ನು ಮೂಳೆಗೆ ಪೆಟ್ಟು ಬಿತ್ತು. 6 ತಿಂಗಳು ಚಿಕಿತ್ಸೆ. ಮತ್ತೆ 6 ತಿಂಗಳು ವಿಶ್ರಾಂತಿ. ಈ ಅಪಘಾತದಿಂದ ಹೊರಬರಕ್ಕೆ 12 ತಿಂಗಳು ತೆಗೆದುಕೊಂಡೆ. ಹೀಗಾಗಿ ತಡವಾಯಿತು.
* ಚಿತ್ರವನ್ನು ತೆಲುಗಿನಲ್ಲೂ ಬಿಡುಗಡೆ ಮಾಡುತ್ತಿರುವುದು ನೀವು ಬಳ್ಳಾರಿ ಅನ್ನೋ ಕಾರಣಕ್ಕಾ?
ಬಳ್ಳಾರಿ ಇರೋದು ಕೂಡ ಕರ್ನಾಟಕದಲ್ಲೇ. ನಾನೂ ಕನ್ನಡಿಗನೇ. ಆದರೆ, ನಮ್ಮ ಚಿತ್ರದ ನಿರ್ಮಾಪಕರು ಆಂಧ್ರದವರು. ಹೀಗಾಗಿ ಕನ್ನಡದ ಜತೆಗೆ ತೆಲುಗು ಭಾಷೆಗೆ ಮಾಡೋಣ ಅಂದರು. ಮುಂದೆ ಬೇರೆ ಭಾಷೆಯಲ್ಲೂ ಬರಲಿದೆ. ನನ್ನ ಚಿತ್ರ ಯಾವ ಭಾಷೆಯಲ್ಲೂ ಬಂದರೂ ನಾನು ಕನ್ನಡದವನೇ.
* ಮೊದಲ ಚಿತ್ರದಲ್ಲಿ ನೀವು ನಿಮ್ಮಲ್ಲಿ ಕಂಡುಕೊಂಡ ಪ್ಲಸ್- ಮೈನಸ್‌ಗಳೇನು?
ಈ ಬಗ್ಗೆ ನಾನೇ ಹೇಳಿಕೊಂಡರೆ ತಪ್ಪಾಗುತ್ತದೆ. ಸಿನಿಮಾ ನೋಡಿ ಜನ ಹೇಳಬೇಕು. ಜನ ಏನೇ ಹೇಳಿದರೂ ಒಪ್ಪುತ್ತೇನೆ.
* ನಿಮ್ಮ ಡ್ಯಾನ್ಸ್ ಜೂ.ಎನ್‌ಟಿಆರ್‌ಗೆ ಕಂಪೇರ್ ಮಾಡುತ್ತಿದ್ದಾರಲ್ಲ?
‘ಜನತಾ ಗ್ಯಾರೇಜ್’ ಚಿತ್ರದಲ್ಲಿ ‘ಪಕ್ಕಾ ಲೋಕಲ್’ ಹಾಡಿನಲ್ಲಿ ಜೂ.ಎನ್‌ಟಿಆರ್ ಹಾಕಿರೋ ಸ್ಟೆಪ್ಸ್ ಹಾಗೂ ವೈರಲ್ ವೈಜಯಂತಿ ಹಾಡಿನಲ್ಲಿ ನಾನು ಮಾಡಿರೋ ಡ್ಯಾನ್ಸ್ ಕಂಪೇರ್ ಮಾತನಾಡುತ್ತಿದ್ದಾರೆ. ನಾನು ಅವರಷ್ಟು ದೊಡ್ಡವನಲ್ಲ. ಪ್ರಯತ್ನ ಮಾಡಿದ್ದೇನೆ. ಡ್ಯಾನ್ಸ್ ಅಂದ್ರೆ ನನಗೆ ಪ್ರಾಣ.
* ಶ್ರೀಮಂತ ರಾಜಕಾರಣಿ ಮಕ್ಕಳು ಸಿನಿಮಾ ಹೀರೋ ಆಗೋದು ಸುಲಭನಾ?
ಅವಕಾಶ ಸುಲಭವಾಗಿ ಸಿಗುತ್ತದೆ. ಸಿಕ್ಕಿರೋ ಅವಕಾಶವನ್ನು ನಿಲ್ಲಿಸಿಕೊಳ್ಳುವುದಕ್ಕೆ ಹೋರಾಟ ಮಾಡಬೇಕಾಗುತ್ತದೆ. ಪ್ರತಿಭೆ ಇದ್ದರೆ ಹೋರಾಟದಲ್ಲಿ ಗೆಲ್ಲುತ್ತೇವೆ. ತೆರೆ ಮೇಲೆ ನಿಲ್ಲಲು ಫ್ಯಾಮಿಲಿ ಹಿನ್ನೆಲೆ, ಶ್ರೀಮಂತಿಕೆ, ಆಸ್ತಿ, ಅಂತಸ್ತು ಯಾವುದೇ ಕೈ ಹಿಡಿಯಲ್ಲ. ಟ್ಯಾಲೆಂಟ್ ಇರಬೇಕು.
* ಜೂನಿಯರ್ ಚಿತ್ರದ ಕತೆ ಏನು?
ಒಂದು ಸಾಲಿನಲ್ಲಿ ಹೇಳಬೇಕು ಎಂದರೆ ಇದು ತಂದೆ ಮತ್ತು ಮಗನ ಕತೆ. ಜನರೇಷನ್ ಗ್ಯಾಪ್ ಕತೆ. ಪಕ್ಕಾ ಎಂಟರ್‌ಟೈನ್‌ಮೆಂಟ್ ಇರುವ ಸಿನಿಮಾ.


