ಮೈಸೂರಿನಲ್ಲಿ ಫೆಬ್ರವರಿ 15 ಮತ್ತು 16 ರಂದು ನಡೆಯಲಿರುವ ತಮ್ಮ ಮದುವೆಗೆ ನಟ ದರ್ಶನ್ ಬರುತ್ತಾರಾ ಎಂಬ ಕುತೂಹಲವನ್ನು ನಟ ಡಾಲಿ ಧನಂಜಯ್ ಹುಟ್ಟುಹಾಕಿದ್ದಾರೆ. ಚಿತ್ರರಂಗದ ಎಲ್ಲರನ್ನೂ ಆಹ್ವಾನಿಸಿದ್ದು, ದರ್ಶನ್ ಅವರನ್ನು ಭೇಟಿ ಮಾಡಿ ಆಮಂತ್ರಣ ನೀಡಲು ಪ್ರಯತ್ನಿಸುತ್ತಿರುವುದಾಗಿಯೂ ತಿಳಿಸಿದ್ದಾರೆ. ಮೈಸೂರಿನ ವಸ್ತುಪ್ರದರ್ಶನ ಆವರಣದಲ್ಲಿ ನಡೆಯಲಿರುವ ಮದುವೆಗೆ ಅಭಿಮಾನಿಗಳಿಗೂ ಮುಕ್ತ ಅವಕಾಶವಿದೆ.

ಮೈಸೂರು (ಫೆ.11): ಕನ್ನಡ ಚಿತ್ರರಂಗದ ಎಲ್ಲರನ್ನೂ ಕರೆದಿದ್ದೇನೆ. ಈಗಿನ ಪರಿಸ್ಥಿತಿಯಲ್ಲಿ ದರ್ಶನ್ ತೂಗುದೀಪ ಅವರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ, ನನ್ನ ಮದುವೆಗೆ ದರ್ಶನ್ ಅವರು ಬಂದರೆ ನನಗೆ ತುಂಬಾ ಸಂತೋಷವಾಗುತ್ತದೆ ಎಂದು ನಟ ಡಾಲಿ ಧನಂಜಯ ಹೇಳಿದ್ದಾರೆ.

ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ ಫೆ.15 ಮತ್ತು 16ರಂದು ನಡೆಯಲಿರುವ ಮದುವೆ ಕುರಿತು ಸುದ್ದಿಗೋಷ್ಠಿ ಏರ್ಪಡಿಸಿ ಮಾತನಾಡುವಾಗ ನಟ ದರ್ಶನ್‌ಗೆ ವಿವಾಹ ಆಮಂತ್ರಣ ಪತ್ರಿಕೆ ಕೊಡಲಾಗಿದೆಯೇ ಎಂಬ ಮಾಧ್ಯಮದವರ ಪ್ರಶ್ನೆ ಉತ್ತರಿಸುತ್ತಾ, ನನ್ನ ಮದುವೆಗೆ ದರ್ಶನ್ ರವರು ಬಂದ್ರೆ ನನಗೆ ತುಂಬಾ ಸಂತೋಷ. ಈಗಿನ ಪರಿಸ್ಥಿಯಲ್ಲಿ ಅವರನ್ನ ಭೇಟಿ ಮಾಡಲು ಆಗುತ್ತಿಲ್ಲ. ಕನ್ನಡ ಚಿತ್ರರಂಗದ ಎಲ್ಲರನ್ನೂ ಕರೆದಿದ್ದೇನೆ. ದರ್ಶನ್ ರವರನ್ನ ಕರೆಯಲು ಪ್ರಯತ್ನ ಮಾಡುತ್ತಿದ್ದೇನೆ. ದರ್ಶನ್ ಅವರು ಸಿಗುತ್ತಿಲ್ಲ. ಖಂಡಿತವಾಗಿ ದರ್ಶನ್ ನನ್ನ ಮದುವೆಗೆ ಬಂದರೆ ನನಗೆ ಸಂತೋಷ ಎಂದರು.

ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ ಮದುವೆಗೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮೈಸೂರಿನಲ್ಲೇ ಮದುವೆ ಆಗಬೇಕು ಎನ್ನುವುದು ನಮ್ಮ ಕನಸು. ನನ್ನ ವಿದ್ಯಾಭ್ಯಾಸ, ಚಿತ್ರರಂಗಕ್ಕೆ ಕಾಲಿಟ್ಟಿದ್ದು ಎಲ್ಲವು ಮೈಸೂರಿನಿಂದಲೇ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ಸಿಗಲಿ. ಅಭಿಮಾನಿಗಳಿಗೆ ಮುಕ್ತ ಅವಕಾಶ ನೀಡಿದ್ದೇವೆ. ಎಲ್ಲರು ನೇರವಾಗಿ ಬಂದು ನನಗೆ ಆಶೀರ್ವಾದ ಮಾಡಿ ಹೋಗಬಹುದು. ವಿದ್ಯಾಪತಿ ದ್ವಾರ ಮೂಲಕ ಅಭಿಮಾನಿಗಳಿಗೆ ಪ್ರವೇಶ ಇರುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: ಹೋಳಿಗೆ ಊಟಕ್ಕೆ ಆಹ್ವಾನ ನೀಡಿದ ಡಾಲಿ ಧನಂಜಯ, ನಟ ರಾಕ್ಷಸನ ಮದುವೆಗೆ ಹೊರಟ ಫ್ಯಾನ್ಸ್

ಚಿತ್ರರಂಗ, ರಾಜಕೀಯ ನಾಯಕರು ಎಲ್ಲರನ್ನ ಮದುವೆಗೆ ಕರೆದಿದ್ದೇನೆ. ಎಲ್ಲರು ಬಂದು ಆಶೀರ್ವಾದ ಮಾಡಬೇಕು ಎಂಬುದು ನಮ್ಮ ಬಯಕೆ. ಅಹ್ವಾನ ನೀಡಿರುವ ಬರ್ತಾರೆ ಎಂಬ ನಿರೀಕ್ಷೆ ಇದೆ. ನನಗೆ ಮಂತ್ರ ಮಾಂಗಲ್ಯ, ವಚನ ಮಾಂಗಲ್ಯ, ರಿಜಿಸ್ಟರ್ ಮದುವೆ ಆಗುವ ಆಸೆ ಇತ್ತು. ನಮ್ಮ ಕುಟುಂಬ ಸದಸ್ಯರು, ಚಿತ್ರರಂಗ, ಸ್ನೇಹಿತರು ಎಲ್ಲರಿಗೂ ಊಟ ಹಾಕಿಸಬೇಕು. ಹೀಗಾಗಿ ಒಂದೇ ವೇದಿಕೆಯಲ್ಲಿ ಎಲ್ಲರಿಗೂ ಊಟ ಹಾಕಿ ಆಶೀರ್ವಾದ ಪಡೆಯೋಣ ಎಂಬ ಆಸೆಯಿಂದ ಇಲ್ಲಿ ಮದುವೆ ಮಾಡಿಕೊಳ್ಳುತ್ತಿದ್ದೇನೆ ಎಂದು ಮಾಹಿತಿ ನೀಡಿದರು.

ಚಾಮುಂಡೇಶ್ವರಿ ದೇವಾಲಯ ಮಾದರಿಯಲ್ಲಿ ವೇದಿಕೆ ನಿರ್ಮಾಣ ಆಗುತ್ತಿದೆ. ದಕ್ಷಿಣ ಭಾರತದ ಮಾದರಿಯ ಊಟದ ವ್ಯವಸ್ಥೆ ಇದೆ. ಅಭಿಮಾನಿಗಳು, ವಿಐಪಿಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿದೆ. ಎಲ್ಲರಿಗೂ ಒಂದೇ ಮಾದರಿಯ ಊಟ ಇರುತ್ತದೆ. ಆದರೆ, ಪ್ರತ್ಯೇಕವಾಗಿ ಊಟದ ವ್ಯವಸ್ಥೆ ಮಾಡಲಾಗಿದೆ. ಎಲ್ಲರು ಮದುವೆಗೆ ಬನ್ನಿ ಹಾರೈಸಿ ಎಂದು ಮೈಸೂರಿನಲ್ಲಿ ನಟ ಡಾಲಿ ಧನಂಜಯ ಮನವಿ ಮಾಡಿದರು.

ಇದನ್ನೂ ಓದಿ: ಮದುವೆ ಆಹ್ವಾನ ಪತ್ರಿಕೆ ನೋಡಿ ನನಗೆ ಭಯವಾಗಿತ್ತು: ಡಾಲಿ ಧನಂಜಯ