ಮದುವೆ ಆಹ್ವಾನ ಪತ್ರಿಕೆ ನೋಡಿ ನನಗೆ ಭಯವಾಗಿತ್ತು: ಡಾಲಿ ಧನಂಜಯ
ಅಭಿಮಾನಿಗಳಿಲ್ಲದೆ ಯಾವುದೇ ಕಾರ್ಯಕ್ರಮ ಇಲ್ಲ. ಎಲ್ಲಾ ಅಭಿಮಾನಿಗಳು ಮದುವೆಗೆ ಬರಬೇಕು. ಮುಹೂರ್ತಕ್ಕಾದರೂ ಸರಿ, ಮದುವೆಗಾದರೂ ಸರಿ. ಅಭಿಮಾನಿಗಳಿಗೆ ಅಂತಲೇ ವಿದ್ಯಾಪತಿ ದ್ವಾರ ಅಂತ ಒಂದು ವಿಭಾಗ ಮಾಡಿದ್ದೇವೆ ಎಂದರು ಧನಂಜಯ.

ಫೆ.15 ಮತ್ತು 16ರಂದು ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ಡಾಲಿ ಧನಂಜಯ ಮತ್ತು ಪ್ರಸೂತಿ ತಜ್ಞೆ ಡಾ. ಧನ್ಯತಾ ಅವರ ವಿವಾಹ ನಡೆಯಲಿದೆ. ಈ ಕುರಿತು ಧನ್ಯತಾ ಜೊತೆ ಸುದ್ದಿಗೋಷ್ಠಿ ನಡೆಸಿದ ಧನಂಜಯ ಆಡಿದ ಮಾತುಗಳು ಇಲ್ಲಿವೆ:
ಅಭಿಮಾನಿಗಳಿಲ್ಲದೆ ಯಾವುದೇ ಕಾರ್ಯಕ್ರಮ ಇಲ್ಲ. ಎಲ್ಲಾ ಅಭಿಮಾನಿಗಳು ಮದುವೆಗೆ ಬರಬೇಕು. ಮುಹೂರ್ತಕ್ಕಾದರೂ ಸರಿ, ಮದುವೆಗಾದರೂ ಸರಿ. ಅಭಿಮಾನಿಗಳಿಗೆ ಅಂತಲೇ ವಿದ್ಯಾಪತಿ ದ್ವಾರ ಅಂತ ಒಂದು ವಿಭಾಗ ಮಾಡಿದ್ದೇವೆ. ಆ ದ್ವಾರದಲ್ಲಿ ವೇದಿಕೆವರೆಗೂ ಬಂದು ಹತ್ತಿರದಿಂದ ನೋಡಿ ಶುಭ ಹಾರೈಸಬಹುದು. ಅಭಿಮಾನಿಗಳ ವಿಭಾಗಕ್ಕೆ ಒಂದು ಹೆಸರಿಡಬೇಕಿತ್ತು. ಅದಕ್ಕೆ ಆ ದ್ವಾರಕ್ಕೆ ನನ್ನ ನಿರ್ಮಾಣದ ‘ವಿದ್ಯಾಪತಿ’ ಸಿನಿಮಾದ ಹೆಸರು ಇಟ್ಟಿದ್ದೇವೆ.
ನನಗೆ ಸರಳ ಮದುವೆ ಆಗುವ ಆಸೆ ಇತ್ತು. ಆದರೆ ಕುಟುಂಬ, ಬಂಧು ಬಳಗದ ಸಂಭ್ರಮ ಮುಖ್ಯ ಅನ್ನಿಸಿತು. ಬದುಕಲ್ಲಿ ಖುಷಿ ಕೊಡೋದು ಒಳ್ಳೆ ನೆನಪುಗಳು ಮಾತ್ರ. ನೆನಪುಗಳನ್ನು ರಚಿಸಲು ಮುಂದಾಗಿದ್ದೇನೆ. ಎಲ್ಲರ ಜೊತೆಯಲ್ಲಿ ಸಂಭ್ರಮಿಸುತ್ತಿದ್ದೇನೆ.
ದೊಡ್ಡ ದೊಡ್ಡ ಮದುವೆ ಆಹ್ವಾನ ಪತ್ರಿಕೆ ನೋಡಿ ಭಯವಾಗಿತ್ತು. ಅದಕ್ಕೆ ಸರಳವಾಗಿ ನನ್ನ ವೈಯಕ್ತಿಕ ಪತ್ರ ಅನ್ನುವಂತೆ ಮದುವೆ ಆಮಂತ್ರಣ ವಿನ್ಯಾಸ ಮಾಡಿಸಿದೆ. ಆ ಖರ್ಚುಗಳನ್ನು ಮದುವೆ ಭೋಜನ ಇತ್ಯಾದಿ ಖರ್ಚುಗಳಿಗೆ ಬಳಸುತ್ತೇನೆ. ಎಷ್ಟು ಜನ ಬಂದರೂ ಅವರಿಗೆ ಭೋಜನ ಹಾಕಲು ವ್ಯವಸ್ಥೆ ಆಗುತ್ತಿದೆ.
ಧನ್ಯತಾ ವಿದ್ಯಾರ್ಥಿ ದೆಸೆಯಲ್ಲಿರುವಾಗ ಅಭಿಯಾನಿಯಾಗಿ ನಂಗೆ ಪರಿಚಯ ಆಗಿದ್ದು. ಆಮೇಲೆ ಪ್ರಶಸ್ತಿ ಬಂದಾಗ, ಸಿನಿಮಾ ಬಂದಾಗ ಅಭಿನಂದಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಸಂದೇಶ ಕಳುಹಿಸುತ್ತಿದ್ದರು. ಒಂದು ವರ್ಷದ ಹಿಂದೆ ಮತ್ತೆ ಭೇಟಿಯಾದೆವು. ಪ್ರಯಾಣದಲ್ಲಿ ನಾವಿಬ್ಬರೂ ಜೊತೆಯಾಗಿ ಬದುಕಿದರೆ ಚೆನ್ನಾಗಿರುತ್ತದೆ ಅನ್ನಿಸಿತು. ಮನೆಯಲ್ಲಿ ಎಲ್ಲರೂ ಒಪ್ಪಿದರು.
ನನಗೆ ವಚನ ಮಾಂಗಲ್ಯ, ಮಂತ್ರ ಮಾಂಗಲ್ಯ ಗೊತ್ತು. ಆದರೆ ಅದರ ನಿಯಮಗಳನ್ನು ಪಾಲಿಸಲು ಸಾಧ್ಯ ಆಗುವುದಿಲ್ಲ ಅನ್ನಿಸಿತು. ಮಂತ್ರ ಮಾಂಗಲ್ಯಕ್ಕೆ ಇಂತಿಷ್ಟೇ ಜನ ಬರಬೇಕು ಅಂತಿದೆ. ಆದರೆ ನನ್ನ ಮದುವೆಗೆ ಕಡಿಮೆ ಅಂದರೂ ಎರಡು ಸಾವಿರ ಜನ ಬರುತ್ತಾರೆ. ಮಂತ್ರ ಮಾಂಗಲ್ಯ ಅಂತ ಹೇಳಿ ಆ ಪರಿಕಲ್ಪನೆಯನ್ನು ಕೆಡಿಸುವುದು ಸರಿಯಲ್ಲ.