ನಟ ಚೇತನ್ ಅಹಿಂಸಾ, ಡಾ. ರಾಜ್‌ಕುಮಾರ್ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದನ್ನು ಪ್ರಶ್ನಿಸಿ ಮಾಡಿದ ಟ್ವೀಟ್ ವಿವಾದಕ್ಕೆ ಕಾರಣವಾಗಿದೆ. ಅಭಿಮಾನಿಗಳಿಂದ ತೀವ್ರ ವಿರೋಧ, ಬೆದರಿಕೆಗಳು ಎದುರಾದ ಹಿನ್ನೆಲೆಯಲ್ಲಿ, ಇದು ವ್ಯಕ್ತಿಗತ ದ್ವೇಷವಲ್ಲ, ತಾರತಮ್ಯ ವಿರುದ್ಧದ ವಿಚಾರ ಹೋರಾಟ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು (ಏ.26): ಸ್ಯಾಂಡಲ್‌ವುಡ್‌ನ ನಟ ಹಾಗೂ ಸಾಮಾಜಿಕ ಹೋರಾಟಗಾರ ಅಹಿಂಸಾ ಚೇತನ್ ಅವರು ಡಾ. ರಾಜ್‌ಕುಮಾರ್ ಅವರ ಸಮಾಧಿಗೆ 2.5 ಎಕರೆ ಜಾಗ ನೀಡಿರುವ ಕುರಿತು ಮಾಡಿರುವ ಟ್ವೀಟ್ ಈಗ ದೊಡ್ಡ ವಿವಾದವಾಗಿ ಮಾರ್ಪಟ್ಟಿದೆ. ಈ ವಿಚಾರವಾಗಿ ತಮಗೆ ಬರುತ್ತಿರುವ ಬೆದರಿಕೆ ಹಾಗೂ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಚೇತನ್, ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. 'ನಾವೆಲ್ಲರೂ ಡಾ. ರಾಜ್‌ಕುಮಾರ್ ಅಭಿಮಾನಿಗಳು, ಆದರೆ ಅವರ ಹೆಸರಿನಲ್ಲಿ ದಬ್ಬಾಳಿಕೆ ಮಾಡುವುದನ್ನು ಒಪ್ಪಲಾಗದು' ಎಂದು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಘಟನೆಯ ಹಿನ್ನೆಲೆ:

ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಡಾ. ರಾಜ್‌ಕುಮಾರ್ ಅವರ ಸಮಾಧಿಗೆ ಸರ್ಕಾರ 2.5 ಎಕರೆ ಜಾಗ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಚೇತನ್ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ವಿರುದ್ಧ ನಿರ್ಮಾಪಕ ಸಾ.ರಾ. ಗೋವಿಂದು ಸೇರಿದಂತೆ ಹಲವು ರಾಜ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ನಿನ್ನೆ ಸಾ.ರಾ. ಗೋವಿಂದು ಅವರು ಚೇತನ್ ಮನೆಗೆ ಭೇಟಿ ನೀಡಿ ಎಚ್ಚರಿಕೆ ನೀಡಿದ್ದರು ಎನ್ನಲಾದ ಬೆನ್ನಲ್ಲೇ, ಇಂದು ಚೇತನ್ ಅವರ ಕುಮಾರ ಪಾರ್ಕ್ ನಿವಾಸದ ಬಳಿ ಕೆಲವು ಕನ್ನಡ ಪರ ಸಂಘಟನೆಗಳು ಚೇತನ್‌ಗೆ ಬೆಂಬಲ ಸೂಚಿಸಿ ಜಮಾಯಿಸಿದ್ದವು.

ಚೇತನ್ ಅಹಿಂಸಾ ಅವರ ವಾದವೇನು?

ಮಾಧ್ಯಮಗಳೊಂದಿಗೆ ಮಾತನಾಡಿದ ಚೇತನ್, 'ನಾನು ಡಾ. ರಾಜ್‌ಕುಮಾರ್ ಅವರನ್ನು ಟಾರ್ಗೆಟ್ ಮಾಡಿಲ್ಲ. ಅಣ್ಣಾವ್ರು ಬದುಕಿದ್ದರೆ ಅವರೇ ತಮಗೆ ಇಷ್ಟು ದೊಡ್ಡ ಜಾಗ ಬೇಕಾ ಎಂದು ಕೇಳುತ್ತಿದ್ದರು. ಅವರು ಬಹಳ ಸೌಜನ್ಯವಂತರು. ಆದರೆ, ಸಾ.ರಾ. ಗೋವಿಂದ್ ಅಂತಹ ಕೆಲವರು ರಾಜ್ ಅಭಿಮಾನಿಗಳ ಹೆಸರಿನಲ್ಲಿ ಮಹಿಳಾ ನಿಂದನೆ ಮಾಡುತ್ತಾ, ರಾಜ್ ಅವರ ಹೆಸರಿಗೆ ಮಸಿ ಬಳಿಯುತ್ತಿದ್ದಾರೆ. ನಾವು ರಾಜ್‌ಕುಮಾರ್ ಅವರಿಂದ ಸೌಜನ್ಯದಿಂದ ಹೋರಾಡುವುದನ್ನು ಕಲಿತಿದ್ದೇವೆ, ದಬ್ಬಾಳಿಕೆಯನ್ನಲ್ಲ' ಎಂದು ಗುಡುಗಿದ್ದಾರೆ.

ತಾರತಮ್ಯದ ಪ್ರಶ್ನೆ ಎತ್ತಿದ ನಟ:

'ಸರ್ಕಾರದ ಯೋಜನೆಯಡಿ ಒಬ್ಬರಿಗೆ 2.5 ಎಕರೆ ಜಾಗ ಕೊಟ್ಟು ಉಳಿದವರಿಗೆ ನೀಡದಿದ್ದರೆ ಚಿತ್ರರಂಗದಲ್ಲಿ ಗಲಾಟೆ ಆಗುತ್ತದೆ. ಈ ಹಿಂದೆಯೂ ಕೋವಿಡ್ ಸಮಯದಲ್ಲಿ ಸ್ಮಾರಕಕ್ಕೆ 5-10 ಕೋಟಿ ರೂಪಾಯಿ ಬೇಕಾ ಎಂಬ ಚರ್ಚೆ ಮಾಡಿದ್ದೆ. ಅದು ವಿಚಾರದ ಹೋರಾಟವೇ ಹೊರತು ವ್ಯಕ್ತಿಗತ ದ್ವೇಷವಲ್ಲ. ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ನನ್ನ ಟ್ವೀಟ್‌ನಲ್ಲಿ ಒಂದು ವಿಚಾರವಿದೆ, ಅದಕ್ಕೆ ನಾನು ಬದ್ಧನಾಗಿದ್ದೇನೆ' ಎಂದು ಚೇತನ್ ತಿಳಿಸಿದ್ದಾರೆ.

ಕಾನೂನು ಹೋರಾಟದ ಎಚ್ಚರಿಕೆ:

ಮನೆ ಬಳಿ ಬಂದು ಧಮ್ಕಿ ಹಾಕುವುದನ್ನು ವಿರೋಧಿಸಿದ ಚೇತನ್, 'ಸೌಜನ್ಯವಾಗಿ ಮಾತನಾಡಿದರೆ ಒಪ್ಪುತ್ತೇನೆ, ಆದರೆ ದಬ್ಬಾಳಿಕೆ ಮಾಡಿದರೆ ನಾನು ಒಪ್ಪಲ್ಲ. ಕಾನೂನು ಕೈಗೆತ್ತಿಕೊಳ್ಳುವ ಪ್ರವೃತ್ತಿ ಸರಿಯಲ್ಲ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಆದರೆ, ನನ್ನ ವಿಚಾರ ಸರಿಯಾಗಿದೆ. ಮುಂದಿನ ದಿನಗಳಲ್ಲಿ ಕಾನೂನು ಸಲಹೆಗಾರರು ಹಾಗೂ ಹೋರಾಟಗಾರರ ಜೊತೆ ಚರ್ಚಿಸಿ ಕಾನೂನುಬದ್ಧವಾಗಿ ಹೋರಾಟ ಮುಂದುವರಿಸುತ್ತೇನೆ' ಎಂದು ಸ್ಪಷ್ಟಪಡಿಸಿದರು.

ಸದ್ಯ ಚೇತನ್ ಮನೆ ಬಳಿ ಬಿಗುವಿನ ವಾತಾವರಣವಿದ್ದು, ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತೆ ಒದಗಿಸಿದ್ದಾರೆ. ವಿಚಾರವಂತಿಕೆ ಮತ್ತು ಭಾವನೆಗಳ ನಡುವಿನ ಈ ಸಂಘರ್ಷ ಈಗ ಕರ್ನಾಟಕದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

ಇವನೊಬ್ಬ ತಿರುಬೋಕಿ, ಪುಕ್ಕಲ; ಚೇತನ್ ವಿರುದ್ಧ ಸಾರಾ ಗೋವಿಂದು ವಾಗ್ದಾಳಿ | Sa Ra Govindu On Chetan Ahimsa