ಒಸಿಐ ಕಾರ್ಡ್ ರದ್ದು ಪ್ರಕರಣದಲ್ಲಿ ನಟ ಚೇತನ್‌ಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.

ಗಡಿಪಾರು ಭೀತಿಯಲ್ಲಿ ನಟ ಚೇತನ್ ಅಹಿಂಸಾ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಓವರ್ಸೀಸ್ ಸಿಟಿಜನ್ ಆಫ್ ಇಂಡಿಯಾ (ಒಸಿಐ) ಕಾರ್ಡ್ ರದ್ದು ಪ್ರಕರಣದಲ್ಲಿ ನಟ ಚೇತನ್ ಕೊಂಚ ನಿಟ್ಟುಸಿರುಬಿಡುವಂತೆ ಆಗಿದೆ. ಜೂನ್​ 2ರವರೆಗೆ ನಟನ ವಿರುದ್ಧ ಕ್ರಮ ಬೇಡ ಎಂದು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಆದೇಶ ನೀಡಿದೆ. 2018ರಲ್ಲಿ ಅವರಿಗೆ ಓವರ್ಸೀಸ್ ಸಿಟಿಜನ್ ಆಫ್ ಇಂಡಿಯಾ ಕಾರ್ಡ್ ನೀಡಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಚೇತನ್ ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್​ ಮತ್ತು ಸಾರ್ವಜನಿಕ ಹೇಳಿಕೆಗಳು ವಿವಾದ ಹುಟ್ಟುಹಾಕಿದ್ದರಿಂದ ಕೇಂದ್ರ ಸರ್ಕಾರ ಒಸಿಐ ಮಾನ್ಯತೆ ರದ್ದು ಮಾಡಿತ್ತು. ಆದರೀಗ ಕೇಂದ್ರದ ಕ್ರಮಕ್ಕೆ ಹೈಕೋರ್ಟ್​ ತಡೆ ನೀಡಿದೆ.

ಹಿಂದುತ್ವ, ಬ್ರಾಹ್ಮಣ್ಯ ಕುರಿತಾಗಿ ಅವರಾಡಿರುವ ವಿವಾದಿತ ಮಾತುಗಳು, ಭಾರತ ವಿರೋಧಿ ಚಟುವಟಿಕೆ ಮುಂತಾದ ಆರೋಪಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೋಟಿಸ್ ನೀಡಿ ಚೇತನ್​ ಅವರಿಂದ ಉತ್ತರ ಪಡೆದಿತ್ತು. ಆದರೆ ಚೇತನ್ ನೀಡಿದ್ದ ಉತ್ತರ ಸಮಾಧಾನಕರವಾಗಿಲ್ಲ ಎಂಬ ಕಾರಣವನ್ನು ನೀಡಿ ಕೇಂದ್ರ ಸರ್ಕಾರ ಒಸಿಐ ಕಾರ್ಡ್ ರದ್ದುಪಡಿಸಿತ್ತು. ಚೇತನ್ ವಾದ ಆಲಿಸದೇ ಕ್ರಮ ಕೈಗೊಂಡಿದ್ದು ಸರಿಯಲ್ಲವೆಂದು ಅವರ ಪರ ವಕೀಲರು ವಾದ ಮಂಡಿಸಿದ್ದಾರೆ. 

ರಾಮ ಜನ್ಮಭೂಮಿ ಅನ್ನೋದು ಅವೈಜ್ಞಾನಿಕ, ರಾಮ, ಕೃಷ್ಣ ಎಲ್ಲಾ ಬರೀ ಕಾಲ್ಪನಿಕ ಅಷ್ಟೇ; ನಟ ಚೇತನ್ ಅಹಿಂಸಾ

ಷರತ್ತಿನ ಮೇರೆಗೆ ಬಿಗ್ ರಿಲೀಫ್ 

ಚೇತನ್​ ನ್ಯಾಯಾಂಗದ ವಿರುದ್ಧವೂ ಆಕ್ಷೇಪಾರ್ಹ ಹೇಳಿಕೆ ನೀಡಿರುವುದರಿಂದ ಕೇಂದ್ರದ ಕ್ರಮಕ್ಕೆ ತಡೆ ನೀಡಬಾರದು ಎಂದು ಎಎಜಿ ಅರುಣ್ ಶ್ಯಾಮ್, ಎಎಸ್​​ಜಿ ಶಾಂತಿಭೂಷಣ್ ವಾದ ಮಾಡಿದರು. ಆದರೆ ಅಂತಿಮವಾಗಿ ಚೇತನ್​ ಅವರಿಗೆ ನ್ಯಾಯಾಲಯ ಷರತ್ತು ಬದ್ಧ ರಿಲೀಫ್​ ನೀಡಿದೆ. ನ್ಯಾಯಾಂಗದ ಬಗ್ಗೆ ಚೇತನ್ ಟ್ವೀಟ್ ಮಾಡುವಂತಿಲ್ಲ. ವಿಚಾರಣೆಗೆ ಬಾಕಿಯಿರುವ ಕೇಸ್​​ಗಳ ಬಗ್ಗೆ ಕೂಡ ಅವರು ಪೋಸ್ಟ್ ಮಾಡುವಂತಿಲ್ಲ ಎಂದು ಷರತ್ತು ವಿಧಿಸಿ ಹೈಕೋರ್ಟ್​ ಆದೇಶ ನೀಡಿದೆ.

ವೀಸಾ ರದ್ದು ಅತಿರೇಕ ಎಂದು ಬೆಂಬಲಕ್ಕೆ ನಿಂತ ನಟ ಕಿಶೋರ್‌ಗೆ ಚೇತನ್ ಅಹಿಂಸಾ ಹೇಳಿದ್ದೇನು?

ಓಸಿಐ ಕಾರ್ಡ್‌ ಎಂದರೇನು?

ಭಾರತೀಯ ಮೂಲದ ವಿದೇಶಿ ಪ್ರಜೆಗೆ ಈ ದೇಶವು ನೀಡಿದ ಕಾನೂನಿನ ಸ್ಥಾನಮಾನ ಓಸಿಐ. ಇದು ದೇಶದ ಶಾಶ್ವತ ಪ್ರಜೆ ಎನ್ನುವ ಸ್ಥಾನಮಾನ ಹೋಲುತ್ತದೆಯಾದರೂ, ಪೂರ್ಣ ಪ್ರಮಾಣದಲ್ಲಿ ಅದಲ್ಲ. ವೀಸಾ ಹೊಂದಿರುವವರಿಗಿಂತ ಓಸಿಐ ಕಾರ್ಡ್‌ ಹೆಚ್ಚಿನ ಪ್ರಯೋಜನ ನೀಡುತ್ತದೆ. ಈ ಸ್ಥಾನಮಾನ ಪಡೆದ ಎಲ್ಲರಿಗೂ ಓಸಿಐ ಕಾರ್ಡ್‌ ಎನ್ನುವ ದಾಖಲೆಯನ್ನು ನೀಡುತ್ತದೆ. ಅನ್‌ಲೈನಲ್‌ನಲ್ಲಿ ಅರ್ಜಿ ಸಲ್ಲಿಸಿ, ಫೋಟೋಗಳು ಹಾಗೂ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ ಶುಲ್ಕ ಪಾವತಿಸಿದರೆ ಓಸಿಐ ಕಾರ್ಡ್‌ ಸಿಗುತ್ತದೆ. ಭಾರತದಲ್ಲಿ 15 ಸಾವಿರ ಹಾಗೂ ವಿದೇಶದಲ್ಲಿ 250 ಡಾಲರ್‌ ಶುಲ್ಕ ವಿಧಿಸಲಾಗುತ್ತದೆ. ಭಾರತೀಯ ನಾಗರಿಕರು ಬಹು ಪೌರತ್ವ ಅಥವಾ ಪಾಸ್‌ಪೋರ್ಟ್‌ಗಳನ್ನು ಹೊಂದಲು ಸಾಧ್ಯವಿಲ್ಲ. ಆದರೆ, ಪೌರತ್ವವನ್ನು ಬಿಟ್ಟುಕೊಟ್ಟಾಗ ಭಾರತದ ಸಾಗರೋತ್ತರ ನಾಗರೀಕ ಎನಿಸಿಕೊಳ್ಳುವ ಮೂಲಕ ಭಾರತೀಯ ನಾಗರಿಕರಿಗೆ ಅರ್ಹವಾಗಿರುವ ಅನೇಕ ಪ್ರಯೋಜನಗಳನ್ನು ಪಡೆಯಬಹುದು.