ಇಷ್ಟಕ್ಕೂ ನಡೆದಿದ್ದೇನು?

ಎರಡು ವಾರಗಳ ಹಿಂದೆ ಬಾಲಿವುಡ್‌ನಲ್ಲಿ ‘ಬೆಲ್‌ಬಾಟಂ’ ಹೆಸರಿನ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆ ಆಗಿತ್ತು. ಅಕ್ಷಯ್‌ ಕುಮಾರ್‌ ನಾಯಕನಾಗಿ ನಟಿಸುತ್ತಿರುವ, ರೆಟ್ರೋ ಲುಕ್‌ ಅನ್ನು ಒಳಗೊಂಡ ಪೋಸ್ಟರ್‌ ನೋಡಿದ ಬಹುತೇಕರು ಇದು ಕನ್ನಡದ ‘ಬೆಲ್‌ಬಾಟಂ’ ಅಂತಲೇ ಬಹುತೇಕರು ತಿಳಿದಿದ್ದರು. ರಿಷಬ್‌ ಶೆಟ್ಟಿಹಾಗೂ ಹರಿಪ್ರಿಯಾ ಜೋಡಿಯಾಗಿ ನಟಿಸಿರುವ ಸಿನಿಮಾ ಹಿಂದಿಗೆ ರೀಮೇಕ್‌ ಆಗುತ್ತಿದೆ ಎಂದೇ ಭಾವಿಸಲಾಗಿತ್ತು. ಆದರೆ, ‘ಇದು ಯಾವುದೇ ಚಿತ್ರದ ರೀಮೇಕ್‌ ಅಲ್ಲ. ನೈಜ ಘಟನೆಗಳಿಂದ ಸ್ಫೂರ್ತಿಗೊಂಡ ಸಿನಿಮಾ’ ಎಂದು ಸ್ವತಃ ಅಕ್ಷಯ್‌ ಕುಮಾರ್‌ ಅವರೇ ಟ್ವಿಟ್ಟರ್‌ ಮೂಲಕ ಸ್ಪಷ್ಟನೆ ನೀಡಿದರು.

'ಬೆಲ್‌ಬಾಟಂ' ಕನ್ನಡದ ರಿಮೇಕ್ ಅಲ್ಲ ಅಕ್ಷಯ್ ಕುಮಾರ್! .

ಆದರೆ ಈಗ ಮತ್ತೆ ಈ ಸಿನಿಮಾ ಸುದ್ದಿಯಲ್ಲಿದೆ. ಕನ್ನಡದ ಬೆಲ್‌ ಬಾಟಂ ಚಿತ್ರದ ಕತೆಯನ್ನು ಕದ್ದು ಅವರು ಸಿನಿಮಾ ಮಾಡುತ್ತಿದ್ದಾರೆ ಅನ್ನುವುದು ಆರೋಪ.

ಹಿಂದಿ ಚಿತ್ರದ ಪೋಸ್ಟರ್‌ ನೋಡಿ ಅನುಮಾನ ಬಂತು. ಹಾಗಾಗಿ ರೈಟರ್‌ ಅಸೋಸಿಯೇಷನ್‌ನಲ್ಲಿ ಕನ್ನಡದ ಬೆಲ್‌ ಬಾಟಂನ ಸಿನಾಪ್ಸಿಸ್‌ ಸಮೇತ ನಾನು ಕೇಸು ದಾಖಲಿಸಿದ್ದೇನೆ. ಹೀಗಾಗಿಯೇ ಅಕ್ಷಯ್‌ ಕುಮಾರ್‌ ಸೇರಿದಂತೆ ಚಿತ್ರತಂಡ ನನ್ನನ್ನು ಮಾತುಕತೆಗೆ ಕರೆದಿದೆ. ಮಾತುಕತೆ ನಡೆಯುತ್ತಿದೆ. ಈ ರೀತಿ ಕತೆ ಕದ್ದು ನಮಗೆ ಮೋಸ ಮಾಡಬಾರದು. ಆ ಕಾರಣಕ್ಕೆ ನ್ಯಾಯ ಕೇಳುತ್ತಿದ್ದೇನೆ. ಈ ನಡುವೆ ಬೆಲ್‌ ಬಾಟಂ ಕತೆಯನ್ನು ತಮಗೆ ಕೊಡುವಂತೆ ಪ್ರತಿಷ್ಟಿತ ಕಂಪನಿಯೊಂದು ಮುಂದೆ ಬಂದಿದ್ದು, ನಾನು ಅಂದುಕೊಂಡಂತೆ ಆದರೆ ಅವರಿಗೆ ಕತೆ ಮಾರಿದರೂ ಅಚ್ಚರಿಯಿಲ್ಲ.-ರವಿವರ್ಮ, ನಿರ್ದೇಶಕ

ಕೇಸು ದಾಖಲಿಸಿದರಂತೆ ರವಿವರ್ಮ

ಇಂಥದ್ದೊಂದು ಆರೋಪದೊಂದಿಗೆ ನಿರ್ದೇಶಕ ರವಿವರ್ಮ ಕೇಸು ದಾಖಲಿಸಿದ್ದಾರೆ. ಅಂದಹಾಗೆ ರಿಷಬ್‌ ಶೆಟ್ಟಿಅವರ ‘ಬೆಲ್‌ಬಾಟಂ’ ಚಿತ್ರದ ಹಿಂದಿ ರೀಮೇಕ್‌ ಹಕ್ಕು ಖರೀದಿಸಿದ್ದು ಇದೇ ರವಿವರ್ಮ. ಅವರೇ ಹಿಂದಿಯಲ್ಲಿ ಈ ಸಿನಿಮಾ ಮಾಡಬೇಕಿತ್ತು. ಆದರೆ ಅಕ್ಷಯ್‌ ಕುಮಾರ್‌ ಪೋಸ್ಟರ್‌ ಬಿಡುಗಡೆಯಾದ ತಕ್ಷಣ ಅವರಲ್ಲಿ ಅನುಮಾನ ಶುರುವಾಗಿದೆ. ತಕ್ಷಣ ಕೇಸು ದಾಖಲಿಸಿದ್ದಾರೆ. ತಮ್ಮ ಗುಮಾನಿ ನಿಜ ಆಗಿದ್ದಲ್ಲಿ ಕಾನೂನು ಹೋರಾಟ ಮಾಡುವುದಾಗಿ ರವಿವರ್ಮ ಗುಟುರು ಹಾಕಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಟ ಅಕ್ಷಯ್‌ ಕುಮಾರ್‌ ಎಚ್ಚೆತ್ತುಕೊಂಡಿದ್ದಾರಂತೆ. ರವಿವರ್ಮಾ ಅವರನ್ನು ಸ್ವತಃ ಅಕ್ಷಯ್‌ ಕುಮಾರ್‌ ಅವರೇ ರಾಜಿ ಸಂಧಾನಕ್ಕೆ ಆಹ್ವಾನ ಮಾಡಿದ್ದಾರೆ.

'ಕೊನೆಗೂ ಈ ಕಿಟಕಿಯನ್ನು ನಮ್ಮನೆ ಹೆಬ್ಬಾಗಿಲು ಮಾಡ್ಬಿಟ್ಟೆ'! ರಿಷಬ್ ಶೆಟ್ಟಿ ಪಂಚ್!

ಅಕ್ಷಯ್‌ ಕುಮಾರ್‌ವರೆಗೆ ವಿಷಯ ಹೋಗಿದ್ದು ಹೇಗೆ!

ರಾಜಿ ಸಂಧಾನಕ್ಕೆ ಬಂದಿರುವ ಅಕ್ಷಯ್‌ ಕುಮಾರ್‌ ನಟಿಸುತ್ತಿರುವ ಬೆಲ್‌ಬಾಟಂಗೆ ಕನ್ನಡ ಸಿನಿಮಾ ಕತೆ ಹೋಗಿದ್ದು ಹೇಗೆ ಎನ್ನುವ ಅನುಮಾನಕ್ಕೆ ಬಾಲಿವುಡ್‌ನ ಮತ್ತೊಬ್ಬ ನಿರ್ದೇಶಕ, ನಿರ್ಮಾಪಕ ನಿಖಿಲ್‌ ಅಡ್ವಾನಿ ಹೆಸರು ಕೇಳಿ ಬರುತ್ತಿದೆ. ಯಾಕೆಂದರೆ ‘ಬೆಲ್‌ ಬಾಟಂ’ ಚಿತ್ರವನ್ನು ಅಕ್ಷಯ್‌ ಕುಮಾರ್‌ ಜತೆ ಮಾಡಬೇಕು, ಮೂಲ ಚಿತ್ರ ನೋಡಿ ಎಂದು ನಿಖಿಲ್‌ ಅಡ್ವಾನಿ ಅವರಿಗೆ ಕೊಟ್ಟಿದ್ದೇ ರವಿವರ್ಮ.

ಅಧಿಕೃತವಾಗಿ ಸಿನಿಮಾ ನೋಡಲು ತೆಗೆದುಕೊಂಡು ಅನಧಿಕೃತವಾಗಿ ಅದೇ ಚಿತ್ರವನ್ನು ಕದ್ದು ಮತ್ತೊಂದು ಕತೆ ಮಾಡಿಕೊಂಡು ಅದೇ ಹೆಸರಿನಲ್ಲಿ ಅಕ್ಷಯ್‌ ಕುಮಾರ್‌ ತಂಡ ‘ಬೆಲ್‌ ಬಾಟಂ’ ಪೋಸ್ಟರ್‌ ಬಿಡುಗಡೆ ಮಾಡಿದೆ ಎಂಬುದು ರವಿವರ್ಮ ಅವರ ಆರೋಪ. ಕನ್ನಡ ಚಿತ್ರಕ್ಕೆ ನ್ಯಾಯ ಸಿಗುತ್ತದೆಯೇ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಬೆಲ್‌ಬಾಟಂ 2 ಚಿತ್ರಕ್ಕೆ ರಿಷಬ್ ಶೆಟ್ಟಿ ನಿರ್ದೇಶಕ!