‘ಬಿಲ್ಲಾ ರಂಗ ಬಾಷ’ ಚಿತ್ರದ ನಿರ್ಮಾಪಕಿ ಚೈತನ್ಯ ರೆಡ್ಡಿ ಕಿಚ್ಚ ಸುದೀಪ್ ಜೊತೆಗಿನ ಕೆಲಸದ ಅನುಭವವನ್ನು ಹಂಚಿಕೊಂಡಿದ್ದಾರೆ. ದೊಡ್ಡ ಸ್ಟಾರ್ ನಟನನ್ನು ಹ್ಯಾಂಡಲ್ ಮಾಡುವುದು ಕಷ್ಟವಾಗಬಹುದು ಎಂದು ಕೆಲವರು ತಮ್ಮನ್ನು ಹೆದರಿಸಿದ್ದರು.

‘ನೀನೇ ದೊಡ್ಡ ಆಟಿಟ್ಯೂಡ್‌ ಇರುವ ವ್ಯಕ್ತಿ. ಅವರು ದೊಡ್ಡ ಸೂಪರ್‌ ಸ್ಟಾರ್‌. ನೀವಿಬ್ಬರು ಜೊತೆಗೆ ಸಿನಿಮಾ ಮಾಡಕ್ಕೆ ಸಾಧ್ಯನಾ ಅಂತ ಹೆದರಿಸಿದ್ದರು.’- ಹೀಗೆ ಹೇಳಿದ್ದು ನಿರ್ಮಾಪಕಿ ಚೈತನ್ಯ ರೆಡ್ಡಿ. ಅವರ ಈ ಮಾತುಗಳು ‘ಬಿಲ್ಲಾ ರಂಗ ಬಾಷ’ ಚಿತ್ರದ ಕುರಿತು. ತೆಲುಗು ಮಾಧ್ಯಮಗಳಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಚೈತನ್ಯ ರೆಡ್ಡಿ ಅವರಿಗೆ ‘ಕನ್ನಡಕ್ಕೆ ನೀವು ಹೋಗಿದ್ದು ಹೇಗೆ, ಕಿಚ್ಚ ಸುದೀಪ್‌ ಚಿತ್ರದ ನಿರ್ಮಾಪಕರಾಗಿದ್ದು ಹೇಗೆ, ಬಿಆರ್‌ಪಿ ಯಾವ ರೀತಿಯ ಸಿನಿಮಾ’ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸುತ್ತಾ ಚೈತನ್ಯಾ ರೆಡ್ಡಿ ಹೇಳಿದ ಮಾತುಗಳಿವು.

ನಾನು ಈ ಚಿತ್ರಕ್ಕೆ ನಿರ್ಮಾಪಕಿಯಾಗಿ ಬರುವುದಕ್ಕೂ ಮೊದಲೇ ಬಿಆರ್‌ಬಿ ಸಿನಿಮಾ ಶುರುವಾಗಿತ್ತು. ನಾಲ್ಕೈದು ಮಂದಿ ನಿರ್ಮಾಪಕರಿಗೆ ಅಪ್ರೋಚ್‌ ಆಗಿದ್ದರು. ಕೊನೆಗೆ ಅದು ನನ್ನ ಬಳಿಗೆ ಬಂತು. ನನಗೆ ಚಿತ್ರದ ಕತೆ ಮತ್ತು ಚಿತ್ರದ ಯೋಜನೆ ಕೇಳಿ ಖುಷಿಯಾಯಿತು. ನನಗೆ ಫ್ಯಾಂಟಸಿ, ಫ್ಯೂಚರ್‌ ಹಾಗೂ ಮೈಥಾಲಾಜಿಕಲ್‌ ಸಿನಿಮಾಗಳೆಂದರೆ ಹೆಚ್ಚು ಇಷ್ಟ.

ಇದು ಅಡ್ವೆಂಚರ್‌ ಫ್ಯಾಂಟಸಿ ಸಿನಿಮಾ ಆಗಿದ್ದರಿಂದಲೇ ನಾನು ಈ ಚಿತ್ರದ ನಿರ್ಮಾಪಕಿ ಆದೆ. ಸುದೀಪ್‌ ಚಿತ್ರವನ್ನು ನಿರ್ಮಿಸುತ್ತಿದ್ದೇವೆ ಎಂದಾಗ ದೊಡ್ಡ ಸ್ಟಾರ್‌ ನಟನನ್ನು ನೀವು ಹ್ಯಾಂಡಲ್‌ ಮಾಡಕ್ಕೆ ಆಗುತ್ತಾ ಎಂದು ಹೆದರಿಸಿದ್ದರು. ನಾನು ಚಿತ್ರದ ಪೂಜೆಗೆ ಹೋಗಿದ್ದಾಗ ಸುದೀಪ್‌ ಅವರನ್ನು ಭೇಟಿ ಮಾಡಿದ ಮೇಲೆ ಅವರ ಬಗ್ಗೆ ಇರುವ ಮಾತುಗಳು ಸುಳ್ಳು ಎನಿಸಿತು. ತುಂಬಾ ಒಳ್ಳೆಯ ವ್ಯಕ್ತಿ. ತುಂಬಾ ಕೇರ್‌ ಮಾಡುತ್ತಾರೆ.

ಕೆಲಸ ಮಾಡೋದು ನೋಡಿ ನನಗೆ ಹೆಮ್ಮೆ

ನಟರಾಗಿ ಮಾತ್ರವಲ್ಲ ಸುದೀಪ್‌ ಅವರಿಗೆ ಬಿಸಿನೆಸ್‌ ಐಡಿಗಳೂ ಸಹ ಇವೆ. ಪ್ರತಿಯೊಂದಕ್ಕೆ ಸಪೋರ್ಟ್‌ ಆಗಿ ನಿಂತಿದ್ದಾರೆ. - ಬೆಂಗಳೂರು ಬಳಿ 11 ಎಕರೆಯಲ್ಲಿ ಶೂಟಿಂಗ್‌ ಸೆಟ್‌ ಹಾಕಿದ್ದೇವೆ. ಬೇರೆ ಬೇರೆ ಭಾಷೆಯ ಕಲಾವಿದರ ಜೊತೆಗೆ ಮಾತುಕತೆ ಮಾಡುತ್ತಿದ್ದಾರೆ. ಅವರನ್ನು ಈ ಚಿತ್ರದಲ್ಲಿ ತೊಡಗಿಸಿಕೊಳ್ಳುವ ಪ್ಲಾನ್‌ ಮಾಡುತ್ತಿದ್ದಾರೆ. ದೊಡ್ಡ ಸ್ಟಾರ್‌ ನಟ ಸಿನಿಮಾ ಬಗ್ಗೆ ಈ ರೀತಿ ಯೋಚಿಸೋದು, ಕೆಲಸ ಮಾಡೋದು ನೋಡಿ ನನಗೆ ಹೆಮ್ಮೆ ಅನಿಸುತ್ತಿದೆ.