ತನ್ನನ್ನು ಚಾರ್ಲಿ ಚಿತ್ರದ ನಿರ್ದೇಶಕ ಕಿರಣ್‌ ರಾಜ್‌ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಮಾಲಾ ಪಾರ್ವತಿಗೆ ಕರೆ ಮಾಡಿ, ಹೊಸ ಚಿತ್ರಕ್ಕೆ ಡೇಟ್‌ ನೀಡಲು ಸಾಧ್ಯವಾಗಬಹುದೇ ಎಂದು ಕೇಳಿದ್ದ. ಫೇಕ್‌ ಡೈರೆಕ್ಟರ್‌ಅನ್ನು ನಿಜವಾದ ಡೈರೆಕ್ಟರ್‌ ಕಿರಣ್‌ ರಾಜ್‌ ಅವರೇ ರೆಡ್‌ ಹ್ಯಾಂಡ್‌ ಆಗಿ ಹಿಡಿದಿದ್ದಾರೆ.

ಬೆಂಗಳೂರು (ಆ. 25): ಕನ್ನಡದ ಖ್ಯಾತ ನಿರ್ದೇಶಕನ ಹೆಸರಲ್ಲಿ‌‌ ಮಲಯಾಳಂ ‌ನಟಿಗೆ ವಂಚನೆ ಮಾಡಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಮಲಯಾಳಂ ಚಿತ್ರರಂಗದ ಪ್ರಖ್ಯಾತ ನಟಿ ಮಾಲಾ ಪಾರ್ವತಿಗೆ ಇತ್ತೀಚೆಗೆ 777 ಚಾರ್ಲಿ ಚಿತ್ರದ ನಿರ್ದೇಶಕ ಕಿರಣ್‌ ರಾಜ್‌ ಹೆಸರಲ್ಲಿ ವ್ಯಕ್ತಿಯೊಬ್ಬ ಕರೆ ಮಾಡಿದ್ದ. ತಾನು 777 ಚಾರ್ಲಿ ಚಿತ್ರದ ನಿರ್ದೇಶಕ ಕಿರಣ್‌ ರಾಜ್‌ ಎಂದು ಹೇಳಿಕೊಂಡಿದ್ದ ಆತ, ಮುಂದಿನ ಚಿತ್ರಕ್ಕಾಗಿ ನಿಮ್ಮ ಡೇಟ್‌ ನೀಡುವಂತೆ ಹೇಳಿದ್ದ. 8848185488 ನಂಬರ್ ನಿಂದ ಕಿರಣ್ ರಾಜ್ ‌ಹೆಸರಲ್ಲಿ ನಟಿಗೆ ಕರೆ ಬಂದಿತ್ತು. ಆಗಸ್ಟ್‌ 20 ರಂದು ಕರೆ ಮಾಡಿದ್ದ ವ್ಯಕ್ತಿ, 18 ದಿನಗಳ ಕಾಲ್‌ ಶೀಟ್‌ ನೀಡುವಂತೆ ಕೇಳಿಕೊಂಡಿದ್. ' ಮಾತನಾಡುವ ವೇಳೆ ಪ್ರತಿ ಬಾರಿಯೂ ಮಾಮ್‌ ಎನ್ನುತ್ತಿದ್ದ ಆತ, ತಾನು ಚಿತ್ರ ನಿರ್ದೇಶನ ಮಾಡುತ್ತಿದ್ದು ಅದರಲ್ಲಿನ ಒಂದು ರೋಲ್‌ನಲ್ಲ ಮಾಲಾ ಪಾರ್ವತಿ ಅವರು ನಟಿಸಬೇಕು ಎಂದು ಬಯಸಿದ್ದ. ತನ್ನನ್ನು ತಾನು 77 ಚಾರ್ಲಿ ಚಿತ್ರದ ನಿರ್ದೇಶಕ ಕಿರಣ್‌ ರಾಜ್‌ ಎನ್ನುತ್ತಿದ್ದ' ಎಂದು ಸ್ವತಃ ಕಿರಣ್‌ ರಾಜ್‌ ಹೇಳಿದ್ದಾರೆ. ಇದಾದ ಬಳಿಕ ಮಾಲಾ ಪಾರ್ವತಿ ಅವರಿಗೆ ಈ ಕರೆಯ ಬಗ್ಗೆ ಅನುಮಾನ ಬಂದಿತ್ತು. 777 ಚಾರ್ಲಿ ಚಿತ್ರದ ಸೌಂಡ್‌ ಡಿಸೈನರ್‌ ಆಗಿದ್ದ ಹಾಗೂ ಪರಿಚಿತರೂ ಆಗಿದ್ದ ರಾಜಾಕೃಷ್ಣನ್‌ ಅವರಿಗೆ ಈ ಮಾಹಿತಿಯನ್ನು ನೀಡಿದ್ದಾರೆ. 

ಮೇಡಮ್‌ ಮಾಲಾ ಪಾರ್ವತಿ ಅವರು ರಾಜಾ ಸಾರು (ರಾಜಾಕೃಷ್ಣನ್‌) ಅವರ ಬಳಿಈ ವಿಚಾರ ಕೇಳಿದ್ದರು. ಅದಲ್ಲದೆ, ನನಗೆ ಕರೆ ಮಾಡಿದ್ದು ಯಾರು ಎನ್ನುವುದನ್ನು ತಿಳಿಸುವಂತೆ ಹೇಳಿದ್ದರು. ಅದರಂತೆ ರಾಜಾಕೃಷ್ಣನ್‌ ಅವರು ನನಗೆ ಕರೆ ಮಾಡಿ ಹೇಳಿದಾಗ ನನಗೆ ಅಚ್ಚರಿ ಕಾದಿತ್ತು. ನಾನೆಂದರೂ ಈ ರೀತಿಯ ಕರೆ ಮಾಡಿರಲಿಲ್ಲ. ಕೊನೆಗೆ ಮೇಡಮ್‌ಗೆ ಈ ವಿಚಾರವನ್ನು ಸ್ವತಃ ನಾನೇ ತಿಳಿಸಿದೆ. ಕೊನೆಗೆ, ಆ ವ್ಯಕ್ತಿಯೊಂದಿಗೆ ಕಾನ್ಫರೆನ್ಸ್‌ ಕಾಲ್‌ ಮಾಡುವಂತೆ ಹೇಳಿದೆವು. ಕೊನೆಗೆ ಮಾಲಾ ಮೇಡಮ್‌ ಆ ವ್ಯಕ್ತಿಗೆ ಕರೆ ಮಾಡಿ, ಕಾನ್ಫರೆನ್ಸ್‌ ಕಾಲ್‌ ಹಾಕಿದ್ದರು. ಅದಲ್ಲದೆ, ನಿಮ್ಮ ಡೀಟೇಲ್‌ನ ವಿವರ ಮತ್ತೊಮ್ಮೆ ನೀಡಿ ಎಂದು ಮಾಲಾ ಮೇಡಮ್‌ ಹೇಳಿದಾಗ ಆ ವ್ಯಕ್ತಿ ತಾನು ಕಿರಣ್‌ ರಾಜ್‌ ಎಂದೇ ಹೇಳಿದ್ದ. ಈ ವೇಳೆ, ನಾನು ಮಾತನಾಡಿ ಹಾಗಿದ್ದರೆ ನಾನು ಯಾರು ಎನ್ನುವ ಅರ್ಥದಲ್ಲಿ ಪ್ರಶ್ನೆ ಮಾಡಿದ್ದೆ. ನಾನು ಮಾತನಾಡಲು ಆರಂಭಿಸಿದ ಬೆನ್ನಲ್ಲಿಯೇ ಕರೆ ಕಟ್‌ ಮಾಡಿದ ಆತ. ಸ್ವಿಚ್‌ ಆಫ್‌ ಕೂಡ ಮಾಡಿಕೊಂಡ ಎಂದು ಕಿರಣ್‌ ರಾಜ್‌ ಹೇಳಿದ್ದಾರೆ.

ಅಪರಿಚಿತ ವ್ಯಕ್ತಿಯ ವಂಚನೆಯ ಬಗ್ಗೆ ಮಾಲಾ ಪಾರ್ವತಿ ತಮ್ಮ ಫೇಸ್‌ ಬುಕ್‌ ಪುಟದಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ. ಅದಲ್ಲದೆ, ಕೇರಳದ ಸೈಬರ್‌ ಕ್ರೈಂ ಪೊಲೀಸರಿಗೂ ದೂರು ನೀಡಿದ್ದಾರೆ. ಕಿರಣ್‌ ರಾಜ್‌ ಹೆಸರಲ್ಲಿ ಹಲವರಿಗೆ ಕರೆ ಮಾಡಿ ವಂಚಿಸಿದ್ದಾನೆ ಎಂದೂ ಹೇಳಲಾಗಿದೆ. ಪ್ರಮುಖವಾಗಿ ನಟಿಯರನ್ನು ಟಾರ್ಗೆಟ್‌ ಮಾಡಿ ಈತ ವಂಚಿಸಿದ್ದಾನೆ. ಇದರ ನಡುವೆ ಕಿರಣ್‌ ರಾಜ್‌ ಕೂಡ ತಮ್ಮ ಫೇಸ್‌ ಬುಕ್‌ ಪುಟದಲ್ಲಿ ಇದರ ಅಲರ್ಟ್‌ ಹಾಕಿದ್ದಾರೆ. ತಾನು ಯಾವುದೇ ಹೊಸ ಸಿನಿಮಾ ಪ್ರಾಜೆಕ್ಟ್‌ ಆರಂಭಿಸಿಲ್ಲ. ಹಾಗೇನಾದರೂ ಆರಂಭವಾಗಿದ್ದೇ ಆದಲ್ಲಿ ಅಧಿಕೃತ ಪುಟದಲ್ಲಿ ವಿವರ ನೀಡುವುದಾಗಿ ತಿಳಿಸಿದ್ದಾರೆ.

777 Charlie: ಪೈರಸಿ ತಡೆಗೆ 777 ಚಾರ್ಲಿ ತಂಡದ ವಿಶೇಷ ಪ್ರಯತ್ನ

ಮಂಗಳೂರು ಗಡಿ ಭಾಗದ ಕಾಸರಗೋಡು ಮೂಲದ ನಿರ್ದೇಶಕರಾಗಿರುವ ಕಿರಣ್‌ ರಾಜ್‌, 777 ಚಾರ್ಲಿ ಚಿತ್ರದ ಮೂಲಕ ನಿರ್ದೇಶಕರಾಗಿ ದೊಡ್ಡ ಯಶಸ್ಸು ಗಳಿಸಿದ್ದರು. ಕನ್ನಡ ಮಾತ್ರವಲ್ಲದೆ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲೂ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಇನ್ನು ಮಲಯಾಳಂ, ಹಿಂದಿ, ತಮಿಳು, ತೆಲುಗು ಸೇರಿ 100ಕ್ಕೂ ಅಧಿಕ ಸಿನಿಮಾಗಳಲ್ಲಿ‌ ನಟಿಸಿರುವ ಹಿರಿಯ ಕಲಾವಿದೆ ಮಾಲಾ ಪಾರ್ವತಿ. 'ಹಿರಿಯ ನಟಿಯಾಗಿದ್ದರೂ, ಅವರ ಗಮನಕ್ಕೆ ಬಂದ ಬೆನ್ನಲ್ಲಿಯೇ ಇಡೀ ಪ್ರಕರಣವನ್ನು ಮಾಲಾ ಪಾರ್ವತಿ ಬಹಳ ಸೂಕ್ಷ್ಮವಾಗಿ ನಿಭಾಯಿಸಿದ್ದಾರೆ. ಆದರೆ, ಯುವ ನಟಿಯರು ಈ ಟ್ರ್ಯಾಪ್‌ಗೆ ಬೀಳುವ ಸಾಧ್ಯತೆ ಅಧಿಕವಾಗಿರುತ್ತದೆ' ಎಂದು ಕಿರಣ್‌ ರಾಜ್‌ ಹೇಳಿದ್ದಾರೆ.

Rakshit Shetty: 777 ಚಾರ್ಲಿ ಚಿತ್ರಕ್ಕೆ 5 ಸ್ಟಾರ್‌ ಕೊಟ್ಟ ಮನೇಕಾ ಗಾಂಧಿ

“ನಾನು ಈ ಸಮಾಜದ ಜವಾಬ್ದಾರಿಯುತ ನಾಗರಿಕ. ಮತ್ತು, ಒಬ್ಬ ಚಲನಚಿತ್ರ ನಿರ್ಮಾಪಕನಾಗಿ, ನಾನು ಅಂತಹ ನಡವಳಿಕೆಯನ್ನು ಕ್ಷಮಿಸುವುದಿಲ್ಲ. ಯುವ ಪ್ರತಿಭೆಗಳು ಅದರಲ್ಲೂ ಹೆಣ್ಣು ಮಕ್ಕಳು ದಾರಿ ತಪ್ಪಬಾರದು. ಅದೊಂದೇ ನನ್ನ ಕಾಳಜಿ. ಅವರು ಇತರರನ್ನೂ ತಲುಪಿದ್ದಾರೆಂದು ನನಗೆ ತಿಳಿದಿದೆ. ಇಂತಹ ಕರೆಗಳನ್ನು ಎಂದಿಗೂ ಪ್ರೋತ್ಸಾಹಿಸಬಾರದು,’’ ಎಂದು ಕಿರಣ್‌ ರಾಜ್‌ ಹೇಳಿದ್ದಾರೆ.