ಸಮಾಜವಾದಿ ಪಕ್ಷದ ಸಂಸೆದೆ ಪ್ರಿಯಾ ಸರೋಜ್ ಜೊತೆ ಟೀಂ ಇಂಡಿಯಾ ಕ್ರಿಕೆಟಿಗ ರಿಂಕು ಸಿಂಗ್ ಮದುವೆ ಡಿ.4ರಂದು ನಡೆಯಲಿದೆ. ಈ ಮದುವೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಗೆ ಆಹ್ವಾನ ನೀಡಲಾಗಿದೆ.
ಲಖನೌ (ನ.14) ಟೀಂ ಇಂಡಿಯಾ ಕ್ರಿಕೆಟರ್ ರಿಂಕ್ ಸಿಂಗ್ ಮದುವೆ ಡಿಸೆಂಬರ್ 4ರಂದು ನಡೆಯಲಿದೆ. ಸಮಾಜವಾದಿ ಪಕ್ಷದ ಯುವ ಸಂಸದೆಯಾಗಿ ಗಮನ ಸೆಳೆದಿರುವ ಪ್ರಿಯಾ ಸರೋಜ್ ಜೊತೆ ವಿವಾಹ ಮಹೋತ್ಸವ ನಡೆಯಲಿದೆ. ಲಖನೌದಲ್ಲಿ ಮದುವೆ ಸಮಾರಂಭ ಆಯೋಜನೆಗೊಂಡಿದೆ. ಈಗಾಗಲೇ ಹಲವು ಗಣ್ಯರು, ಕ್ರಿಕೆಟಿಗರು, ಸಚಿವರಿಗೆ ಆಹ್ವಾನ ನೀಡಲಾಗಿದೆ. ಇದೀಗ ರಿಂಕು ಸಿಂಗ್ ಕುಟುಂಬಸ್ಥರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿಯಾಗಿ ಆಹ್ವಾನ ನೀಡಿದ್ದಾರೆ.
ರಿಂಕು ಸಿಂಗ್ ಅವರ ತಾಯಿ ಬೀನಾ ದೇವಿ, ಸಹೋದರ ಸೋನು ಸಿಂಗ್ ಮತ್ತು ಸಹೋದರಿ ನೇಹಾ ಸಿಂಗ್ ಲಕ್ನೋದಲ್ಲಿರುವ ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿ ಯೋಗಿ ಆದಿತ್ಯನಾಥ್ ಅವರಿಗೆ ವಿವಾಹ ಆಮಂತ್ರಣ ಪತ್ರಿಕೆಯನ್ನು ಹಸ್ತಾಂತರಿಸಿದರು. ಡಿಸೆಂಬರ್ 4ರಂದು ಲಕ್ನೋದ ಪ್ರತಿಷ್ಠಿತ ರಮಾಡಾ (Ramada) ಹೋಟೆಲ್ನಲ್ಲಿ ಈ ಅದ್ಧೂರಿ ವಿವಾಹ ಸಮಾರಂಭ ನಡೆಯಲಿದೆ. ಟೀಂ ಇಂಡಿಯಾ ಕ್ರಿಕೆಟಿಗರು ಹಾಗೂ ರಾಜಕೀಯ ಕ್ಷೇತ್ರದ ಪ್ರಮುಖ ಗಣ್ಯರು ಈ ಶುಭ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.
ರಿಂಕು ಸಿಂಗ್ ಮದುವೆಯಾಗಲಿರುವ ವಧು ಸಮಾಜವಾದಿ ಪಕ್ಷದ ಸಂಸದೆಯಾಗಿ ಗಮನಸೆಳೆದಿದ್ದಾರೆ. ಸಮಾಜವಾಗಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ಗೆ ಪ್ರಿಯಾ ಸರೋಜ್ ಕುಟುಂಬ ಆಹ್ವಾನ ನೀಡಿದೆ. ಇತ್ತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ರಿಂಕು ಸಿಂಗ್ ಕುಟುಂಬ ಆಹ್ವಾನ ನೀಡಿದೆ. ರಿಂಕು ಸಿಂಗ್ ಮದುವೆಯಲ್ಲಿ ರಾಜಕೀಯ ಗಣ್ಯರ ದಂಡೇ ಇರಲಿದೆ.
ನಿಶ್ಚಿತಾರ್ಥದ ಒಂದೂವರೆ ವರ್ಷದ ಬಳಿಕ ಮದುವೆ
ಕ್ರಿಕೆಟ್ ಮತ್ತು ರಾಜಕೀಯ ಕ್ಷೇತ್ರದ ಎರಡು ಯುವ ಪ್ರತಿಭೆಗಳನ್ನು ಒಂದುಗೂಡಿಸುತ್ತಿರುವ ಈ ವಿವಾಹವು ಕಳೆದ ಕೆಲವು ಸಮಯದಿಂದ ಭಾರಿ ಕುತೂಹಲ ಕೆರಳಿಸಿತ್ತು. ಕಳೆದ ವರ್ಷ ಅಂದರೆ 2025ರ ಜೂನ್ 8ರಂದು ಲಕ್ನೋದ 'ದಿ ಸೆಂಟ್ರಮ್' (The Centrum) ಹೋಟೆಲ್ನಲ್ಲಿ ರಿಂಕು ಮತ್ತು ಪ್ರಿಯಾ ಅವರ ನಿಶ್ಚಿತಾರ್ಥವು ಆಪ್ತರ ಸಮ್ಮುಖದಲ್ಲಿ ನೆರವೇರಿತ್ತು. ನಿಶ್ಚಿತಾರ್ಥ ನಡೆದ ಸುಮಾರು ಒಂದೂವರೆ ವರ್ಷಗಳ ಬಳಿಕ ಇದೀಗ ಎರಡೂ ಕುಟುಂಬಗಳು ಮದುವೆ ದಿನಾಂಕವನ್ನು ಅಂತಿಮಗೊಳಿಸಿ ಸಿದ್ಧತೆಯಲ್ಲಿ ತೊಡಗಿವೆ.
ಕೋವಿಡ್ ಸಮಯದಲ್ಲಿ ಚಿಗುರಿದ ಪ್ರೀತಿ
ತಮ್ಮ ನಿಶ್ಚಿತಾರ್ಥದ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಿಂಕು ಸಿಂಗ್, ತಮ್ಮ ಮತ್ತು ಪ್ರಿಯಾ ಅವರ ಪ್ರೇಮಕಥೆ ಶುರುವಾದ ಬಗೆಯನ್ನು ಹಂಚಿಕೊಂಡಿದ್ದರು. ಕೊರೋನಾ ಸಮಯದಲ್ಲಿ ಮುಂಬೈನಲ್ಲಿ ಐಪಿಎಲ್ ನಡೆಯುತ್ತಿದ್ದಾಗ, ಪ್ರಿಯಾ ಅವರ ಗ್ರಾಮದ ಮತದಾನಕ್ಕೆ ಸಂಬಂಧಿಸಿದ ಫ್ಯಾನ್ ಪೇಜ್ ಒಂದರಲ್ಲಿ ನಾನು ಮೊದಲ ಬಾರಿಗೆ ಅವರ ಫೋಟೋ ನೋಡಿದ್ದೆ. ಆಗಲೇ ಇವರು ನನಗೆ ಸೂಕ್ತ ಜೋಡಿ ಎನಿಸಿತ್ತು. ಆದರೆ, ಅವರಿಗೆ ಮೆಸೇಜ್ ಮಾಡಲು ಮೊದಲು ಹಿಂಜರಿದಿದ್ದೆ. ಬಳಿಕ ಅವರು ನನ್ನ ಕೆಲವು ಫೋಟೋಗಳನ್ನು ಲೈಕ್ ಮಾಡಿದಾಗ ಧೈರ್ಯ ಮಾಡಿ ಮೆಸೇಜ್ ಕಳುಹಿಸಿದೆ. ಅಲ್ಲಿಂದ ನಮ್ಮ ಮಾತುಕತೆ ಶುರುವಾಯಿತು" ಎಂದು ರಿಂಕು ತಿಳಿಸಿದ್ದರು.
2022ರ ವೇಳೆಗೆ ಪಂದ್ಯಗಳಿಗೂ ಮುನ್ನ ನಾವು ನಿಯಮಿತವಾಗಿ ಮಾತನಾಡಲು ಆರಂಭಿಸಿದೆವು, ಆಗಲೇ ನನಗೆ ಪ್ರೀತಿಯ ಅನುಭವವಾಯಿತು" ಎಂದು ರಿಂಕು ಹೇಳಿಕೊಂಡಿದ್ದರು. ಅಂದಿನಿಂದ ಪ್ರಿಯಾ ಸರೋಜ್ ಅವರು ಮೈದಾನಕ್ಕೆ ಬಂದು ರಿಂಕು ಸಿಂಗ್ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಪಂದ್ಯಗಳ ವೇಳೆ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಪ್ರಿಯಾ ಅವರು ರಿಂಕು ಪರ ಚಿಯರ್ ಮಾಡುತ್ತಿರುವುದು ಹಲವು ಬಾರಿ ಕಂಡುಬಂದಿತ್ತು.
ಮೈದಾನಕ್ಕೆ ಮರಳಲು ಸಜ್ಜಾದ ರಿಂಕು ಸಿಂಗ್:
ಮತ್ತೊಂದೆಡೆ, ಕಳೆದ ಜುಲೈನಲ್ಲಿ ನಡೆದ ಜಿಂಬಾಬ್ವೆ ಪ್ರವಾಸದ ಬಳಿಕ ಟೀಂ ಇಂಡಿಯಾದಿಂದ ದೂರವಿದ್ದ ರಿಂಕು ಸಿಂಗ್, ಇದೀಗ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳಲು ಸಜ್ಜಾಗಿದ್ದಾರೆ. ನವೆಂಬರ್ 19ರಿಂದ 29ರವರೆಗೆ ದೋಹಾದಲ್ಲಿ ನಡೆಯಲಿರುವ 'ಎಸಿಸಿ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.














