ಮನೆಯೇ ಆಫೀಸಾದರೆ? #HappyWorkfromHome!
ಇಂದು ವರ್ಕ್ ಫ್ರಮ್ ಹೋಮ್ ಡೇ ಅಂತೆ. ಮನೆಯೇ ಮಂತ್ರಾಲಯ ಹಾಗೂ ಕಾಯಕದ ಆಲಯ ಆದಾಗ, ಕೆಲಸ ಮತ್ತು ವಿರಾಮದ ಬ್ಯಾಲೆನ್ಸ್ ಮಾಡುವುದು ಹೇಗೆ?
ಕೋವಿಡ್ ಲಾಕ್‌ಡೌನ್‌ನಿಂದಾಗಿ ನಮ್ಮ ಹೆಚ್ಚಿನ ಐಟಿ ಕಂಪನಿಗಳವರು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕೊಟ್ಟಿದ್ದಾರೆ. ಇನ್ನೂ ಹಲವಾರು ಕಾರ್ಪೊರೇಟ್ ಸಂಸ್ಥೆಗಳು, ಮೊದಲೆಲ್ಲಾ ಉದ್ಯೋಗಿ ಆಫೀಸಿಗೆ ಬರದೆ ಕೆಲಸವೇ ಸಾಧ್ಯವಿಲ್ಲ ಅನ್ನುತ್ತಿದ್ದವರು ಈಗ ಹೆಚ್ಚು ಹೆಚ್ಚಾಗಿ ಮನೆಯಿಂದ ಕೆಲಸ ಎಂಬುದನ್ನು ರೂಢಿ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವು ಸಂಸ್ಥೆಗಳಲ್ಲಿ ಎಲ್ಲರಿಗೂ ಕೊರೊನಾ ವೈರಸ್ ಅಟ್ಯಾಕ್ ಆಗತೊಡಗಿದಾಗ ಬೆಚ್ಚಿ ಬಿದ್ದ ಆಡಳಿತ ಮಂಡಳಿಗಳು ಎಂಪ್ಲಾಯಿಗಳನ್ನೆಲ್ಲ ಮನೆಗೆ ಅಟ್ಟಿ; ಅಲ್ಲಿಂದಲೇ ಕೆಲಸ ಮಾಡಿ ಎಂದವು. ಅಂತೂ ವರ್ಕ್ ಫ್ರಂ ಹೋಮ್ ಎಂಬುದು ಹೊಸ ರೂಢಿಯಾಗಿಯೇ ಹೋಗಿದೆ. ವರ್ಕ್ ಫ್ರಂ ಹೋಮ್ ಅನ್ನೋದು ಮಜಾ ಅನ್ನೋರು ಇದಾರೆ. ಆದರೆ ಇಲ್ಲಿ ಹೊಣೆಗಾರಿಕೆಯೂ ಹೆಚ್ಚೇ ಇದೆ. ವರ್ಕ್ ಫ್ರಂ ಹೋಮ್ ಸರಿಯಾಗಿರಬೇಕಾದರೆ ಇವೆಲ್ಲ ಇರಬೇಕು:
- ಸರಿಯಾದ ಇಂಟರ್‌ನೆಟ್ ಕನೆಕ್ಷನ್ ಇರಬೇಕು. ಅರ್ಧದಲ್ಲಿ ಕೈ ಕೊಡೊ ಕಳಪೆ ಡೇಟಾ ಪ್ಲ್ಯಾನ್, ಹಾಳಾಗುವ ಮೋಡೆಮ್, ಆಗಾಗ ಕೈ ಕೊಡುವ ಕರೆಂಟ್ ಇವೆಲ್ಲ ಇದ್ದರೆ ಹಿಂಸೆ.
- ಸರಿಯಾದ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಅಗತ್ಯ. ಕನಿಷ್ಠ ಆರು ಜಿಬಿ RAM ಇರುವ ಲ್ಯಾಪ್‌ಟಾಪ್ ಅಗತ್ಯ. ಇಲ್ಲವಾದರೆ ಸಿಸ್ಟಮ್ ಹ್ಯಾಂಗ್ ಆಗಿ ಸಮಸ್ಯೆ.
ಕೊರೋನಾ ಸಮಯದಲ್ಲೂ ಆಫೀಸ್‌ಗೆ ಹೋಗೋದು ಅನಿವಾರ್ಯವಾಗಿದ್ದರೆ ಈ ನಿಯಮ ಪಾಲಿಸಿ ...
- ಕೈಗೆ ಎಟಕುವಂತೆ ಫೋನ್, ಆಗಾಗ ಫೋನ್ ಮಾಡಿ ಅಸಿಸ್ಟ್ ಮಾಡಲು ಆಫೀಸ್‌ನಲ್ಲಿ ಒಬ್ಬ ಸಹೋದ್ಯೋಗಿ, ಸಹೋದ್ಯೋಗಿಗಳೊಡನೆ ಆನ್‌ಲೈನ್ ಮೀಟಿಂಗ್ ನಡೆಸಲು ಜೂಮ್ ಅಥವಾ ಟೀಮ್ಸ್‌ನಂಥ ಆಪ್ ಬಳಕೆಯ ಅಭ್ಯಾಸ ಇರಬೇಕು.
ಇನ್ನು ಮನೆಯಲ್ಲಿ ಕೆಲಸ ಮಾಡುವಾಗ ಕಚೇರಿಯಂಥ ಒಂದು ವಾತಾವರಣ ಸೃಷ್ಟಿಸಿಕೊಳ್ಳಬೇಕು. ಇಲ್ಲವಾದರೆ ಕೆಲಸ ಮುಂದೆ ಹೋಗುವುದೇ ಇಲ್ಲ.
- ಮನೆಕೆಲಸವನ್ನೂ ಕಚೇರಿ ಕೆಲಸವನ್ನೂ ಸ್ಪಷ್ಟವಾಗಿ ವಿಭಾಗೀಕರಿಸಿ ಸಮಯ ವಿಂಗಡಿಸಬೇಕು. ಬೆಳಗ್ಗೆ ಹತ್ತು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ನಿಮ್ಮ ಕಚೇರಿ ಸಮಯ ಎಂದಾದರೆ, ಅದರ ಮಧ್ಯೆ ನಿಮ್ಮ ಅಡುಗೆಯ ಕೆಲಸವನ್ನೂ ಇಟ್ಟುಕೊಳ್ಳಬೇಡಿ. ಅದೂ ಇದೂ ಮಿಕ್ಸ್ ಆಗಿಬಿಟ್ಟರೆ ಯಾವುದರ ಮೇಲೂ ಮನಸ್ಸು ಕೇಂದ್ರೀಕರಿಸಲಾಗದೆ ಎರಡೂ ಕೆಟ್ಟು ಹೋಗಿಬಿಡುತ್ತವೆ.
- ಮನೆಯಲ್ಲಿ ಒಂದು ಕೊಠಡಿಯನ್ನು ಕೆಲಸಕ್ಕಾಗಿಯೇ ನಿಗದಿಪಡಿಸಿ. ಅಲ್ಲಿ ಮಲಗುವುದಾಗಲೀ, ಆಟವಾಡುವುದಾಗಲೀ, ಇತರ ಚಟುವಟಿಕೆಗಳನ್ನು ನೀವು ಕೆಲಸ ಮಾಡುತ್ತಿರುವಷ್ಟು ಹೊತ್ತು ನಿಷೇಧಿಸಿ. ನಿಮ್ಮ ಕೆಲಸದ ವೇಳೆಯಲ್ಲಿ ಇತರರು ದೊಡ್ಡದಾಗಿ ಮ್ಯೂಸಿಕ್ ಹಾಕುವುದು, ಟಿವಿ ಹಾಕುವುದು ಮುಂತಾದ ಕಿರಿಕಿರಿ ಇಲ್ಲದಿರಲಿ.
ಕೊರೋನಾದಿಂದ ಕೆಲಸ ಕಳೆದುಕೊಂಡಿದ್ದೀರಾ? ಮನೆಯಲ್ಲಿ ಈ ಕೆಲ್ಸ ಮಾಡ್ಬಹುದು! ...
- ಕೆಲಸ ಮಾಡುತ್ತಿರುವ ಜಾಗದಲ್ಲಿ ಆಹ್ಲಾದಕರ ವಾತಾವರಣ ಇರಲಿ. ಕಿಟಕಿಯಿಂದ ಚೆನ್ನಾಗಿ ಗಾಳಿ ಬೆಳಕು ಬರುವಂತಿರಲಿ. ಗೋಡೆಯಲ್ಲಿ ಒಳ್ಳೆಯ ಪೇಂಟಿಂಗ್, ಒಂದು ಹೂಕುಂಡ ಇತ್ಯಾದಿಗಳಿದ್ದರೆ ಉತ್ತಮ. ಆನ್‌ಲೈನ್ ಮೀಟಿಂಗ್ ಸಂದರ್ಭ ಇತರರಿಗೆ ಕಾಣುವ ನಿಮ್ಮ ಮನೆಯ ಒಳಾಂಗಣ ಸಭ್ಯವಾಗಿರಲಿ.
- ಮನೆಯಲ್ಲಿ ಮಕ್ಕಳಿದ್ದರೆ ಅವರು ನಿಮ್ಮ ಕೆಲಸದ ಸಮಯದಲ್ಲಿ ತೊಂದರೆ ಕೊಡದಂತಿರಲಿ. ಅವರಿಗಾಗಿಯೇ ಪ್ರತ್ಯೇಕ ಸಮಯವನ್ನು ಮುಂಜಾನೆ ಹಾಗೂ ಕೆಲಸ ಮುಗಿದ ನಂತರ ಕೊಡಿ.
- ಮನೆಯಲ್ಲೇ ಇರುವಾಗ ಆಗಾಗ ಬಾಯಿಗೆ ಏನನ್ನಾದರೂ ಹಾಕಿಕೊಂಡು ಕುರುಕುರು ತಿನ್ನುತ್ತಿರುವುದು ಕೆಲವರ ಸ್ವಭಾವ. ಆದರೆ ಇದು ಅಪಾಯಕಾರಿ. ಇದರಿಂದಾಗಿಯೇ ಬೊಜ್ಜು ಮತ್ತಿತರ ಅನಿಯಂತ್ರಿತ ತೊಂದರೆಗಳು ಉಂಟಾಗಬಹುದು. ಕೋವಿಡ್ ಎರಡನೇ ಅಲೆಯ ಸಂದರ್ಭ ಸಾವಿಗೆ ತುತ್ತಾದ ಅನೇಕ ಯುವಕರು, ಮೊದಲ ಅಲೆಯ ಸಂದರ್ಭದಲ್ಲಿ ಲಾಕ್‌ಡೌನ್ ಆದಾಗ ಮನೆಯಿಂದ ಕೆಲಸ ಮಾಡುತ್ತಿದ್ದವರು ಹಾಗೂ ಇವರು ಅನಿಯಂತ್ರಿತ ಆಹಾರ ಸೇವನೆಯ ಪರಿಣಾಮ ಡಯಟ್ ಪಾಲಿಸದೆ ಆರೋಗ್ಯ ಕೆಡಿಸಿಕೊಂಡಿರಬಹುದು ಎಂಬುದು ಕೆಲವು ತಜ್ಞರ ಅಂದಾಜು.
- ವ್ಯಾಯಾಮ ಇರಲಿ. ಕಚೇರಿಗೆ ಹೋಗುವಾಗ ಸ್ವಲ್ಪ ಮಟ್ಟಿಗೆ ನಡೆಯುತ್ತೀರಿ. ಮನೆಯೊಳಗೇ ಇರುವಾಗ ನಡೆಯುವ ಅಭ್ಯಾಸ ತಪ್ಪಿಹೋಗುತ್ತದೆ. ಮುಂಜಾನೆ ಹಾಗೂ ಸಂಜೆ ನಡೆಯುವ ಅಭ್ಯಾಸ ಮಾಡಿಕೊಳ್ಳಿ.
- ಕಚೇರಿಗೆ ಹೋಗಿ ಬರುವ ಬಸ್ಸು ಅಥವಾ ದ್ವಿಚಕ್ರ ವಾಹನದ ಪ್ರಯಾಣದ ಸಮಯ ನಿಮಗೆ ಉಳಿಯುತ್ತದೆ. ಈ ಸಮಯದಲ್ಲಿ ಯಾವುದಾದರೂ ಆರೋಗ್ಯಕರ ಹವ್ಯಾಸ ರೂಢಿಸಿಕೊಳ್ಳಿ. ಗಾರ್ಡನಿಂಗ್, ಓದುವಿಕೆ, ಹೊಸ ಭಾಷೆ ಕಲಿಯುವುದು ಮುತಾದವು ನಿಮ್ಮ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಕೆರಿಯರ್ ಅನ್ನು ವೃದ್ಧಿಸಿಕೊಳ್ಳಲೂ ನೆರವಾಗುತ್ತವೆ.
- ಕೆಲಸದ ನಡುವೆ ಸಿನಿಮಾ ನೋಡೋಣ, ಸ್ವಲ್ಪ ಹೊತ್ತು ಸಣ್ಣ ನ್ಯಾಪ್ ಮಾಡೋಣ ಎಂದೆಲ್ಲ ಕಾಣಬಹುದು. ಆದರೆ ಅದಕ್ಕೆ ಒಮ್ಮೆ ಅವಕಾಶ ನೀಡಿದರೆ ಮನಸ್ಸು ಮರುದಿನವೂ ಅದನ್ನೇ ಬಯಸುತ್ತದೆ. ಅವಾಯ್ಡ್ ಮಾಡಿ.
ವ್ಯಾಕ್ಸಿನ್ ಹಾಕಿಸಿಕೊಂಡ ಬಳಿಕ ಮದ್ಯ ಸೇವನೆ ಮಾಡಬಹುದೇ? ಇಲ್ಲಿದೆ ಉತ್ತರ ...