50 ವರ್ಷದ ಮಹಿಳೆಯೊಬ್ಬರು ತಮ್ಮ ಮಗನ ಕ್ಲಾಸ್‌ಮೇಟ್‌ನನ್ನು ವಿವಾಹವಾಗಿ ಗರ್ಭಿಣಿಯಾಗಿದ್ದಾರೆ. ಈ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. 

ಇದು ಕಲಿಯುಗದ ಮಹಿಮೆಯೂ ತಿಳಿಯದು 50 ವರ್ಷದ ಮಹಿಳೆಯೊಬ್ಬಳು ತನ್ನ ಮಗನ ಕ್ಲಾಸ್‌ಮೇಟನ್ನು ಮದುವೆಯಾಗಿ ಈಗ ತಾನು ಗರ್ಭಿಣಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ಚೀನಾದಲ್ಲಿ ಈ ಘಟನೆ ನಡೆದಿದ್ದು, ಈ ವಿಚಾರವೀಗ ಅಲ್ಲಿನ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಯ ವಿಚಾರವಾಗಿದೆ.

ಉದ್ಯಮಿಯಾಗಿರುವ 50 ವರ್ಷದ ಮಹಿಳೆ ಸಿಸ್ಟರ್ ಕ್ಸಿನ್ ಎಂಬಾಖೆ ತನ್ನ ಮಗನ ರಷ್ಯನ್ ಮೂಲದ ಕ್ಲಾಸ್‌ಮೇಟನ್ನು ಮದುವೆಯಾಗುವ ಮೂಲಕ ವಿವಾದಕ್ಕೆ ಕಾರಣವಾಗಿದ್ದರು. ಇತ್ತೀಚೆಗೆ ಅವರು ತಾನು ಗರ್ಭಿಣಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದು ಈ ವಿಚಾರವೀಗ ಅಲ್ಲಿನ ಸಾಮಾಜಿಕ ಜಾಲತಾಣವಾದ ಡುಯಿನ್‌ನಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟು ಹಾಕಿದೆ. ಈಕೆಗೆ ಡುಯಿನ್‌ನಲ್ಲಿ 13 ಸಾವಿರ ಫಾಲೋವರ್ಸ್‌ಗಳಿದ್ದಾರೆ.

ಆಕೆ ಅಲ್ಲಿ ತನ್ನ ವಿದೇಶಿ ಗಂಡನ ಜೊತೆಗಿನ ಜೀವನದ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾಳೆ. ಜೊತೆಗೆ ತನ್ನ ಲಕ್ಸುರಿ ವಿಲ್ಲಾ ಜೀವನಶೈಲಿ, ಕಾರು, ಚಾಲಕ, ಅಡುಗೆಯಾಳು ಹೀಗೆ ಆಕೆ ತನ್ನೆಲ್ಲಾ ಐಷಾರಾಮಿ ಜೀವನಶೈಲಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾಳೆ. 30ರ ಹರೆಯದಲ್ಲಿ ಡಿವೋರ್ಸ್ ಪಡೆದುಕೊಂಡಿದ್ದ ಸಿಸ್ಟರ್ ಕ್ಸಿನ್ ಅವರು ತಮ್ಮ ಮಕ್ಕಳನ್ನು ಒಂಟಿಯಾಗಿಯೇ ಬೆಳೆಸಿ ದೊಡ್ಡವರು ಮಾಡಿದ್ದು, ಆದರೆ ಈಗ ಮಕ್ಕಳ ಜವಾಬ್ದಾರಿ ಮುಗಿದ ಮೇಲೆ ಅವರು ತಮ್ಮ ಮಗನ ಪ್ರಾಯದ ವಿದೇಶಿ ಹುಡುಗನನ್ನು ಮದುವೆಯಾಗಿದ್ದಾರೆ.

ಇವರ ಈ ವಿಲಕ್ಷಣವಾದ ಪ್ರೇಮ ಸಂಬಂಧ ಆರಂಭವಾಗಿದ್ದು ಆರು ವರ್ಷಗಳ ಹಿಂದೆ, ಸಿಸ್ಟರ್ ಕ್ಸಿನ್ಸ್‌ನ ಪುತ್ರ ಕೈಕೈ ಅವರು ತಮ್ಮ ಮೂವರು ವಿದೇಶಿ ಕ್ಲಾಸ್‌ಮೇಟ್‌ಗಳಿಗಾಗಿ ಲೂನಾರ್ ಹೊಸ ವರ್ಷದ ಡಿನ್ನರ್ ಪಾರ್ಟಿಯನ್ನು ಆಯೋಜಿಸಿದ್ದರು. ಈ ಪಾರ್ಟಿಗೆ ಕೈಕೈನ ರಷ್ಯನ್ ಸ್ನೇಹಿತ ಡೆಫು ಕೂಡ ಬಂದಿದ್ದು, ಆತ ಬಹಳ ಸ್ಪಷ್ಟವಾಗಿ ಚೈನೀಸ್ ಭಾಷೆಯನ್ನು ಮಾತನಾಡುತ್ತಿದ್ದ, ಆತನಿಗೆ ಕೈಕೈನ ತಾಯಿ ಸಿಸ್ಟರ್‌ ಕ್ಷಿನ್ಸ್‌ ಅವರ ಅಡುಗೆ ಹಾಗೂ ಆತಿಥ್ಯ ನೋಡಿ ಖುಷಿಯಾಗಿದ್ದು, ಒಂದು ಡಿನ್ನರ್‌ಗೆ ಅಂತ ಮನೆಗೆ ಬಂದವ ಒಂದು ವಾರವಾದರೂ ಮನೆ ಬಿಟ್ಟು ಹೋಗದೇ ಅಲ್ಲೇ ವಾಸವಿದ್ದ.

ಇದಾದ ನಂತರ ಅಲ್ಲಿಂದ ಹೋದ ರಷ್ಯನ್ ವಿದ್ಯಾರ್ಥಿ ಡೆಫುವಿಗ ತನ್ನ ಸ್ನೇಹಿತನ ಅಮ್ಮನ ಮೇಲೆ ಪ್ರೀತಿಯಾಗಿದೆ. ನಾನು ವಯಸ್ಸಾದರೂ ನೋಡುವುದಕ್ಕೆ ಆಕರ್ಷಕ ಹಾಗೂ ಯಂಗ್ ಆಗಿಯೇ ಕಾಣುತ್ತಿದೆ. ಡೆಫು ನನ್ನ ಜೊತೆ ಸಂಪರ್ಕದಲ್ಲಿದ್ದ. ಆತ ನನಗೆ ಸರ್‌ಪ್ರೈಸ್ ಆಗಿ ಉಡುಗೊರೆಗಳನ್ನು ಕಳುಹಿಸುತ್ತಿದ್ದ ಎಂದು ಸಿಸ್ಟರ್ ಕ್ಸಿನ್ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ಗೆ ಹೇಳಿದ್ದಾಳೆ.

ಹೀಗೆ ತನ್ನ ಮಗನ ಸ್ನೇಹಿತನೇ ತನಗೆ ಪ್ರೇಮ ನಿವೇದನೆ ಮಾಡಿದಾಗ ಈ ಸಿಸ್ಟರ್ ಕ್ಸಿನ್ ಮೊದಲಿಗೆ ತಿರಸ್ಕರಿಸಿದ್ದಾರೆ. ತಮ್ಮ ನಡುವಿನ 20 ವರ್ಷದ ಅಂತರ ಹಾಗೂ ಎತ್ತರದಲ್ಲಿ 30 ಸೆಮಿ ವ್ಯತ್ಯಾಸ ಹಾಗೂ ಸಾಂಸ್ಕೃತಿಕ ಭಿನ್ನತೆಗಳು ಮತ್ತು ಅವಳ ಹಿಂದಿನ ವೈವಾಹಿಕ ಅನುಭವ ಇವೆಲ್ಲವುಗಳಿಂದ ಅವರು ಈ ಪ್ರೇಮ ಸಂಬಂಧಕ್ಕೆ ನೋ ಎಂದಿದ್ದಾರೆ. ಆದರೆ ಸಿಸ್ಟರ್ ಕ್ಸಿನ್ ಪುತ್ರ ಕೈಕೈ ಅಮ್ಮನಿಗೆ ಈ ವಿಚಾರದಲ್ಲಿ ಬೆಂಬಲಿಸಿದ್ದಾನೆ. ಹೀಗಾಗಿ ಮಗನೇ ಬೆಂಬಲ ನೀಡಿದ್ದರಿಂದ ಬದುಕಿನಲ್ಲಿ ಮತ್ತೊಮ್ಮೆ ಪ್ರೀತಿಗೆ ಅವಕಾಶ ನೀಡಿದ್ದಾಗಿ ಸಿಸ್ಟರ್ ಕ್ಸಿನ್ ಹೇಳಿಕೊಂಡಿದ್ದಾರೆ. ಇದಾದ ನಂತರ ಈ ಜೋಡಿ ಈ ವರ್ಷದ ಆರಂಭದಲ್ಲಿ ತಮ್ಮ ಮದುವೆಯನ್ನು ನೋಂದಣಿ ಮಾಡಿಕೊಂಡಿದ್ದು, ಚೀನಾದಾದ್ಯಂತ ಜೊತೆಯಾಗಿ ಓಡಾಡಿದ್ದಾರೆ.

ಈ ನಡುವೆ ಜೂನ್ 8 ರಂದು ತಾನು ಗರ್ಭಿಣಿ ಕೂಡ ಆಗಿರುವುದಾಗಿ ಸಿಸ್ಟರ್ ಕ್ಸಿನ್‌ ಹೇಳಿಕೊಂಡಿದ್ದಾರೆ. ವಯಸ್ಸಾದ ಗರ್ಭಧಾರಣೆಯ ಅಪಾಯಗಳ ಹೊರತಾಗಿಯೂ ಡೆಫು ಜೊತೆಗಿನ ಪ್ರೇಮದ ಕಾಣಿಕೆಯಾಗಿ ಈ ಮಗು ಆಗಮಿಸಿದ್ದು ಈ ದಂಪತಿಗಳು ಮುಂದಿನ ವಸಂತಕಾಲದಲ್ಲಿ ತಮ್ಮ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಮತ್ತು ಈಗಾಗಲೇ ಹಾಸಿಗೆಯನ್ನು ಖರೀದಿಸುವ ಮೂಲಕ ತಮ್ಮ ಮಗುವಿನ ಆಗಮನಕ್ಕೆ ಸಿದ್ಧತೆ ನಡೆಸಿದ್ದಾರೆ. ಅವರ ಈ ವಿಚಿತ್ರ ಲವ್‌ ಸ್ಟೋರಿ ಚೀನಾದ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ಹುಟ್ಟು ಹಾಕಿದೆ.