ಗಂಡನಿಂದ ಪ್ರೀತಿ ಸಿಕ್ಕಿದೆ, ಸಂಸಾರದಲ್ಲಿ ಯಾವ್ ಸಮಸ್ಯೆಯೂ ಇಲ್ಲ. ಆದ್ರೂ ಇಬ್ಬರು ಮಕ್ಕಳ ತಾಯಿ ಗಂಡನಿಂದ ವಿಚ್ಛೇದನ ಕೇಳಿದ್ದಾಳೆ. ಹೀಗೆ ಸಂಬಂಧ ಮುರಿದುಕೊಳ್ಳುವ ನಿರ್ಧಾರಕ್ಕೆ ಆಕೆ ಬರಲು ಕಾರಣವಾದರೂ ಏನು? ಇಲ್ಲಿದೆ ವಿವರ.
ಮದುವೆ ಅಂದ್ರೆ ಏಳು ಜನ್ಮದ ಅನುಬಂಧ, ಸುಖ-ದುಃಖದಲ್ಲಿ ಜೊತೆಯಾಗಿರ್ತೀವಿ ಅನ್ನೋ ಮಾತು. ಮದುವೆ ಆದಮೇಲೆ ಎಲ್ಲರೂ ಪ್ರೀತಿಯನ್ನೇ ಬಯಸುತ್ತಾರೆ. ಆದ್ರೆ ಕೆಲವೊಮ್ಮೆ ದ್ರೋಹ, ಮೋಸ ಅಥವಾ ಬೇರೊಬ್ಬರ ಪ್ರವೇಶದಿಂದ ಸಂಬಂಧ ಮುರಿಯಲ್ಲ. ಬದಲಿಗೆ, ನಾವು ಊಹಿಸದ ಕಾರಣಗಳಿಗೂ ಸಂಬಂಧಗಳು ಮುರಿದು ಬೀಳುತ್ತವೆ. ಇಲ್ಲೊಬ್ಬ ಮಹಿಳೆ ತನ್ನ ಗಂಡನಿಂದ ಡಿವೋರ್ಸ್ ಕೇಳಿದ್ದಾಳೆ. ಆಕೆಯ ಗಂಡ ಆಕೆಗೆ ಮೋಸ ಮಾಡಿಲ್ಲ, ಜವಾಬ್ದಾರಿಯಿಂದ ನುಣುಚಿಕೊಂಡಿಲ್ಲ. ಆದರೂ ಆಕೆ ಆ ಸಂಬಂಧದಿಂದ ಹೊರಬರಲು ಬಯಸಿದ್ದಳು.
ಇಂಗ್ಲಿಷ್ ನ್ಯೂಸ್ ಸೈಟ್ 'ಡೈಲಿ ಮೇಲ್'ಗೆ ನೀಡಿದ ಸಂದರ್ಶನದಲ್ಲಿ ಆ ಮಹಿಳೆ ತನ್ನ ಕಥೆ ಹೇಳಿಕೊಂಡಿದ್ದಾಳೆ. ಆಕೆಗೆ ತನ್ನ ಗಂಡನ ಮೇಲೆ ತುಂಬಾನೇ ಪ್ರೀತಿ ಇತ್ತಂತೆ. ಗಂಡ ಕೂಡ ಮನೆಯ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದ. ಆಕೆಗೂ ಸಮಯ ಕೊಡುತ್ತಿದ್ದ. ಇಬ್ಬರೂ ಜೀವನದಲ್ಲಿ ಚೆನ್ನಾಗಿಯೇ ಇದ್ದರು. ಇವರಿಗೆ ಇಬ್ಬರು ಮಕ್ಕಳೂ ಇದ್ದಾರೆ. ಆದರೆ, ಸಮಸ್ಯೆ ಶುರುವಾಗಿದ್ದೇ ಇಲ್ಲಿಂದ. ಹಣಕಾಸಿನಿಂದ ಹಿಡಿದು ಮನೆಯ ವಸ್ತುಗಳವರೆಗೆ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ, ಆಕೆ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಸಂಪೂರ್ಣ ಕುಸಿದು ಹೋಗಿದ್ದಳು. ತಾಯಿಯಾಗಿದ್ದಕ್ಕೆ ಆಕೆಗೆ ಬೇಸರವಿರಲಿಲ್ಲ, ಆದರೆ ತಾಯ್ತನದ ಜವಾಬ್ದಾರಿಗಳು ಆಕೆಯನ್ನು ಹೈರಾಣಾಗಿಸಿದ್ದವು. ಮಕ್ಕಳ ಆರೈಕೆ, ಅವರಿಗೆ ಸಮಯ ಕೊಡುವುದು, ಮನೆಕೆಲಸ... ಇವೆಲ್ಲವೂ ಆಕೆಯನ್ನು ಎಷ್ಟು ಹೈರಾಣಾಗಿಸಿತ್ತೆಂದರೆ, ಎಲ್ಲವನ್ನೂ ಬಿಟ್ಟು ದೂರ ಹೋಗಿಬಿಡಬೇಕು ಎನಿಸುತ್ತಿತ್ತು.
ಮಕ್ಕಳನ್ನು ಪಡೆಯುವ ಪ್ಲ್ಯಾನ್ ಇಬ್ಬರೂ ಸೇರಿಯೇ ಮಾಡಿದ್ದು. ಆದರೆ, ಮಕ್ಕಳು ಬಂದ ಮೇಲೆ ಆಕೆಯ ಜೀವನ ಸಂಪೂರ್ಣ ಬದಲಾಗಿ ಹೋಯ್ತು. ಮೊದಲೆಲ್ಲಾ ತನಗಾಗಿ ಸಮಯ ಸಿಗುತ್ತಿತ್ತು, ಈಗ ಆ ಸಮಯವೆಲ್ಲಾ ಮಕ್ಕಳ ಪಾಲಾಗಿತ್ತು. ಕೆಲಸದ ಜೊತೆಗೆ ಮಕ್ಕಳನ್ನು ನಿಭಾಯಿಸುವುದು ಸುಲಭವಾಗಿರಲಿಲ್ಲ. ರಾತ್ರಿ ಹೊತ್ತು ಮಕ್ಕಳ ಅಳು, ಅರ್ಧಂಬರ್ಧ ನಿದ್ದೆ ಆಕೆಯನ್ನು ಜರ್ಜರಿತಗೊಳಿಸಿತ್ತು. ಆಕೆ ತನ್ನ ಕುಟುಂಬಕ್ಕಾಗಿ ದುಡಿಯುತ್ತಿದ್ದರೂ, ತನಗಾಗಿ ಏನೂ ಉಳಿದಿಲ್ಲ ಎನ್ನುವ ಭಾವನೆ ಕಾಡುತ್ತಿತ್ತು.
ಈ ಯೋಚನೆಗಳಿಂದಲೇ ಆಕೆ ಗಂಡನನ್ನೂ ದ್ವೇಷಿಸಲು ಶುರುಮಾಡಿದಳು. ಗಂಡನ ಜೀವನ ನಾರ್ಮಲ್ ಆಗಿದೆ, ಅವನು ತನ್ನ ಲೈಫ್ ಎಂಜಾಯ್ ಮಾಡ್ತಿದ್ದಾನೆ, ಆದರೆ ನನ್ನ ಜೀವನ ಮಕ್ಕಳ ಸುತ್ತಲೇ ನಿಂತುಬಿಟ್ಟಿದೆ ಎಂದು ಆಕೆಗೆ ಅನಿಸುತ್ತಿತ್ತು. ನಿಧಾನವಾಗಿ ಈ ಮಾತುಗಳು ಆಕೆಯ ಮನಸ್ಸಿನಲ್ಲಿ ಆಳವಾಗಿ ಬೇರೂರಿದವು. ಆಕೆ ಒಂಟಿತನಕ್ಕೆ ಜಾರಿದಳು. ಒಂದು ದಿನ ಗಂಡನ ಬಳಿ ನೇರವಾಗಿ ಡಿವೋರ್ಸ್ ಕೇಳಿದಳು. ತನಗೆ ಈ ಸಂಬಂಧವೂ ಬೇಡ, ಸದ್ಯಕ್ಕೆ ಮಕ್ಕಳೂ ಬೇಡ, ಕೇವಲ ತನಗಾಗಿ ಸಮಯ ಬೇಕು ಎಂದು ಸ್ಪಷ್ಟವಾಗಿ ಹೇಳಿದಳು.
ಆಕೆಗೆ ಅರಿವಾಗಿದ್ದೇನು?
ಸುದೀರ್ಘ ಮಾತುಕತೆಯ ನಂತರ, ಇಬ್ಬರೂ ವಿಚ್ಛೇದನಕ್ಕೆ ಒಪ್ಪಿಕೊಂಡರು. ಆದರೆ, ಆರ್ಥಿಕವಾಗಿ ಮತ್ತು ಪ್ರಾಯೋಗಿಕವಾಗಿ ಇದು ಸುಲಭವಾಗಿರಲಿಲ್ಲ. ಮನೆ ಮಾರಾಟ, ಪ್ರತ್ಯೇಕವಾಗಿ ವಾಸಿಸುವುದು ಮತ್ತು ಮಕ್ಕಳ ಬಗ್ಗೆ ಚರ್ಚೆ ನಡೆಸುವಾಗ, ಮಹಿಳೆ ತನ್ನ ಗಂಡನ ಬಳಿ ಮನಬಿಚ್ಚಿ ಮಾತನಾಡಿದಳು. ಆಗ ಆಕೆಗೆ ಅರಿವಾಗಿದ್ದು, ತಾನು ಸಂಬಂಧದಿಂದ ಬೇಸತ್ತಿಲ್ಲ, ಬದಲಿಗೆ ನಿರಂತರ ಕೆಲಸದಿಂದ ದಣಿದಿದ್ದೇನೆ ಎಂದು. ತಾನು ಸಂಸಾರವನ್ನು ಮುರಿಯಲು ಬಯಸಿಲ್ಲ, ಬದಲಿಗೆ ತನಗಾಗಿ ಸ್ವಲ್ಪ ಸಮಯ ಬಯಸಿದ್ದೆ ಎಂದು ಆಕೆಗೆ ಅರ್ಥವಾಯಿತು.
ಸಮಯ ಕಳೆದಂತೆ, ಗಂಡ ಕೂಡ ಹೆಂಡತಿಯ ಕಷ್ಟಗಳನ್ನು ಅರ್ಥಮಾಡಿಕೊಳ್ಳಲು ಶುರುಮಾಡಿದ. ಆತ ಮಕ್ಕಳಿಗೆ ಹೆಚ್ಚು ಸಮಯ ನೀಡಲು ಆರಂಭಿಸಿದ. ಇದರಿಂದ ಹೆಂಡತಿಗೆ ತನಗಾಗಿ ಒಂದಷ್ಟು ಗಂಟೆಗಳ ಸಮಯ ಸಿಗುತ್ತಿತ್ತು. ಈ ಸಣ್ಣ ಸಣ್ಣ ಪ್ರಯತ್ನಗಳೇ ಅವರ ಸಂಬಂಧವನ್ನು ಮತ್ತೆ ಹಳಿಗೆ ತಂದವು. ಈಗ ಇಬ್ಬರೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ.


