ಮೊಬೈಲ್ ಕೊಡಿಸದ್ದಕ್ಕೆ ವಿಚ್ಛೇದನಕ್ಕೆ ಮುಂದಾದ ಪತ್ನಿ: ವಾಟ್ಸಪ್‌ನಲ್ಲಿ ಮೆಸೇಜ್ ನೋಡಿ ಕಂಗಾಲಾದ ಪತಿ!
ಯಾವ್ಯಾವುದೋ ಸಣ್ಣ ಪುಟ್ಟಕಾರಣಕ್ಕೆ ವಿವಾಹ ವಿಚ್ಛೇದನ ನೀಡಿದ್ದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಮದುವೆಯಾದ ಕೇವಲ ಐದು ತಿಂಗಳಲ್ಲಿ ಪತಿ ಹೊಸ ಮೊಬೈಲ್ ಕೊಡಿಸಲಿಲ್ಲವೆಂದು ಸಿಟ್ಟಾಗಿ ಪತ್ನಿ ವಿಚ್ಛೇದನ ನೀಡಲು ಮುಂದಾಗಿದ್ದು, ಇನ್ನೂ ಕುತೂಹಲದ ವಿಷಯವೆಂದರೆ ಮೊಬೈಲ್ ವಾಟ್ಸ್‌ಆ್ಯಪ್ ಸಂದೇಶದ ಮೂಲಕವೇ ವಿಚ್ಛೇದನ ನೀಡಲು ನಿರ್ಧರಿಸಿದ ವಿಷಯ ತಿಳಿಸಿದ್ದು, ಪತಿ ಕಂಗಾಲಾಗಿದ್ದು ಹೇಗಾದರೂ ಮಾಡಿ ಒಂದುಗೂಡಿಸುವಂತೆ ಸಾಂತ್ವನ ಕೇಂದ್ರದ ಮೊರೆ ಹೋಗಿದ್ದಾರೆ.
ರಾಘು ಕಾಕರಮಠ
ಅಂಕೋಲಾ (ಏ.14) : ಯಾವ್ಯಾವುದೋ ಸಣ್ಣ ಪುಟ್ಟಕಾರಣಕ್ಕೆ ವಿವಾಹ ವಿಚ್ಛೇದನ ನೀಡಿದ್ದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಮದುವೆಯಾದ ಕೇವಲ ಐದು ತಿಂಗಳಲ್ಲಿ ಪತಿ ಹೊಸ ಮೊಬೈಲ್ ಕೊಡಿಸಲಿಲ್ಲವೆಂದು ಸಿಟ್ಟಾಗಿ ಪತ್ನಿ ವಿಚ್ಛೇದನ ನೀಡಲು ಮುಂದಾಗಿದ್ದು, ಇನ್ನೂ ಕುತೂಹಲದ ವಿಷಯವೆಂದರೆ ಮೊಬೈಲ್ ವಾಟ್ಸ್‌ಆ್ಯಪ್ ಸಂದೇಶದ ಮೂಲಕವೇ ವಿಚ್ಛೇದನ ನೀಡಲು ನಿರ್ಧರಿಸಿದ ವಿಷಯ ತಿಳಿಸಿದ್ದು, ಪತಿ ಕಂಗಾಲಾಗಿದ್ದು ಹೇಗಾದರೂ ಮಾಡಿ ಒಂದುಗೂಡಿಸುವಂತೆ ಸಾಂತ್ವನ ಕೇಂದ್ರದ ಮೊರೆ ಹೋಗಿದ್ದಾರೆ.
ಕಳೆದ 2022ರ ಡಿಸೆಂಬರ್ ತಿಂಗಳಲ್ಲಿ ಅಂಕೋಲಾದ ಪ್ರಸಿದ್ಧ ಕಲ್ಯಾಣ ಮಂಟಪವೊಂದರಲ್ಲಿ ಈ ವಿವಾಹ ನಡೆದಿತ್ತು. ಎರಡೂ ಕುಟುಂಬಗಳು ಪರಸ್ಪರ ಒಪ್ಪಿ, ಸಂತೋಷದಿಂದಲೇ ಮದುವೆ ಮಾಡಿಕೊಟ್ಟಿದ್ದರು. ಎರಡ್ಮೂರು ತಿಂಗಳು ಇಬ್ಬರೂ ಅನ್ಯೋನ್ಯವಾಗಿಯೇ ಸಂಸಾರ ನಡೆಸಿದ್ದರು. ದಾಂಪತ್ಯವೂ ಸುಖಮಯವಾಗಿತ್ತು.
ಮದುವೆಯಾದ ಒಂದು ತಿಂಗಳಿಗೆ ಬಿಟ್ಟುಹೋದ ವಧು, ಡೈವೋರ್ಸ್ ಜೊತೆ ಮನಿ ರೀಫಂಡ್ ಕೇಳಿದ ವರ!
ಪತಿಯದು ಸರ್ಕಾರಿ ನೌಕರಿ. ಇಬ್ಬರೂ ಒಟ್ಟಿಗೆ ಅಂಕೋಲಾದಲ್ಲಿ ಜೀವನ ನಡೆಸುತ್ತಿದ್ದರು. ಈ ಮಧ್ಯೆ ಪತ್ನಿ ತನಗೊಂದು ಹೊಸ ಮೊಬೈಲ್ ತಂದುಕೊಡುವಂತೆ ಮಾಡಿಕೊಂಡ ಮನವಿ ನಂತರ ಬಿರುಗಾಳಿ ಎದ್ದು ವಿವಾಹ ವಿಚ್ಛೇದನದ ವರೆಗೂ ಹೋಗುತ್ತೆಂಬ ಅರಿವು ಯಾರಿಗೂ ಇರಲಿಲ್ಲ. ಪತ್ನಿ ತನಗೊಂದು ಮೊಬೈಲ್ ಕೊಡುವಂತೆ ಪತಿಯ ದುಂಬಾಲು ಬೀಳುತ್ತಾಳೆ. ಪತಿ ಕೊಡಿಸುತ್ತೇನೆ ಸ್ವಲ್ಪ ತಾಳು, ಈಗ ಹಣಕಾಸಿನ ತೊಂದರೆ ಇದೆ ಎಂದು ಹೇಳಿ ಮುಂದೂಡಿದ್ದಾನೆ.
ಪತಿ ಮೊಬೈಲ್ ಕೊಡಿಸುತ್ತಿಲ್ಲ. ಅಸಡ್ಡೆ ಮಾಡುತ್ತಿದ್ದಾನೆ ಎಂದು ಕೋಪಗೊಂಡ ಪತ್ನಿ ಕೆಲ ದಿನದ ಹಿಂದೆ ಪತಿಯಿಂದ ದೂರಾಗುತ್ತಾಳೆ. ತವರು ಮನೆಗೂ ಹೋಗಲಿಲ್ಲ. ಅಂಕೋಲಾದಲ್ಲಿಯೇ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಇದು ಪತಿಗೆ ಗೊತ್ತಿಲ್ಲ. ಅವಳಿಗೆ ದೂರವಾಣಿ ಮಾಡಿದರೆ ಎತ್ತುತ್ತಿರಲಿಲ್ಲ. ಮರ್ಯಾದೆಗೆ ಅಂಜಿ ಪತ್ನಿ ಮನೆಯಿಂದ ಹೊರ ಹೋದರೂ ದೂರು ಸಲ್ಲಿಸಿರಲಿಲ್ಲ. ಗೆಳತಿಯರ ಮನೆಯಲ್ಲಿ ಇರಬಹುದು, ಇಂದು ನಾಳೆ ಬರಬಹುದೆಂದು ಸುಮ್ಮನಾಗುತ್ತಾನೆ.
ವಾಟ್ಸ್‌ಆ್ಯಪ್ ಮೆಸೇಜ್‌ಗೆ ಶಾಕ್:
ತನ್ನ ಪತ್ನಿಯ ವಾಟ್ಸ್‌ಆ್ಯಪ್ ಸಂಖ್ಯೆಯಿಂದ ಸಂದೇಶವೊಂದು ಬಂದಿದೆ. ಇದನ್ನು ಗಮನಿಸಿದ ಪತಿಯು ಖುಷಿಯಿಂದಲೆ ಪತ್ನಿಯು ಕಳಿಸಿದ ಮೆಸೇಜ್ ಓದಿದ್ದು ಆಘಾತ ಎದುರಿಸುವಂತಾಗಿತ್ತು. ಒಂದು ಮೊಬೈಲ್ ಕೊಡಿಸಲು ಗತಿ ಇಲ್ಲದ ನಿನ್ನೊಂದಿಗೆ ನನಗೆ ಜೀವನ ಸಾಗಿಸಲು ಸಾಧ್ಯವಿಲ್ಲ. ನಾನು ವಿಚ್ಛೇದನ ನೀಡುತ್ತಿದ್ದೇನೆ. ನನ್ನ ದಾರಿ ನನಗೆ ಎಂದು ಸಂದೇಶ ಕಳುಹಿಸಿದ್ದಾಳೆ. ಮೆಸೇಜ್ ನೋಡಿ ಆತಂಕದಿಂದ ಪೋನ್ ಮಾಡಿದರೆ ಪತ್ನಿ ಮಾತ್ರ ಕರೆ ಸ್ವೀಕರಿಸದೆ ಪತಿ ಮೇಲೆ ಅಸಮಾದಾನ ಪ್ರದರ್ಶಿಸಿದ್ದಾಳೆ.
ಒಂದು ಡೈವೋರ್ಸ್‌ಗೆ 66 ವರ್ಷದ ಪತಿಯಿಂದ 100 ಕೋಟಿ ಬೇಡಿಕೆ ಇಟ್ಟ ಪತ್ನಿ!
ಅಂತೂ ಅಂಕೋಲಾದ ಸಾಂತ್ವನ ಕೇಂದ್ರಕ್ಕೆ ತನ್ನ ಪತ್ನಿಯಿಂದ ಬಂದ ಮೆಸೇಜ್ ತೋರಿಸಿ ತನ್ನ ಪತ್ನಿಯನ್ನು ನನಗೆ ವಾಪಸ್ಸು ಕೊಡಿಸಿ ಎಂದು ಮನವಿ ಮಾಡಿದ್ದಾನೆ.
ಪತ್ನಿ ವಾಟ್ಸ್‌ಆ್ಯಪ್ ಮೂಲಕ ವಿಚ್ಚೇದನಕ್ಕೆ ಸಂದೇಶ ಕಳುಹಿಸಿರುವ ಕುರಿತು ನಮ್ಮಲ್ಲಿ ದೂರು ಬಂದಿತ್ತು. ಈ ಬಗ್ಗೆ ಆಕೆಯ ಮೊಬೈಲಿಗೆ ಕರೆ ಮಾಡಿದಾಗ ಸ್ವೀಕರಿಸಿಲ್ಲ. ಈ ಬಗ್ಗೆ ಮುಂದಿನ ಕಾನೂನು ಕ್ರಮಕ್ಕಾಗಿ ಚಿಂತನೆ ನಡೆಸಿದ್ದೇವೆ.
- ಮಮತಾ ನಾಯ್ಕ, ಆಪ್ತ ಸಮಾಲೋಚಕಿ, ಸಾಂತ್ವನ ಕೇಂದ್ರ, ಅಂಕೋಲಾ