ವಿವಾಹಿತ ಮಹಿಳೆಯರು ಪರಪುರುಷರತ್ತ ಆಕರ್ಷಿತರಾಗಲು ಮುಖ್ಯ ಕಾರಣ ಪತಿಯಿಂದ ಸಿಗದ ಪ್ರಶಂಸೆ ಮತ್ತು ಹೊಗಳಿಕೆ. ಈ ಭಾವನಾತ್ಮಕ ಕೊರತೆಯನ್ನು ಬೇರೊಬ್ಬ ವ್ಯಕ್ತಿ ತುಂಬಿದಾಗ, ಅದು ದೈಹಿಕ ಆಕರ್ಷಣೆಗಿಂತ ಹೆಚ್ಚಾಗಿ ಮಾನಸಿಕ ಆಕರ್ಷಣೆಗೆ ಕಾರಣವಾಗುತ್ತದೆ ಎಂದು ಮನೋತಜ್ಞೆ ಡಾ.ಸೌಜನ್ಯ ವಶಿಷ್ಠ ವಿವರಿಸುತ್ತಾರೆ.
ಅಕ್ರಮ ಸಂಬಂಧ, ವಿವಾಹೇತರ ಸಂಬಂಧ (Extra Marital Affair) ಇತ್ತೀಚಿನ ದಿನಗಳಲ್ಲಿ ಬಹಳ ಕೇಳಿಬರುತ್ತಿರುವ ಮಾತು. ಇದೇನೂ ತೀರಾ ಇತ್ತೀಚಿಗಿನ ಸಮಸ್ಯೆ ಅಲ್ಲವಾದರೂ, ಮಾಧ್ಯಮಗಳು ಸ್ಟ್ರಾಂಗ್ ಆಗಿರೋ ಈ ಹೊತ್ತಿನಲ್ಲಿ ಈ ವಿಷಯಗಳು ಆಗಾಗ್ಗೆ ಕೇಳಿಬರುತ್ತಲೇ ಇರುತ್ತವೆ. ವಿವಾಹೇತರ ಸಂಬಂಧ ಎಂದಾಕ್ಷಣ, ಒಬ್ಬ ಪುರುಷ ಪತ್ನಿ ಹೊರತಾಗಿ ಮತ್ತೊಂದು ಸಂಬಂಧ ಹೊಂದುವುದು ಎನ್ನುವುದು ತಕ್ಷಣಕ್ಕೆ ಗೋಚರಿಸಿದರೂ, ಎಷ್ಟೋ ಸಂದರ್ಭಗಳಲ್ಲಿ ಒಳ್ಳೆಯ, ಸುರಸುಂದರ ಪತಿ ಇದ್ದರೂ ಮಹಿಳೆ ಕೂಡ ಇನ್ನಾರಿಗೋ ಅಟ್ರ್ಯಾಕ್ಟ್ ಆಗಿ ಬಿಡುತ್ತಾಳೆ. ಈಕೆಯ ಗಂಡನಿಗೆ ಹೋಲಿಸಿದರೆ ಆ ಇನ್ನೊಬ್ಬಾತ ಯಾವುದರಲ್ಲಿಯೂ ಹೋಲಿಕೆ ಮಾಡಲು ಸಾಧ್ಯವಿಲ್ಲ ಎನ್ನಿಸುವ ಎಷ್ಟೋ ಘಟನೆಗಳೂ ನಡೆದಿವೆ. ಹಣದಲ್ಲಿ, ಗುಣದಲ್ಲಿ, ರೂಪದಲ್ಲಿ ಯಾವುದರಲ್ಲಿಯೂ ಏನೂ ಇಲ್ಲದ ವ್ಯಕ್ತಿಯೊಬ್ಬನ ಹಿಂದೆ ಹೋಗುವ ಘಟನೆಗಳನ್ನು ನೋಡಿದಾಗ, ಇದಕ್ಕೆ ಕಾರಣವೇನು ಎಂದು ಎನ್ನಿಸುವುದು ಸರ್ವೇ ಸಾಮಾನ್ಯ.
ಹೀಗ್ಯಾಕೆ?
ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಅಥವಾ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದಾಗ ಆತನ ಬಳಿ ಹೆಚ್ಚು ದುಡ್ಡಿದೆ, ಗಂಡನಿಗಿಂತ ಸುಂದರ... ಹೀಗೆ ಶುರುವಾಗಿ ಏನೇನೋ ಅಸಭ್ಯ, ಅಶ್ಲೀಲ ಕಮೆಂಟ್ಸ್ ಸುರಿಮಳೆಯೂ ಆಗಿಬಿಡುತ್ತದೆ. ಕೆಲವೊಮ್ಮೆ ಅತ್ಯಂತ ಸಭ್ಯ ಎನ್ನಿಸಿಕೊಂಡ ಮಹಿಳೆ ಕೂಡ ಯಾರನ್ನೋ ಕಟ್ಟಿಕೊಂಡು ಮದುವೆಯಾದ ಗಂಡನನ್ನು ಬಿಟ್ಟು ಹೋಗುವುದೂ ಇದೆ. ಮತ್ತೆ ಕೆಲವು ಸಲ, ಆ ಪುರುಷನಿಗಾಗಿ ಪತಿಯನ್ನೇ ಸಾಯಿಸುವುದೂ ಇದೆ.
ಹಾಗಿದ್ದರೆ ಇಂಥ ಪ್ರಕರಣಗಳಲ್ಲಿ ಮಹಿಳೆ ಪರಪುರುಷನಿಗೆ ಅಟ್ರ್ಯಾಕ್ಟ್ ಆಗ್ತಿರೋದಕ್ಕೆ ಕಾರಣವೇನು ಎನ್ನುವುದನ್ನು ವೈಜ್ಞಾನಿಕವಾಗಿ ತಿಳಿಸಿದ್ದಾರೆ ಮನೋತಜ್ಞರಾಗಿರುವ ಡಾ.ಸೌಜನ್ಯ ವಶಿಷ್ಠ. ಏಷ್ಯಾನೆಟ್ ಸುವರ್ಣ ಟಿವಿ ಬೆಂಗಳೂರು ಬಜ್ (Asianet Suvarna Bangalurubuzz exclusive) ನೀಡಿರುವ ಸಂದರ್ಶನದಲ್ಲಿ ಡಾ.ಸೌಜನ್ಯಾ ಅವರು ಈ ಬಗ್ಗೆ ಮಾತನಾಡಿದ್ದಾರೆ. ಕೆಲವು ಘಟನೆಗಳಲ್ಲಿ ಬೇರೆ ಬೇರೆ ಕಾರಣಗಳು ಇದ್ದರೂ, ಸಾಮಾನ್ಯವಾಗಿ ಪರಪುರಷನಿಗೆ ವಿವಾಹಿತೆ ಅಟ್ರ್ಯಾಕ್ಟ್ ಆಗುವುದು ಏಕೆ ಎನ್ನುವ ಬಗ್ಗೆ ಅವರು ಹೇಳಿದ್ದಾರೆ.
ಪತಿಯಿಂದ ಸಿಗದ ಹೊಗಳಿಕೆ, ಪ್ರಶಂಸೆ!
ಮೊದಲ ಕಾರಣ ಏನೆಂದರೆ, ಪತಿಯಿಂದ ಸಿಗದ ಹೊಗಳಿಕೆ, ಪ್ರಶಂಸೆ! ಎಷ್ಟೋ ಹೆಣ್ಣುಮಕ್ಕಳಿಗೆ ತಮ್ಮ ಗಂಡ ತಮ್ಮ ಅಂದ, ಶೃಂಗಾರ ಕೊನೆಯ ಪಕ್ಷ ತಮ್ಮ ಅಡುಗೆಯನ್ನಾದರೂ ಹೊಗಳಲಿ ಎನ್ನುವ ಬಯಕೆ ಇರುತ್ತದೆ. ಅದನ್ನು ಆಕೆ ಎಂದಿಗೂ ಬಾಯಿ ಬಿಟ್ಟು ಗಂಡನ ಬಳಿ ಹೇಳುವುದಿಲ್ಲ. ಆದರೆ ಆತನಿಂದ ಅದನ್ನು ನಿರೀಕ್ಷೆ ಮಾಡುತ್ತಿರುತ್ತಾಳೆ. ನೀನು ನನಗಾಗಿ ಎಷ್ಟೊಂದು ಕಷ್ಟಪಡುತ್ತಿದ್ದಿ ಎಂದೋ, ಇಂದು ಅಡುಗೆ ಸಕತ್ ಟೇಸ್ಟಿಯಾಗಿದೆ ಎಂದೋ, ನೀನು ಹಾಕಿಕೊಂಡಿರುವ ಡ್ರೆಸ್- ಸೀರೆ ತುಂಬಾ ಚೆನ್ನಾಗಿದೆ ಎಂದೋ, ಇವತ್ತು ನೀನು ತುಂಬಾ ಸುಂದರವಾಗಿ ಕಾಣಿಸ್ತಿದ್ದಿ ಎಂದೋ... ಹೀಗೆ ಏನೋ ಆಗಾಗ್ಗೆ ತನ್ನ ಗಂಡ ಪ್ರಶಂಸೆ ಮಾಡಲಿ ಎನ್ನುವುದು ಆಕೆಯ ಬಯಕೆ. ಆದರೆ ಎಷ್ಟೋ ಪತಿಯಂದಿರಿಗೆ ಇದು ದೊಡ್ಡ ವಿಷಯವೇ ಆಗಿರುವುದಿಲ್ಲ. ಹೆಂಡತಿ ಮಾಡುವ ಅಡುಗೆ ಚೆನ್ನಾಗಿಯೇ ಇರುತ್ತದೆ, ನನ್ನ ಪತ್ನಿ ಸುಂದರವಾಗಿಯೇ ಇದ್ದಾಳೆ, ಅದರಲ್ಲಿ ಹೇಳುವುದು ಏನಿದೆ ಎಂದು ಮನಸ್ಸಿನಲ್ಲಿಯೇ ಅಂದುಕೊಂಡರೂ ಬಾಯಿ ಬಿಟ್ಟು ಹೇಳಿರುವುದಿಲ್ಲ.
ಬೇರೊಬ್ಬನಿಂದ ಹೊಗಳಿಕೆ
ಅಂಥ ಸಂದರ್ಭಗಳಲ್ಲಿ ಗೃಹಿಣಿಯರಿಗೆ ಏನೋ ಅಸಮಾಧಾನ. ಆಗ ಇನ್ನಾರೋ ವ್ಯಕ್ತಿ ಅದನ್ನೇ ಹೇಳಿಬಿಟ್ಟರೆ ಆಕೆ ಬಯಸುವ ಆ ಮಾತು ಅವನಲ್ಲಿ ಆಕೆಗೆ ಸಿಕ್ಕಿಬಿಡುತ್ತದೆ. ಉದಾಹರಣೆಗೆ ಸೋಷಿಯಲ್ ಮೀಡಿಯಾದಲ್ಲಿ ಅವಳು ಒಂದು ಫೋಟೋ ಹಾಕಿದಾಗ ಒಬ್ಬಾತ ಅದನ್ನು ಸಿಕ್ಕಾಪಟ್ಟೆ ಹೊಗಳಿಬಿಟ್ಟರೆ ಅದಕ್ಕಿಂತ ಖುಷಿ ಆಕೆಗೆ ಆಕ್ಷಣದಲ್ಲಿ ಕಾಣಿಸುವುದೇ ಇಲ್ಲ. ಒಂದು ವೇಳೆ ಮನೆಗೆ ಬಂದಾತ ಆಕೆ ಮಾಡಿದ ಅಡುಗೆಯನ್ನು ಹೊಗಳಿಬಿಟ್ಟರೆ ಗಂಡನಿಂದ ಸಿಗದ ಪ್ರಶಂಸೆ ಆ ವ್ಯಕ್ತಿಯಿಂದ ಸಿಕ್ಕಾಗ ಮನಸ್ಸು ಅಲ್ಲೋಲ ಕಲ್ಲೋಲವಾಗುತ್ತದೆ. ಆ ಒಬ್ಬ ವ್ಯಕ್ತಿ ಇದನ್ನೇ ದುರ್ಬಳಕೆ ಮಾಡಿಕೊಂಡೋ ಅಥವಾ ತನ್ನ ಸಹಜ ಗುಣದಿಂದ ಹೊಗಳಿಕೆ ಮುಂದುವರೆಸಿದಾಗ ತನ್ನ ಪತಿಯಲ್ಲಿ ಕಾಣದ ಎಲ್ಲವನ್ನೂ ಆಕೆ ಆತನಲ್ಲಿ ಕಂಡು ಬಿಡುತ್ತಾಳೆ ಎನ್ನುವುದು ಡಾ.ಸೌಜನ್ಯ ಅವರ ಮಾತು.
ದೈಹಿಕ ಸಂಬಂಧ ಅಲ್ಲವೇ ಅಲ್ಲ
ಹಾಗೆಂದು ಎಷ್ಟೋ ಸಂದರ್ಭಗಳಲ್ಲಿ ದೈಹಿಕ ಸಂಬಂಧದ ಆಕರ್ಷಣೆ ಹೆಣ್ಣಿಗೆ ಇರುವುದೇ ಇಲ್ಲ. ಇದು ಒಂದು ರೀತಿಯಲ್ಲಿ ಮಾನಸಿಕ ಆಕರ್ಷಣೆಯಾಗುತ್ತದೆ. ತನ್ನ ಪತಿಯಿಂದ ಸಿಗದ ಹೊಗಳಿಕೆ ಬೇರೊಬ್ಬನಿಂದ ಸಿಕ್ಕಾಗ ತನಗೆ ಅರಿವಿಲ್ಲದೇ ಆಕೆ ಆತನಲ್ಲಿ ಆಕರ್ಷಣೆಗೆ ಒಳಗಾಗುತ್ತಾಳೆ ಎನ್ನುತ್ತಾರೆ ಸೌಜನ್ಯ. ಹಾಗಿದ್ದರೆ ಕೆಲವೊಮ್ಮೆ ಕೆಲವು ಗಂಡಸರು ಪತ್ನಿಯನ್ನು ಅತಿಯಾಗಿ ಹೊಗಳುವುದು ಇದೆ, ಚಿನ್ನ- ರನ್ನ ಎಂದೆಲ್ಲಾ ಸುಖಾಸುಮ್ಮನೆ ಹೊಗಳಿ ಅಟ್ಟಕ್ಕೆ ಏರಿಸುವುದು ಇದೆ. ಇಂಥ ಸಂದರ್ಭಗಳಲ್ಲಿಯೂ ಕೂಡ ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಇವೆಲ್ಲಾ ಫೇಕ್ ಎನ್ನುವುದು ಮಹಿಳೆಯರಿಗೆ ತಿಳಿದಾಗಲೂ ಮನಸ್ಸು ವಿಚಲಿತಗೊಳ್ಳುತ್ತದೆ ಎನ್ನುವುದು ಡಾ.ಸೌಜನ್ಯ ಮಾತು. ಆದ್ದರಿಂದ ಹೊಗಳಿಕೆ ಇರಬೇಕು, ಅದು ಇತಿಮಿತಿಯಲ್ಲಿ ಹಾಗೂ ಸತ್ಯವಾಗಿ ಇದ್ದರೆ ಚೆನ್ನ.


