30-40 ವರ್ಷ ಸಂಸಾರ ಮಾಡಿಯಾಗಿರುತ್ತೆ, ಇನ್ನೇನು ಸಾಯೋ ವಯಸ್ಸಲ್ಲಿ ಡಿವೋರ್ಸ್ ಕೊಡೋದ್ಯಾಕೆ?
ಬೇರೆ ದೇಶಕ್ಕೆ ಹೋಲಿಸಿದ್ರೆ ಭಾರತದಲ್ಲಿ ವಿಚ್ಛೇದಿತರ ಸಂಖ್ಯೆ ಕಡಿಮೆ ಇದ್ರೂ ಈಗೀಗ ಡಿವೋರ್ಸ್ ಹೆಚ್ಚಾಗ್ತಿದೆ. ಮದುವೆಯಾಗಿ ದೀರ್ಘಕಾಲ ಸಂಸಾರ ಮಾಡಿದ ಜೋಡಿ ಕೂಡ ಬೇರೆಯಾಗ್ತಿರೋದು ಅಚ್ಚರಿ ಮೂಡಿಸಿದೆ. ಅದಕ್ಕೆ ಕಾರಣ ಏನು ಗೊತ್ತಾ?
ಮದುವೆ ಸ್ವರ್ಗದಲ್ಲಿ ಆಗುವಂತಹದ್ದು, ಏಳು ಜನ್ಮಗಳ ಬಂಧ ಎನ್ನುವ ಮಾತೆಲ್ಲ ಈಗ ಅಳಿಸ್ತಿದೆ. ಮದುವೆ ಆದ್ಮೇಲೆ ಅದೆಷ್ಟೆ ಕಷ್ಟ ಬಂದ್ರೂ ಸಂಗಾತಿ ಜೊತೆಯಲ್ಲೇ ಜೀವನ ನಡೆಸಬೇಕೆಂಬ ಪದ್ಧತಿಯನ್ನು ಭಾರತೀಯರು ಮುರಿದಿದ್ದಾರೆ. ಕೌಟುಂಬಿಕ ಹಿಂಸೆ ವಿರುದ್ಧ ಮಾತನಾಡಲು ಕಲಿತಿದ್ದಾರೆ. ಇಬ್ಬರ ಮಧ್ಯೆ ಹೊಂದಾಣಿಕೆ ಇಲ್ಲ ಎಂದಾಗ ಇಬ್ಬರು ಒಟ್ಟಿಗಿದ್ದು, ಉಸಿರುಗಟ್ಟುವ ಜೀವನ ನಡೆಸುವ ಬದಲು ಸ್ವತಂತ್ರವಾಗಿ, ನೆಮ್ಮದಿಯಿಂದ ಬದುಕುವುದು ಮೇಲು ಎನ್ನುವ ತೀರ್ಮಾನಕ್ಕೆ ಬರ್ತಿದ್ದಾರೆ.
ಹಿಂದೆ ವಿಚ್ಛೇದನ (Divorce) ವೆಂದ್ರೆ ದೊಡ್ಡ ವಿಷ್ಯವಾಗಿತ್ತು. ವಿಚ್ಛೇದನದ ನಿರ್ಧಾರ ತೆಗೆದುಕೊಳ್ಳಲು ಜನರು ಹೆದರುತ್ತಿದ್ದರು. ಡಿವೋರ್ಸ್ ಗೆ ಮುಂದಾಗುವ ಮಗಳಿಗೆ ಪಾಲಕರಿಂದಲೇ ಬೆಂಬಲ ಸಿಗ್ತಿರಲಿಲ್ಲ. ಈಗ ಕಾಲ ಬದಲಾಗಿದೆ. ಇಂಟರ್ನೆಟ್ (Internet), ಸಾಮಾಜಿಕ ಜಾಲತಾಣದಲ್ಲಿ ಜನರು ಇದ್ರ ಬಗ್ಗೆ ಮುಕ್ತವಾಗಿ ಮಾತನಾಡ್ತಿದ್ದಾರೆ. ಭಾರತದಲ್ಲಿ ವಿಚ್ಛೇದನದ ಬಗ್ಗೆ ಜನರ ಗ್ರಹಿಕೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಕೆಲ ದಿನಗಳ ಹಿಂದೆ ತಂದೆಯೊಬ್ಬರು, ಕೌಟುಂಬಿಕ ಹಿಂಸೆ ಅನುಭವಿಸ್ತಿದ್ದ ಮಗಳನ್ನು ಅದ್ಧೂರಿಯಾಗಿ ತನ್ನ ಮನೆಗೆ ವಾಪಸ್ ಕರೆತಂದ ವಿಡಿಯೋ (Video) ವೈರಲ್ ಆಗಿತ್ತು. ವಿಚ್ಛೇದನಕ್ಕೆ ಸಂಬಂಧಿಸಿದಂತೆ ಜನರ ಆಲೋಚನೆ ಬದಲಾಗ್ತಿರೋದೇ ಇದಕ್ಕೆ ಮುಖ್ಯ ಕಾರಣ.
ಸಾಮಾನ್ಯವಾಗಿ ಮದುವೆಯಾದ ಕೆಲ ವರ್ಷಗಳಲ್ಲೇ ಜನರು ವಿಚ್ಛೇದನ ಪಡೆಯೋದು ಸಾಮಾನ್ಯ. ಮದುವೆಯಾಗಿ ಮೂವತ್ತು ವರ್ಷ ಕಳೆದ ಮೇಲೂ ದಂಪತಿ ಮಧ್ಯೆ ಹೊಂದಾಣಿಕೆ ಇಲ್ಲ, ವಿಚ್ಛೇದನ ಪಡೆಯುತ್ತೇವೆ ಎಂಬ ಮಾತು ಕೇಳೋದು ಅಪರೂಪ.
ಡಿವೋರ್ಸ್ ಆದೋರ ಮದ್ವೆ ಫೋಟೋಸ್ ಡಿಲೀಟ್, ಹೊಸ ಬ್ಯುಸಿನೆಸ್‌ಗೆ ಸಿಕ್ತಿದೆ ಭರ್ಜರಿ ರೆಸ್ಪಾನ್ಸ್!
ಭಾರತದ ಗಣ್ಯ ವರ್ಗವು ಮದುವೆ ಮತ್ತು ವಿಚ್ಛೇದನದ ಬಗ್ಗೆ ತನ್ನ ವೈಯಕ್ತಿಕ ಅಭಿಪ್ರಾಯಗಳನ್ನು ಹೊಂದಿದೆ. ಸಿನಿಮಾ ಇಂಡಸ್ಟ್ರಿಯಿಂದ ಹಿಡಿದು ಬ್ಯುಸಿನೆಸ್ ಕ್ಲಾಸ್ ನಲ್ಲಿರುವ ಜನರು ಮುಕ್ತವಾಗಿ ಇದ್ರ ಬಗ್ಗೆ ಮಾತನಾಡುತ್ತಾರೆ. ಸಾರಾ ಅಬ್ದುಲ್ಲಾ, ಮಲೈಕಾ ಅರೋರಾ, ಅಮೀರ್ ಖಾನ್ ಸೇರಿದಂತೆ ಅನೇಕರು ದೀರ್ಘಕಾಲ ಸಂಸಾರ ನಡೆಸಿದ ಮೇಲೆ ವಿಚ್ಛೇದನ ಪಡೆದಿದ್ದಾರೆ. ಇತ್ತೀಚಿಗೆ ಭಾರತದ ಪ್ರಸಿದ್ಧ ಉದ್ಯಮಿ ಮತ್ತು ಗಾರ್ಮೆಂಟ್ ಗ್ರೂಪ್ ರೇಮಂಡ್‌ನ ಮಾಲೀಕ ಗೌತಮ್ ಸಿಂಘಾನಿಯಾ ಕೂಡ ತಮ್ಮ ಪತ್ನಿಯಿಂದ ದೂರವಾಗಿದ್ದಾರೆ. ಗೌತಮ್ ಸಿಂಘಾನಿಯಾ, ಪತ್ನಿ ನವಾಜ್ ಮೋದಿಯಿಂದ ವಿಚ್ಛೇದನ ಪಡೆಯುತ್ತಿದ್ದಾರೆ. ಈ ವಿಷ್ಯವನ್ನು ಅವರೇ ಹೇಳಿದ್ದಾರೆ. ಇಬ್ಬರು ಮದುವೆಯಾಗಿ 32 ವರ್ಷ ಕಳೆದಿತ್ತು.
ಡಿವೋರ್ಸ್ ಆದ್ಮೇಲೆ ಹಳೆ ಸಂಗಾತಿನೇ ಚೆನ್ನಾಗಿದ್ದರು ಅಂತ ಅನಿಸೋಕೆ ಶುರು ಆಗಿದ್ಯಾ?
ತಜ್ಞರ ಪ್ರಕಾರ ಇಷ್ಟು ದೀರ್ಘಕಾಲ ಸಂಸಾರ ಮಾಡಿದ ದಂಪತಿ ದೂರವಾಗಲು ನಾನಾ ಕಾರಣವಿರುತ್ತದೆ. ವಿಚ್ಛೇದನ ಅನ್ನೋದು ವೈಯಕ್ತಿಕ ವಿಚಾರ. ಪ್ರತಿಯೊಬ್ಬರ ಕಾರಣ ಭಿನ್ನವಾಗಿರುತ್ತದೆ. ಯಾವ ವಯಸ್ಸಿನಲ್ಲಾದ್ರೂ ಪಡೆಯಬಹುದು. ದೀರ್ಘಕಾಲ ಸಂಸಾರ ಮಾಡಿ ನಂತ್ರ ವಿಚ್ಛೇದನಕ್ಕೆ ಮುಂದಾಗುವ ಬಹುತೇಕ ದಂಪತಿಯ ಹಿಂದಿನ ಕಾರಣ ವಿವಾಹೇತರ ಸಂಬಂಧವಾಗಿರುತ್ತದೆ ಎಂದು ತಜ್ಞರು ಹೇಳ್ತಾರೆ.
ವಿವಾಹೇತರ ಸಂಬಂಧದ ಜೊತೆಗೆ ಹೊಂದಾಣಿಕೆ ಕೊರತೆ ಕೂಡ ಇನ್ನೊಂದು ಕಾರಣ. ಹಿಂಸೆ ಮತ್ತು ಕಿರುಕುಳವೂ ವಿಚ್ಛೇದನಕ್ಕೆ ದಾರಿಯಾಗುತ್ತದೆ. ಒಬ್ಬ ಸಂಗಾತಿ ಹೊಂದಾಣಿಕೆ ಜೀವನ ನಡೆಸುತ್ತಿರುತ್ತಾರೆ. ಅವರು ಹೊಂದಾಣಿಕೆ ಮಾಡಿಕೊಳ್ಳೋದನ್ನು ಬಿಟ್ಟಾಗ ದಾಂಪತ್ಯ ಮುರಿಯುತ್ತದೆ. ಈಗಿನ ದಿನಗಳಲ್ಲಿ ಅದ್ರಲ್ಲೂ ಸೆಲೆಬ್ರಿಟಿಗಳಿಗೆ ಆರ್ಥಿಕ ಚಿಂತೆ ಕಾಡೋದಿಲ್ಲ. ಅವರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢವಾಗಿರುವ ಕಾರಣ ವಿಚ್ಛೇದನಕ್ಕೆ ಭಯಪಡುವುದಿಲ್ಲ.
ಇನ್ನು ಹೊಸದಾಗಿ ಮದುವೆಯಾಗಿರುವವರು ಅಥವಾ ಕೆಲವೇ ವರ್ಷ ಸಂಸಾರ ಮಾಡಿದವರ ವಿಚ್ಛೇದನಕ್ಕೆ ಇಬ್ಬರೂ ಪರಸ್ಪರ ಅರ್ಥಮಾಡಿಕೊಳ್ಳದಿರುವುದು ಅಥವಾ ಅವರಲ್ಲಿ ಒಬ್ಬರು ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧವಾಗದೆ ಇರೋದು ಕಾರಣ ಎನ್ನುತ್ತಾರೆ ತಜ್ಞರು.
ಸೆಲೆಬ್ರಿಟಿಗಳಲ್ಲಿ ಮಾತ್ರವಲ್ಲ ಮದ್ಯಮವರ್ಗದ ಜನರಲ್ಲೂ ವಿಚ್ಛೇದನ ಜಾಸ್ತಿಯಾಗ್ತಿದೆ. ಈಗಿನ ಪಾಲಕರು ಮಕ್ಕಳಿಗೆ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಅವಕಾಶ ನೀಡಿದ್ದಾರೆ. ಆಲೋಚನೆ ಮಾಡಿ ಮದುವೆಯಾಗುವ ಹುಡುಗಿ, ಮದುವೆಗಿಂತ ಮೊದಲು ಆರ್ಥಿಕ ಸ್ವಾತಂತ್ರ ಪಡೆಯುತ್ತಾಳೆ. ದಾಂಪತ್ಯದಲ್ಲಿ ಹೊಂದಾಣಿಕೆ ಸಾಧ್ಯವಿಲ್ಲ ಎಂದಾಗ ಯಾವುದಕ್ಕೂ ಭಯಪಡದೆ ಸ್ವತಂತ್ರಗೊಳ್ತಾಳೆ. ಪ್ರತಿಯೊಬ್ಬರು ಆರ್ಥಿಕವಾಗಿ ಸ್ವತಂತ್ರರಾಗಬೇಕು. ಆಗ ಮಾತ್ರ ಸರಿ ತಪ್ಪುಗಳ ಬಗ್ಗೆ ಯೋಚಿಸಬಹುದು.