Asianet Suvarna News Asianet Suvarna News

ಕಳ್ಳರ ಕೈಗೆ ಗನ್ನು ಕೊಟ್ಟಿತೇಕೆ ಅರಣ್ಯ ಇಲಾಖೆ?

ತಮಿಳುನಾಡಿನ ಪೆರಿಯಾರ್‌ ಹುಲಿ ರಕ್ಷಿತಾರಣ್ಯದಲ್ಲಿ ಸುಮಾರು ಹದಿನೈದಿಪ್ಪತ್ತು ವರ್ಷಗಳ ಕೆಳಗೆ ತುಂಬಾ ಕಳ್ಳ ಬೇಟೆ ನಡೆಯುತ್ತಿತ್ತು. ಕಳೆದೆರಡು ದಶಕಗಳಿಂದ ಹೊಸ ಕ್ರಮದ ಪರಿಣಾಮ ಕಳ್ಳಬೇಟೆ, ನಾಟಾ ಸಾಗಣೆ ನಿಂತಿದೆ.

Why forest department handsover guns to then thieves in tamil nadu
Author
Bengaluru, First Published Mar 9, 2020, 4:12 PM IST

ತಮಿಳುನಾಡಿನ ಪೆರಿಯಾರ್‌ ಹುಲಿ ರಕ್ಷಿತಾರಣ್ಯದಲ್ಲಿ ಸುಮಾರು ಹದಿನೈದಿಪ್ಪತ್ತು ವರ್ಷಗಳ ಕೆಳಗೆ ತುಂಬಾ ಕಳ್ಳ ಬೇಟೆ ನಡೆಯುತ್ತಿತ್ತು. ಹುಲಿಗಳನ್ನು ಕೊಂದು ಹುಲಿಯುಗುರು, ಆನೆಗಳನ್ನು ಕೊಂದು ದಂತ, ಶ್ರೀಗಂಧದ ಮರಗಳನ್ನು ಕಡಿದು ದೋಚಲಾಗುತ್ತಿತ್ತು. ಹಲವಾರು ಕಳ್ಳಬೇಟೆ ತಂಡಗಳು ಇದರಲ್ಲಿ ಸಕ್ರಿಯವಾಗಿದ್ದವು. ಹಲವು ಮರಿ ವೀರಪ್ಪನ್‌ಗಳು ಇಲ್ಲಿದ್ದರು. ಇವರನ್ನು ಹಿಡಿಯಲು ಅರಣ್ಯ ಇಲಾಖೆಯ ಯಾವುದೇ ಕ್ರಮ ಯಶಸ್ವಿ ಆಗಿರಲಿಲ್ಲ.

ಅದೇ ಸಂದರ್ಭದಲ್ಲಿ ಅಲ್ಲಿಗೆ ಫ್ರಾನ್ಸಿಸ್‌ ಹಾಗೂ ಪ್ರಮೋದ್ ಕೃಷ್ಣನ್ ಎಂಬ ಇಬ್ಬರು ಉತ್ಸಾಹಿ ಅರಣ್ಯಾಧಿಕಾರಿಗಳು ಆಗಮಿಸಿದರು. ಅರಣ್ಯ ಸಂರಕ್ಷಣೆಗಾಗಿ ಏನಾದರೂ ಸರಿಯಾದ ಐಡಿಯಾ ಮಾಡಬೇಕು ಅಂದುಕೊಂಡರು. ಅದೇ ಸಂದರ್ಭದಲ್ಲಿ, ದೊಡ್ಡ ಕಳ್ಳಬೇಟೆಗಾರನಾಗಿದ್ದ ಅರುವಿ ಎಂಬಾತನನ್ನು ಆತ ಅಡಗಿದ್ದ ಕಾಡಿನ ಗುಹೆಯಿಂದ ಬಂಧಿಸಲಾಯಿತು. ನನಗೆ ಸರಿಯಾದ ಕೆಲಸ ಇದ್ದಿದ್ದರೆ, ನನ್ನ ಕುಟುಂಬ ನೋಡಿಕೊಳ್ಳುವಷ್ಟು ಆದಾಯ ಇದ್ದಿದ್ದರೆ, ನಾನು ಈ ಕಳ್ಳತನಕ್ಕೆ ಇಳಿಯುತ್ತಿರಲಿಲ್ಲ ಎಂದು ಅರುವಿ ಹೇಳಿಕೊಂಡ. ಇದೇ ಸಂದರ್ಭ ಎಂದು ಈ ಅರಣ್ಯಾಧಿಕಾರಿಗಳು ಯೋಜನೆಯೊಂದನ್ನು ರೂಪಿಸಿದರು. ಅದರ ಉದ್ದೇಶ ಇಷ್ಟೆ.

ಕಾಡಿನಲ್ಲಿ ಕಳ್ಳಬೇಟೆಯಲ್ಲಿ ತೊಡಗಿರುವ ಪ್ರಮುಖರನ್ನು ಒಂದೆಡೆ ಸೇರಿಸಿ, ಅವರಿಗೊಂದು ಕೆಲಸ ಕಲ್ಪಿಸಿಕೊಡುವುದು. ಆ ಕೆಲಸ ಏನೆಂದರೆ, ಕಾಡನ್ನು ತಿರುಗಾಡಿ, ಕಳ್ಳಬೇಟೆ ಹಾಗೂ ಶ್ರೀಗಂಧ ಕಳ್ಳಸಾಗಣೆ ನಡೆಯದಂತೆ ನೋಡಿಕೊಳ್ಳುವುದು. ಪರಿಚಯದ ಕಳ್ಳರ ಮನವೊಲಿಸಿ, ಸಮಾಜಕ್ಕೆ ಹಿಂತಿರುಗಿ ಮಾನಯುತ ಬದುಕು ನಡೆಸುವಂತೆ ಪ್ರೇರೇಪಿಸುವುದು. ಈ ಬುದ್ಧಿಮಾತು ಕೇಳದ ಕಳ್ಳಬೇಟೆಗಾರರನ್ನು ಹಿಡಿದು ಹಾಕಲು ಅರಣ್ಯ ಇಲಾಖೆಗೆ ಸಹಕರಿಸುವುದು. ಕಳ್ಳಸಾಗಣೆ ನಡೆಯುವ ದಾರಿಗಳನ್ನು ಅರಣ್ಯ ಇಲಾಖೆಗೆ ಪರಿಚಯಿಸಿ, ಅದು ನಡೆಯದಂತೆ ನೋಡಿಕೊಂಡು ಅರಣ್ಯ ಸಂಪತ್ತನ್ನು ಹೆಚ್ಚಿಸುವುದು. ದೇಶವಿದೇಶಗಳಿಂದ ಹುಲಿ ರಕ್ಷಿತಾರಣ್ಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಗೈಡ್‌ಗಳಾಗಿ ಕೆಲಸ ಮಾಡುವುದು.

ಹುಲಿ ಯಾಮಾರಿಸಲು ಸತ್ತವನಂತೆ ನಾಟಕ, ಸಾವಿನ ದವಡೆಯಿಂದ ಪಾರಾದ! 

ಇದಕ್ಕೊಂದು ಸ್ಥಳೀಯ, ಮಾಜಿ ಕಳ್ಳರ ಸಮಿತಿಯೊಂದನ್ನು ರಚಿಸಲಾಯಿತು- ಅದರ ಹೆಸರು ವಿಡಿಯಾಲ್‌ ವನಪತುಕಪ್ಪು ಸಂಗಂ. ಇಂದಿಗೆ ಈ ಸಂಗಕ್ಕೆ ೧೭ ವರ್ಷಗಳು ತುಂಬಿವೆ. ಇಲ್ಲಿ ಕಳ್ಳಬೇಟೆ, ನಾಟಾ ಸಾಗಣೆ ನಡೆಸುತ್ತಿದ್ದ ಸುಮಾರು 230 ಗುಂಪುಗಳನ್ನು ಈ ಸಂಘ ಸರಿಯಾದ ಹಾದಿಗೆ ತಂದಿದೆ ಅಥವಾ ಹಿಡಿದುಕೊಟ್ಟಿದೆ. ಈ ಸಂಘದ ಸದಸ್ಯರು ಪ್ರವಾಸಿಗರಿಗೆ ಗೈಡ್‌ಗಳಾಗಿದ್ದಾರೆ, ಆನೆ ಸಫಾರಿಯಲ್ಲಿ ಸಹಾಯ ಮಾಡುತ್ತಾರೆ, ತೇಕ್ಕಡಿ ಸರೋವರದಲ್ಲಿ ಬ್ಯಾಂಬೂ rafting ನಡೆಸುತ್ತಾರೆ. ಇವರಿಗೆ ಕಾಡಿನ ಇಂಚಿಂಚೂ ಪರಿಚಯ. ಕ್ಷಣಾರ್ಧದಲ್ಲಿ ಕಾಡಿನ ಒಂದು ಕಡೆಯಿಂದ ಇನ್ನೊಂದು ಕಡೆಗೆ ದಾವಿಸಬಲ್ಲರು, ಯಾವ ಪ್ರಾಣಿ ಎಲ್ಲಿ ಹೇಗೆ ವರ್ತಿಸುತ್ತದೆಂದು ತಿಳಿಸಬಲ್ಲರು. ಯಾವ ಗಿಡಮೂಲಿಕೆ ಯಾವ ರೋಗಕ್ಕೆ ಮದ್ದು ಎಂಬುದನ್ನೂ ಪಟ್ಟಿ ಮಾಡಬಲ್ಲರು. ಇವರ ಈ ಕಾಡಿನ ಜ್ಞಾನವೇ ಇವರನ್ನು ಇಂದು ದಿಟ್ಟ ಯೋಧರನ್ನಾಗಿಸಿದೆ. ಅರಣ್ಯ ಇಲಾಖೆ ಈ ಮಾಜಿ ಕಳ್ಳರಿಗೆ ಗನ್ನುಗಳನ್ನು ನೀಡಿದೆ; ಬೇಟೆಯಾಡುವುದಕ್ಕಲ್ಲ, ಬೇಟೆ ನಡೆಯದಂತೆ ಕಾಯುವುದಕ್ಕೆ.

ಬೆಂಕಿಯಲ್ಲಿ ಬೆಂದು ಅರಳಿದ ಬಂಡೀಪುರ 

ಪೆರಿಯಾರ್‌ ಹುಲಿ ರಕ್ಷತಾರಣ್ಯದ ಈ ಪ್ರಯೋಗ ಇಂದು ಯಶಸ್ವಿ ಪ್ರಯೋಗ ಎಂದು ಬಿಂಬಿತವಾಗಿದೆ. ಇದಕ್ಕೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮನ್ನಣೆಯೂ ದೊರೆತಿದೆ. ತಮಿಳುನಾಡಿನ ಅಣ್ಣಾಮಲೈ ಹುಲಿ ರಕ್ಷಿತಾರಣ್ಯ, ಕೇರಳ ಪೆರಂಬುಕುಳಂ ರಕ್ಷಿತಾರಣ್ಯ, ಅಸ್ಸಾಮಿನ ಮಾನಸ ನ್ಯಾಶನಲ್‌ ಪಾರ್ಕ್‌ ಸೇರಿದಂತೆ ಇನ್ನೂ ಹಲವು ರಿಸರ್ವ್ ಫಾರೆಸ್ಟ್‌ಗಳಲ್ಲಿ ಈ ಮಾಡೆಲ್‌ ಅನ್ನು ಯಶಸ್ವಿಯಾಗಿ ಪಾಲಿಸಲು ಮುಂದಾಗಿದ್ದಾರೆ. ಈ ರಕ್ಷಕ ಸಂಘದ ಪ್ರತಿಯೊಬ್ಬ ಸದಸ್ಯನಿಗೂ ಇಂದು ತಿಂಗಳಿಗೆ 20 ಸಾವಿರ ರೂಪಾಯಿಗೂ ಹೆಚ್ಚಿನ ಸಂಬಳವಿದೆ. ಅರಣ್ಯ ಇಲಾಖೆ ಇವರಿಗೆ ಯೂನಿಫಾರ್ಮ್‌, ರೈನ್‌ಕೋಟ್‌ ಇತ್ಯಾದಿಗಳನ್ನೆಲ್ಲ ಒದಗಿಸುತ್ತದೆ. ಆರಂಭದಲ್ಲಿ, ಅರಣ್ಯ ಇಲಾಖೆ ತಮಗೆ ಮೋಸ ಮಾಡುತ್ತಿದೆ ಎಂದೇ ಈ ಮಾಜಿ ಕಳ್ಳರು ಭಾವಿಸಿದ್ದರಂತೆ. ನಂತರ ಎರಡೂ ಕಡೆಯ ಅಪನಂಬಿಕೆಗಳು ಮಾಯವಾಗಿ ಸೌಹಾರ್ದ ನೆಲೆಸಿದೆ. ಅರಣ್ಯ ರಕ್ಷಣೆಯಲ್ಲಿ ಸ್ಥಳೀಯರನ್ನು ಒಳಗೊಳಿಸಿಕೊಂಡರೆ ಯಶಸ್ಸು ಖಚಿತ ಅನ್ನುವುದು ಸಾಬೀತಾಗಿದೆ.

ಮಾರ್ಚ್ 09ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios