ದೇವಸಖನ ಮೂರು ಮುಖ

ಮೊದಲನೆಯದು 

ನಾನು ಇನ್ನು ಮೇಲೆ ದೇವರನ್ನು ಹುಡುಕಿಕೊಂಡು ಕಾಲ ಕಳೆಯಬೇಕು ಅಂತ ಮಾಡಿದ್ದೇನೆ. ಮಳೆಗಾಲದ ಒಂದು ಮುಸ್ಸಂಜೆಯಲ್ಲಿ ಧೋ ಅಂತ ಸುರಿಯುವ ಮಳೆಯನ್ನು ನೋಡುತ್ತಾ ದಾಸ್‌ಗೆ ಹೇಳಿದೆ. ನೀನೀಗ ಮಾಡುತ್ತಿರುವುದು ಅದನ್ನೇ ಅಲ್ಲವೇ ಅಂದ ದಾಸ್‌. ನಾನು ಅರ್ಥವಾಗಲಿಲ್ಲ ಅಂದೆ. ಕಾಶಿಗೆ ಹೋಗುತ್ತೇನೆ ಅಂತ ಹೇಳಿ ಹೋದರೂ ಹೇಳದೇ ಹೋದರೂ ಸಿಗುವುದು ಕಾಶಿಯೇ ಅಲ್ಲವೇ. ನಿಗೂಢವಾಗಿ ನಕ್ಕ ದಾಸ್‌.

ಎರಡನೆಯದು 

ಎಲ್ಲಿದ್ದಾನೆ ನಿನ್ನ ಹರಿ?

ಈ ಕಂಬದಲ್ಲಿ ಇದ್ದಾನೆಯೋ? ಆ ಕಂಬದಲ್ಲಿ ಇರುತ್ತಾನೆಯೋ? ಮತ್ತೀಗ ಈ ಕಂಬದಲ್ಲೂ ಕಾಣುತ್ತಾನೆಯೋ? ಹಾಗಂತ ಹಿರಣ್ಯಕಶಿಪು ಆರ್ಭಟಿಸುತ್ತಿರುವಾಗ ಪ್ರಹ್ಲಾದ ಮಾತ್ರ ಧೈರ್ಯದಿಂದ ಹರಿ ಎಲ್ಲ  ಕಂಬಗಳಲ್ಲೂ ಇದ್ದಾನೆ ಅನ್ನುತ್ತಾನಲ್ಲ. ಹಿರಣ್ಯ ಕಶಿಪು ಒಂದು ಕಂಬವನ್ನು ತನ್ನ ಗದೆಯನ್ನು ಅಪ್ಪಳಿಸಿ ಒಡೆಯುತ್ತಾನಲ್ಲ. ಆ ಕಂಬದಿಂದ ಹರಿ ಹೊರಬರದೇ ಇದ್ದಿದ್ದರೆ? ದಾಸ್‌ ಇದಕ್ಕೇನು ಉತ್ತರಿಸುತ್ತಾನೋ ತಿಳಿದುಕೊಳ್ಳಬೇಕು ಅಂತ ಆಸೆಯಾಗಿ ಕೇಳಿದೆ.

ದಾಸ್‌ ನನ್ನ ಕಣ್ಣಲ್ಲೇ ಕಣ್ಣಿಟ್ಟು ನೋಡುತ್ತಾ ಹೇಳಿದ: ಆ ಕಂಬದಲ್ಲಿ ಹರಿ ಇರಲಿಲ್ಲ ಅಂದ್ಕೋಬಹುದು. ಹಾಗಿದ್ದರೆ ಪ್ರಹ್ಲಾದ ಹೇಳಿದ ಮಾತು ಸುಳ್ಳಾಗುತ್ತಲ್ಲ. ದಾಸ್‌ ನನ್ನ ತೋಳನ್ನು ಬಿಗಿಯಾಗಿ ಹಿಡಿದು ಹೇಳಿದ: ಪ್ರಹ್ಲಾದ ತೋರಿಸಿದ ಕಂಬದಲ್ಲಿ ಹರಿ ಖಂಡಿತವಾಗಿಯೂ ಇದ್ದಾನೆ ಎಂಬ ನಂಬಿಕೆ ಇದ್ದದ್ದು ಪ್ರಹ್ಲಾದನಿಗೆ ಅಲ್ಲ, ಹಿರಣ್ಯಕಶಿಪುವಿಗೆ. ಭಕ್ತನ ನಂಬಿಕೆಗಿಂತ ಶತ್ರುವಿನ ನಂಬಿಕೆ ದೊಡ್ಡದು. ಅದು ಯಾವತ್ತೂ ಸುಳ್ಳಾಗುವುದಿಲ್ಲ. ಪ್ರೀತಿಸುವವನಿಗಿಂತ ದ್ವೇಷಿಸುವವನೇ ದೇವರ ಬಗ್ಗೆ ಹೆಚ್ಚು ಯೋಚಿಸುತ್ತಾನೆ, ಧ್ಯಾನಿಸುತ್ತಾನೆ.

ಮೂರನೆಯದು 

ದಾಸ್‌ ತಿಂಡಿ ತಿನ್ನುತ್ತಾ ಕೂತಿದ್ದ. ನಾನೂ ಒಂದು ತಟ್ಟೆಯಲ್ಲಿ ಅವಲಕ್ಕಿ ಮೊಸರು ಹಾಕಿಕೊಂಡು ಅವನ ಮುಂದೆ ಕೂತೆ. ನಿನ್ನೆ ಒಂದು ಪುರಾಣ ಗ್ರಂಥ ಓದುತ್ತಿದ್ದೆ. ಅದರಲ್ಲಿಋುಷಿಗಳು ತಪಸ್ಸು ಮಾಡುತ್ತಿದ್ದರು. ಹಾಗೆ ತಪಸ್ಸು ಮಾಡಿದಾಗೆಲ್ಲ ದೇವರು ಪ್ರತ್ಯಕ್ಷರಾಗಿ ವರ ಕೊಡುತ್ತಿದ್ದರು. ವರ ಕೊಡಬೇಕಿದ್ದರೆ, ದೇವರು ಕಾಣಿಸಬೇಕಿದ್ದರೆ ತಪಸ್ಸು ಮಾಡಬೇಕು. ತಪಸ್ಸಿನ ಸಿದ್ಧಿಯೇ ದೇವರ ದರ್ಶನ ಅಂತೆಲ್ಲ ಬರೆದಿತ್ತು.  ಇದೆಲ್ಲ ತಮಾಷೆಯಾಗಿ ಕಾಣಿಸುತ್ತಿಲ್ಲವೇ? ತಪಸ್ಸು ಮಾಡಿದರೇ ಯಾಕೆ ದೇವರು ಕಾಣಿಸಿಕೊಳ್ಳಬೇಕು. ಹಾಗೆಯೇ ಯಾಕೆ ದರ್ಶನ ನೀಡಬಾರದು.

ದಾಸ್‌ ತಿನ್ನುವುದನ್ನು ನಿಲ್ಲಿಸಿ ಹೇಳಿದ: ತಪಸ್ಸು ಮಾಡುವುದು ದೇವರನ್ನು ಕಾಣಲು ಅಂತ ಹೇಳಿದವರು ಯಾರು? ಮತ್ತೆ?

ತಪಸ್ಸು ಮಾಡುವುದು ನಿನ್ನನ್ನು ನೀನು ಕಂಡುಕೊಳ್ಳಲು. ಯಾರು ತನ್ನನ್ನು ತಾನು ಕಾಣುತ್ತಾನೋ ಅವನಿಗೆ ದೇವರು ಕಾಣಿಸುತ್ತಾನೆ. ಇಂಥ ಜಾಣತನದ ಮಾತುಗಳನ್ನು ಕೇಳಿ ಸಾಕಾಗಿದೆ ದಾಸ್‌. ಇದೆಲ್ಲ ಬೇಕಾಗಿಲ್ಲ ಅಂದೆ.

ನೀನು ಚೆನ್ನಾಗಿರುವ ಅಂಗಿಬಟ್ಟೆಹಾಕಿಕೊಂಡು ಕನ್ನಡಿ ಮುಂದೆ ನಿಲ್ಲುವುದು, ಕನ್ನಡಿಗೆ ನಿನ್ನನ್ನು ತೋರಿಸುವುದಕ್ಕೋ, ನಿನ್ನನ್ನು ನೀನು ನೋಡಿಕೊಳ್ಳುವುದಕ್ಕೋ? ಕನ್ನಡಿಗೇಕೆ ತೋರಿಸಬೇಕು ನನ್ನನ್ನು ನಾನು. ನಾನು ನೋಡಿಕೊಂಡರೆ ಸಾಕು. ತಪಸ್ಸು ಅಂದರೆ ಕನ್ನಡಿ. ಅದರ ಮುಂದೆ ನೀನು ನಿಂತಾಗ ನಿನಗೆ ಕಾಣುವುದು ನೀನೇ. ನೀನು ಅದನ್ನು ದೇವರು ಅಂತ ತಪ್ಪು ತಿಳಿಯುತ್ತಿ ಅಷ್ಟೇ. ನಾನು ದಾಸ್‌ ಮುಖ ನೋಡಿದೆ.

ನಮಗೆ ನಾವು ಕಾಣುವುದೇ ದೇವರ ದರ್ಶನ. ಕೆಲವರಿಗೆ ಸಾಯುವ ತನಕವೂ ತಮ್ಮದೇ ದರ್ಶನ ಆಗಿರುವುದಿಲ್ಲ. ನಾನು ಬರಹಗಾರ, ನಾನು ನಟ, ನಾನು ಮೇಷ್ಟು್ರ, ನಾನು ಬುದ್ಧಿವಂತ, ನಾನು ರಾಜಕಾರಣಿ ಅಂತೆಲ್ಲ ಅಂದುಕೊಂಡಿರುತ್ತಾರೆ. ಅವರಿಗೆ ಅವರು ಕಾಣಿಸಿದಾಗ ತಾನು ಅದ್ಯಾವುದೂ ಅಲ್ಲ ಅನ್ನುವುದು ಗೊತ್ತಾಗುತ್ತದೆ. ತಾನು ದೇವರು ಅನ್ನುವುದು ತಿಳಿಯುತ್ತದೆ.

- ಜೋಗಿ