ಮೈಸೂರು ಅರಮನೆಯ ಎರಡನೇ ಕುಡಿಗೆ ಹೇಗಿಡ್ತಾರೆ ಹೆಸರು ನಿಮಗೆ ಗೊತ್ತಾ?
ಮೈಸೂರು ಅರಮನೆಯಲ್ಲಿ ಎರಡನೇ ಪುತ್ರೋತ್ಸವ ಇದೇ ದಸರಾ ಹಬ್ಬದ ಸಂದರ್ಭದಲ್ಲಿ ಆಗಿತ್ತು. ಮೊನ್ನೆ ಆ ಮಗುವಿಗೆ ತೊಟ್ಟಿಲು ಶಾಸ್ತ್ರವೂ ಆಗಿದೆ. ಇದೀಗ ಜನತೆಯ ಕುತೂಹಲ ಏನೆಂದರೆ, ಮಗುವಿಗೇನು ಹೆಸರಿಡ್ತಾರೆ ಎಂಬುದು.
ಮೈಸೂರು ಅರಮನೆಯಲ್ಲಿ ಈಗ ಸಂಭ್ರಮವೋ ಸಂಭ್ರಮ. ಕಳೆದ ಅಕ್ಟೋಬರ್‌ನಲ್ಲಿ ಎರಡನೇ ಮಗು ಜನನ, ಅದೂ ಗಂಡು ಮಗು. ಮೊನ್ನೆ ಮೊನ್ನೆ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಮಗುವಿಗೆ ತೊಟ್ಟಿಲುಶಾಸ್ತ್ರ. ಒಡೆಯರ್ ಫ್ಯಾಮಿಲಿಯ ಹಿರಿಯರು ಕಿರಿಯರೆನ್ನದೆ ಸಂಭ್ರಮಿಸಲು ಹಲವು ಕಾರಣಗಳು. ಮಗುವಿಗೆ ಸಂಬಂಧಿಸಿದಂತೆ ಇನ್ನೂ ಹಲವು ಸಂಸ್ಕಾರಗಳು ಬಾಕಿ ಇವೆ- ನಾಮಕರಣ, ಚೌಲ, ಉಪನಯನ ಇತ್ಯಾದಿಗಳು. ಸದ್ಯದಲ್ಲೇ ನಾಮಕರಣ ಆಗುವ ಸಂಭವ ಇದೆ. ಉಳಿದದ್ದಕ್ಕೆಲ್ಲಾ ಇನ್ನೂ ಸಮಯವಿದೆ.
ನಾಮಕರಣ ಸಾಮಾನ್ಯವಾಗಿ ಮಗು ಹುಟ್ಟಿ ಎರಡು- ಮೂರು ತಿಂಗಳಲ್ಲಿ ಮಾಡುತ್ತಾರೆ. 2017ರ ಡಿಸೆಂಬರ್‌ನಲ್ಲಿ ಅರಮನೆಯಲ್ಲಿ ಮೊದಲ ಮಗು ಜನಿಸಿತ್ತು. 2018ರ ಫೆಬ್ರವರಿಯಲ್ಲಿ ನಾಮಕರಣ ಮಾಡಿದ್ದರು. ಇದೀಗ ಈ ವರ್ಷ ಅಕ್ಟೋಬರ್‌ನಲ್ಲಿ ಎರಡನೇ ಮಗು ಜನಿಸಿದ್ದು, ನಾಮಕರಣದ ಸಮಯ ಸನಿಹವಾಗಿದೆ. ಯದುವೀರ ಒಡೆಯರ್- ತ್ರಿಶಿಕಾ ಕುಮಾರಿ ದಂಪತಿಯ ಎರಡನೇ ಮಗುವಿನ ಹೆಸರೇನು ಇಡ್ತಾರೆ? ಇದೀಗ ಕುತೂಹಲದ ವಿಷಯ. ಯಾಕೆಂದರೆ ಆ ಹೆಸರು ಮುಂದೆ ಜನರ ಬಾಯಲ್ಲಿ ನಲಿದಾಡಲಿದೆ.
ಅರಮನೆಯ ಮೊದಲ ಅರಸುಕುಡಿಯ ಹೆಸರನ್ನು "ಆದ್ಯವೀರ ನರಸಿಂಹರಾಜ ಒಡೆಯರ್" ಎಂದು ಇಡಲಾಗಿದೆ. ರಾಜ ಮನೆತನದಲ್ಲಿ ಇಂಥ ಹೆಸರನ್ನು ಸುಮ್ಮನೇ ಇಡುವುದಿಲ್ಲ. ಈ ಹೆಸರಿನಲ್ಲಿ ಈ ಮಗುವಿನ ತಂದೆ- ತಾತ- ಮುತ್ತಾತಂದಿರ ಹೆಸರುಗಳೆಲ್ಲಾ ಅಡಕವಾಗಿ ಇರುತ್ತವೆ. ʼಆದ್ಯʼ ಎಂಬುದಕ್ಕೆ ಮೊದಲ ಎಂದರ್ಥ. ಎಷ್ಟೋ ವರ್ಷಗಳ ನಂತರ ಜನಿಸಿದ ಮೊದಲ ಮಗು ಎಂದು ಅರ್ಥ ಮಾಡಿಕೊಳ್ಳಬಹುದು. ʼವೀರʼ ಎಂಬುದು ತಂದೆಯ ಹೆಸರಿನಲ್ಲಿದೆ. ʼನರಸಿಂಹರಾಜʼ ಎಂಬುದು ಈ ಹಿಂದಿನ ದೊರೆ ಶ್ರೀಕಂಠದತ್ತ ನರಸಿಂಹರಾಜ ಅವರಿಂದ ಬಂದುದು. ಇನ್ನು ಒಡೆಯರ್ ಎಂಬ ವಂಶನಾಮ ಎಲ್ಲರಿಗೂ ಇರಲೇಬೇಕು.
ಆದ್ಯವೀರನ ಅಪ್ಪ, ಈಗಿನ ರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೆಸರಿನಲ್ಲೂ ಹಲವು ಹಿರಿಯರ ನೆನಪಿದೆ. ಕೃಷ್ಣರಾಜ ಒಡೆಯರ್, ಶ್ರೀಕಂಠದತ್ತ ಒಡೆಯರ್, ಚಾಮರಾಜ ಒಡೆಯರ್- ಹೀಗೆ ಮೂವರ ಹೆಸರುಗಳು ಜೋಡಿಸಿಕೊಂಡಿವೆ. ಯದುವೀರ ಎಂಬುದು ಅಂಕಿತನಾಮ. ಹಾಗೇ ಮಗನಿಗೆ ಆದ್ಯವೀರ ಎಂಬುದು ಅಂಕಿತನಾಮ.
ಇದೀಗ ಕುತೂಹಲವೆಂದರೆ, ಅಂಕಿತನಾಮ ಏನಿಡುತ್ತಾರೆ ಹಾಗೂ ತಾತ ಮುತ್ತಾತಂದಿರ ಹೆಸರುಗಳಲ್ಲಿ ಯಾವುದನ್ನು ಜೋಡಿಸುತ್ತಾರೆ ಎಂಬುದು! ಆದ್ಯವೀರ ಎಂಬ ರೀತಿಯಲ್ಲಿ ಒಂದು ಅಂಕಿತನಾಮ ಇಡಲಾಗುತ್ತದೆ. ಜೊತೆಗೆ ಜಯಚಾಮರಾಜ, ಶ್ರೀಕಂಠದತ್ತ, ನರಸಿಂಹರಾಜ, ಕಂಠೀರವ ಹೀಗೆ ನಾಲ್ಕಾರು ಹೆಸರುಗಳಲ್ಲಿ ಒಂದನ್ನು ಜೋಡಿಸುವ ಸಾಧ್ಯತೆ ಇದೆ. ಯಾವುದನ್ನು ಜೋಡಿಸಲಾಗುತ್ತದೆ, ಹೇಗೆ ಜೋಡಿಸಬೇಕು ಎಂಬುದನ್ನು ಅರಮನೆಯ ಜೋಯಿಸರು, ಪುರೋಹಿತರು ನಿರ್ಧರಿಸಲಿದ್ದಾರೆ. ಅಂಕಿತನಾಮವನ್ನು ಸ್ವತಃ ಯದುವೀರ್- ತ್ರಿಶಿಕಾ ಅಂತಿಮಗೊಳಿಸಲಿದ್ದಾರೆ.
ಬಹುಶಃ ಮೈಸೂರು ಅರಮನೆಯ ಎರಡನೇ ಕುಡಿಯ ಹೆಸರೇನು ಎಂಬುದು ರಿವೀಲ್ ಆಗಲು ಇನ್ನು ಹೆಚ್ಚು ದಿನ ಕಾಯಬೇಕಿಲ್ಲ ಎಂಬುದು ನಮ್ಮ ಊಹೆ. ಸದ್ಯದಲ್ಲೇ ನಾಮಕರಣದ ಸುದ್ದಿ ಅರಮನೆಯ ಕಡೆಯಿಂದ ಬರಬಹುದು. ಆಗಲೇ ಹೆಸರು ಕೂಡ ಗೊತ್ತಾಗಲಿದೆ.
ಮೈಸೂರು ರಾಜವಂಶಸ್ಥರ ಕುಟುಂಬದಲ್ಲಿ ಸಂಭ್ರಮ…. ಯದುವೀರ್ ಒಡೆಯರ್ 2ನೇ ಮಗುವಿನ ಅದ್ಧೂರಿ ತೊಟ್ಟಿಲ ಶಾಸ್ತ್ರ
ಮಗುವಿನ ತೊಟ್ಟಿಲು ಶಾಸ್ತ್ರ ಕುಲದೇವತೆ ಚಾಮುಂಡಿ ತಾಯಿಯ ದೇವಸ್ಥಾನದ ಆವರಣದಲ್ಲಿ ಸಾಂಪ್ರದಾಯಿಕವಾಗಿ ನಡೆಯಿತು. ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರ ಸಮ್ಮುಖದಲ್ಲಿ ನೆರವೇರಿತು. ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಒಡೆಯರ್ ಕುಟುಂಬ, ದೇವಿಯ ಮೂಲ ಮೂರ್ತಿಯ ಗರ್ಭಗುಡಿಯಲ್ಲಿ ರೇಷ್ಮೆ ಸೀರೆ ಮೇಲೆ ಮಗುವನ್ನು ಮಲಗಿಸಿ ಪೂಜೆ ಸಲ್ಲಿಸಿದರು. ಬಳಿಕ ಸಂಪಿಗೆ ಮರಕ್ಕೆ ಕಟ್ಟಿದ ಬೆಳ್ಳಿ ತೊಟ್ಟಿಲಿನಲ್ಲಿ ಮಗುವನ್ನು ಮಲಗಿಸಿ ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು. ಬಳಿಕ ಸಾಂಪ್ರದಾಯಿಕವಾಗಿ ತೊಟ್ಟಿಲು ಶಾಸ್ತ್ರ ನೆರವೇರಿತು. ಶರನ್ನವರಾತ್ರಿಯ ವೇಳೆ ದಂಪತಿಗೆ 2ನೇ ಗಂಡು ಮಗು ಜನಿಸಿರುವುದು ರಾಜಮನೆತನಕ್ಕೆ ಸುಭಿಕ್ಷೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಚಾಮುಂಡಿ ತಾಯಿಯ ಸನ್ನಿಧಿಯಲ್ಲಿ ತೊಟ್ಟಿಲು ಶಾಸ್ತ್ರ ಮಾಡಲಾಯಿತು ಎಂದು ಅರಮನೆ ಪುರೋಹಿತರು ಮಾಹಿತಿ ನೀಡಿದರು.
ಮೈಸೂರು ರಾಜವಂಶದ ಪುಟ್ಟ ರಾಜಕುಮಾರನ ಫೋಟೊ ರಿವೀಲ್… ಅರ್ಜುನನೇ ಮತ್ತೆ ಹುಟ್ಟಿ ಬಂದ ಎಂದ ಜನ!