ಮೈಸೂರು ರಾಜವಂಶದ ಪುಟ್ಟ ರಾಜಕುಮಾರನ ಫೋಟೊ ರಿವೀಲ್… ಅರ್ಜುನನೇ ಮತ್ತೆ ಹುಟ್ಟಿ ಬಂದ ಎಂದ ಜನ!
ಮೈಸೂರು ರಾಜವಂಶಸ್ಥರಾದ ಯದುವೀರ್ ಒಡೆಯರ್ ಹಾಗೂ ತ್ರಿಷಿಕಾ ದೇವಿ ದಂಪತಿಗಳ ಎರಡನೇ ಮಗನ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೇಗಿದ್ದಾನೆ ನೋಡಿ ನಮ್ಮ ಯುವರಾಜ.
ದಸರಾ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯಾದ್ಯಂತ ಒಂದೆಡೆ ನಾಡಹಬ್ಬದ ಸಡಗರ ಸಂಭ್ರಮ ನಡೆಯುತ್ತಿದ್ದರೆ, ಮತ್ತೊಂದು ಕಡೆ ಮೈಸೂರು ರಾಜವಂಶಸ್ಥರಾದ ಯದುವೀರ್ ಒಡೆಯರ್ (Yaduveer Wodeyar) ಹಾಗೂ ತ್ರಿಷಿಕಾ ದೇವಿ ದಂಪತಿಗಳಿಗೆ ಗಂಡು ಮಗು ಜನಿಸುವ ಮೂಲಕ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು.
ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಕುಮಾರಿ ದೇವಿ (Trishika Kumari Devi) ಅವರು 2ನೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಯದುವೀರ್ ಹಾಗೂ ತ್ರಿಷಿಕಾ ದೇವಿ ದಂಪತಿಗಳಿಗೆ ಮೊದಲನೇ ಮಗು 2017ರ ಡಿಸೆಂಬರ್ 6 ರಂದು ಜನಿಸಿತ್ತು. ಹಿರಿಯ ಮಗನಿಗೆ ದಂಪತಿಗಳು ಆದ್ಯವೀರ್ ಒಡೆಯರ್ ಎಂದು ನಾಮಕರಣ ಮಾಡಿದ್ದರು.
ಎರಡನೇ ಮಗು ನವರಾತ್ರಿ ಸಂದರ್ಭದಲ್ಲಿ ಹುಟ್ಟಿದ್ದು, ಮೂರು ತಿಂಗಳ ಬಳಿಕ ಅಂದ್ರೆ ಡಿಸೆಂಬರ್ ನಲ್ಲಿ ಮಗುವಿಗೆ ಸಂಪ್ರದಾಯಬದ್ಧವಾಗಿ ಚಾಮುಂಡಿ ಬೆಟ್ಟದಲ್ಲಿ ತೊಟ್ಟಿಲ ಶಾಸ್ತ್ರ ಮಾಡಿದ್ದರು. ಆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.
ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿ, ಬಳಿಕ ಚಾಮುಂಡಿಬೆಟ್ಟದಲ್ಲಿ ದೇವಾಲಯದ ಬಳಿ ಇರುವ ಸಂಪಿಗೆ ಮರಕ್ಕೆ ತೊಟ್ಟಿಲು ಕಟ್ಟಿ ಪೂಜೆ ಮಾಡಿ, ಇದಾದ ಮೇಲೆ ತೊಟ್ಟಿಲು ಶಾಸ್ತ್ರ ಮಾಡಲಾಯಿತು. ಈ ವೇಳೆ ರಾಜಮಾತೆ ಪ್ರಮೋದಾದೇವಿ ಒಡೆಯರ್ (Pramoda Devi Wodeyar) ಉಪಸ್ಥಿತರಿದ್ದರು.
ಇದೀಗ ಎರಡನೇ ಮಗುವಿನ ಅಂದರೆ ಪುಟ್ಟ ರಾಜಕುಮಾರನ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು, ಕನ್ನಡಿಗರು ಮಗುವಿಗೆ ಹಾಗೂ ರಾಜವಂಶಸ್ಥರಿಗೆ ಶುಭ ಹಾರೈಸಿದ್ದಾರೆ. ಜೊತೆಗೆ ತಮ್ಮ ಅನಿಸಿಕೆಗಳನ್ನು ಬರೆದಿದ್ದಾರೆ.
ಅದರಲ್ಲೂ ಅಂಬಾರಿ ಹೊರುತ್ತಿದ್ದ ಅರ್ಜುನನ ಅಭಿಮಾನಿಯೊಬ್ಬರು, ಅರ್ಜುನನ ಅಭಿಮಾನಿಗಳಾಗಿರುವ ನಾವು ಅರ್ಜುನನೇ ನಿಮ್ಮ ಎರಡನೇ ಮಗುವಾಗಿ ಮತ್ತೆ ಜನ್ಮವೆತ್ತಿದ್ದಾನೆ ಎಂದು ನಂಬುತ್ತೇವೆ. ಅದು ನಿಜವಾಗಿರಲಿ ಎಂದು ಹಾರೈಸಿದ್ದಾರೆ.
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ವಿವಾಹ ರಾಜಸ್ಥಾನದ ದುಂಗರ್‌ಪುರ್ ಯುವರಾಣಿ ತ್ರಿಷಿಕಾ ಅವರೊಂದಿಗೆ 2016 ಜೂನ್ 27ರಂದು ನಡೆದಿತ್ತು. ಇವರಿಬ್ಬರು ಜೊತೆಗೆ ಅಧ್ಯಯನ ಮಾಡಿದ್ದು, ಪ್ರೀತಿಸಿ ಮದುವೆಯಾಗಿದ್ದರು.