Crying Club: ಲಾಫಿಂಗ್ ಕ್ಲಬ್, ಫೇಕ್ ಮ್ಯಾರೇಜ್ ಕ್ಲಬ್ ಎಲ್ಲ ಆಯ್ತು ಈಗ ಕ್ರೈಯಿಂಗ್ ಕ್ಲಬ್ ಸರದಿ. ಅನೇಕ ವರ್ಷಗಳಿಂದ ಈ ಕ್ರೈಯಿಂಗ್ ಕ್ಲಬ್ ಕೆಲ್ಸ ಮಾಡ್ತಿದ್ರೂ ಈಗ ಪ್ರಸಿದ್ಧಿ ಹೆಚ್ಚಾಗಿದೆ. ಅಳೋಕೆ ಬಾತ್ ರೂಮ್ ಸಾಕಾಗ್ತಿಲ್ಲ ಅನ್ನೋರು ಅಲ್ಲಿಗೆ ಹೋಗ್ಬಹುದು. 

ದುಃಖದ ಸಮಯದಲ್ಲಿ, ಜೋರಾಗಿ ಅತ್ತುಬಿಡಿ, ಮನಸ್ಸು ಹಗುರವಾಗುತ್ತೆ ಅಂತ ಹಿರಿಯರು ಹೇಳ್ತಿರ್ತಾರೆ. ಮಕ್ಕಳು ಎಲ್ಲರ ಮುಂದೆ ನಿರಾಳವಾಗಿ ಅಳಬಲ್ಲರು. ಮಕ್ಕಳಿದ್ದಾಗ ನಾವೂ ಅತ್ತಿರ್ತೇವೆ. ದೊಡ್ಡವರಾಗ್ತಿದ್ದಂತೆ ಅಳುವನ್ನು ನಿಯಂತ್ರಿಸಿಕೊಳ್ಳೋಕೆ ಶುರು ಮಾಡ್ತೇವೆ. ನಾಲ್ಕು ಜನರ ಮುಂದೆ ಕಣ್ಣು (Eye) ತುಂಬಿದ್ರೆ ಅದೇನೋ ಮುಜುಗರ. ಸಾರ್ವಜನಿಕ ಪ್ರದೇಶ ಇರ್ಲಿ ಮನೆಯವರ ಮುಂದೆಯೂ ಅಳೋಕೆ ಹಿಂದೇಟು ಹಾಕ್ತೇವೆ. ಮನಸ್ಸಿನಲ್ಲಿರುವ ನೋವು ಬಹುತೇಕರಿಗೆ ಬಾತ್ ರೂಮಿನಲ್ಲಿ ಹೊರ ಬರುತ್ತೆ. ಜೋರಾಗಿ ಅತ್ತು ಮನಸ್ಸನ್ನು ನಿರಾಳ ಮಾಡಿಕೊಳ್ತಾರೆ. ಮತ್ತೆ ಕೆಲವರು ಅಲ್ಲಿ ಅಳೋದೂ ಬಹಳ ಅಪರೂಪ. ಅಳು ಹೆಣ್ಮಕ್ಕಳಿಗೆ ಸೀಮಿತ ಮಾಡಿರುವ ಪುರುಷರು, ಕಣ್ಣಲ್ಲಿ ನೀರು ಹಾಕೋದಿಲ್ಲ. ಎಲ್ಲ ಭಾವನೆಯನ್ನು ಕಟ್ಟಿಟ್ಟುಕೊಂಡು ಮನಸ್ಸನ್ನು ಭಾರವಾಗಿಟ್ಟುಕೊಳ್ತಾರೆ. ಆಪ್ತರ ಮುಂದೆ ಅತ್ತರೆ ಅವಮಾನ, ಹೆಂಡ್ತಿ – ಮಕ್ಕಳ ಮುಂದೆ ಅತ್ತರೆ ದುರ್ಬಲ ಎನ್ನುವ ಪಟ್ಟ ಸಿಗ್ಬಹುದು ಎಂಬ ಭಯ, ಇನ್ನು ಪಾಲಕರ ಮುಂದೆ ಅತ್ತು, ಅವರನ್ನು ಒತ್ತಡಕ್ಕೆ ತಳ್ಳೋದು ಸಾಧ್ಯವಿಲ್ಲದ ಮಾತು. ಹೀಗಿರುವಾಗ ಅತ್ತು ಭಾವನೆ ಹೊರಗೆ ಹಾಕೋದು ಹೇಗೆ? ಅದಕ್ಕೀಗ ಉಪಾಯ ಸಿಕ್ಕಿದೆ.

ಕ್ರೈಯಿಂಗ್ ಕ್ಲಬ್ (Crying Club) : ನೀವು ಮನೆಯಲ್ಲಿ, ಬಾತ್ ರೂಮಿನಲ್ಲಿ ಅಳ್ಬೇಕಾಗಿಲ್ಲ. ನಿಮಗಾಗಿಯೇ ಅಳುವಿನ ಕ್ಲಬ್ ಶುರುವಾಗಿದೆ. ಮುಂಬೈನಲ್ಲಿ ಕೆಲ ದಿನಗಳ ಹಿಂದೆ ಈ ಕ್ರೈಯಿಂಗ್ ಕ್ಲಬ್ ಕಾರ್ಯಾರಂಭಗೊಂಡಿದೆ. ಆದ್ರೆ ಇದು ಹೊಸತಲ್ಲ. ಸೂರತ್ ನಲ್ಲಿ 2017ರಿಂದಲೇ ಈ ಕ್ರೈಯಿಂಗ್ ಕ್ಲಬ್ ಕೆಲ್ಸ ಮಾಡ್ತಿದೆ. ನೀವು ತಿಂಗಳಿಗೆ ಒಮ್ಮೆ ಈ ಕ್ಲಬ್ ಗೆ ಹೋಗ್ಬಹುದು. ಅಲ್ಲಿ ಮನಸೋ ಇಚ್ಛೆ ಅತ್ತು, ಮನಸ್ಸಿನ ಭಾರವನ್ನು ಹೊರ ಹಾಕಿ ಬರಬಹುದು. ಬರೀ ಈ ಎರಡು ನಗರಗಳಲ್ಲಿ ಮಾತ್ರವಲ್ಲ ನಮ್ಮ ಬೆಂಗಳೂರಿನಲ್ಲೂ ಈ ಕ್ರೈಯಿಂಗ್ ಕ್ಲಬ್ ಇದೆ. ಜಪಾನಿನ ರುಯಿಕಾಟ್ಸು ನಿಯಮವನ್ನು ಇವರು ಪಾಲಿಸ್ತಾರೆ. ಜೋರಾಗಿ ಅಳಬೇಕು ಎನ್ನುವವರು ಅಲ್ಲಿಗೆ ಬಂದು ಅತ್ತು ಹೋಗ್ತಾರೆ.

ಇಲ್ಲಿ ನೀವು ಯಾರು, ನಿಮ್ಮ ಸಮಸ್ಯೆ ಏನು ಅನ್ನೋದನ್ನು ಯಾರೂ ಕೇಳೋದಿಲ್ಲ, ಯಾರಿಗೂ ಹೇಳೋದಿಲ್ಲ. ಎಲ್ಲವೂ ಔಪಚಾರಿಕ ಕ್ಲಬ್ ಗಳಲ್ಲ. ಕೆಲವೊಂದು ಇನ್ನೂ ಸಮುದಾಯಮಟ್ಟದಲ್ಲಿದೆ. ಹೈದ್ರಾಬಾದ್ ನಲ್ಲಿ ಆಗಸ್ಟ್ 2 ಮತ್ತು 3 ರಂದು ಈ ಕ್ರೈಯಿಂಗ್ ಕ್ಲಬ್ ಆಯೋಜನೆ ಮಾಡಲಾಗಿತ್ತು ಇದಕ್ಕೆ 399 ರೂಪಾಯಿ ಚಾರ್ಜ್ ಮಾಡಲಾಗಿತ್ತು. ಈ ಕ್ಲಬ್ ಭಾವನೆಗಳನ್ನು ಹಂಚಿಕೊಳ್ಳಲು, ಅಳಲು ಮತ್ತು ಭಾವನಾತ್ಮಕ ಬೆಂಬಲ ನೀಡುತ್ತದೆ. ಸಂಗೀತದೊಂದಿಗೆ ಒತ್ತಡವನ್ನು ಕಡಿಮೆ ಮಾಡಲು ಸುರಕ್ಷಿತ, ತೀರ್ಪುರಹಿತ ಸ್ಥಳ ಎಂದು ಈ ಕ್ಲಬ್ ಬಗ್ಗೆ ಜಾಹೀರಾತು ನೀಡಲಾಗಿತ್ತು.

ಅಳುವಿನಿಂದ ಆಗುವ ಲಾಭಗಳೇನು? : ಅಳು ನಮ್ಮ ಆರೋಗ್ಯಕ್ಕೆ ಒಳ್ಳೆಯದು.

• ಅಳುವಾಗ ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು ಸಕ್ರಿಯಗೊಳಿಸುತ್ತದೆ. ಇದು ದೇಹವನ್ನು ವಿಶ್ರಾಂತಿಗೊಳಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮೊದಲಿಗಿಂತ ಉತ್ತಮ ಅನುಭವ ನಿಮಗಾಗುತ್ತದೆ.

• ಅಳುವಾಗ, ಎಂಡಾರ್ಫಿನ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದು ನೋವನ್ನು ಕಡಿಮೆ ಮಾಡುತ್ತದೆ.

• ದುಃಖದಲ್ಲಿರುವ ವ್ಯಕ್ತಿ ಅತ್ತಿಲ್ಲ ಎಂದಾದ್ರೆ ಅದು ಮಾನಸಿಕ ಆರೋಗ್ಯವನ್ನುಹಾಳು ಮಾಡುತ್ತದೆ. ಅದೇ ಆತ ಅತ್ತಾಗ ದುಃಖ ಕಡಿಮೆ ಆಗುತ್ತದೆ.

• ಹೆಚ್ಚು ಅಳುವ ಮಕ್ಕಳು ಉತ್ತಮ ನಿದ್ರೆ ಮಾಡ್ತಾರೆ. ಇದು ಮನಸ್ಸನ್ನು ಶಾಂತವಾಗಿರಲು ಮತ್ತು ಯಾವುದೇ ರೀತಿಯ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉತ್ತಮ ನಿದ್ರೆ, ಆಯಾಸ, ತಲೆನೋವು ಮುಂತಾದ ಅನೇಕ ಇತರ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.